ಭಾನುವಾರ, ಡಿಸೆಂಬರ್ 8, 2019
24 °C
ಅವೈಜ್ಞಾನಿಕ ಕಾಮಗಾರಿ ಸವಾರರ ಪರದಾಟ

ಮಂತ್ರಾಲಯದ ದಾರಿ ಕಾಣದಾಗಿದೆ!

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಮಂತ್ರಾಲಯದ ದಾರಿ ಕಾಣದಾಗಿದೆ!

ರಾಯಚೂರು: ರಾಘವೇಂದ್ರ ಸ್ವಾಮಿ ದರ್ಶನಕ್ಕಾಗಿ ಮಂತ್ರಾಲಯಕ್ಕೆ ವಾಹನಗಳಲ್ಲಿ ಹೋಗುವ ಹಾಗೂ ಅಲ್ಲಿಂದ ವಾಪಸಾಗುವ ಭಕ್ತರು ನಗರದಲ್ಲಿ ದಾರಿಕಾಣದೆ ಪರಿತಪಿಸುತ್ತಿದ್ದಾರೆ!

ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಅಲ್ಲಲ್ಲಿ ಅಗೆದು ಹಾಕಲಾಗಿದೆ. ಇದರಿಂದ ರಸ್ತೆಗಳು ಕಿರಿದಾಗಿ ವಾಹನ ದಟ್ಟಣೆ ಸಮಸ್ಯೆ ಸಾಮಾನ್ಯವಾಗಿದೆ. 10 ನಿಮಿಷದಲ್ಲಿ ನಗರದಿಂದ ಹೊರಗೆ ಹೋಗಬೇಕು ಅಂದುಕೊಂಡವರಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಸಂಚಾರ ಸರಿಯಾಗಿಲ್ಲ ಅಂದುಕೊಂಡು ಮಾರ್ಕೆಟ್‌ ಮೂಲಕ ಹೋಗುವ ವಾಹನದಾರರ ಸಂಕಷ್ಟ ಇನ್ನೂ ಅಯೋಮಯ. ಎಲ್ಲ ಕಡೆಗೂ ತಗ್ಗುದಿಣ್ಣೆಗಳು.

ರಸ್ತೆಗಳ ಅಧೋಗತಿಯಿಂದ ಗೊಂದಲಕ್ಕೀಡಾಗುವ ವಾಹನ ಸವಾರರಿಗೆ ಸೂಕ್ತ ದಾರಿ ತೋರಿಸುವುದಕ್ಕೆ ಎಲ್ಲಿಯೂ ಫಲಕಗಳನ್ನು ಹಾಕಿಲ್ಲ. ರಸ್ತೆಗಳಲ್ಲಿ ನಡೆದುಕೊಂಡು ಹೋಗುವವರನ್ನು ವಿಚಾರಿಸಿಕೊಂಡು ಮುಂದೆ ಸಾಗುವುದು ಅನಿವಾರ್ಯ.

ವೈಜ್ಞಾನಿಕವಾಗಿಲ್ಲ: ರಸ್ತೆ ಕಾಮಗಾರಿ ಮಾಡುವುದನ್ನು ಎಲ್ಲ ಜನರು ಸ್ವಾಗತಿಸಿದ್ದಾರೆ. ಆದರೆ ಕಾಮಗಾರಿ ಮಾಡುವುದಕ್ಕಾಗಿ ಅಪಾಯ ಆಹ್ವಾನಿಸುವ ತಾಣಗಳನ್ನು ನಿರ್ಮಿಸಿರುವುದಕ್ಕೆ ಶಾಪ ಹಾಕುತ್ತಿದ್ದಾರೆ. ಕಾಮಗಾರಿಗಳು ನಡೆಯುವ ಸ್ಥಳದಲ್ಲಿ ಫಲಕಗಳೆ ಇಲ್ಲ. ಮಾರ್ಗ ತೋರಿಸುವ ವ್ಯವಸ್ಥೆ ಅಳವಡಿಸಿಲ್ಲ. ಹೀಗಾಗಿ ವೈಜ್ಞಾನಿಕವಾಗಿ ಕಾಮಗಾರಿ ನಡೆಸುವುದಕ್ಕೆ ಒತ್ತಾಯಿಸಿ ಅನೇಕ ಸ್ಥಳೀಯ ಸಂಘ–ಸಂಸ್ಥೆಗಳು ಪ್ರತಿಭಟನೆ ನಡೆಸಿ ನಗರಸಭೆಗೆ ಮನವಿ ಸಲ್ಲಿಸಿವೆ.

‘ಜನರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿಸಬೇಕು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡದ ಕಾರಣದಿಂದ ಬೇಕಾಬಿಟ್ಟಿಯಾಗಿ ಕೆಲಸಗಳಾಗುತ್ತಿವೆ’ ಎಂದು ನಿಜಲಿಂಗಪ್ಪ ಕಾಲೊನಿಯ ಹಿರಿಯ ನಾಗರಿಕ ಸತ್ಯನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.

***

ಪಾಲನೆಯಾಗದ ನಿಯಮ

ನಗರದಲ್ಲಿ ಅಗೆದ ರಸ್ತೆಗಳ ದುರಸ್ತಿಯನ್ನು ಗುತ್ತಿಗೆದಾರರು ಈಚೆಗೆ ಆರಂಭಿಸಿದ್ದಾರೆ. ಕಾಮಗಾರಿಗಳು ನಡೆಯುವ ಜಾಗದಲ್ಲಿ ಫಲಕಗಳನ್ನು ಹಾಕುವುದು ಹಾಗೂ ಮಾರ್ಗಗಳ ಬದಲಾವಣೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸ ಆಗಿಲ್ಲ. ಗುತ್ತಿಗೆದಾರರು ವೈಜ್ಞಾನಿಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ನಿಗಾ ವಹಿಸಿ ಸೂಚನೆ ನೀಡಲಾಗುವುದು ಎಂದು ನಗರಸಭೆ ಉಪಾಧ್ಯಕ್ಷ ಜಯಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

***

ಪೂರ್ವ ಸಿದ್ಧತೆಯಿಲ್ಲ

ಕಾಮಗಾರಿಗಾಗಿ ಅಗೆದುಹಾಕಿದ ರಸ್ತೆಯ ಇನ್ನೊಂದು ಭಾಗದಲ್ಲಿ ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲ ಕಲ್ಪಿಸಲು ಯಾವುದೇ ಪೂರ್ವಸಿದ್ಧತೆ ಮಾಡಿಲ್ಲ. ಇದರಿಂದ ವಾಹನ ಸವಾರರು, ಪಾದಚಾರಿಗಳು ತೊಂದರೆ ಪಡುವಂತಾಗಿದೆ. ಕಿರಿದಾದ ಹೆದ್ದಾರಿಯಲ್ಲೆ ಬೈಕ್‌ ಹಾಗೂ ಕಾರು ನಿಲುಗಡೆ ಮಾಡುತ್ತಿರುವುದರಿಂದ ವಾಹನ ದಟ್ಟಣೆ ಏರ್ಪಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಪ್ರತಿಕ್ರಿಯಿಸಿ (+)