ಶನಿವಾರ, ಡಿಸೆಂಬರ್ 14, 2019
25 °C

ಕತ್ತಿಯೇ ಸತ್ಯ; ನೆತ್ತರು ನಿತ್ಯ!

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

ಕತ್ತಿಯೇ ಸತ್ಯ; ನೆತ್ತರು ನಿತ್ಯ!

ಚಿತ್ರ: ಕೋಲಾರ

ನಿರ್ಮಾಪಕರು: ಲಕ್ಷ್ಮೀನಾರಾಯಣ ಮತ್ತು ಆರ್‌. ರಮೇಶ್‌

ನಿರ್ದೇಶಕರು: ಆರ್ಯ ಎಂ. ಮಹೇಶ್‌

ತಾರಾಗಣ: ಯೋಗೀಶ್‌, ನೈನಾ ಸರ್ವರ್‌, ನೀನಾಸಮ್‌ ಅಶ್ವಥ್, ಯತಿರಾಜ್‌, ಕೆಂಪೇಗೌಡ

‘ಚೆಲ್ಲಿತೋ ನೆತ್ತರ, ಬಲು ಎತ್ತರ’ ಹೀಗೊಂದು ಕಾವ್ಯಾತ್ಮಕ ಸಾಲಿನೊಂದಿಗೆ ‘ಕೋಲಾರ’ ಸಿನಿಮಾ ಆರಂಭವಾಗುತ್ತದೆ. ಅದರ ಬೆನ್ನಲ್ಲೇ ಗುಂಡಿನ ಸದ್ದು, ಎದೆಯಿಂದ ತೊಟ್ಟಿಕ್ಕುವ ರಕ್ತ. ರಿವಾಲ್ವರ್‌ ಹಿಡಿದಿರುವ ಪೊಲೀಸ್‌ ಅಧಿಕಾರಿಗೆ ತನ್ನೆದುರು ಸಾವಿನ ಮನೆಯ ಹೊಸ್ತಿಲಲ್ಲಿ ಕೂತಿರುವ ರೌಡಿ ತಂಗಂನನ್ನು ನೋಡಿ ಕರುಣೆ ಉಕ್ಕುತ್ತದೆ. ಕೈ ನಡುಗುತ್ತದೆ. ಅವನ ಬದುಕಿನ ಕಥೆಯನ್ನು ಕೇಳುವ ಬಯಕೆಯಾಗುತ್ತದೆ. ಅಲ್ಲಿಂದ ತಂಗಂ ರೌಡಿಸಮ್‌ ಕಥೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ.

‘ಹನ್ನೆರಡು ವರ್ಷಗಳ ನಂತರ’ ಎಂದು ತೆರೆಯ ಮೇಲೆ ತೋರಿಸುವ ನಿರ್ದೇಶಕರು ಹೇಳುವುದು ಮಾತ್ರ ಹನ್ನೆರಡು ವರ್ಷಗಳ ಹಿಂದಿನ ಕಥೆ! ಇಂಥ ‘ಸುಳ್ಳು’ಗಳು ಚಿತ್ರದುದ್ದಕ್ಕೂ ಮತ್ತೆ ಮತ್ತೆ ಎದುರಾಗುತ್ತವೆ.

ಕೋಲಾರದ ಕೆ.ಜಿ.ಎಫ್‌ನಲ್ಲಿ ಹುಟ್ಟಿ ಬೆಳೆದ ತಂಗಂ ಎಂಬ ರೌಡಿಯ ಬದುಕನ್ನು ಆಧರಿಸಿದ ಸಿನಿಮಾ ಇದು. ಆದರೆ ಈಗಾಗಲೇ ಪ್ರಚಲಿತದಲ್ಲಿರುವ ‘ರೌಡಿಸಮ್‌’ ಸಿನಿಮಾಗಳ ಜನಪ್ರಿಯ ಮಾದರಿಗಿಂತ ಭಿನ್ನವಾದದ್ದೇನೂ ಇದರಲ್ಲಿಲ್ಲ.

ಬಾಲ್ಯದಲ್ಲಿ ಪೊಲೀಸರು ಮತ್ತು ಪೋಲಿ ಮಾರ್ವಾಡಿಯ ದೌರ್ಜನ್ಯದ ವಿರುದ್ಧ ಸಿಡಿದೆದ್ದು ಕೈಗೆ ರಿವಾಲ್ವರ್‌ ಎತ್ತಿಕೊಳ್ಳುವ ತಂಗಂ ಕೈಗೆ ನಂತರ ಮಚ್ಚು ಸಿಗುತ್ತದೆ. ತಂಗಂ ಪಾತ್ರದಲ್ಲಿ ಯೋಗೀಶ್‌ ಅವರನ್ನು, ಅವರದೇ ಕೈಯಲ್ಲಿನ ಸಪೂರ ಹರಿತ ಕತ್ತಿಗೆ ಹೋಲಿಸಬಹುದು. ಎದುರಾಳಿಗಳ ಕತ್ತು, ಎದೆ, ಹೊಟ್ಟೆ ಎಲ್ಲವನ್ನೂ ಸೌತೆಕಾಯಿಯಷ್ಟೇ ಸುಲಭವಾಗಿ ಇರಿಯುವ ತಂಗಂ, ತಾನೂ ಅಷ್ಟೇ ಸಲೀಸಾಗಿ ಕತ್ತಿಗೆ– ಬುಲೆಟ್‌ಗೆ ಮೈಯೊಡ್ಡುತ್ತಾರೆ. ಆದರೆ ಕತ್ತಿಗೆ ಅಂಟಿದ ರಕ್ತದ ಕಲೆ ಒರೆಸಿಕೊಳ್ಳುವಷ್ಟೇ ಸಲೀಸಲಾಗಿ ತಮ್ಮ ಮೈಮೇಲಿನ ಗಾಯಗಳನ್ನು ಒರೆಸಿ ಮತ್ತೆ ಹಣಾಹಣಿಗೆ ಸಿದ್ಧರಾಗುತ್ತಾರೆ.

