ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿ ಸಂಜೆಯ ಸೊಬಗಿನ ಆಚೆ ಈಚೆ

Last Updated 9 ಜುಲೈ 2017, 19:30 IST
ಅಕ್ಷರ ಗಾತ್ರ

ಮಹಾನಗರದ ಬಹಳ ಕಡೆ ಉದ್ಯಾನಗಳನ್ನು ಬಿಬಿಎಂಪಿ ಊರ್ಜಿತಗೊಳಿಸುತ್ತಿರುವುದು ಆಶಾಕಿರಣವೇ! ಅಂತಹದ್ದೊಂದು ಉದ್ಯಾನ ಸ್ಯಾಂಕಿ ಕೆರೆಯ ಆಜುಬಾಜಿನ ಸುಂದರ ತಾಣ. ನಡಿಗೆಯ ವ್ಯಾಯಾಮಕ್ಕೆಂದೇ ಬಂದು ವಿಹರಿಸಲು ಇದೊಂದು ಹಸಿರು ಹೊದ್ದ ಸುರಕ್ಷಿತ ಸ್ಥಳ.

ಹಿರಿಯ ನಾಗರಿಕ ಜೋಡಿಗಳೆರಡು ಹತ್ತಾರು ಸುತ್ತು ನೆಡಿಗೆ ಮುಗಿಸಿ ವಿರಮಿಸುತ್ತಾ ಅಲ್ಲಿನ ಸಿಮೆಂಟ್ ಬೆಂಚ್ ಮೇಲೆ ಮನಸ್ಸನ್ನೂ ಹಗುರಗೊಳಿಸುತ್ತ ಕುಳಿತಿರುವ ದೃಶ್ಯವೊಂದು ಇಲ್ಲಿದೆ ನೋಡಿ. ಇದು ಕಳೆದ ಚಳಿಗಾಲದ ಒಂದು ಸಂಜೆ ತೆಗೆದ ಚಿತ್ರ. ಈ ಸನ್ನಿವೇಶವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದವರು ಯುವ ಛಾಯಾಗಾಹಕಿ ಸುಮುಖೀ ಶಂಕರ್. ಬೆಂಚಿನ ಹಿಂದೆ ಮುದ್ರಿತವಾದ ಒಕ್ಕಣೆಯನ್ನು ಗಮನಿಸಿ. ತಮ್ಮ ಸುದೀರ್ಘ ಜೀವನವನ್ನು ಹಸಿರಾಗಿಸಿ ಇದೀಗ ಜೀವನಸಂಜೆಗೆ ಕಾಲಿಟ್ಟು ಶುದ್ಧ ಮನಸ್ಸಿನ ನಲಿವು ಪಡೆಯುವ ಹಂಬಲ ಇವರದು ಎಂಬುದು ಆ ಒಕ್ಕಣೆಯಲ್ಲಿ ಧ್ವನಿಸುವಂತಿದೆ.

ಸುಮುಖೀ ಶಂಕರ್ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಕರ್ಣಾಟಕ ಸಂಗೀತದಲ್ಲೂ ಪರಿಣಿತರು. ನಾಲ್ಕು ವರ್ಷಗಳಿಂದ ಫೋಟೊಗ್ರಫಿ ಅವರ ಹವ್ಯಾಸ. ನೃತ್ಯ, ಪ್ರಕೃತಿ, ಮಕ್ಕಳು ಮತ್ತು ಕಲಾತ್ಮಕ ವಿಭಾಗಗಳಲ್ಲಿ ಫೋಟೊಗ್ರಫಿ ಮಾಡುತ್ತಾರೆ. ಅವರು ಬಳಸಿದ ಕ್ಯಾಮೆರಾ ನಿಕಾನ್ ಫುಲ್ ಫ್ರೇಂ ಡಿ.ಎಸ್.ಎಲ್.ಆರ್ - ಡಿ.750 ಮತ್ತು ಎಫ್ 1.8 ಶಕ್ತಿಯ, 50 ಎಂ.ಎಂ ಪ್ರೈಮ್ ಲೆನ್ಸ್.

