ಶುಕ್ರವಾರ, ಡಿಸೆಂಬರ್ 6, 2019
17 °C

ನಿಮ್ಮಂತೆಯೇ ಭೂಮಿ, ಬಾನು...

Published:
Updated:
ನಿಮ್ಮಂತೆಯೇ ಭೂಮಿ, ಬಾನು...

ನಾವು ಮೌನವಾಗಿ ಗಮನಿಸಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಮನುಷ್ಯರು ಹೇಗೆ ನಡೆದುಕೊಳ್ಳುತ್ತಿರುವರೋ ಹಾಗೆಯೇ ನಮ್ಮ ಭೂಮಿಯೂ ನಡೆದುಕೊಳ್ಳುತ್ತಿರುತ್ತದೆ. ಕೊಲೆಗಾರರು, ಅತ್ಯಾಚಾರಿಗಳು, ಭಯೋತ್ಪಾದಕರು – ಹೀಗೆ ಎಷ್ಟೋ ವಿಧದ ಕ್ರೂರಿಗಳು ಮನುಷ್ಯರಲ್ಲಿದ್ದಾರಲ್ಲವೆ? ಹೀಗೆಯೇ ಭೂಕುಸಿತ, ಪ್ರವಾಹ, ಕಾಳ್ಗಿಚ್ಚು, ಭೂಕುಂಪ – ಇವು ಭೂಮಿಯ ಕ್ರೂರಮುಖಗಳೇ ಹೌದು. ನಮ್ಮ ಕ್ರೋಧ ಸಾಮೂಹಿಕವಾಗಿ ಹೆಚ್ಚಾದಷ್ಟು ಭೂಮಿಯ ಉಷ್ಣತೆಯೂ ಹೆಚ್ಚಾಗುವುದು. ಇಂಥ ಬೆಳವಣಿಗೆಗಳು ಯೂರೋಪ್‌ನಲ್ಲಿ ನಡೆದಿರುವುದು ಗಮನಕ್ಕೆ ಬಂದಿದೆ.

ಒಂದು ಕ್ಷಣ ನಮ್ಮೆಲ್ಲ ಆಲೋಚನೆಗಳನ್ನು ಸ್ತಬ್ಧಗೊಳಿಸೋಣ. ನಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳೊಣ. ಹೆಚ್ಚಿದೆಯೆ? ಹೀಗೆಯೇ ನಾಡಿಮಿಡಿತವನ್ನೂ ಲೆಕ್ಕ ಮಾಡೋಣ. ಏರುಗತಿಯಲ್ಲಿದೆಯೆ? ನಮ್ಮ ಉಸಿರಾಟವನ್ನು ಗಮನಿಸೋಣ. ನಿಧಾನವಾಗಿದೆಯೆ? ನಮ್ಮ ಸ್ವಾಸ್ಥ್ಯವೇ ನಮ್ಮ ಭೂಮಿಯ ಸ್ವಾಸ್ಥ್ಯವೂ ಹೌದು. ಮುಂಗಾರಿನ ಮಳೆಯ ಹನಿಗಳ ಸಿಂಚನದಿಂದ ಭೂಮಿ ತನ್ನನ್ನು ತಂಪಾಗಿಸಿಕೊಳ್ಳುತ್ತದೆ. ನಮಗೆ ಸಸಿಯೊಂದನ್ನು ನೆಡಲು ಸಾಧ್ಯವಾಗದಿರಬಹುದು; ಆದರೆ ಈ ನೆಲದ ಆಕಾಶದಲ್ಲಿ ಒಳ್ಳೆಯ ಆಲೋಚನೆಗಳ ಬೀಜವನ್ನು ಬಿತ್ತಬಹುದು; ಕರುಣೆಯ ನೀರನ್ನು ಎರೆಯಬಹುದು. ನಮ್ಮ ಶುಭಾಶಯಗಳನ್ನೂ ಸಂತೋಷದ ಅಲೆಗಳನ್ನೂ ಹಂಚಿಕೊಳ್ಳಬಹುದು.

