ಶುಕ್ರವಾರ, ಡಿಸೆಂಬರ್ 13, 2019
16 °C

ಬೆಂಗಾಡಾಗುತ್ತಿದೆ ಬೆಂಗಳೂರು

ಹೇಮಾ ವೆಂಕಟ್‌ Updated:

ಅಕ್ಷರ ಗಾತ್ರ : | |

ಬೆಂಗಾಡಾಗುತ್ತಿದೆ ಬೆಂಗಳೂರು

ಶಿವಮೊಗ್ಗದವರಾದ ನನ್ನಪ್ಪ ಮೈಸೂರು ಜಿಲ್ಲೆ ಕೆ.ಆರ್‌.ಪೇಟೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ನಾನು ಹುಟ್ಟಿದ್ದು, ನಾಲ್ಕನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದು ಕೆ.ಆರ್‌.ಪೇಟೆಯಲ್ಲಿಯೇ. ನಂತರ ಅಪ್ಪನಿಗೆ ಬೆಂಗಳೂರಿಗೆ ವರ್ಗವಾಯಿತು. ಚಾಮರಾಜಪೇಟೆ ರಾಘವೇಂದ್ರ ಕಾಲೊನಿಯಲ್ಲಿ ನಮ್ಮ ಮನೆ ಇತ್ತು. ಐದನೇ ತರಗತಿಗೆ ಬಸವನಗುಡಿಯ ಬೆಂಗಳೂರು ಹೈಸ್ಕೂಲಿಗೆ ಸೇರಿದೆ.

ಅಲ್ಲಿ ಓದಿದ ದಿನಗಳು ಬದುಕಿನಲ್ಲಿ ಅವಿಸ್ಮರಣೀಯ. ಅಲ್ಲಿ ವಿಜ್ಞಾನಿ ಕಸ್ತೂರಿರಂಗನ್‌, ಕ್ರಿಕೆಟ್‌ ಪಟು ವಿಶ್ವನಾಥ್‌ ಅವರೆಲ್ಲ ಕ್ರಿಕೆಟ್‌ ಆಡುತ್ತಿದ್ದುದನ್ನು ನೋಡುವುದೇ ನಮಗೆ ಖುಷಿ. ಚಾಮರಾಜಪೇಟೆಯಿಂದ ಬಸವನಗುಡಿಗೆ ನಡೆದೇ ಹೋಗುತ್ತಿದ್ದೆ. ಬಸವನಗುಡಿಯಲ್ಲಿ ಒಂದು ಉಗಿ ಯಂತ್ರದ (ಸ್ಟೀಮ್‌ ಎಂಜಿನ್‌) ಬಸ್‌ ಬರುತ್ತಿತ್ತು. ಅದರಲ್ಲಿ ಎಂದೂ ಕೂತಿರಲಿಲ್ಲ.

ನಮ್ಮ ಮನೆ ಹತ್ತಿರ ಸಂಪಿಗೆ ಮರವಿತ್ತು. ಆ ಮರ ನಮ್ಮ ಕ್ರಿಕೆಟ್‌ ಆಟಕ್ಕೆ ವಿಕೆಟ್‌. ಕ್ರಿಕೆಟ್‌ ಆಡುವಾಗ ಮಧ್ಯದಲ್ಲಿ ಯಾರೂ ಮನೆಗೆ ಹೋಗಬಾರದು ಎಂಬುದು ನಾವೇ ಹಾಕಿಕೊಂಡ ನಿಯಮವಾಗಿತ್ತು. ಬೌಲರ್‌, ವಿಕೆಟ್‌ ಕೀಪರ್‌ ಜೋರಾಗಿ ಕಿರುಚಿದರೆ ಔಟ್‌ ಎಂದೇ ನಿರ್ಧಾರಕ್ಕೆ ಬರುತ್ತಿದ್ದೆವು. ಅದು ಬಿಟ್ಟರೆ ಕುಂಟೆಬಿಲ್ಲೆ, ಗೋಲಿ ಆಡುತ್ತಿದ್ದೆವು.

ಹೆಬ್ಬಾಳದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಪದವಿ ಪಡೆದೆ. ಆಗ, ಅಂದರೆ 1958ರಲ್ಲಿ ಮೆಜೆಸ್ಟಿಕ್‌ ಬಳಿಯ ಗೂಡ್ಸ್‌ ಶೆಡ್‌ನಿಂದ ಮೇಖ್ರಿ ವೃತ್ತದವರೆಗೆ ಒಂದೇ ಒಂದು ಬಸ್‌ ಓಡಾಡುತ್ತಿತ್ತು. ಅಲ್ಲಿಗೆ ನಾವು ತಲುಪದೇ ಬಸ್‌ ಹೊರಡುತ್ತಿರಲಿಲ್ಲ. ಮತ್ತೆ ಮೇಖ್ರಿ ವೃತ್ತದಲ್ಲಿ ಬಸ್‌ನಿಂದ ಇಳಿದು ಕಾಲೇಜಿನವರೆಗೆ ನಡೆಯಬೇಕಿತ್ತು. ಅಲ್ಲಿ ಒಬ್ಬೊಬ್ಬರೇ ಹೋಗಲು ಭಯವಾಗುತ್ತಿತ್ತು. ಪರಿಸರ ವಿಜ್ಞಾನಿ ಯಲ್ಲಪ್ಪರೆಡ್ಡಿ, ಕಬ್ಬು ಬೆಳೆ ತಜ್ಞ ವೆಂಕೋಬರಾವ್‌, ಧಾರವಾಡ ಕೃಷಿ ವಿವಿ ನಿವೃತ್ತ ಕುಲಪತಿ ಮಹದೇವಪ್ಪ ಅವರೆಲ್ಲ ನನ್ನ ಸಹಪಾಠಿಗಳು. ಇಲ್ಲಿಯೇ ಒಂದು ವಿಷಯ ಹೇಳಿಬಿಡುತ್ತೇನೆ. ನಾವು ಪದವಿ ಓದುವ ಹೊತ್ತಿಗೆ ಬೆಂಗಳೂರಿನಲ್ಲಿ ಮೂರೇ ಕಾರುಗಳಿದ್ದವು. ಅದರಲ್ಲಿ ಒಂದು ನಮ್ಮ ಪ್ರಾಂಶುಪಾಲರದ್ದು.

ಹಾಗೆ... ಪದವಿ ಮುಗಿದ ನಂತರ ಎಂ.ಎಸ್ಸಿ ಓದಲು ನಾನು ಕೊಯಮತ್ತೂರಿಗೆ ಹೋದೆ. ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಪಿಎಚ್‌.ಡಿ ಪಡೆದೆ. 1972ರಲ್ಲಿ ಬೆಲ್ಜಿಯಂನಲ್ಲಿ ಎಂ.ಎಸ್‌ ಮಾಡಲು ಆಯ್ಕೆಯಾದೆ. ಆಗ ನನ್ನ ಮಗನಿಗೆ ಮೂರು ತಿಂಗಳು. ಆದರೆ, ಬೆಂಗಳೂರಿನಲ್ಲಿಯೇ ಇದ್ದ ನನ್ನ ಮತ್ತು ಪತ್ನಿಯ ಪೋಷಕರು ಮಗುವಿನ ಪೋಷಣೆಯ ಜವಾಬ್ದಾರಿ ವಹಿಸಿಕೊಂಡು ಪತ್ನಿಯನ್ನು ನನ್ನ ಜೊತೆ ಬೆಲ್ಜಿಯಂಗೆ ಕಳುಹಿಸಿಕೊಟ್ಟರು. ಅಲ್ಲಿ ಹದಿಮೂರು ತಿಂಗಳು ಇದ್ದೆವು. ಅಲ್ಲಿಂದ ನೇರವಾಗಿ ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ (ಐಸಿಎಆರ್‌) ಕೆಲಸಕ್ಕೆ ಸೇರಿದೆ.