ಈ ಚಿತ್ರದ ಎಕ್ಸ್‌ಪೋಶರ್ ವಿವರಗಳು: ಮ್ಯಾನುಯೆಲ್ ಮೋಡ್, ಅಪರ್ಚರ್ ಎಫ್. 1.8. ಷಟರ್ ವೇಗ 1/ 50 ಸೆಕೆಂಡ್, ಐಎಸ್‌ಒ 100, ಆಟೋವೈಟ್ ಬ್ಯಾಲೆನ್ಸ್. ಟ್ರೈಪಾಡ್ ಬಳಸಿಲ್ಲ.

ಈ ಛಾಯಾಚಿತ್ರದೊಂದಿಗೆ ಅವಲೋಕಿಸ ಬಹುದಾದ ತಾಂತ್ರಿಕ ಮತ್ತು ಕಲಾತ್ಮಕ ವಿಶ್ಲೇಷಣೆ ಇಂತಿವೆ: ಹೊಸದಾಗಿ ಫೋಟೊಗ್ರಫಿ ಹವ್ಯಾಸದಲ್ಲಿ ಆಸಕ್ತರಾಗಿರುವವರ ದೃಷ್ಟಿಯಿಂದ ಈ ಚಿತ್ರದ ಬಗ್ಗೆ ಅನುಭವಿ ಹಾಗೂ ಖ್ಯಾತ ಛಾಯಾಚಿತ್ರಕಾರ ಎ.ಜಿ.ಲಕ್ಷ್ಮೀನಾರಾಯಣ್ ಅವರಿಂದ ಕೆಳಗಿನ ವಿಶೇಷ ವಿಶ್ಲೇಷಣೆಯನ್ನು ಪಡೆಯಲಾಗಿದೆ: ಚಿತ್ರವು, ನೋಡುಗನ ಕಣ್ಣು ಮತ್ತು ಮನಸನ್ನು ಒಮ್ಮೆಲೇ ಸೆಳೆಯುವ ಗುಣಹೊಂದಿರುವುದು ಛಾಯಾಚಿತ್ರಕಾರರ ಉತ್ತಮ ಪ್ರಯತ್ನ. ಹಿರಿಯ ದಂಪತಿಗಳು ಹರ್ಷಚಿತ್ತರಾಗಿ ಸಮಯ ಕಳೆಯುತ್ತಿರುವ ಪರಿಯನ್ನು ಅವರಿಗೆ ಅರಿವಿಲ್ಲದೇ ಸಮರ್ಪಕವಾಗಿ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಉತ್ತಮವಾದ ಕ್ಯಾಂಡಿಡ್ ಫೋಟೊಗ್ರಫಿ ಇದು.

ಹೊರಾಂಗಣದ ಸಂದರ್ಭದಲ್ಲಿ ಮೂರು ಆಯಾಮವನ್ನು (ತ್ರೀಡಿ) ಮೂಡಿಸುವುದು ಔಚಿತ್ಯ. ಅಂದರೆ, ಅಗಲ, ಎತ್ತರ ಮತ್ತು ಆಳ. ಸಿಮೆಂಟ್ ಬೆಂಚು ಮತ್ತು ಕುಳಿತವರ ಭಾಗ ಒಂದೂವರೆ- ಎರಡು ಅಡಿ ಆಳದ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಸಂಗಮಗೊಳಿಸಿರುವುದು (ಫೋಕಸ್) ಅವಶ್ಯಕ. ಇಲ್ಲಿ ಪೂರ್ತಿ ತೆರೆದ ಅಪರ್ಚರ್ ಎಫ್ 1.8 ನ್ನು ಇಲ್ಲಿ ಅಳವಡಿಸಿರುವುದರಿಂದ, ಸುಮಾರು 20 ಅಡಿ ದೂರದಿಂದ ಬೆಂಚಿನ ಹಿಂಭಾಗದ ಅಕ್ಷರಗಳಿಗೆ ಫೋಕಸ್ ಮಾಡಿ ಕ್ಲಿಕಿಸಿರುವುದು ಕಾಣಿಸುತ್ತಿದೆ. ಅಂದರೆ, ಸಂಗಮ ವಲಯವು (ಡೆಪ್ತ್ ಆಫ್ ಫೀಲ್ಡ್) ಒಂದು ಅಡಿಗೂ ಕಡಿಮೆ ಹಾಗಾಗಿ, ಇಲ್ಲಿ ವ್ಯಕ್ತಿಯ ಕನ್ನಡಕ, ಟೊಪ್ಪಿಯ ಮುಂಬದಿ, ಮಹಿಳೆಯರ ತಲೆಕೂದಲು ಸ್ಫುಟವಾಗಿ ಮೂಡಿಲ್ಲ. ಅದಕ್ಕೆ ಪರಿಹಾರ, ಫೋಕಸಿಂಗ್ ವ್ಯಾಪ್ತಿಯನ್ನು ಹೆಚ್ಚಿಸಬಲ್ಲ ಕಡಿಮೆ ಅಪರ್ಚರ್ ರಂದ್ರದ ಎಫ್ 5.6 ಅಳವಡಿಸುವುದು.

