ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ತಂದ ನೀರೆಯರು

Last Updated 9 ಜುಲೈ 2017, 19:30 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ ಉತ್ತರ ಪಾಲಕ್ಕಾಡ್‌ ಜಿಲ್ಲೆಯಲ್ಲಿ ಸುಮಾರು 300 ಮಹಿಳೆಯರು ಬಾವಿ ತೋಡುವ ಕಾರ್ಯದಲ್ಲಿ ತೊಡಗಿಸಿಕೊಂಡು, ತಮ್ಮ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. 

ಬಿದಿರಿನಿಂದ ತಾತ್ಕಾಲಿಕ ಏಣಿಗಳನ್ನು ಸಿದ್ಧಪಡಿಸಿ ಪಿಕಾಸಿ ಮತ್ತು ಹಾರೆಗಳನ್ನು ಬಳಸಿ ಬಾವಿ ತೋಡುವ ಮೂಲಕ, ಪೊಕ್ಕೊಟ್ಟುಕಾವು ಗ್ರಾಮದಲ್ಲಿ ನೀರಿನ ಮೂಲಗಳನ್ನು ಹುಡುಕಿದ್ದಾರೆ.

ಹಿರಿಯ ಮಹಿಳೆಯರೂ ಈ ಕಾರ್ಯದಲ್ಲಿ  ಕೈಜೋಡಿಸಿದ್ದುದು ವಿಶೇಷ. 35ರಿಂದ 70 ವರ್ಷ ವಯಸ್ಸಿನ ಮಹಿಳೆಯರು ಸೇರಿ ನರೇಗಾ ಯೋಜನೆಯಡಿ,  ಬರಪೀಡಿತ ಪ್ರದೇಶವಾದ  ಗ್ರಾಮದಲ್ಲಿ ಸುಮಾರು 190ಕ್ಕೂ ಹೆಚ್ಚು ಬಾವಿಗಳನ್ನು ತೋಡಿದ್ದಾರೆ.

ದೈಹಿಕ ಕ್ಷಮತೆ ಮತ್ತು  ಅನುಭವ ಇಲ್ಲದೇ ಇದ್ದುದು, 10ರಿಂದ 12 ಮೀಟರ್‌ ಆಳದ ಬಾವಿ ತೋಡಲು ಮಹಿಳೆಯರ ಕಾರ್ಯಕ್ಕೆ ಅಡ್ಡಿಯಾಗಲೇ ಇಲ್ಲ. ಬಾವಿ ತೋಡುವಾಗ ಅಡ್ಡ ಬಂದ ಕಲ್ಲುಬಂಡೆಗಳನ್ನು ಒಬ್ಬೊಬ್ಬರೇ ಕೊರೆದು ಸೈ ಎನಿಸಿಕೊಂಡಿದ್ದಾರೆ.

‘ಬಾವಿ ತೋಡುವುದು ಮಹಿಳೆಯರಿಂದ ಆಗದು ಎಂದು  ಆರಂಭದಲ್ಲಿ ನಮ್ಮ ಕುಟುಂಬದವರು ಮತ್ತು ಸ್ನೇಹಿತರು ಬುದ್ಧಿ ಹೇಳಿದ್ದರು. ಆದರೂ ನಾವು ಎದೆಗುಂದಲಿಲ್ಲ. ನಮ್ಮೆಲ್ಲರ ಪ್ರಯತ್ನ ಮತ್ತು ಆತ್ಮವಿಶ್ವಾಸದ ಬಲದಿಂದ ಇದು ಸಾಧ್ಯವಾಗಿದೆ’ ಎನ್ನುತ್ತಾರೆ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದ 39 ವರ್ಷದ ಲಕ್ಷ್ಮಿ.

ಪಾಲಕ್ಕಾಡ್‌ ನಗರದಿಂದ ಸುಮಾರು 40 ಕಿಲೊ ಮೀಟರ್‌ ದೂರದಲ್ಲಿರುವ ಪೊಕ್ಕೊಟ್ಟುಕಾವು ಗ್ರಾಮದಲ್ಲಿ 20 ಸಾವಿರ ಜನಸಂಖ್ಯೆ ಇದೆ. ಬಾವಿ ಮತ್ತು ಸಣ್ಣ ಹೊಂಡಗಳು ಈ ಗ್ರಾಮದ ನೀರಿನ ಮೂಲಗಳು. ಬೇಸಿಗೆಯಲ್ಲಿ ಗ್ರಾಮಕ್ಕೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಮಹಿಳೆಯರ ಸಾಹಸದಿಂದ ಗ್ರಾಮದ ನೀರಿನ ಸಮಸ್ಯೆ ಬಗೆಹರಿಯಲಿದೆ ಎನ್ನುವುದು ಪಂಚಾಯಿತಿ ಅಧಿಕಾರಿಗಳ ನಿರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT