ಶನಿವಾರ, ಡಿಸೆಂಬರ್ 7, 2019
16 °C

ಮಧ್ಯಪ್ರದೇಶ: ಆರ್ಥಿಕ ಸಂಕಷ್ಟದಲ್ಲಿರುವ ರೈತ ಭೂಮಿ ಉಳುಮೆಗೆ ಹೆಣ್ಣುಮಕ್ಕಳ ಹೆಗಲಿಗೆ ನೊಗ ಹೊರಿಸಿದ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮಧ್ಯಪ್ರದೇಶ: ಆರ್ಥಿಕ ಸಂಕಷ್ಟದಲ್ಲಿರುವ ರೈತ ಭೂಮಿ ಉಳುಮೆಗೆ ಹೆಣ್ಣುಮಕ್ಕಳ ಹೆಗಲಿಗೆ ನೊಗ ಹೊರಿಸಿದ

ಸೆಹೋರ್‌: ಕುಟುಂಬದ ಆರ್ಥಿಕ ಬಿಕ್ಕಟ್ಟಿನಿಂದ ಎತ್ತುಗಳನ್ನು ಖರೀದಿಸಲಾಗದ ರೈತ ಜಮೀನಿನಲ್ಲಿ ಜೋಳದ ಬೆಳೆಯಲ್ಲಿ ಎಡೆಕುಂಟೆ ಹೊಡೆಯಲು ತನ್ನ ಇಬ್ಬರು ಹೆಣ್ಣುಮಕ್ಕಳ ಹೆಗಲಿಗೆ ನೊಗ ಹೊರಿಸಿದ್ದಾರೆ.

–ಇದು ಮಧ್ಯಪ್ರದೇಶದ ಬಸಂತಪುರಿ ಪಂಗ್ರಿ ಗ್ರಾಮದಲ್ಲಿ ಕಂಡ ದೃಶ್ಯ. 14 ವರ್ಷದ ರಾಧಿಕಾ, 11 ವರ್ಷದ ಕುಂತಿ ಇಬ್ಬರೂ ಹೆಣ್ಣುಮಕ್ಕಳು ಹಣಕಾಸಿನ ಕೊರತೆಯಿಂದ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿದ್ದಾರೆ. ದುಡಿಮೆಗಾಗಿ ತಂದೆಯ ಜತೆ ಜಮೀನಿಗಿಳಿದಿದ್ದು, ಸ್ವಂತ ಎತ್ತುಗಳಿಲ್ಲಿದ ಕಾರಣಕ್ಕೆ ನೊಗಕ್ಕೆ ಹೆಗಲುಕೊಟ್ಟಿದ್ದಾರೆ.

ಕುಟುಂಬಕ್ಕೆ ಅಗತ್ಯ ಧಾನ್ಯ ಬೆಳೆಯಲು ಭೂಮಿ ಉಳುಮೆಗೆ ಎತ್ತುಗಳನ್ನು ಖರೀದಿಸಲು ಸಾಕಷ್ಟು ಹಣ ನಮ್ಮ ಬಳಿ ಇಲ್ಲ. ಮಕ್ಕಳು ಸೇರಿದಂತೆ ನಾವೇ ಉಳುಮೆ ಮಾಡುತ್ತಿದ್ದೇವೆ ಎಂದು ಸರ್ದಾರ್‌ ಕಹ್ಲಾ ಹೇಳಿದ್ದಾರೆ.

‘ಉಳುಮೆಗಾಗಿ ಎತ್ತುಗಳನ್ನು ಖರೀದಿಸಲು ನನಗೆ ಸಾಕಷ್ಟು ಹಣ ಇಲ್ಲ. ಆರ್ಥಿಕ ಕೊರತೆ ಕಾರಣ ನನ್ನ ಇಬ್ಬರು ಪುತ್ರಿಯರು ಶಾಲಾ ಶಿಕ್ಷಣವನ್ನು ತೊರೆದಿದ್ದಾರೆ’ ಎಂದು ರೈತ ಹೇಳಿದ್ದಾರೆ.

ಏತನ್ಮಧ್ಯೆ, ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಆಶಿಶ್‌ ಶರ್ಮಾ ಅವರು, ಈ ವಿಷಯ ಸಂಬಂಧ ಗಮನ ಹರಿಸಿದ್ದು, ಸರ್ಕಾರಿ ಯೋಜನೆಗಳ ಅಡಿ ಅವರಿಗೆ ಸೂಕ್ತ ಸಹಾಯ ನೀಡಲಾಗುವುದು ಎಂದು ಹೇಳಿದ್ದಾರೆ.

‘ಭೂಮಿ ಉಳುವೆಯಂತಹ ಕಾರ್ಯಗಳಿಗೆ ಮಕ್ಕಳನ್ನು ಬಳಸದಂತೆ ರೈತರಿಗೆ ತಿಳಿಸಿ ಹೇಳಲಾಗಿದೆ ಮತ್ತು ಸರ್ಕಾರಿ ಯೋಜನೆಗಳ ಅಡಿ ಅವರಿಗೆ ಯಾವೆಲ್ಲಾ ನೆರವು ನೀಡಬಹುದು ಎಂಬುದನ್ನು ಆಡಳಿತ ನೋಡುತ್ತಿದೆ’ ಎಂದು ಶರ್ಮಾ ತಿಳಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟಿನಿಂದಾಗಿ ರಾಜ್ಯದಲ್ಲಿ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇಲ್ಲಿ ಕೈಯಲ್ಲಿ ಲೇಖನಿ, ಪುಸ್ತಕ ಹಿಡಿದು ಸ್ವಚ್ಛಂದವಾಗಿ ಶಾಲೆಗೆ ತೆರಳಬೇಕಿದ್ದ ಹೆಣ್ಣುಮಕ್ಕಳು ತಂದೆಯ ಕೃಷಿ ಕಾಯಕದ ನೊಗಕ್ಕೆ ಹೆಗಲು ಕೊಟ್ಟಿದ್ದಾರೆ.

ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವುದು ಸೇರಿದಂತೆ ರೈತರ ಸಾಲಾ ಮನ್ನಾಕ್ಕೆ ಒತ್ತಾಯಿಸಿ ಮಧ್ಯಪ್ರದೇಶದ ರೈತರು ಪ್ರತಿಭಟನೆಗಿಳಿದಿದ್ದರು. ಮೌಂಡ್‌ಸರ್‌ನಲ್ಲಿ ರೈತರ ಮೇಲೆ ನಡೆದ ಗೋಲಿಬಾರ್‌ನಲ್ಲಿ ಆರು ರೈತರು ಸಾವಿಗೀಡಾಗಿದ್ದರು. ಹಿಂಸಾರೂಪ ಪಡೆದಿದ್ದ ನಗರಲ್ಲಿ ನಿಷೇಧಾಜ್ಞೆ ಜಾರಿಗಳಿಸಿ, ಪ್ರಮುಖ ವ್ಯಕ್ತಿಗಳು ಭೇಟಿ ನೀಡದಂತೆ ನಿರ್ಬಂಧ ವಿಧಿಸಲಾಗಿತ್ತು.

ಪ್ರತಿಕ್ರಿಯಿಸಿ (+)