ಶನಿವಾರ, ಡಿಸೆಂಬರ್ 14, 2019
25 °C
ಗಲೀಜು ನೀರು ರಸ್ತೆ ಮೇಲೆ, ಹೆಚ್ಚಿದ ಸೊಳ್ಳೆ ಕಾಟ: ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಸಾರ್ವಜನಿಕರು

ಸಮಸ್ಯೆಗಳೇ ಎಲ್ಲ: ಗೋಳು ಕೇಳುವವರು ಯಾರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಸ್ಯೆಗಳೇ ಎಲ್ಲ: ಗೋಳು ಕೇಳುವವರು ಯಾರು?

ಗುಬ್ಬಿ: ಪಟ್ಟಣದ 4ನೇ ವಾರ್ಡ್‌ನಲ್ಲಿರುವ ಹಳೆಯ ಚರಂಡಿಗಳಲ್ಲಿ ಕೊಳಚೆ ನೀರು ತುಂಬಿ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಚರಂಡಿ ನೀರು ರಸ್ತೆ ಮೇಲೆ ನಿಲ್ಲುತ್ತಿದೆ. ಸೊಳ್ಳೆ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗದ ತಾಣವಾಗುತ್ತಿದೆ.

ಬಡಾವಣೆಯಲ್ಲಿ ಚರಂಡಿ ನಿರ್ಮಿಸಿ 30 ವರ್ಷ ಕಳೆದಿವೆ. ಇಷ್ಟು ದಿನ ಅದರಲ್ಲಿ ಕೊಳಚೆ, ಮಣ್ಣು ತುಂಬಿ ಚರಂಡಿಯ ಅಸ್ತಿತ್ವವೇ ಅಲ್ಲಿ ಉಳಿದಿಲ್ಲ. ಪಕ್ಕದಲ್ಲಿರುವ ಆಸ್ಪತ್ರೆಯ ತ್ಯಾಜ್ಯವೂ ಅದರಲ್ಲಿ ಸೇರಿಕೊಳ್ಳುತ್ತಿದೆ.

ಕೆ.ಎಚ್.ಬಿ. ಕಾಲೊನಿ, ಸಿಡಿಲು ಬಸವಣ್ಣ ಬಡಾವಣೆ, ಕೆಇಬಿ ಬಡಾವಣೆಯಲ್ಲಿ ಚರಂಡಿ ನೀರು ನಿಂತಿದೆ. ಒಂದೆಡೆ ಗಲೀಜು ವಾಸನೆ, ಇನ್ನೊಂದೆಡೆ ಸೊಳ್ಳೆ ಕಾಟ. ಪ್ರತಿದಿನವೂ ಅನಾರೋಗ್ಯದಿಂದ ಜನ ಹಾಸಿಗೆ ಹಿಡಿಯುವುದು ತಪ್ಪಿಲ್ಲ. ಆಸ್ಪತ್ರೆಗಳಲ್ಲಿ ದಿನವೂ ಜನ ತುಂಬಿರುತ್ತಾರೆ. ಈ ಬಡಾವಣೆಗಳಲ್ಲಿ ಮದುವೆ, ಉತ್ಸವ ಮತ್ತಿತರ ಕಾರ್ಯಕ್ರಮ ಆಯೋಜಿಸುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ.

ಹಳೆ ಚರಂಡಿಯಲ್ಲಿರುವ ಕೊಳಚೆ ನೀರು ಖಾಲಿ ಮಾಡಿ, ಬಾಕ್ಸ್‌ ಚರಂಡಿ ನಿರ್ಮಿಸಬೇಕು. ಪ್ರತಿದಿನ ಸ್ವಚ್ಛತಾ ಕಾರ್ಯ ಕೈಗೊಂಡು ಆರೋಗ್ಯಕರ ವಾತಾವರಣ ನಿರ್ಮಿಸಬೇಕು ಎಂದು ಪಂಚಾಯಿತಿ ಅಧಿಕಾರಿಗಳು ಮತ್ತು  ಪುರಸಭೆ ಸದಸ್ಯರಿಗೆ ಹಲವು ಬಾರಿ ಮನವಿ ಸಲ್ಲಿಸಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕುಂಟು ನೆಪ ಹೇಳಿ ಸಮಸ್ಯೆ ಹಾಗೆಯೇ ಉಳಿಯುವಂತೆ ಮಾಡಿದ್ದಾರೆ ಎಂದು ಇಲ್ಲಿಯ ನಿವಾಸಿ ಸಿದ್ಧಯೋಗೀಶ್‌ ಆರೋಪಿಸಿದರು.

