ಭಾನುವಾರ, ಡಿಸೆಂಬರ್ 8, 2019
24 °C
ಬೌಲಿಂಗ್ ಕೋಚ್ ಸ್ಥಾನಕ್ಕೆ ಜಹೀರ್ ಖಾನ್ ನೇಮಕ

ಭಾರತ ತಂಡಕ್ಕೆ ರವಿಶಾಸ್ತ್ರಿ ಮುಖ್ಯ ಕೋಚ್

Published:
Updated:
ಭಾರತ ತಂಡಕ್ಕೆ ರವಿಶಾಸ್ತ್ರಿ ಮುಖ್ಯ ಕೋಚ್

ನವದೆಹಲಿ: ಹಿರಿಯ ಕ್ರಿಕೆಟಿಗ ರವಿಶಾಸ್ತ್ರಿ ಅವರನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ನೇಮಕ ಮಾಡಲಾಯಿತು.

ಇದರೊಂದಿಗೆ ಕೆಲವು ದಿನಗಳಿಂದ ನಡೆದಿದ್ದ ಕೋಚ್ ನೇಮಕ ಪ್ರಹಸನಕ್ಕೆ ಬಿಸಿಸಿಐ ಮಂಗಳವಾರ ರಾತ್ರಿ ತೆರೆ ಎಳೆಯಿತು.  ಅಲ್ಲದೇ ಬೌಲಿಂಗ್ ಕೋಚ್ ಸ್ಥಾನಕ್ಕೆ ಜಹೀರ್ ಖಾನ್ ಅವರನ್ನು  ನೇಮಕ ಮಾಡಲಾಯಿತು.

ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ವಿ.ವಿ.ಎಸ್. ಲಕ್ಷ್ಮಣ್ ಅವರು ಇರುವ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ)ಯು ರವಿಶಾಸ್ತ್ರಿ ಮತ್ತು  ಜಹೀರ್ ಖಾನ್ ಅವರ ಹೆಸರನ್ನು ಬಿಸಿಸಿಐಗೆ ಶಿಫಾರಸು ಮಾಡಿತು.

‘ಸಿಎಸಿಯ ಶಿಫಾರಸಿನ ಮೇರೆಗೆ ರವಿಶಾಸ್ತ್ರಿ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಮತ್ತು ಜಹೀರ್ ಖಾನ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ’ ಎಂದು  ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ  ಪ್ರಕಟಿಸಿದರು.

ರವಿಶಾಸ್ತ್ರಿ ಅವರು 2007ರಲ್ಲಿ ಭಾರತ ಕ್ರಿಕೆಟ್ ತಂಡದ ವ್ಯವಸ್ಥಾಪಕರಾಗಿದ್ದರು. 2014 ರಿಂದ 2016ರವರೆಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.   ಆ ಸಂದರ್ಭದಲ್ಲಿ ಭಾರತ ತಂಡವು ಏಕದಿನ ವಿಶ್ವಕಪ್ (2015) ಮತ್ತು ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ (2016) ಸೆಮಿಫೈನಲ್ ಪ್ರವೇಶಿಸಿತ್ತು.  ಇದೀಗ 55 ವರ್ಷದ ರವಿಶಾಸ್ತ್ರಿ  ಅವರು    ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.  ಅವರು ಎರಡು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲಿದ್ದಾರೆ.  ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು  ಕೂಡ ಶಾಸ್ತ್ರಿಯವರ ನೇಮಕಕ್ಕೆ ಹೆಚ್ಚು ಒಲವು ತೋರಿದ್ದರು. 

ಹೋದ ತಿಂಗಳು  ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ನಂತರ ಅನಿಲ್ ಕುಂಬ್ಳೆ ರಾಜೀನಾಮೆಯಿಂದಾಗಿ  ಮುಖ್ಯ ಕೋಚ್ ಹುದ್ದೆ ತೆರವಾಗಿತ್ತು. ಕೊಹ್ಲಿ ಮತ್ತು ಕುಂಬ್ಳೆಯವರ ನಡುವಣ ಭಿನ್ನಾಭಿಪ್ರಾಯ ವಿವಾದದ ರೂಪ ಪಡೆದಿತ್ತು.  ಅದರಿಂದಾಗಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡವು ಕೋಚ್ ಇಲ್ಲದೇ ತೆರಳಿತ್ತು.

ಆ ನಂತರ ನೂತನ ಕೋಚ್ ನೇಮಕಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು.  ಹತ್ತು ಮಂದಿ ಹಿರಿಯ ಕ್ರಿಕೆಟಿಗರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ರವಿಶಾಸ್ತ್ರಿ, ವೀರೇಂದ್ರ ಸೆಹ್ವಾಗ್,  ಲಾಲ್‌ಚಂದ್ ರಜಪೂತ್, ಟಾಮ್ ಮೂಡಿ ಮತ್ತು ರಿಚರ್ಡ್ ಪೈಬಸ್ ಅವರನ್ನು ಸೋಮ ವಾರ ಸಂದರ್ಶನ ಮಾಡಲಾಗಿತ್ತು. 

ದ್ರಾವಿಡ್ ಬ್ಯಾಟಿಂಗ್ ಸಲಹೆಗಾರ

ಭಾರತ ಕ್ರಿಕೆಟ್ ತಂಡವು ಹೊರದೇಶದಲ್ಲಿ  ನಡೆಯುವ ಟೂರ್ನಿಗಳಲ್ಲಿ ಆಡುವ ಸಂದರ್ಭದಲ್ಲಿ  ರಾಹುಲ್ ದ್ರಾವಿಡ್ ಅವರು ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಕರ್ನಾಟಕದ ರಾಹುಲ್ ಅವರು  ಭಾರತ ‘ಎ’ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮುಖ್ಯ ಕೋಚ್ ಬಗ್ಗೆ

*ಹೆಸರು: ರವಿಶಂಕರ್  ಶಾಸ್ತ್ರಿ

*ವಯಸ್ಸು: 55

*ಊರು: ಮುಂಬೈ (ಮಹಾರಾಷ್ಟ್ರ)

*ಆಡಿದ ತಂಡಗಳು: ಭಾರತ, ಗ್ಲಾಮರ್‌ಗನ್, ಮುಂಬೈ

*ಆಟದ ಶೈಲಿ: ಬಲಗೈ ಬ್ಯಾಟ್ಸ್‌ಮನ್, ಎಡಗೈ ಸ್ಪಿನ್ನರ್

*ಆಡಿದ ಅವಧಿ: ಪ್ರಥಮದರ್ಜೆ: 1979 ರಿಂದ 1994

*ಇತರೆ: 2007 ರಲ್ಲಿ ಭಾರತ ತಂಡಕ್ಕೆ ಮ್ಯಾನೇಜರ್.

*2014–16ರವರೆಗೆ ನಿರ್ದೇಶಕ.

*2009–16ರವರೆಗೆ ಐಸಿಸಿ ಕ್ರಿಕೆಟ್ ಸಮಿತಿ ಸದಸ್ಯ.

*1995 ರಿಂದ ಇಲ್ಲಿಯವರೆಗೆ ಕ್ರಿಕೆಟ್ ವೀಕ್ಷಕ ವಿವರಣೆಗಾರ

ಸಿಒಎ ಸೂಚನೆಗೆ ಮಣಿದ ಸಿಎಸಿ–ಬಿಸಿಸಿಐ : ತಂಡದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಚರ್ಚಿಸಿದ ನಂತ ರವೇ ಕೋಚ್ ಹೆಸರು ಬಹಿರಂಗ ಪಡಿಸಲು ನಿರ್ಧರಿಸಿದ್ದ  ಸಿಎಸಿಯ ಯೋಜನೆ ಈಡೇರಲಿಲ್ಲ.

‘ಇವತ್ತೇ ಕೋಚ್ ಹೆಸರು ಪ್ರಕಟಿಸಿ’ ಎಂದು ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರಾಯ್ ಅವರು ನೀಡಿದ ಸೂಚನೆಗೆ ಬಿಸಿಸಿಐ ಮತ್ತು ಸಿಎಸಿ ಮಣಿಯಬೇಕಾಯಿತು.

