ಶನಿವಾರ, ಡಿಸೆಂಬರ್ 7, 2019
25 °C

ವೈದ್ಯಕೀಯ ವಿಜ್ಞಾನಕ್ಕೆ ಬೇಕು ಕಲೆಯ ಬೆಸುಗೆ

Published:
Updated:
ವೈದ್ಯಕೀಯ ವಿಜ್ಞಾನಕ್ಕೆ ಬೇಕು ಕಲೆಯ ಬೆಸುಗೆ

ಕೆಲವು ವರ್ಷಗಳ ಹಿಂದೆ ನರ್ಸಿಂಗ್ ಹೋಮ್‌ಗೆ ವೈದ್ಯರನ್ನು ಕಾಣಲು ಹೋಗಿದ್ದಾಗ ಅಲ್ಲಿ ಸಂಬಂಧಪಟ್ಟ ವೈದ್ಯರು ಇರಲಿಲ್ಲ. ನನ್ನನ್ನು ವಿಚಾರಿಸಿ ರಿಸೆಪ್ಷನಿಸ್ಟ್ ವೈದ್ಯರಿಗೆ ಕರೆ ಮಾಡಿ ‘ಡಾಕ್ಟರೇ, ಇಲ್ಲಿ ಒಂದು ಪೇಶಂಟ್ ಬಂದಿದೆ. ಇಲ್ಲೇ ಕೂತಿದೆ. ಬೇಗ ಬನ್ನಿ’ ಎಂದರು.

ಕಾಯಿಲೆ ಬಂದ ಮೇಲೆ ವ್ಯಕ್ತಿಯನ್ನು ಗುರುತಿಸುವುದು ಆ ಕಾಯಿಲೆಯ ಮೂಲಕವೇ ಅಗುತ್ತದೆ. ಎಂದರೆ ‘ವ್ಯಕ್ತಿ’ ಹೋಗಿ ‘ಕೇಸ್’ ಆಗಿ ನೋಡುವುದಾಗುತ್ತದೆ. ದೇವುಡು ನರಸಿಂಹಶಾಸ್ತ್ರಿಗಳಿಗೆ ಮಧುಮೇಹದಿಂದ ತೊಂದರೆಗೆ ತುತ್ತಾಗಿದ್ದರು. ಸಮಸ್ಯೆ ಉಲ್ಬಣವಾಗಿ ಕಾಲು ತೆಗೆಯಬೇಕಾದ ಪ್ರಸಂಗ ಬಂದಾಗ ಅವರು, ‘ತೆಗೆಯಿರಿ; ಅದು ನನ್ನದಲ್ಲ’ ಎಂದಿದ್ದರಂತೆ! ಇದು ಅಧ್ಯಾತ್ಮದ ದೃಷ್ಠಿಕೋನಕ್ಕೆ ನಿದರ್ಶನ. ಶೇಕ್ಸ್‌ಪಿಯರ್ ಕಿಂಗ್ ಲಿಯರ್‌ನಲ್ಲಿ ಹೇಳುವ ಮಾತು: ‘what is man when divested of pomp and circumstance, pride, social role and prestige, clothes, lands and even sanity.’ ಇಂತಹ ಬೆರಗುಗೊಳಿಸಿ ಬೆತ್ತಲು ಮಾಡುವ ಕವಿಯ ಮಾತು ಕೇಳಿ ಬ್ರಿಟನ್ನಿನ ಗ್ರೇಶಂ ಕಾಲೇಜಿನಲ್ಲಿ ಸೈಕಿಯಾಟ್ರಿ ಪ್ರೊಫ಼ೆಸರ್, ಗ್ವೆನ್ ಅಡ್ಸ್‌ಹೆಡ್ ಹೇಳುವುದು – ‘ವೈದ್ಯರು ಸಾಹಿತ್ಯ, ಸಿನಿಮಾ ಮತ್ತು ಕಲೆಗಳಲ್ಲಿ ಆಸಕ್ತಿ ಇಟ್ಟುಕೊಳ್ಳಬೇಕು. ಆಗ ಅವರಿಗೆ ತಮ್ಮ ಸಹಾಯಕ್ಕೆ ಅನಾರೋಗ್ಯದಿಂದ ಬರುವ ವ್ಯಕ್ತಿಗಳನ್ನು ನೋಡುವ ದೃಷ್ಠಿಕೋನ ಬದಲಾಗಬಹುದು’.