ಈ ವಾರ್ಡ್‌ಗಳ ನಿವಾಸಿಗಳ ಪೈಕಿ ಬಹುತೇಕ ಜನರು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಬೆಳಿಗ್ಗೆ ಮನೆ ಬಿಟ್ಟು ಕಚೇರಿಗೆ ಹೊರಟರೆ  ಸಂಜೆ ಮನೆ ಸೇರುವರು. ಅವರಾರೂ ಅಧಿಕಾರಿಗಳನ್ನು ಗಟ್ಟಿ ಧ್ವನಿಯಲ್ಲಿ ಕೇಳಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ಸಮಸ್ಯೆಗೆ ಪರಿಹಾರವೂ ಸಿಗುತ್ತಿಲ್ಲ ಎನ್ನುತ್ತಾರೆ ಬಡಾವಣೆ ನಿವಾಸಿ ಮಧು.

***

ಕಾರ್ಮಿಕರನ್ನು ಕಳಿಸುತ್ತಿಲ್ಲ: ಸದಸ್ಯ ಅಳಲು

ಹಳೆಯ ಚರಂಡಿ 250 ಮೀಟರ್ ಉದ್ದ ಇದೆ. ಚನ್ನಕೇಶವಯ್ಯ ಅವರ ಮನೆ ಹತ್ತಿರದ 60 ಮೀಟರ್ ಬಾಕ್ಸ್ ಚರಂಡಿ ನಿರ್ಮಿಸಿದೆ. ಹೊಸ ಚರಂಡಿ ನಿರ್ಮಾಣಕ್ಕೆ ಕ್ರಿಯಾಯೋಜನೆಯಲ್ಲಿ ಸೇರಿಸಲಾಗಿದೆ. ಸ್ವಚ್ಛತೆ ಮಾಡುವಂತೆ ಪಂಚಾಯಿತಿ ಅಧಿಕಾರಿಗಳನ್ನು ಕರೆತಂದು ತೋರಿಸಿದರೂ ಕಾರ್ಮಿಕರು ಬರುತ್ತಿಲ್ಲ. ಎಷ್ಟು ಗೋಗರಿದರೂ ಬಾರದಿದ್ದರೆ ನಾನೇನು ಮಾಡಲಿ ಎಂಬುದು ಸದಸ್ಯ ಮಹಮದ್ ಸಾದಿಕ್ ಅವರ ಅಳಲು.

***

ಮಾದರಿ ಶಾಲೆಯಲ್ಲಿ ಮುರುಕು ಕೊಠಡಿ

ಚೇಳೂರು
: ಸರ್ಕಾರಿ ಶಾಲೆ ಎಂದರೆ ಪೋಷಕರು ಮತ್ತು ಮಕ್ಕಳು ಮೂಗು ಮುರಿಯುವ ಕಾಲವಿದು. ಸರಿಯಾದ ಮೇಲ್ವಿಚಾರಣೆ, ಸಮರ್ಪಕ ಮೂಲಸೌಲಭ್ಯಗಳನ್ನು ಒಳಗೊಂಡ ಶಾಲಾ ಕಟ್ಟಡ, ಶಿಕ್ಷಕರ ಕೊರತೆಗಳೆಲ್ಲವೂ ಇದಕ್ಕೆ ಕಾರಣ. ಇದಕ್ಕೆ ಪೂರಕ ಎಂಬಂತೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಇದೆ.

ಶಾಲೆಯಲ್ಲಿ 400ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಶಾಲೆ ಕಟ್ಟಡದ ಚಾವಣಿ ಕುಸಿಯುವ ಸ್ಥಿತಿಯಲ್ಲಿದೆ. ಇನ್ನೊಂದು ಕೊಠಡಿ ಬಿರುಕು ಬಿಟ್ಟು ಯಾವುದೇ ಕ್ಷಣದಲ್ಲೂ ಬೀಳುವಂತಿದೆ. ಇಲ್ಲಿ ಓದುತ್ತಿರುವ ಮಕ್ಕಳಿಗೆ ಯಾವುದೇ ಸಮಯದಲ್ಲಿ ಜೀವಕ್ಕೆ ಅಪಾಯ ಸಂಭವಿಸುವ ಆತಂಕ ಶಿಕ್ಷಕರು ಮತ್ತು ಪಾಲಕರನ್ನು ಕಾಡುತ್ತಿದೆ.

ಶಾಲೆ ಕಟ್ಟಡ ದುರಸ್ತಿ ಮಾಡಿಸುವಂತೆ ಪ್ರತಿ ವರ್ಷ ಪ್ರಸ್ತಾವ ಸಲ್ಲಿಸಲಾಗುತ್ತಿದೆ. ಅನುದಾನಕ್ಕಾಗಿ ಮೇಲಧಿಕಾರಿಗಳಿಗೆ ಮನವಿ ಮಾಡಿದೆ. ಜನಪ್ರತಿನಿಧಿಗಳಿಗೂ ವಾಸ್ತವ ವಿವರಿಸಿದೆ. ಆದರೆ ಯಾರಿಂದಲೂಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹಳೆಯ ಕಟ್ಟಡ ಕೆಡವಿ ಹೊಸದಾಗಿ ನಿರ್ಮಿಸಿದರೆ ಇನ್ನೂ ಅನುಕೂಲ.

ಅಲ್ಲದೆ ಶಾಲೆಯಲ್ಲಿ ಓದುವ  ಮಕ್ಕಳಿಗೆ ಕನಿಷ್ಠ ಮೂಲ ಸೌಲಭ್ಯ ಒದಗಿಸಿ, ಅವರ ಶೈಕ್ಷಣಿಕ ಭವಿಷ್ಯಕ್ಕೆ ಉತ್ತಮ ಬುನಾದಿ ಹಾಕಲು ಮುಂದಾಗಬೇಕು ಎಂದು ಗ್ರಾಮಸ್ಥರಾದ ಶಿವನಂಜಪ್ಪ, ಚಂದ್ರು, ಮಹೇಶ್, ಗಂಗಾಧರ್, ಕಾರ್ತಿಕ್, ಗುರುಪ್ರಸಾದ್, ನಟರಾಜು, ರಂಗಧಾಮು, ದಯಾನಂದ ಆಗ್ರಹಿಸಿದ್ದಾರೆ.

ಸರ್ಕಾರದ ಜತೆ ಯಾವುದಾದರೂ ಸಂಘ ಸಂಸ್ಥೆಗಳು ನೆರವು ನೀಡಿದರೆ ಮಾದರಿ ಶಾಲೆಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಎಸ್.ಡಿ.ಎಂ.ಸಿ ಅಧ್ಯಕ್ಷ ಗೋವಿಂದರಾಜು.

***

ಜನ ಸೇವೆಗಿಲ್ಲದ ನೀರಿನ ಘಟಕ

ಕೊರಟಗೆರೆ
: ತಾಲ್ಲೂಕಿನ ಬೊಮ್ಮಲದೇವಿಪುರ ಗ್ರಾಮದಲ್ಲಿ ನಿರ್ಮಿಸಿರುವ ಶುದ್ಧ ನೀರು ಘಟಕ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ.

ಇಲ್ಲಿಯ ಶುದ್ಧ ನೀರಿನ ಘಟಕವನ್ನು ಇತ್ತೀಚೆಗಷ್ಟೇ ಉದ್ಘಾಟಿಸಲಾಗಿತ್ತು. ಗ್ರಾಮದ ಜನರ ಕುಡಿಯುವ ನೀರಿನ ಸಮಸ್ಯೆಗೂ ಇದು ಪರಿಹಾರ ಎಂಬ ಆಶಯವಿತ್ತು. 20 ಲೀಟರ್‌ ಕ್ಯಾನ್‌ಗೆ ₹ 2ರಂತೆ ಶುದ್ಧ ಕುಡಿಯುವ ನೀರು ನೀಡುವ ವ್ಯವಸ್ಥೆಯೂ ಆಗಿತ್ತು. ದಿನವಿಡೀ ನೀರು ಪೂರೈಸುವ ನಿಯಮವಿದ್ದರೂ ಕೇವಲ ನಾಲ್ಕು ತಾಸು ನೀಡುತ್ತಿಲ್ಲ. ಅಲ್ಲದೆ ಸಕಾಲಿಕವಾಗಿ ನಿರ್ವಹಣೆ ಇಲ್ಲದೆ ಹಾಳಾಗಿದೆ. ಈಗ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಘಟಕವು ಆಗಾಗ ಕೆಟ್ಟು ನಿಲ್ಲುತ್ತದೆ. ಕಾಯಿನ್‌ ಬಾಕ್ಸ್ ಕೆಲಸ ಮಾಡುತ್ತಿಲ್ಲ. ಹೀಗಾಗಿ ಪ್ರತಿ 20 ಲೀಟರ್‌ಗೆ ₹ 2ಕ್ಕಿಂತ ಹೆಚ್ಚು ವಸೂಲಿ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ನಿರ್ವಹಣೆ ಮಾಡುವವರು, ‘ಬೇಕಿದ್ದರೆ ತಗೋ, ಇಲ್ಲಾಂದರೆ ಹೋಗು’ ಎಂದು ನಿರ್ದಾಕ್ಷಿಣ್ಯವಾಗಿ ಹೇಳುವರು ಎಂಬುದು ನಾಗರಾಜು ಅವರ ಆಪಾದನೆ.

ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಪಂಚಾಯಿತಿ ವ್ಯಾಪ್ತಿಗೆ ಬರುವುದಿಲ್ಲ. ಅದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಜವಾಬ್ದಾರಿ

ರಂಗಶಾಮಯ್ಯ, ಪಿಡಿಒ ಬಿ.ಡಿ.ಪುರ

 

ಪ್ರತಿಕ್ರಿಯಿಸಿ (+)