ಚಿತ್ರಕಥೆಯಲ್ಲಿನ ಜಾಳುತನ ಕೋಲಾರದ ಬಿಸಿಲಿನಷ್ಟೇ ಪ್ರಖರವಾಗಿ ನೋಡುಗನನ್ನು ಸತಾಯಿಸುತ್ತದೆ. ಮಧ್ಯಂತರದ ಹೊತ್ತಿಗೆ ತಂಗಂ ಪೊಲೀಸರ ಗುಂಡೇಟು ತಿಂದು ನೆಲಕ್ಕುರುಳುತ್ತಾನೆ. ಅಷ್ಟೊತ್ತು ಜಟಕಾಬಂಡಿಯಂಥ ಕಥೆಯ ಜತೆ ಸುತ್ತಿ ದಣಿದವರು ‘ಅಂತೂ ಮುಗೀತು’ ಎಂದು ನಿಟ್ಟುಸಿರು ಬಿಡುವಾಗಲೇ ತಂಗಂನ ಸಾವನ್ನು ಬರೀ ಕನಸಾಗಿಸಿ ಮತ್ತೆ ಕುಲುಕಾಟದ ಓಟ ಶುರುವಾಗತ್ತದೆ. ಒಂದೆರಡು ಸಲವಲ್ಲ, ಹಲವು ಬಾರಿ ಹೀಗೆ ಸಿನಿಮಾ ಮುಗಿಸುವ ಆಸೆ ತೋರಿಸಿ, ನಂತರ ಅದನ್ನು ಸುಳ್ಳಾಗಿಸಿ ತೀವ್ರ ನಿರಾಸೆ ಹುಟ್ಟಿಸುತ್ತಾರೆ ನಿರ್ದೇಶಕರು. ಕೊನೆಗೆ ಕಥೆಯ ನಾಯಕ ತಂಗಂ ಸತ್ತರೂ ಸಿನಿಮಾ ಅಸಂಬದ್ಧವಾಗಿ ಮುಂದುವರಿಯುತ್ತಲೇ ಇರುತ್ತದೆ!

‘ಭವ ಭಯ ಹರ ಕಾಲ ಭೈರವ’ ಎಂಬ ಹಿನ್ನೆಲೆ ಶ್ಲೋಕದೊಂದಿಗೆ ಪಾತಕಿಯೊಬ್ಬನನ್ನು ಮಹಾ ಪುಣ್ಯಪುರುಷನಂತೆ ವೈಭವೀಕರಿಸಿದ್ದೇ ಈ ಸಿನಿಮಾದ ಹೆಚ್ಚುಗಾರಿಕೆ.  ಇದಕ್ಕೆ ಪೂರಕವಾಗಿ ತಾಯಿ ಸೆಂಟಿಮೆಂಟ್‌ನ ಮಸಾಲೆಯನ್ನೂ ಅರೆಯಲಾಗಿದೆ. ಕೃತಕವಾಗಿಯೇ  ಇದ್ದರೂ ಇಡೀ ಸಿನಿಮಾದಲ್ಲಿ ಸ್ವಲ್ಪವಾದರೂ ಸಹನೀಯ ಅನಿಸುವುದು ಈ ದೃಶ್ಯಗಳೇ. ಕೋಲಾರದ ಪ್ರಾದೇಶಿಕ ವಿವರಗಳೂ ಅಷ್ಟಕ್ಕಷ್ಟೆ.

ನೋಡಲು ಗೊಂಬೆಯಂತಿರುವ ನಾಯಕಿ ನೈನಾ ಸರ್ವರ್‌, ನಟನೆಯಲ್ಲಿಯೂ ನಿರ್ಭಾವುಕ ಗೊಂಬೆಯೇ. ಆರ್. ಹೇಮಂತ್‌ ಕುಮಾರ್‌ ಅವರ ಹಿನ್ನೆಲೆ ಸಂಗೀತ ಕೆಲವು ಕಡೆಗಳಲ್ಲಿ ಗಮನ ಸೆಳೆದರೆ ಇನ್ನು ಕೆಲವೆಡೆ ಕಿರಿಕಿರಿ ಹುಟ್ಟಿಸುತ್ತದೆ. ದರ್ಶನ್‌ ಕನಕ ಅವರ ಛಾಯಾಗ್ರಹಣದಲ್ಲಿ ಹೊಸತೇನೂ ಇಲ್ಲ. ಒಟ್ಟಾರೆ ‘ಕೋಲಾರ’ ಚಿನ್ನದ ಮಣ್ಣಿಗೆ ನೆತ್ತರ ಬಣ್ಣ ಬಳಿದ ಮತ್ತೊಂದು ಸಾಮಾನ್ಯ ರೌಡಿಸಮ್‌ ಸಿನಿಮಾ ಅಷ್ಟೆ.

 

ಪ್ರತಿಕ್ರಿಯಿಸಿ (+)