ಶುಕ್ರವಾರ, ಡಿಸೆಂಬರ್ 6, 2019
19 °C

ಬಣಗುಡುತ್ತಿರುವ ಹಾರಂಗಿ ಜಲಾಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಣಗುಡುತ್ತಿರುವ ಹಾರಂಗಿ ಜಲಾಶಯ

ಕುಶಾಲನಗರ: ಜಿಲ್ಲೆಯಲ್ಲಿ ಮುಂಗಾರು ದುರ್ಬಲಗೊಂಡಿರುವುದರಿಂದ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣದಲ್ಲಿ ಕೊರತೆ ಕಂಡುಬಂದಿದೆ.

ಜಿಲ್ಲೆಯಲ್ಲಿ ಮುಂಗಾರು ಆರಂಭಗೊಂಡಿದ್ದರೂ, ಜಲಾಶಯ ವ್ಯಾಪ್ತಿಯ ಜಲಾನಯನ ಪ್ರದೇಶದಲ್ಲಿ  ಜೂನ್‌ನಲ್ಲಿ ವಾಡಿಕೆ ಮಳೆ ಬೀಳದೇ ಇರುವುದರಿಂದ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಏರಿಕೆಯಾಗದಿರುವುದರಿಂದ ಮಳೆಗಾಲದಲ್ಲೂ  ಜಲಾಶಯ ಬಣಗುಡುತ್ತಿದೆ. ಜುಲೈ ಮೊದಲ ವಾರದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದ ಕಾರಣ ಅಚ್ಚುಕಟ್ಟು ಪ್ರದೇಶದ ರೈತರು  ಆತಂಕಗೊಂಡಿದ್ದಾರೆ.

8.5 ಟಿಎಂಸಿ ಅಡಿ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಇದೀಗ ಕೇವಲ 3.23 ಟಿಎಂಸಿ ಅಡಿಯಷ್ಟು ಮಾತ್ರ ನೀರು ಸಂಗ್ರಹಗೊಂಡಿದೆ. ಅದರಲ್ಲಿ 2.48 ಟಿಎಂಸಿ ಅಡಿಯಷ್ಟು ಪ್ರಮಾಣದ ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ.

2,859 (ಸಮುದ್ರಮಟ್ಟದಿಂದ) ಅಡಿ ನೀರು ಸಂಗ್ರಹ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಶುಕ್ರವಾರ ಬೆಳಿಗ್ಗೆ ವರೆಗೂ  2,829.83 ಅಡಿ ನೀರು ಸಂಗ್ರಹಗೊಂಡಿತ್ತು.

ಕಳೆದ ವರ್ಷ ಇದೇ ಅವಧಿಗೆ ಜಲಾಶಯದಲ್ಲಿ 2848.88  ಅಡಿ (5.16 ಟಿಎಂಸಿ ಅಡಿ)ನೀರು ಸಂಗ್ರಹಗೊಂಡಿತ್ತು. 4851 ಕ್ಯೂಸೆಕ್‌ ಒಳಹರಿವು ಇತ್ತು. ಅಂತೆಯೇ, ಜುಲೈ 10ರಿಂದ ನದಿಗೆ ನೀರು ಹರಿಯಬಿಡಲಾಗಿತ್ತು ಎಂದು ಹಾರಂಗಿ ನೀರಾವರಿ ಇಲಾಖೆ ಅಣ್ಣೆಕಟ್ಟೆ ವಿಭಾಗದ ಸಹಾಯಕ ಎಂಜಿನಿಯರ್ ನಾಗರಾಜು ತಿಳಿಸಿದ್ದಾರೆ.

ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಜೋಳ, ಶುಂಠಿ, ರಾಗಿ, ತಂಬಾಕು ಹಾಗೂ ತಗ್ಗು ಪ್ರದೇಶದಲ್ಲಿ ಭತ್ತ ಮತ್ತಿತರ ಕೃಷಿ ಮಾಡಲಾಗುತ್ತದೆ. ಜಲಾಶಯದಿಂದ ಹರಿಯ ಬಿಡುವ ನೀರನ್ನೇ ನಂಬಿಕೊಂಡು ಕೃಷಿ ಮಾಡಬೇಕಾಗಿರುವುದರಿಂದ ಅವರ ಆತಂಕ ಹೆಚ್ಚಿದೆ.

ಹಾರಂಗಿ ಜಲಾಶಯದ ನೀರನ್ನು ಸೋಮವಾರಪೇಟೆ ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶ ರೈತರು ಸೇರಿದಂತೆ ಹಾಸನ ಜಿಲ್ಲೆಯ ಅರಕಲಗೂಡು ಹಾಗೂ ಮೈಸೂರು ಜಿಲ್ಲೆಯ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ ತಾಲ್ಲೂಕಿನ ಸುಮಾರು 1 ಲಕ್ಷಕ್ಕೂ ಹೆಚ್ಚು ಏಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.

ಈ ಅಚ್ಚುಕಟ್ಟು ವ್ಯಾಪ್ತಿಯ ಕೃಷಿ ಚಟುವಟಿಕೆ ಬಹುತೇಕ ಡಿಸೆಂಬರ್ ನಲ್ಲಿ ಪೂರ್ಣಗೊಳ್ಳುತ್ತದೆ. ಅಲ್ಲಿಯವರೆಗೂ ಕಾಲುವೆಗಳ ಮೂಲಕ ನೀರು ಹರಿಸಬೇಕಾಗಿದೆ. ಹಾರಂಗಿ ಜಲಾಶಯದ ನೀರನ್ನು ಬಳಸಿಕೊಂಡು ಜಲವಿದ್ಯುತ್ ಉತ್ಪಾದಿಸುತ್ತಿರುವ ಇಡಿಸಿಎಲ್ ವಿದ್ಯುತ್ ಉತ್ಪಾದನಾ ಘಟಕವು ಈ ಬಾರಿ ಮುಂಗಾರು ಕೊರತೆಯಿಂದ ಉದ್ದೇಶಿತ ಪ್ರಮಾಣದ ವಿದ್ಯುತ್ ಉತ್ಪಾದನೆಗೂ ಹಿನ್ನೆಡೆ ಉಂಟಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

* * 

ಹಾರಂಗಿ ಜಲಾನಯನ ಪ್ರದೇಶದಲ್ಲಿ ಈವರೆಗೂ ವಾಡಿಕೆ ಮಳೆ ಬೀಳದೆ ನೀರಿನ ಸಂಗ್ರಹ ಪ್ರಮಾಣ ತುಂಬ ಕಡಿಮೆ ಇದೆ. ಜಲಾಶಯ ಭರ್ತಿಯಾದ ನಂತರ ಕಾಲುವೆಗೆ ನೀರು ಹರಿಸಲಾಗುವುದು

ಧರ್ಮರಾಜ್

ಎಇಇ ನೀರಾವರಿ ಇಲಾಖೆ, ಹಾರಂಗಿ

 

ಪ್ರತಿಕ್ರಿಯಿಸಿ (+)