ವೈದ್ಯರಿಗೆ ಇತರರ ಭಾವನೆಗಳನ್ನು ಗ್ರಹಿಸುವ ಶಕ್ತಿ (empathy), ತಾದಾತ್ಮ್ಯವಿದ್ದಲ್ಲಿ ಅವರ ವೃತ್ತಿಯು ಪರಿಪೂರ್ಣತೆಯನ್ನು ಮುಟ್ಟುತ್ತದೆ, ಮತ್ತು ನೋವಿನಲ್ಲಿರುವವರಿಗೆ ಸಹಾಯ ಹಸ್ತವಾಗುವಲ್ಲಿ ನೆರವನ್ನೂ ನೀಡುತ್ತದೆ. ಸ್ವತಃ ವೈದ್ಯರಾಗಿದ್ದ ರಷ್ಯಾದ ಲೇಖಕ ಚಕಾವ್ ಅವರ ‘ಎ ಡಾಕ್ಟರ್ಸ್ ವಿಸಿಟ್’ ಎಂಬ ಸಣ್ಣಕತೆಯಲ್ಲಿ ವೈದ್ಯ ಅನಾರೊಗ್ಯದಲ್ಲಿ ಬಳಲುತ್ತಿರುವಳನ್ನು ಭೇಟಿಯಾಗಿ ಆಕೆಗೆ ನಿಜವಾಗಿಯೂ ರೋಗವೇ ಇಲ್ಲ ಎಂಬುದನ್ನು ಗ್ರಹಿಸುತ್ತಾನೆ. ಆಕೆಯ ಸುತ್ತಲಿನ ಪರಿಸರ ಆಕೆಯ ಪರಿಸ್ಥಿಗೆ ಕಾರಣವಾಗಿರುವುದನ್ನು ಗುರುತಿಸಿ ಆ ಕುಟುಂಬದ ಸದಸ್ಯರಂತೆ ವ್ಯವಹರಿಸಿ ಮನಸ್ಸಿಗೆ ನೆಮ್ಮದಿ ಕೊಡುವ ಪ್ರಸಂಗ ಬರುತ್ತದೆ. ಬೌದ್ಧರಲ್ಲಿ ಕರುಣೆ ಎಂಬುದು ಬಹು ಪ್ರಮುಖವಾದ ತತ್ವ. ಅದು ಅನುಕಂಪವಲ್ಲ. ಅನುಕಂಪ ಅಹಂಕಾರದ ಸಂಕೇತವಾದರೆ ಕರುಣೆ ಪ್ರಜ್ಞಾಪೂರ್ವಕವಾದ ಜವಾಬ್ದಾರಿಯಾಗಿ, ಗೌರವ ಮತ್ತು ಜ್ಞಾನದ ಬೆಸುಗೆಯಾಗಿರುತ್ತದೆ. With compassion you intervene without interfering. ಸಹಾಯ ಮಾಡುವವರು ಪಡೆದವರನ್ನು ಅವಲಂಬಿತರನ್ನಾಗಿಸುವುದಾಗಿದೆ. ತನ್ನನ್ನು ತಾನೇ ನೊಡಿಕೊಳ್ಳಲು ಸಹಕಾರಿಯಾಗುವಂಥದ್ದೇ ಒಳ್ಳೆಯ ವೈದ್ಯಕೀಯತೆಯ ಲಕ್ಷಣ. ಎಂದರೆ ಅನಾರೊಗ್ಯದಿಂದ ಬಳಲುವ ದೇಹಕ್ಕೆ ತನ್ನನ್ನು ತಾನೇ ಗುಣಪಡಿಸಿಕೊಳ್ಳುವಂತೆ ಉತ್ತೇಜಿಸುವುದು. ಝೆನ್‌ ಕಲಿಕೆಗಾಗಿ ಬಂದಿದ್ದ ಶಿಷ್ಯನೊಬ್ಬ ಶಾಲೆ ಬಿಡುವಾಗ ಗುರುಗಳಿಗೆ ವಂದಿಸುವ ರೀತಿ: ‘ನನಗೆ ಏನನ್ನೂ ಹೇಳಿಕೊಡದಿದ್ದಕ್ಕೆ ಧನ್ಯವಾದಗಳು!’

ಪರಿಚಿತರೊಬ್ಬರು ಒಂದು ಕಾರ್ಪೊರೇಟ್ ಅಸ್ಪತ್ರೆಯಲ್ಲಿ ನುರಿತ ವೈದ್ಯರು; ಹಾಗೆಯೇ ಕರುಣಾಮಯಿ ಕೂಡ. ಅವರು ಅನಾರೊಗ್ಯದ ಬಗ್ಗೆ ಕೂಲಂಕಷವಾಗಿ ವಿಚಾರಿಸಿ, ಸಾವಧಾನವಾಗಿ ಆಲಿಸಿ ಸಲಹೆ ಸೂಚನೆ ಕೊಡುತ್ತಾರೆ. ಆದರೆ ಅಷ್ಟರೊಳಗೆ ಹತ್ತು ಬಾರಿ ಅಸ್ಪತ್ರೆಯವರು ಅವರಿಗೆ ಫೋನ್ ಮಾಡಿ, ‘ನೀವು ಪ್ರತಿಯೊಬ್ಬರಿಗೂ ಇಷ್ಟು ಸಮಯ ಕೊಟ್ಟರೆ ನಾವು ಅಸ್ಪತ್ರೆಯನ್ನು ಮುಚ್ಚಬೇಕಾಗುತ್ತದೆ’ ಎಂದು ಎಚ್ಚರಿಸುವುದನ್ನು ಅವರು ಹೇಳುತ್ತಾರೆ! ಒಂದು ಪಶೆಂಟ್ ಬಂದರೆ ಇಷ್ಟು ಬರಲೇಬೇಕು – ಎನ್ನುವ ಲೆಕ್ಕಚಾರ ಆಸ್ಪತ್ರೆಗಳಲ್ಲೂ ವೈದ್ಯರಲ್ಲೂ ಇದ್ದಲ್ಲಿ ಕರುಣೆ ಮತ್ತು ಮೈತ್ರಿಗೆಲ್ಲಿ ಅವಕಾಶ? ವೈದ್ಯರು ಸಹ ತಮ್ಮ ವೃತ್ತಿಯ ಮೊದಲ ಮೂರು ವರ್ಷವಾಗಳಾಗುವಷ್ಟರಲ್ಲಿಯೇ ‘ಎಂಪಥಿ’ಯನ್ನು ಕಳೆದುಕೊಳ್ಳುತ್ತಾರೆ ಎಂದು ತಜ್ಞರ ಅಭಿಪ್ರಾಯವಿದೆ.

ಸಹಾಯ ಮಾಡುವವನು, ತನ್ನ ಎದುರಿನವರ ಕಷ್ಟ–ಕಾರ್ಪಣ್ಯಗಳ ಕಣ್ಣೀರಿನಲ್ಲಿ ಕೊಚ್ಚಿಹೋಗದಂತೆ ದೂರವಿದ್ದು ಹತ್ತಿರದಿಂದ ಕಾಣುವ ಉಪಾಯ ಮುಖ್ಯ. ಮುಳುಗುವನನ್ನು ಜೀವ ಉಳಿಸಲು ಇದೇ ತಂತ್ರ ಉಪಯೋಗವಾಗುವಂಥದ್ದು. ಇದು ನೈಜವಾಗಿರಬೇಕಾದರೆ ಕೇವಲ ತಂತ್ರಗಾರಿಕೆಯನ್ನಷ್ಟೇ ಕಲಿತರೆ ಸಾಲದು. ಉಪಾಯ ಮತ್ತು ತಂತ್ರಗಾರಿಕೆ ಕರುಣೆಯ ಕೈಗೆ ಅರಿವಿಲ್ಲದೆಯೇ ಬಳಕೆಗೆ ಬರುವ ಸಾಧನ. ‘Knowing about is diametrically different from really knowing’ ಅಲ್ಲವೆ?

ಇನ್ನೊಂದು ಝೆನ್‌ಕಥೆ: ಸಣ್ಣ ಮೀನು ದೊಡ್ಡ ಮೀನಿಗೆ ನಾನು ಸಾಗರದ ಬಗ್ಗೆ ಬಹಳಷ್ಟು ಕೇಳಿದ್ದೇನೆ. ಅದು ಇರುವುದಾದರೂ ಎಲ್ಲಿ ಮತ್ತು ಹೇಗೆ?

ದೊಡ್ಡ ಮೀನು: ನಿನ್ನ ಬದಕು, ಚಲನ ವಲನ, ಇರುವಿಕೆಯೇ ಅದರೊಳಗೆ. ನಿನ್ನ ಒಳಗೂ ಹೊರಗೂ ಆವರಿಸಿದೆ.

ಈ ಆರಿವು ನಮ್ಮ ವೃತ್ತಿ, ಸ್ಥಾನಮಾನಗಳೊದಿಗೆ ಆವರಿಸಿಕೊಂಡಿರುವ ಅಂಹಕಾರ ಮತ್ತು ಸ್ವಪ್ರತಿಷ್ಠೆ ಕರಗಲು ಸಹಾಯವಾಗಬಹುದು. ಅನೇಕ ದೊಡ್ಡ ಕಲಾವಿದರು ನನ್ನಿಂದ ಈ ಕೆಲಸ ಆಗಲ್ಪಟ್ಟಿತು ಎನ್ನುವುದುಂಟು. ನಾನೇ ಮಾಡಿದೆ ಎನ್ನುವುದಿಲ್ಲ. ಇದು ವೈದ್ಯಕೀಯ ಕ್ಷೇತ್ರಕ್ಕೂ ಬೇಕಾದ ಅವಶ್ಯಕ ಅರಿವು, ಕಲಾಪ್ರಜ್ಞೆ ಎನ್ನಬಹುದು.

**

ಒಂದು ಕಾರ್ಪೊರೇಟ್ ಅಸ್ಪತ್ರೆಯಲ್ಲಿ ನುರಿತ ವೈದ್ಯರು; ಹಾಗೆಯೇ ಕರುಣಾಮಯಿ ಕೂಡ. ಅವರು ಅನಾರೊಗ್ಯದ ಬಗ್ಗೆ ಕೂಲಂಕಷವಾಗಿ ವಿಚಾರಿಸಿ, ಸಾವಧಾನವಾಗಿ ಆಲಿಸಿ ಸಲಹೆ ಸೂಚನೆ ಕೊಡುತ್ತಾರೆ. ಆದರೆ ಅಷ್ಟರೊಳಗೆ ಹತ್ತು ಬಾರಿ ಅಸ್ಪತ್ರೆಯವರು ಅವರಿಗೆ ಫೋನ್ ಮಾಡಿ, ‘ನೀವು ಪ್ರತಿಯೊಬ್ಬರಿಗೂ ಇಷ್ಟು ಸಮಯ ಕೊಟ್ಟರೆ ನಾವು ಅಸ್ಪತ್ರೆಯನ್ನು ಮುಚ್ಚಬೇಕಾಗುತ್ತದೆ’ ಎಂದು ಎಚ್ಚರಿಸುತ್ತಾರೆ!

ಪ್ರತಿಕ್ರಿಯಿಸಿ (+)