ಕೆಂಪಾಂಬುಧಿ ಕೆರೆಯ ನೆನಪು ಮರೆಯಲಾಗದು: ಚಾಮರಾಜಪೇಟೆಯಿಂದ ಒಂದು ಕಿಲೋಮೀಟರ್‌ ದೂರದಲ್ಲಿರುವ ಕೆಂಪಾಂಬುಧಿ ಕೆರೆಯಲ್ಲಿ ದೋಬಿಗಳು ಬಟ್ಟೆ ಒಗೆಯುತ್ತಿದ್ದರು. ಈಜುವವರಿಗೆ ನೆಚ್ಚಿನ ತಾಣವಾಗಿತ್ತು. ಕೆರೆಯಲ್ಲಿ ಕೆಂಪು ಮಣ್ಣು ಸೇರಿಕೊಂಡು ಕೆಂಪಗೆ ಕಾಣುತ್ತಿತ್ತು. ಹಾಗಾಗಿ ಕೆಂಪಾಂಬುಧಿ ಎಂಬ ಹೆಸರು ಬಂದಿತ್ತು. ಸುತ್ತಲಿನ ಮಳೆ ನೀರು ಅಲ್ಲಿ ಸೇರುತ್ತಿತ್ತು. ಕೊಚ್ಚೆ ನೀರು ಕಾಣಲೂ ಸಿಗುತ್ತಿರಲಿಲ್ಲ.

ಇಡೀ ಬೆಂಗಳೂರಿನ ಒಂದೇ ಒಂದು ಡಬಲ್‌ ರಸ್ತೆ ವಿಲ್ಸನ್‌ ಗಾರ್ಡನ್‌ನಲ್ಲಿತ್ತು. ವಿಲ್ಸನ್‌ ಗಾರ್ಡನ್‌– ಶಿವಾಜಿನಗರ–ಮೆಜೆಸ್ಟಿಕ್‌ ಮಾರ್ಗದಲ್ಲಿ ಒಂದೇ ಒಂದು ಡಬಲ್‌ ಡೆಕರ್‌ (ಮಹಡಿ) ಬಸ್‌ ಓಡಾಡುತ್ತಿತ್ತು. ಅದನ್ನು ನೋಡಲು ಹೋಗುತ್ತಿದ್ದೆವು. ಚಾಮರಾಜಪೇಟೆ ವೃತ್ತದ ಬಳಿ ಭೀಮಣ್ಣನ ಅಂಗಡಿ ಅಂತ ಇತ್ತು. ಅಪ್ಪನಿಗೆ ನಶ್ಯ ಕೊಳ್ಳಲು ಅಲ್ಲಿಗೆ ಹೋಗುತ್ತಿದ್ದೆ. ಅಲ್ಲೊಬ್ಬ ನಾಟಿವೈದ್ಯ ಇದ್ದರು. ಅವರು ‘ತಾಟೀಸೊಪ್ಪ’ನ್ನು ಅರೆದು ಮೂಳೆಗೆ ಹಚ್ಚಲು ಕೊಡುತ್ತಿದ್ದರು. ಅವರ ಬಳಿ ತುಂಬ ಜನ ಔಷಧಿ ಪಡೆಯುತ್ತಿದ್ದರು. ಅವರನ್ನು ಬಿಟ್ಟರೆ ಡಾ. ಶ್ರೀನಿವಾಸ್‌ ಅಂತ ಮೂಳೆವೈದ್ಯರಿದ್ದರು.

ಸ್ವಾತಂತ್ರ್ಯ ಬಂದ ನಂತರ ಹಿಂದೂ– ಮುಸ್ಲಿಂ ಗಲಭೆ ಉಂಟಾಗಿತ್ತು. ಆಗ ಅಂಗಡಿಗಳನ್ನು ಲೂಟಿ ಮಾಡಿದ ವಸ್ತುಗಳನ್ನು ನಮಗೆಲ್ಲ ಕೊಟ್ಟು ಕಳಿಸಿದ್ದರು. ಗಲಾಟೆ ಸಂದರ್ಭದಲ್ಲಿ ಪ್ರತಿ ಮನೆಯಿಂದ ಒಬ್ಬೊಬ್ಬರು ರಾತ್ರಿ ಬೀಟ್‌ ಹೋಗಬೇಕಿತ್ತು.