ನಾವು ಆರಂಭಿಸಬೇಕಿರುವ ಮೊದಲನೆಯ ಅಂಶ ಎಂದರೆ ತಪ್ಪನ್ನು ಹುಡುಕುವ ಚಾಳಿಯನ್ನು ನಿಲ್ಲಿಸುವುದು. ಬೇರೆಯವರ ತಪ್ಪಷ್ಟೆ ಅಲ್ಲ, ನಮ್ಮ ತಪ್ಪುಗಳನ್ನು ಕೂಡ. ಹೀಗೊಮ್ಮೆ ನಡೆಯಿತು. ಒಬ್ಬ ಭಿಕ್ಷು ವಿಹಾರವನ್ನು ನಿರ್ಮಿಸಲು ತೊಡಗಿದ. ಒಂದೊಂದೇ ಇಟ್ಟಿಗೆಯನ್ನು ಇಡುತ್ತಹೋದ. ಹಗಲು–ರಾತ್ರಿ ಕಷ್ಟ ಪಡುತ್ತ ನಿರ್ಮಾಣದ ಕೆಲಸವನ್ನು ಪೂರೈಸಿದ. ಮುಗಿದ ಮೇಲೆ ಕಟ್ಟಡವನ್ನು ನೋಡುತ್ತಾನೆ – ಒಂದು ಕ್ಷಣ ಅವನು ಕುಗ್ಗಿಹೋದ. ಎರಡು ಇಟ್ಟಿಗೆಗಳನ್ನು ಸ್ವಲ್ಪ ಬಿರುಕನ್ನು ಬಿಟ್ಟಿದ್ದವು; ಜೋಡಿಸುವಾಗ ಅವನ ಗಮನಕ್ಕೆ ಬಂದಿರಲಿಲ್ಲ. ಈಗೇನು ಮಾಡುವುದು? ಅವನಿಗೆ ಎಲ್ಲಿ ಹೋದರೂ ಏನು ಮಾಡುತ್ತಿದ್ದರೂ ಆ ಎರಡು ಇಟ್ಟಿಗೆಗಳೇ ಕಣ್ಣಿಗೆ ಕಾಣುತ್ತಿವೆ! ಕೆಡವಿ ಮತ್ತೆ ಕಟ್ಟುವುದೆ? ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಮೂರು ತಿಂಗಳ ಪರಿಶ್ರಮ ಬೇರೆ. ಏನು ಮಾಡುವುದು? ಹೀಗೆ ಯೋಚಿಸುತ್ತಿರುವಾಗ ಅಲ್ಲಿಗೊಬ್ಬ ಬಂದ. ಅವನು ಆ ವಿಹಾರವನ್ನು ತದೇಕವಾಗಿ ನೋಡುತ್ತ, ‘ಆಹಾ! ಎಷ್ಟು ಚೆನ್ನಾಗಿದೆ!!’ ಎಂದು ಉದ್ಗರಿಸಿದ. ಆದರೆ ಆ ಭಿಕ್ಷುವಿಗೆ ಅದನ್ನ್ು ಕೇಳಿ ಆಶ್ಚರ್ಯ. ‘ಅಲ್ಲಯ್ಯ! ಆ ಎರಡು ಒಡೆದ ಇಟ್ಟಿಗೆಗಳು ನಿನ್ನ ಕಣ್ಣಿಗೆ ಬೀಳಲಿಲ್ಲವೆ? ಅವು ಎಷ್ಟು ಕೆಟ್ಟದಾಗಿ ಕಾಣುತ್ತಿವೆ?’ ಈ ಮಾತನ್ನು ಕೇಳಿದ ಆ ವ್ಯಕ್ತಿ ಸಮಾಧಾನದಿಂದ ಹೇಳಿದ: ‘ಗುರುಗಳೇ. ಉಳಿದ ಒಂಬೈನೂರ ತೊಂಬತ್ತೆಂಟು ಇಟ್ಟಿಗೆಗಳು ಚೆನ್ನಾಗಿಯೇ ಇವೆಯಲ್ಲ! ಬಹುಶಃ ಅವುಗಳ ನಡುವೆ ಆ ಎರಡು ಇಟ್ಟಿಗೆಗಳು ನನ್ನ ಕಣ್ಣಿಗೆ ಬೀಳಲಿಲ್ಲ ಎನಿಸುತ್ತದೆ. ನಿಮ್ಮ ಪರಿಶ್ರಮದ ಸೊಬಗೂ ಪ್ರತಿ ಇಟ್ಟಿಗೆಯಲ್ಲೂ ಕಾಣುತ್ತಿದೆ!’ ಈಗ ಆ ಭಿಕ್ಷುವಿಗೂ ಉಳಿದ ಇಟ್ಟಿಗೆಗಳ ಸೌಂದರ್ಯ ಕಾಣತೊಡಗಿತು.

ಈ ಘಟನೆಯಲ್ಲಿ ನಮಗೂ ಪಾಠ ಉಂಟು. ನಾವೂ ಸಹ ನಮ್ಮ ಮನಸ್ಸನ್ನು ಒಂಬೈನೂರ ಎಂಬತ್ತೆಂಟು ಇಟ್ಟಿಗೆಗಳು ನೋಡುವಂತೆ ಹದಕ್ಕೆ ತರಬೇಕು. ನಾವು ಇಲ್ಲಿ ಬಂದಿರುವುದು ಈ ನೆಲವನ್ನು ಸುಂದರವಾದ ಸ್ವರ್ಗವನ್ನಾಗಿಸಲೇ ಹೊರತು ಪರಿಪೂರ್ಣ ನರಕವನ್ನಲ್ಲ!! ನಮ್ಮ ಹಬೆಯಿಂದ ಈ ಭೂಮಿಯನ್ನು ಮತ್ತಷ್ಟು ಕಾಯಿಸುವುದು ಬೇಡ.

* ನಿಮ್ಮ ಮನೆ ಮತ್ತು ಆಫೀಸ್‌ಗಳನ್ನು ಜೀವಂತಿಕೆಯ ತಾಣವನ್ನಾಗಿಸಿ, ನರಳಾಟದ ನೆಲೆಯಾಗಿಸಿಕೊಳ್ಳಬೇಡಿ. ಆರೋಗ್ಯದ ಪ್ರದೇಶವಾಗಿಸಿಕೊಳ್ಳಿ, ರೋಗದ ಬೀಡಾಗಿಸಿಕೊಳ್ಳದಿರಿ. ಸಾಮರಸ್ಯದ ಎಡೆಯಾಗಲಿ, ಮನಸ್ತಾಪಕ್ಕೆ ಅವಕಾಶವಾಗದಿರಲಿ.

* ಪ್ರತಿಕ್ರಿಯಿಸಲು ಹೋಗಬೇಡಿ. ನಿಮ್ಮಲ್ಲಿಯ ತೀವ್ರ ಭಾವನೆಗಳ ಹಿಂದಿರುವ ಶಕ್ತಿಯನ್ನು ಸೃಜನಾತ್ಮಕತೆಯಲ್ಲಿ ಬಳಸಿಕೊಳ್ಳಿ. ನಿಮ್ಮ ಪ್ರಾರ್ಥನೆಗೋ ಅಥವಾ ಆಟಕ್ಕೋ ಈ ಶಕ್ತಿಯ ಬಳಕೆಯಾಗಲಿ. ಒಂಬೈನೂರ ತೊಂಬತ್ತೆಂಟು ಇಟ್ಟಿಗೆಗಳ ಸೂತ್ರವನ್ನು ಅನ್ವಯಿಸಿಕೊಳ್ಳಿ. ನಿಮಗೆ ಕೋಪ ಇರುವವರ ಮೇಲೆ ಈ ಸೂತ್ರವನ್ನು ಪ್ರಯೋಗಿಸಿ.

* ಪ್ರತಿ ದಿನವೂ ಏನಾದರೊಂದು ಉಪಕಾರಕ ಕಾರ್ಯವನ್ನು ಮಾಡಿ. ಒಳ್ಳೆಯ ಮಾತನ್ನು ಆಡಿ. ಇತರರಿಗೆ ಸಂತೋಷವನ್ನು ಉಂಟುಮಾಡುವ ಹಾಗೆ ನಡೆದುಕೊಳ್ಳಿ. ಇದು ದೀಪದಿಂದ ದೀಪವನ್ನು ಬೆಳಗುವ ಹಾಗೆ; ಹೀಗೆ ಮಾಡುವುದರಿಂದ ಬೆಳಕಿನ ಪರಂಪರೆ ಮುಂದುವರಿಯುತ್ತಲೇ ಇರುತ್ತದೆ.

* ವ್ಯರ್ಥವಾದ ವಾದದಲ್ಲಿ ತೊಡಗಬೇಡಿ. ಯಾವುದರ ಬಗ್ಗೆಯೂ ತೀರ್ಪನ್ನು ಕೊಡಲು ಹೋಗಬೇಡಿ. ಎಲ್ಲವನ್ನೂ ಪ್ರೀತಿಯ ಔದಾರ್ಯದಲ್ಲಿ ನೋಡಿ. ನಿಮ್ಮ ದೇಹದ ಪ್ರತಿಯೊಂದು ಜೀವಕೋಶವೂ ಅಂತರಂಗದ ಸಂಭಾಷಣೆಯನ್ನು ಕದ್ದು ಕೇಳುತ್ತಿರುತ್ತದೆಯಂತೆ. ನಿಮ್ಮ ಆಲೋಚನೆಗಳೇ ರೂಪಿಸುವ ನಿಮ್ಮ ಜೀವಕೋಶಗಳ ಸಾಮರಸ್ಯವನ್ನೂ ಸ್ವಾಸ್ಥ್ಯವನ್ನೂ ಒಮ್ಮೆ ಊಹಿಸಿಕೊಳ್ಳಿ.

ಪ್ರತಿಕ್ರಿಯಿಸಿ (+)