ತಾಂತ್ರಿಕವಾಗಿ ಪೂರ್ತಿ ತೆರೆದ ಅಪರ್ಚರ್ ಮತ್ತು ನಿಧಾನಗತಿಯ ಷಟರ್ ವೇಗದ ದೆಸೆಯಿಂದ ಮೂಲತಃ ಈ ಇಮೇಜ್‌ನ ಹಿನ್ನೆಲೆ ಬಿಳಿಚಿದಂತೆ (ಓವರ್ ಎಕ್ಸ್ ಪೋಸ್) ಆಗಿದ್ದು, ಬಹುಷಃ ನಂತರ ಕಂಪ್ಯೂಟರ್‌ನ ಸಾಫ್ಟ್‌ವೇರ್ ಬಳಸಿ ವರ್ಣ ಛಾಯಾಂತರವನ್ನು (ಟೋನಲ್ ಗ್ರಡೇಶನ್) ಸರಿಪಡಿಸಿದ ಹಾಗಿದೆ. ಅದರಿಂದಾಗಿ ಹಿನ್ನೆಲೆಯ ಆಕಾಶ ಹೆಚ್ಚು ಬಿಳಿಚಿದೆ. ಜೊತೆಗೆ ಮರಗಳ ರೆಂಬೆ ಎಲೆ ಮತ್ತು ಲ್ಯಾಂಪ್ ಪೋಸ್ಟ್, ನೀಳಕಂಬ ಇತ್ಯಾದಿ ಅಂಚುಗಳಲ್ಲಿ ಕೆಂಪು ಪಿಕ್ಸೆಲ್‌ಗಳು ಎದ್ದು ಕಾಣಿಸುತ್ತಿವೆ.

ಮುನ್ನೆಲೆಗೆ (ಬೆಂಚ್ ಮೇಲಿನ ಮಂದಿ) ಚಿತ್ರದಲ್ಲಿ ನೀಡಿರುವ ಪ್ರಾಮುಖ್ಯತೆಯ ಜೊತೆಗೆ ಹಿನ್ನೆಲೆಯೂ ತಕ್ಕಮಟ್ಟಿಗೆ ಉತ್ತಮವಾಗಿ ಮೂಡುವುದು ಒಟ್ಟಾರೆ ಸಂವೇದನೆಗೆ ಸಹಕಾರಿಯಾಗುವುದು. ಎಫ್ 5.6 ಅಪರ್ಚರ್ ಅಳವಡಿಸಿದ್ದಲ್ಲಿ ಹಿನ್ನೆಲೆಯಲ್ಲಿರುವ ಹಸಿರುಹಾಸು, ಗಿಡ- ಮರ, ಕೆರೆಯ ನೀರು ಇತ್ಯಾದಿ ದೃಶ್ಯ ಭಾಗಗಳೂ ಸುಂದರವಾಗಿ ಕಾಣಿಸುವಷ್ಟು ಫೋಕಸ್ ಆಗುವಲ್ಲಿ ಅನುವಾಗುವುದು. ಕುಳಿತವರ ಸಹಜ ಚಲನೆ ಮತ್ತು ಮರ ಗಿಡ ಎಲೆಗಳ ಅಲುಗಾಡುವಿಕೆಯ ಸಾಧ್ಯತೆ ಇರುವ ಇಂತಹ ಸಂದರ್ಭದಲ್ಲಿ ಷಟರ್ ವೇಗ 1/ 125 ಸೆಕೆಂಡ್ ( ಹೆಚ್ಚು ವೇಗ) ಸೂಕ್ತ.