ಆಗ ಮೆಜೆಸ್ಟಿಕ್‌ ಬಳಿ ತುಳಸಿತೋಟ ಇತ್ತು. ಅಲ್ಲಿ ವನಸ್ಪತಿ ತಯಾರಿಸುತ್ತಿದ್ದರು. ಅದೀಗ ಕಣ್ಮರೆಯಾಗಿದೆ. ಹೆಸರು ಮಾತ್ರ ಉಳಿದಿದೆ. ತುಳಸಿಯನ್ನು ಸಂಪ್ರದಾಯಕ್ಕಾಗಿ ಮನೆಗಳಲ್ಲಿ ಮಾತ್ರ ಬೆಳೆಸುತ್ತಿದ್ದಾರೆ. ಆದರೆ ತುಳಸಿಗೆ ವೈರಲ್‌ ಜ್ವರ, ಡೆಂಗಿ, ಮಲೇರಿಯಾ, ಹಕ್ಕಿಜ್ವರ ಎಲ್ಲವನ್ನೂ ದೂರವಿಡುವ ಶಕ್ತಿ ಇದೆ. ನಮ್ಮ ಉದ್ಯಾನಗಳಲ್ಲಿ ಅದನ್ನು ಬೆಳೆದರೆ ಅಲ್ಲಿಗೆ ವಾಯುವಿಹಾರಕ್ಕೆ ಹೋಗುವವರಿಗೆ ಸಹಕಾರಿಯಾಗಲಿದೆ. ಈ ಸಂಬಂಧ ಸರ್ಕಾರಕ್ಕೆ ವರದಿಯೊಂದನ್ನು ನೀಡಿದ್ದೇನೆ.

ಗಾಂಧಿ ಬಜಾರಿನ ವಿದ್ಯಾರ್ಥಿ ಭವನದ ಹಿಂದಿನ ಪುಟ್ಟಣ್ಣ ರಸ್ತೆಯಲ್ಲಿ ನನ್ನ ಪತ್ನಿಯ ತಂದೆ ಮನೆ ಇತ್ತು. ಸಾಹಿತಿ ಡಿ.ವಿ. ಗುಂಡಪ್ಪನವರು ವಿದ್ಯಾರ್ಥಿ ಭವನಕ್ಕೆ ಆಗಾಗ ಬರುತ್ತಿದ್ದರು. ಸದಾ ಕೈಯಲ್ಲೊಂದು ಕೋಲು ಹಿಡಿದಿರುತ್ತಿದ್ದರು. ಅವರ ‘ಮಂಕುತಿಮ್ಮನ ಕಗ್ಗ’ ಪುಸ್ತಕ ಪ್ರಕಟಗೊಂಡಾಗ ಐದು ರೂಪಾಯಿ ಕೊಟ್ಟುಕೊಂಡಿದ್ದೆ. ಅದು ಈಗಲೂ ನನ್ನ ಬಳಿಯಿದೆ.

ನಿಮಗೆ ಗೊತ್ತಾ.. ಬೆಂಗಳೂರಿನ ನೂರು ವರ್ಷಗಳ ಮಳೆ ಪ್ರಮಾಣವನ್ನು ನಾನು ಅಧ್ಯಯನ ಮಾಡಿದ್ದೇನೆ. ಹಿಂದೆ 1500 ಮಿಲೀ ಮೀಟರ್‌ ಮಳೆ ಬರುತ್ತಿತ್ತು. ಅದು ಈಗ 750 ಮಿಲೀ ಮೀಟರ್‌ಗೆ ಇಳಿದಿದೆ. ಆ ಕಾಲದಲ್ಲಿ ಬೆಂಗಳೂರು ವಾತಾವರಣ ಹೇಗಿತ್ತೆಂದರೆ ಮೇನಲ್ಲೂ ಸ್ವೆಟರ್‌ ಧರಿಸುತ್ತಿದ್ದೆವು. ಆಗ ಕೆಂಗೇರಿಯಿಂದ ಮಾಗಡಿ ರಸ್ತೆಯವರೆಗೂ ಕೃಷಿ ಭೂಮಿ ಇತ್ತು. ಬೆಂಗಳೂರು ವಿಶ್ವವಿದ್ಯಾಲಯ ಇರುವ ಪ್ರದೇಶ (ಜ್ಞಾನಭಾರತಿ)ದಲ್ಲಿ ಬೆಳೆದ ರಾಗಿ ಬೆಳೆ ಹೌಸಿಂಗ್‌ ಬೋರ್ಡ್‌ವರೆಗೂ ಕಾಣುತ್ತಿತ್ತು. ಮೆಕ್ಕೆಜೋಳ, ಅವರೆ ಬೆಳೆಯುತ್ತಿದ್ದರು. ಅರ್ಧ ಬೆಂಗಳೂರೇ ತರಕಾರಿ ಮತ್ತು ಹಣ್ಣಿನ ತೋಟವಾಗಿತ್ತು. ಸ್ಥಳೀಯ ಭತ್ತ ಒಂದೇ ಬೆಳೆಯುತ್ತಿದ್ದರು. ಸೀಬೆಹಣ್ಣು, ಹಲಸು ಹೇರಳವಾಗಿ ಬೆಳೆಯುತ್ತಿತ್ತು. ಚಳಿಗಾಲದಲ್ಲಿ ಮಾತ್ರ ಅವರೆ ಸಿಗುತ್ತಿತ್ತು.

ಸರ್‌.ಎಂ. ವಿಶ್ವೇಶ್ವರಯ್ಯನವರೇ ಮುತುವರ್ಜಿ ವಹಿಸಿ ಹುಣಸೆ ಮರಗಳನ್ನು ಬೆಳೆಸಿದ್ದರು. ಈಗ ಹುಣಸೆಯನ್ನು ಬಳಸುವವರೇ ಇಲ್ಲ. ನಗರದ ಜನ ಹುಣಸೆ ಬದಲು ಟೊಮೆಟೊ ಬಳಸುತ್ತಾರೆ. ಟೊಮೆಟೊ ಬಳಕೆಯಿಂದಾಗಿಯೇ ಕಿಡ್ನಿ ಸಮಸ್ಯೆಗಳು ಹೆಚ್ಚಾಗಿವೆ.

ಏಪ್ರಿಲ್‌– ಮೇ ತಿಂಗಳಲ್ಲಿ ನಗರದ ಮನೆಗಳ ಕೈತೋಟಗಳಿಗೆ ಜೇನು ನೊಣಗಳು ಮಕರಂದ ಹೀರಲು ಬರುತ್ತಿವೆ. ಇದು ಮರಳುಗಾಡು ಆಗುತ್ತಿರುವ ಲಕ್ಷಣ. ಅವುಗಳಿಗೆ ಎಲ್ಲಿಯೂ ಹೂಗಳು ಸಿಗುತ್ತಿಲ್ಲ. ಹಿಂದೆ ಮಳೆಗಾಲದಲ್ಲಿ ಮಾತ್ರ ಸ್ವಲ್ಪ ಅಲರ್ಜಿ ಕಾಣಿಸುತ್ತಿತ್ತು. ಆದರೆ, ಈಗ ಬೆಂಗಳೂರಿನಲ್ಲಿ ಎಲ್ಲ ವಯಸ್ಸಿವರಿಗೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದೆ. ಎಂಥಾ ಫಲವತ್ತಾದ ಮಣ್ಣಿತ್ತು. ನಿಜಕ್ಕೂ ಈ ನಗರವನ್ನು ಕಟ್ಟಿದ ಕೆಂಪೇಗೌಡರು ಪ್ರಾತಃಸ್ಮರಣೀಯ. ಸುಮಾರು 60 ವರ್ಷಗಳಿಂದ ನಗರ ಬದಲಾಗುತ್ತಿರುವುದರನ್ನು ಗಮನಿಸಿದ್ದೇನೆ. ನಗರೀಕರಣದಿಂದಾಗಿ ಮೂಲ ಭೌಗೋಳಿಕ ಲಕ್ಷಣವನ್ನೆಲ್ಲ ಕಳೆದುಕೊಂಡು ಬೆಂಗಾಡಾಗುತ್ತಿದೆ.

ಬೆಂಗಳೂರಿನ ಮಣ್ಣು ಅತ್ಯಂತ ಪುರಾತನ
ಬೆಂಗಳೂರಿನ ಮಣ್ಣು ಜಗತ್ತಿನಲ್ಲಿಯೇ ಅತ್ಯಂತ ಪುರಾತನ ಎಂಬುದು ಕಾರ್ಬನ್‌ ಡೇಟಿಂಗ್‌ನಿಂದ (ಎಷ್ಟು ಹಳೆಯದು ಎಂದು ಪರೀಕ್ಷಿಸುವ ವಿಧಾನ) ಸಾಬೀತಾಗಿದೆ. ಈ ಮಣ್ಣು ಎಷ್ಟು ಪ್ರಾಚೀನ ಎಂದರೆ, ಕೃತಯುಗ, ತ್ರೇತಾಯುಗ, ದ್ವಾಪರಯುಗಗಳನ್ನು ಕಂಡು ಕಲಿಯುಗವನ್ನು ಕಾಣುತ್ತಿದೆ. ನಂತರದ ಸ್ಥಾನದಲ್ಲಿ ತಿರುಮಲ ಬೆಟ್ಟದಲ್ಲಿರುವ ಶಿಲಾ ತೋರಣ ಇದೆ. ಇಲ್ಲಿನ ಮಣ್ಣಿಗೆ ಸಾಮ್ಯತೆಯಿರುವ ಮಣ್ಣು ದಕ್ಷಿಣ ಆಫ್ರಿಕದಲ್ಲಿ ಕಂಡುಬಂದಿದೆ. ವಿಜ್ಞಾನಿ ಯು. ಆರ್‌.ರಾವ್‌, ಕಸ್ತೂರಿರಂಗನ್‌ ಮತ್ತು ನಾನು ಸೇರಿ ದಕ್ಷಿಣ ಭಾರತದ (ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಲಕ್ಷದ್ವೀಪ) ಮಣ್ಣಿನ ನಕ್ಷೆ ತಯಾರಿಸಿದ್ದೇವೆ.

ಪರಿಚಯ
* ಜನನ: ಜುಲೈ 23, 1938
* ಕ್ಷೇತ್ರ: ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ (ಐಸಿಎಆರ್‌) ವಿಜ್ಞಾನಿ
* ಹೆಬ್ಬಾಳದ ರಾಷ್ಟ್ರೀಯ ಮಣ್ಣು ಸಮೀಕ್ಷೆ ಮತ್ತು ಭೂ ಬಳಕೆ ಯೋಜನಾ ಸಂಸ್ಥೆಯ (ಎನ್‌ಬಿಎಸ್‌ಎಸ್‌) ವಲಯ ಮುಖ್ಯಸ್ಥ.
* 1998ರಲ್ಲಿ ನಿವೃತ್ತಿ
* ನಿವಾಸ: ಮಾಗಡಿ ರಸ್ತೆಯ ಕಾವೇರಿನಗರ
* ಪತ್ನಿ: ಉಮಾ ಮೋಹನ್‌  
 * ಮಗ: ಶ್ರೀನಿಧಿ
(ರಘು ಮೋಹನ್‌ ಅವರ ಸಂಪರ್ಕ ಸಂಖ್ಯೆ 97424 84002)


ಮೊಮ್ಮಗಳು ಸುಕೃತಿ, ಪತ್ನಿ ಉಮಾ ಮತ್ತು ಸೊಸೆ ಜೋತ್ಸ್ನಾ ಜೊತೆ

ಪ್ರತಿಕ್ರಿಯಿಸಿ (+)