ಭಾನುವಾರ, ಡಿಸೆಂಬರ್ 8, 2019
21 °C
ವಿಶ್ವೇಶ್ವರಯ್ಯ ಸೆಂಟ್ರಲ್‌ ಕಾಲೇಜು ನಿಲ್ದಾಣದಲ್ಲಿ ಘಟನೆ

ಮೆಟ್ರೊ ಸಿಬ್ಬಂದಿ–ಪೊಲೀಸರ ಮಾರಾಮಾರಿ: ಐವರು ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಟ್ರೊ ಸಿಬ್ಬಂದಿ–ಪೊಲೀಸರ ಮಾರಾಮಾರಿ: ಐವರು ವಶಕ್ಕೆ

ಬೆಂಗಳೂರು: ನಗರದ ಸರ್‌ ಎಂ. ವಿಶ್ವೇಶ್ವರಯ್ಯ (ಸೆಂಟ್ರಲ್‌ ಕಾಲೇಜು) ನಿಲ್ದಾಣದಲ್ಲಿ ಗುರುವಾರ ಮೆಟ್ರೊ ಸಿಬ್ಬಂದಿ ಹಾಗೂ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್‌ಐಎಸ್‌ಎಫ್‌) ಪೊಲೀಸರ ನಡುವೆ ಮಾರಾಮಾರಿ ನಡೆದಿದೆ.ಘಟನೆ ಸಂಬಂಧ ಕಾನ್‌ಸ್ಟೆಬಲ್‌ ಆನಂದ ಗುಡ್ಡದ ಎಂಬುವರು ಹಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದು, ಅದರನ್ವಯ ಎಫ್‌ಐಆರ್‌ ದಾಖಲಾಗಿದೆ. ಐವರು ಮೆಟ್ರೊ ಸಿಬ್ಬಂದಿಯನ್ನು  ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಆಗಿದ್ದೇನು?: ‘ಬೆಳಿಗ್ಗೆ 6 ಗಂಟೆ ಸುಮಾರಿಗೆ ತಾಂತ್ರಿಕ ಕಾರಣಗಳಿಂದ ನಿಲ್ದಾಣದ ಲೋಹ ಶೋಧಕ ಯಂತ್ರ ಹಾಗೂ ಎಸ್ಕಲೇಟರ್‌ ಕಾರ್ಯ ಸ್ಥಗಿತವಾಗಿತ್ತು. ಈ ವೇಳೆ ನಿಲ್ದಾಣದೊಳಗೆ ಹೋಗುತ್ತಿದ್ದ ಪ್ರಯಾಣಿಕರನ್ನು ಸಿಬ್ಬಂದಿಯೇ ತಪಾಸಣೆ ನಡೆಸಿ ಒಳಗೆ ಬಿಟ್ಟರು’.‘ಇದೇ ನಿಲ್ದಾಣದ ಒಳಗೆ ಹೋಗುತ್ತಿದ್ದ ಮೆಟ್ರೊ ಎಲೆಕ್ಟ್ರಾನಿಕ್ಸ್‌ ನಿರ್ವಹಣಾ ಘಟಕದ  ಉದ್ಯೋಗಿ ರಾಕೇಶ್‌, ತಪಾಸಣೆಗೆ ಒಪ್ಪಲಿಲ್ಲ. ಮೆಟ್ರೊ ನೌಕರ ಎಂದು ಸಬೂಬು ಹೇಳಿ ಒಳಗೆ ಹೋದರು. ಅಷ್ಟರಲ್ಲಿ ಲೋಹ ಶೋಧಕ ಯಂತ್ರಗಳ ಕಾರ್ಯ ಆರಂಭವಾಗಿತ್ತು’‘ಆಗ ಕೈಗಾರಿಕಾ ಪಡೆ ಸಿಬ್ಬಂದಿ, ವಾಪಸ್‌ ಬಂದು ಯಂತ್ರದಲ್ಲಿ ಬ್ಯಾಗ್‌ ಇರಿಸುವಂತೆ ಹೇಳಿದ್ದರು. ಅದಕ್ಕೆ ರಾಕೇಶ್‌ ಒಪ್ಪಲಿಲ್ಲ. ಅದೇ ಸಮಯಕ್ಕೆ ನಿಲ್ದಾಣದಿಂದ ಹೊರಗೆ ಬರುತ್ತಿದ್ದ ಕಾನ್‌ಸ್ಟೆಬಲ್‌ ಲಕ್ಷ್ಮಣ, ರಾಕೇಶ್‌ ಅವರನ್ನು ತಡೆದಿದ್ದರು. ಆಗ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಕಾನ್‌ಸ್ಟೆಬಲ್‌, ರಾಕೇಶ್‌ನ ಕಪಾಳಕ್ಕೆ ಹೊಡೆದು, ಹೊಟ್ಟೆ ಹಾಗೂ ಮುಖಕ್ಕೆ ಗುದ್ದಿದರು. ಸ್ಥಳದಲ್ಲಿದ್ದ ಇತರೆ ಸಿಬ್ಬಂದಿ ಜಗಳ ಬಿಡಿಸಿದ್ದರು’ ಎಂದು ಪ್ರತ್ಯಕ್ಷದರ್ಶಿ ತಿಳಿಸಿದರು.ಗುಂಪು ಕಟ್ಟಿಕೊಂಡು ಬಂದು  ಗಲಾಟೆ: ಘಟನೆ ಬಳಿಕ ಸ್ಥಳದಿಂದ ಹೋದ ರಾಕೇಶ್‌, ಗುಂಪು ಕಟ್ಟಿಕೊಂಡು ಬೆಳಿಗ್ಗೆ 10 ಗಂಟೆ ಸುಮಾರಿಗೆ ಸರ್‌ ಎಂ. ವಿಶ್ವೇಶ್ವರಯ್ಯ ನಿಲ್ದಾಣಕ್ಕೆ ವಾಪಸ್‌ ಬಂದು ಪೊಲೀಸರ ಜತೆ ಗಲಾಟೆ ಶುರುಮಾಡಿದ್ದರು. ಈ ವೇಳೆ ಎರಡೂ ಗುಂಪಿನ ನಡುವೆ ಮಾರಾಮಾರಿ ನಡೆಯಿತು. ಘಟನೆಯಲ್ಲಿ ಕಾನ್‌ಸ್ಟೆಬಲ್‌ ಲಕ್ಷ್ಮಣ, ಆನಂದ್‌ ಗುಡ್ಡದ ಹಾಗೂ ಭಾರತಿ ಎಂಬುವರು ಗಾಯಗೊಂಡರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಹಲಸೂರು ಗೇಟ್‌ ಠಾಣೆಯ ಪೊಲೀಸರು, ಜಗಳ ಬಿಡಿಸಿ 12 ಮಂದಿಯನ್ನು ವಶಕ್ಕೆ ಪಡೆದರು.‘ಸ್ಥಗಿತಗೊಂಡಿದ್ದ ಎಸ್ಕಲೇಟರ್‌ ಮೇಲೆ ನಡೆದುಕೊಂಡು ಹೋಗಬೇಡಿ ಎಂದಿದ್ದಕ್ಕೆ ಪೊಲೀಸರು ಹಲ್ಲೆ ಮಾಡಿದ್ದಾರೆ’ ಎಂದು ರಾಕೇಶ್‌ ಆರೋಪಿಸಿದರು.ಆರೋಪ ನಿರಾಕರಿಸಿದ ಲಕ್ಷ್ಮಣ, ‘ನಿಲ್ದಾಣದ ಭದ್ರತೆ ಜವಾಬ್ದಾರಿ ನಮ್ಮದು.  ಅವರು ತಪಾಸಣೆಗೆ ಸಹಕರಿಸದಿದ್ದರಿಂದ ಈ ರೀತಿಯಾಯಿತು’ ಎಂದರು.ಪ್ರತಿಭಟನೆ: ಮೆಟ್ರೊ ಸಿಬ್ಬಂದಿ ಮೇಲಾದ ಹಲ್ಲೆ ಖಂಡಿಸಿ ಉದ್ಯೋಗಿಗಳು ಬೈಯಪ್ಪನಹಳ್ಳಿಯ ಆಡಳಿತ ವಿಭಾಗದಲ್ಲಿ  ಪ್ರತಿಭಟನೆ ನಡೆಸಿದರು. ಮಧ್ಯಾಹ್ನ ಕೆಲಸ ಬಹಿಷ್ಕರಿಸಿದ್ದ ಕೆಲವರು, ಸಂಜೆವರೆಗೂ ವಿಭಾಗದಲ್ಲೇ ಕುಳಿತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ರಾತ್ರಿಯೂ ಹಲವು ಉದ್ಯೋಗಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು.ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮಹಿಳಾ ಉದ್ಯೋಗಿ, ‘ಸಿಬ್ಬಂದಿ ಹಾಗೂ ಕೈಗಾರಿಕಾ ಪಡೆಯ ಪೊಲೀಸರ ನಡುವೆ ಆಗಾಗ ವಾಗ್ವಾದಗಳು ನಡೆಯುತ್ತಿವೆ. ಪೊಲೀಸರೆಂಬ ದರ್ಪದಲ್ಲಿ ಅವರೆಲ್ಲ ವರ್ತಿಸುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ’ ಎಂದರು.‘ಘಟನೆಯಲ್ಲಿ ರಾಕೇಶ್‌ ಅವರ ತಪ್ಪಿಲ್ಲ. ಪೊಲೀಸರೆಲ್ಲ ಸೇರಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ವಿರುದ್ಧವೇ ದೂರು ಕೊಟ್ಟಿದ್ದಾರೆ’ ಎಂದು ಅವರು ದೂರಿದರು.

ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ: ರಾಕೇಶ್‌ ಮೇಲೆ ಕಾನ್‌ಸ್ಟೆಬಲ್‌ ಹಲ್ಲೆ ಮಾಡಿದ ದೃಶ್ಯಗಳು ನಿಲ್ದಾಣದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅವುಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ‘ಕಾನ್‌ಸ್ಟೆಬಲ್‌ ಆನಂದ್‌ ಮಾತ್ರ ದೂರು ಕೊಟ್ಟಿದ್ದಾರೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ.  ಮೆಟ್ರೊ ಸಿಬ್ಬಂದಿ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಬಗ್ಗೆ ಯಾರೊಬ್ಬರೂ ದೂರು ಕೊಟ್ಟಿಲ್ಲ’ ಎಂದು ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ತಿಳಿಸಿದರು.ಪ್ರತಿಕ್ರಿಯೆಗೆ ನಿರಾಕರಣೆ

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ಬಿಎಂಆರ್‌ಸಿಎಲ್‌ ಆಡಳಿತ ಮಂಡಳಿ ಅಧಿಕಾರಿಗಳು ನಿರಾಕರಿಸಿದರು. ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತ ರಾವ್ ಅವರನ್ನು ಸಂಪರ್ಕಿಸಿದಾಗ, ‘ಆ ಬಗ್ಗೆ ಸದ್ಯಕ್ಕೆ ಏನು ಹೇಳುವುದಿಲ್ಲ. ಪತ್ರಿಕಾ ಪ್ರಕಟಣೆ ಕಳುಹಿಸುತ್ತೇವೆ. ಕಾಯಿರಿ’ ಎಂದಷ್ಟೇ ಹೇಳಿ ಕರೆಯನ್ನು ಅರ್ಧಕ್ಕೆ ಕಡಿತಗೊಳಿಸಿದರು.

ಪ್ರತಿಕ್ರಿಯಿಸಿ (+)