ಕಲಾತ್ಮಕವಾಗಿ ಮುಖ್ಯವಸ್ತುಗಳಾದ ಆ ನಾಲ್ವರಲ್ಲಿ ಒಬ್ಬೊಬ್ಬರೂ ಅವರದ್ದೇ ಯೋಚನೆಯಲ್ಲಿ ಮುಳುಗಿದಂತಿದೆ. ಅವರಲ್ಲೊಬ್ಬರ ಮುಖವಾದರೂ ಭಾವನೆಗಳನ್ನು ಸೂಸುವಷ್ಟು ಕಾಣುವಷ್ಟಿದ್ದು, ಇತರರೆಲ್ಲರೂ ಆ ವ್ಯಕ್ತಿಯೆಡೆಗೇ ಗಮನ ಕೊಟ್ಟಿದ್ದರೆ, ಇಡೀ ಚಿತ್ರಕ್ಕೆ ಅರ್ಥ ಹೆಚ್ಚುತ್ತಿತ್ತು.

ಎರಡನೆ ವ್ಯಕ್ತಿಯ ತಲೆಯ ಮೇಲಿನಿಂದ ದೂರದ ಮರವೊಂದು ಉದ್ಭವಿಸಿದಂತಿದೆ ಮತ್ತು ಮಹಿಳೆಯೊಬ್ಬಳ ತಲೆಯಿಂದಲೂ ಹಳದಿ ಬಣ್ಣದ ಲ್ಯಾಂಪ್ ಪೋಸ್ಟ್ ಎದ್ದಂತಿದೆ! ಕ್ಲಿಕ್ಕಿಸುವಾಗ ಕ್ಯಾಮೆರಾದ ಕೋನವನ್ನು ಸ್ವಲ್ಪ ಬದಲಿಸಿ ಇದನ್ನು ತಪ್ಪಿಸಬಹುದಾಗಿತ್ತು.

ಸುಂದರ ಉದ್ಯಾನ, ಕೆರೆಯ ನೀರು ಹಾಗೂ ಇಡೀ ಪರಿಸರದ ಚೌಕಟ್ಟಿನ ಹೆಚ್ಚು ಭಾಗವನ್ನು ಬೆಂಚು ಮತ್ತು ಆ ನಾಲ್ವರೇ ಆಕ್ರಮಿಸಿದ್ದಾರಷ್ಟೇ. ಬಲಭಾಗದ ಮರವೊಂದು ಅವರ ಸನಿಹದಲ್ಲೇ ಇದ್ದು ಪಕ್ಕದ ಖಾಲಿ ಜಾಗ ಬಹಳ ಉದ್ದವಾಗಿ ಸಮತೋಲನ (ಬ್ಯಾಲೆನ್ಸ್) ಇಲ್ಲದಾಗಿದೆ. ಕ್ಯಾಮೆರಾವನ್ನು ಈಗ ಹಿಡಿದಿದ್ದ ಜಾಗಕ್ಕಿಂತ ಇನ್ನೂ ಎರಡು– ಮೂರು ಅಡಿ ಎತ್ತರಕ್ಕೆ ಎತ್ತಿ ಹಿಡಿದು, ಸ್ವಲ್ಪ ಬಲ ಭಾಗವನ್ನು ಕ್ರಾಪ್ ಮಾಡಿ ಸ್ವಲ್ಪ ಬಲಕ್ಕೆ ಕೋನವನ್ನು ತಳ್ಳಿಕೊಂಡು, ಬೆಂಚಿನ ಅಂಚಿನಿಂದ ಆ ಮರದ ಅಂತರವನ್ನು ಹೆಚ್ಚಿಸಿ ಕ್ಲಿಕ್ ಮಾಡಿದ್ದರೆ ಇಡೀ ಚೌಕಟ್ಟಿನ ಸಂಯೋಜನೆಗೆ ಕಲಾತ್ಮಕತೆಯ ಮೆರುಗು ಹೆಚ್ಚುತ್ತಿತ್ತು. ಮೇಲಿನ ಉಪಯುಕ್ತ ಒಳನೋಟ ನೀಡಿದ ಎ.ಜಿ.ಲಕ್ಷ್ಮೀನಾರಾಯಣ್ ಅವರಿಗೆ ಅಭಿನಂದನೆಗಳು.
ಕೆ.ಎಸ್.ರಾಜಾರಾಮ್
ksrajaram173@gmail.com

***


ಛಾಯಾಚಿತ್ರಗಾರ್ತಿ: ಸುಮುಖೀ ಶಂಕರ್
ಇಮೇಲ್: sumukheeshankar@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT