ಭಾನುವಾರ, ಡಿಸೆಂಬರ್ 15, 2019
21 °C

ಭಾರತವೇ ಮುಂದಿನ ದಶಕದ ಪ್ರಗತಿಯ ನಾಯಕ

ಪಿಟಿಐ Updated:

ಅಕ್ಷರ ಗಾತ್ರ : | |

ಭಾರತವೇ ಮುಂದಿನ ದಶಕದ ಪ್ರಗತಿಯ ನಾಯಕ

ನ್ಯೂಯಾರ್ಕ್‌ : ಮುಂದಿನ ದಶಕದಲ್ಲಿ ಜಾಗತಿಕ ಆರ್ಥಿಕ ಪ್ರಗತಿಗೆ ಭಾರತ ಅಡಿಪಾಯ ಒದಗಿಸಲಿದೆ ಎಂದು ಹಾರ್ವರ್ಡ್‌ ವಿಶ್ವವಿದ್ಯಾಲಯದ ಅಧ್ಯಯನ ಹೇಳಿದೆ.

ಮುಂದಿನ ಇಡೀ ದಶಕ ಭಾರತದ ಆರ್ಥಿಕ ಪ್ರಗತಿ ದರ ಶೇ 7.7ರಷ್ಟಿರಲಿದ್ದು ಚೀನಾವನ್ನು ಹಿಂದಿಕ್ಕಲಿದೆ. 2025ರ ಹೊತ್ತಿಗೆ ಅತಿ ವೇಗವಾಗಿ ಬೆಳೆಯುತ್ತಿರುವ ಅರ್ಥ ವ್ಯವಸ್ಥೆಗಳಲ್ಲಿ ಭಾರತದ ಜತೆಗೆ ಉಗಾಂಡ ಕೂಡ ಸೇರಿಕೊಳ್ಳಲಿದೆ.

‘ಜಾಗತಿಕ ಆರ್ಥಿಕ ಪ್ರಗತಿಯ ದಿಕ್ಸೂಚಿ ಕೆಲವು ವರ್ಷಗಳ ಹಿಂದೆಯೇ ಚೀನಾದಿಂದ ನೆರೆಯ ಭಾರತದತ್ತ ಸಾಗಿದೆ. ಮುಂದಿನ ಕೆಲವು ವರ್ಷ ಅದು ಅಲ್ಲಿಯೇ ಇರಲಿದೆ’ ಎಂದು ಪ್ರಗತಿಯ ಹೊಸ ಮುನ್ನೋಟ ಎಂಬ ಅಧ್ಯಯನ ಹೇಳಲಾಗಿದೆ. ಹಾರ್ವರ್ಡ್‌ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಅಭಿವೃದ್ಧಿ ಕೇಂದ್ರ (ಸಿಐಡಿ) ಈ ಅಧ್ಯಯನ ನಡೆಸಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಶ್ರೀಮಂತ ದೇಶಗಳನ್ನು ಹಿಂದಿಕ್ಕಿ ಸಾಗಲಿವೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ಎಲ್ಲ ದೇಶಗಳಲ್ಲಿ ಒಂದೇ ರೀತಿಯ ಪ್ರಗತಿ ಉಂಟಾಗದು.

* ಭಾರತದ ತೀವ್ರಗತಿಯ ಪ್ರಗತಿ ಇನ್ನಷ್ಟು ವೈವಿಧ್ಯವನ್ನು ಹೊಂದಲಿದೆ. ಈಗಾಗಲೇ ಬೆಳೆಸಿಕೊಂಡಿರುವ ಸಾಮರ್ಥ್ಯ ಇನ್ನಷ್ಟು ಗಟ್ಟಿಗೊಳ್ಳಲಿದೆ

* ಭಾರತದ ರಫ್ತು ನೆಲೆ ಇನ್ನಷ್ಟು ಹಿಗ್ಗಲಿದೆ. ಹೆಚ್ಚು ಸಂಕೀರ್ಣ ಕ್ಷೇತ್ರಗಳಲ್ಲಿ ಛಾಪು ಮೂಡಿಸಲಿದೆ. ರಾಸಾಯನಿಕಗಳು, ವಾಹನಗಳು ಮತ್ತು ನಿರ್ದಿಷ್ಟ ಎಲೆಕ್ಟ್ರಾನಿಕ್‌ ಉತ್ಪನ್ನಗಳ ರಫ್ತು ಹೆಚ್ಚಲಿದೆ

* ಚೀನಾದ ರಫ್ತು ಇಳಿಮುಖವಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ಬಳಿಕ ಇದೇ ಮೊದಲ ಬಾರಿ ಆರ್ಥಿಕ ಸಂಕೀರ್ಣತೆ ಶ್ರೇಣಿಯಲ್ಲಿ ಚೀನಾ ನಾಲ್ಕು ಅಂಶಗಳಷ್ಟು ಕುಸಿದಿದೆ

* ಕಳೆದ ಒಂದು ದಶಕದಲ್ಲಿ ಚೀನಾದ ಭಾರಿ ಆರ್ಥಿಕ ಪ್ರಗತಿಯಿಂದಾಗಿ ಆ ದೇಶದ ಆರ್ಥಿಕ ಸಂಕೀರ್ಣತೆ ಪ್ರಮಾಣ ಕುಸಿದಿದೆ. ಇದುವೇ ಚೀನಾದ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಗಿದೆ ಎಂದು ಅಧ್ಯಯನ ಹೇಳಿದೆ.

* ತೈಲ ರಫ್ತಿನ ಮೇಲೆ ಮಾತ್ರ ಅವಲಂಬಿತವಾಗಿರುವ ದೇಶಗಳು ಹಿನ್ನಡೆ ಅನುಭವಿಸುತ್ತಿವೆ. ಆದರೆ ಭಾರತ, ಇಂಡೊನೇಷ್ಯಾ ಮತ್ತು ವಿಯೆಟ್ನಾಂನಂತಹ ದೇಶಗಳು ಹೊಸ ಸಾಮರ್ಥ್ಯಗಳನ್ನು ರೂಢಿಸಿಕೊಂಡಿವೆ. ಹೆಚ್ಚು ಸಂಕೀರ್ಣವಾದ ಮತ್ತು ವೈವಿಧ್ಯದಿಂದ ಕೂಡಿದ ತಯಾರಿಕಾ ಕ್ಷೇತ್ರಗಳತ್ತ ವ್ಯಾಪ್ತಿ ವಿಸ್ತರಿಸಿಕೊಂಡಿವೆ. ಭಾರಿ ಪ್ರಗತಿ ದಾಖಲಿಸುವುದು ಇದರಿಂದ ಸಾಧ್ಯವಾಗುತ್ತದೆ.

ಆರ್ಥಿಕ ಪ್ರಗತಿಯ ಆಧಾರದಲ್ಲಿ ಜಗತ್ತನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗಿದೆ

ಉತ್ಪಾದನಾ ಸಾಮರ್ಥ್ಯ ಕಡಿಮೆ ಇದ್ದರೂ ಹೊಸ ಕ್ಷೇತ್ರಗಳಿಗೆ ವ್ಯಾಪ್ತಿ ವಿಸ್ತರಿಸಬಲ್ಲ ದೇಶಗಳು: ಬಾಂಗ್ಲಾದೇಶ, ಈಕ್ವೆಡಾರ್‌, ಗಿನಿ

ದೊಡ್ಡ ಪ್ರಮಾಣದ ಉತ್ಪಾದನಾ ಸಾಮರ್ಥ್ಯದ ಜತೆಗೆ ವಿವಿಧ ಕ್ಷೇತ್ರಗಳಿಗೆ ವ್ಯಾಪ್ತಿ ವಿಸ್ತರಿಸಬಲ್ಲ ದೇಶಗಳು: ಭಾರತ, ಟರ್ಕಿ, ಇಂಡೊನೇಷ್ಯಾ

ಸಾಧ್ಯವಿರುವ ಎಲ್ಲ ಕ್ಷೇತ್ರಗಳಲ್ಲಿ ಉತ್ಪಾದನೆ ಮಾಡಲಾಗಿದೆ. ತಾಂತ್ರಿಕ ಆವಿಷ್ಕಾರದ ಮೂಲಕ ಹೊಸ ಉತ್ಪನ್ನಗಳನ್ನು ಕಂಡು ಹಿಡಿಯಬೇಕಿದೆ. ಹಾಗಾಗಿ ಪ್ರಗತಿ ವೇಗ ಕುಂಠಿತಗೊಳ್ಳುವ ದೇಶಗಳು: ಅಮೆರಿಕ, ಜಪಾನ್‌, ಜರ್ಮನಿ\

ಆರ್ಥಿಕ ಸಂಕೀರ್ಣತೆ ಸೂಚ್ಯಂಕ ಎಂದರೇನು?

ಒಂದು ದೇಶವು ಹೊಂದಿರುವ ಉತ್ಪಾದನಾ ಸಾಮರ್ಥ್ಯವನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುವ ವ್ಯವಸ್ಥೆ. ಇದರಲ್ಲಿ ಒಂದು ದೇಶದ ಜನರು ಸಂಪಾದಿಸಿರುವ ಜ್ಞಾನವೂ ಸೇರುತ್ತದೆ.

ಏಕರೂಪತೆ ಇಲ್ಲ

ಆರ್ಥಿಕ ಪ್ರಗತಿಯು ಯಾವುದೇ ಮಾದರಿ ಅಥವಾ ನಿಯಮಕ್ಕೆ ಅನುಗುಣವಾಗಿ ನಡೆಯುತ್ತಿಲ್ಲ. ಅತಿ ವೇಗದಲ್ಲಿ ಪ್ರಗತಿ ಸಾಧಿಸಲಿರುವ ದೇಶಗಳು ಭಿನ್ನ ರಾಜಕೀಯ, ಭೌಗೋಳಿಕ, ಜನಸಂಖ್ಯಾ ಸ್ಥಿತಿಯನ್ನು ಹೊಂದಿವೆ.

ಪ್ರತಿಕ್ರಿಯಿಸಿ (+)