ಮಂಗಳವಾರ, ಡಿಸೆಂಬರ್ 10, 2019
18 °C
ಹಂಪಿ ವಿ.ವಿ ಸಂಶೋಧನೆಯಿಂದ 40 ಸಾವಿರ ವರ್ಷಗಳ ಹಿಂದಿನ ಮಾನವನ ನೆಲೆ ಬೆಳಕಿಗೆ

ಸಂಗೇನಹಳ್ಳಿ: ಶಿಲಾಯುಗದ ಚಿತ್ರ, ಆಯುಧ ಪತ್ತೆ

ಡಿ. ಶ್ರೀನಿವಾಸ್‌ Updated:

ಅಕ್ಷರ ಗಾತ್ರ : | |

ಸಂಗೇನಹಳ್ಳಿ: ಶಿಲಾಯುಗದ ಚಿತ್ರ, ಆಯುಧ ಪತ್ತೆ

ಜಗಳೂರು: ತಾಲ್ಲೂಕಿನ ಸಂಗೇನಹಳ್ಳಿ ಕೆರೆ ಪ್ರದೇಶದಲ್ಲಿ 40 ಸಾವಿರ ವರ್ಷಗಳ ಹಿಂದಿನ ಹಳೇ ಶಿಲಾಯುಗದ ಕಲ್ಲಿನ ಆಯುಧ ಹಾಗೂ ಗೂಳಿ, ಹಾವಿನ ವರ್ಣಚಿತ್ರಗಳು ಪತ್ತೆಯಾಗಿವೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪ ಕುಲಸಚಿವ (ಶೈಕ್ಷಣಿಕ) ಡಾ.ಎಸ್‌.ವೈ.ಸೋಮಶೇಖರ್‌ ನೇತೃತ್ವದಲ್ಲಿ ಈಚೆಗೆ ಕೈಗೊಂಡ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಈ ನೆಲೆಗಳು ಕಂಡುಬಂದಿವೆ.

ನಸುಗೆಂಪು ಬಣ್ಣದ ‘ಡಾಲೊರೈಟ್‌ ಶಿಲೆ’ಯಲ್ಲಿ ತಯಾರಿಸಿದ ಎರಡು ಕಲ್ಲಿನ ಕೊಡಲಿಗಳು ಕೆರೆಯ ಎಡದಂಡೆಯ ಮೇಲಿನ ಬಂಡೆಗಳಲ್ಲಿ ಸಿಕ್ಕಿವೆ. ಸಮೀಪದಲ್ಲೇ ಬಂಡೆಗಲ್ಲಿನ ಮೇಲೆ ಕಲ್ಲಿನಿಂದ ಕುಟ್ಟಿ ಮೂಡಿಸಿದ ಗೂಳಿ, ಹಾವು, ಮನುಷ್ಯ ಮುಂತಾದ ನೂರಾರು ಚಿತ್ರಗಳು ಪತ್ತೆಯಾಗಿವೆ.

ಇವು ಹಳೇ ಶಿಲಾಯುಗದಲ್ಲಿ ಬಳಸಲಾಗುತ್ತಿದ್ದ ಆಮೆ ಆಕಾರದ ಅಶೂಲ್ ಮಾದರಿಯ ಆಯುಧಗಳಾಗಿವೆ. ಕಲ್ಲಿನಿಂದ ಕಲ್ಲಿಗೆ ಹೊಡೆಯುವ ‘ಕಲ್ಲು ಸುತ್ತಿಗೆ ವಿಧಾನ’ ಮತ್ತು ‘ಲಘು ಸುತ್ತಿಗೆ ವಿಧಾನ’ಗಳ ಮೂಲಕ ಈ ಆಯುಧಗಳನ್ನು ತಯಾರಿಸಲಾಗಿದೆ. ಪ್ರಾಣಿ ಬೇಟೆಗೆ, ನೆಲ ಅಗೆಯಲು ಹಾಗೂ ಮರದ ತೊಗಟೆ ತೆಗೆಯಲು ಹೆಚ್ಚಾಗಿ ಇವುಗಳನ್ನು ಬಳಸಲಾಗುತ್ತಿತ್ತು.

‘ರೇಡಿಯೊ ಕಾರ್ಬನ್‌ ಕಾಲ ನಿರ್ಣಯ ವಿಧಾನದ ಮೂಲಕ ಕರ್ನಾಟಕದಲ್ಲಿ ಮಧ್ಯ ಹಳೇ ಶಿಲಾಯುಗದ ಕಾಲವನ್ನು 40 ಸಾವಿರದಿಂದ 10 ಸಾವಿರ ವರ್ಷಗಳಷ್ಟು ಪ್ರಾಚೀನ ಇರಬಹುದು ಎಂದು ತರ್ಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಗೇನಹಳ್ಳಿ ಕೆರೆ ಪರಿಸರವು ಮಧ್ಯ ಹಳೇ ಶಿಲಾಯುಗದ ಮಾನವನ ಪ್ರಮುಖ ವಾಸದ ನೆಲೆಯಾಗಿತ್ತು ಎಂದು ದೃಢಪಟ್ಟಿದೆ’ ಎಂದು ಇತಿಹಾಸ ಸಂಶೋಧಕರೂ ಆಗಿರುವ ಡಾ. ಎಸ್‌.ವೈ. ಸೋಮಶೇಖರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕೊರೆದು ಅಥವಾ ಗೀರದೆ, ಕಲ್ಲಿನಿಂದ ಕುಟ್ಟಿಯೇ ಚಿತ್ರಗಳನ್ನು ಮೂಡಿಸಿರುವುದು ವಿಶೇಷ. ಕೊರೆದ ಅಥವಾ ಗೀರಿದ ರೇಖಾ ಚಿತ್ರಗಳಿಗಿಂತ ಕುಟ್ಟಿ ಮೂಡಿಸಿದ ಚಿತ್ರಗಳು ಪ್ರಾಚೀನ ಎನ್ನುವುದು ಚಿತ್ರಗಳ ತಾಂತ್ರಿಕತೆ ಮತ್ತು ವರ್ಷ ಚಿತ್ರಗಳ ಸ್ವರೂಪಗಳಿಂದ ತಿಳಿಯಬಹುದು ಎಂದು ಅವರು ವಿವರಿಸಿದರು.

ಸಂಗೇನಹಳ್ಳಿ ಸಮೀಪದ ಜಿನಿಗಿ ಹಳ್ಳಕ್ಕೆ ಅಡ್ಡಲಾಗಿ 1960ರಲ್ಲಿ ಕೆರೆಯನ್ನು ಕಟ್ಟಲಾಗಿದೆ. ಕೆರೆ ಕಟ್ಟುವ ಪೂರ್ವದಲ್ಲಿ ಕೆರೆಯ ಮಧ್ಯದಲ್ಲಿ ಓಬಳಾಪುರ ಎಂಬ  ನಡುಗಡ್ಡೆ ಜನವಸತಿ ಪ್ರದೇಶವಾಗಿತ್ತು. ವೀರಗಲ್ಲುಗಳು ಮುಂತಾದ ಅವಶೇಷಗಳನ್ನು ಇಂದಿಗೂ ಕಾಣಬಹುದಾಗಿದೆ. ಕೆರೆ ತುಂಬಿದಾಗ ಈ ಪ್ರದೇಶ ಸಂಪೂರ್ಣ ಮುಳುಗಡೆಯಾಗುತ್ತದೆ.

1996ರಲ್ಲಿ ಸಂಶೋಧಕ ಪ್ರೊ. ಲಕ್ಷ್ಮಣ ತೆಲಗಾವಿ ಹಾಗೂ ಡಾ. ಸೋಮಶೇಖರ್‌ ಅವರು ಈ ಪ್ರದೇಶದಲ್ಲಿ ಕೈಗೊಂಡ ಕ್ಷೇತ್ರ ಕಾರ್ಯದಲ್ಲಿ ಬೂದಿದಿಬ್ಬ, ಮಡಕೆ– ಕುಡಿಕೆಗಳು ಪತ್ತೆಯಾಗಿದ್ದವು.

ಕ್ರಿ.ಪೂ.1000ದಲ್ಲಿನ ಕಬ್ಬಿಣ ಯುಗದ ಬೃಹತ್‌ ಶಿಲಾ ಸಮಾಧಿಗಳು ತಾಲ್ಲೂಕಿನ ಗುಹೇಶ್ವರ ಬೆಟ್ಟದಲ್ಲಿ ಕಂಡುಬಂದಿವೆ.

ಪ್ರತಿಕ್ರಿಯಿಸಿ (+)