ಸೋಮವಾರ ಸಂದರ್ಶನ ನಡೆಸಿದ ನಂತರ ಕೋಚ್ ಹೆಸರನ್ನು ಸಿಎಸಿ ಬಹಿರಂಗಪಡಿಸಿರಲಿಲ್ಲ.   ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಚರ್ಚಿಸಿದ ನಂತರ   ಹೆಸರು ಪ್ರಕಟಿಸುವುದಾಗಿ ಸಿಎಸಿಯ ಸೌರವ್‌ ಗಂಗೂಲಿ ಹೇಳಿದ್ದರು.

ವೆಸ್ಟ್‌ ಇಂಡೀಸ್ ಎದುರಿನ ಸರಣಿಯ ನಂತರ ಕೊಹ್ಲಿ ಅವರು ಅಮೆರಿಕದಲ್ಲಿ ರಜೆ ಕಳೆಯುತ್ತಿದ್ದಾರೆ. ಅವರು 17ರಂದು ಭಾರತಕ್ಕೆ ಮರಳಲಿದ್ದಾರೆ. ಆ ನಂತರ ಅವರೊಂದಿಗೆ ಚರ್ಚಿಸಿ ಹೆಸರು ಪ್ರಕಟಿಸುವ ಸಾಧ್ಯತೆ ಇತ್ತು.

ಶ್ರೀನಿವಾಸನ್ ಬಣದ ವಿರೋಧ: ವಿಶೇಷ ಸಭೆ ಮುಂದೂಡಿಕೆ

ಮಂಗಳವಾರ ಆಯೋಜಿಸಲಾಗಿದ್ದ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯನ್ನು  ಮಂಡಳಿಯ ಪದಚ್ಯುತ ಅಧ್ಯಕ್ಷ ಎನ್. ಶ್ರೀನಿವಾಸನ್ ಬಣದ  ವಿರೋಧದಿಂದಾಗಿ ಮುಂದೂಡಲಾಯಿತು.

 ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳ ಜಾರಿ ಕುರಿತು ಚರ್ಚಿಸಲು ಈ ಸಭೆಯನ್ನು ಆಯೋಜಿಸಲಾಗಿತ್ತು.  ಮಂಗಳವಾರ ಸಂಜೆ 4.30ಕ್ಕೆ ಸಭೆ ಆರಂಭವಾಗಬೇಕಿತ್ತು.

ಆದರೆ, ನಿಯಮದ ಪ್ರಕಾರ ಸಾಮಾನ್ಯ ಸಭೆಯ ದಿನಾಂಕವನ್ನು ಹತ್ತು ದಿನಗಳ ಮುನ್ನವೇ ಪ್ರಕಟಿಸಬೇಕು ಮತ್ತು ಸದಸ್ಯರಿಗೆ ಮಾಹಿತಿ ನೀಡಬೇಕು. ಈ ನಿಯಮವನ್ನು ಪಾಲಿಸದೇ ಕೊನೆಯ  ಹಂತದಲ್ಲಿ ಸಭೆ ಅಯೋಜಿಸಲಾಗಿದೆ ಎಂದು ಶ್ರೀನಿವಾಸನ್ ಪರವಾದ ಆರು ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಸಭೆ ಬಹಿಷ್ಕರಿಸಿದ್ದವು.

ಶ್ರೀನಿವಾಸನ್ ಅವರು ಅಧ್ಯಕ್ಷರಾಗಿರುವ  ತಮಿಳುನಾಡು ಕ್ರಿಕೆಟ್ ಸಂಸ್ಥೆ,  ಸೌರಾಷ್ಟ್ರ, ಹರಿಯಾಣ, ಕೇರಳ, ಗೋವಾ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪದಾಧಿಕಾರಿಗಳು ಸಭೆಯನ್ನು ಬಹಿಷ್ಕರಿಸಿದರು. 

‘ನಿಯಮದ ಪ್ರಕಾರ ಸಭೆಯ ಆಯೋಜನೆಗೆ ಕ್ರಮ ಕೈಗೊಳ್ಳುವಂತೆ ಮಂಡಳಿಯ ಹಂಗಾಮಿ ಅಧ್ಯಕ್ಷ ಸಿ..ಕೆ. ಖನ್ನಾ ಅವರು  ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರಿಗೆ ಪತ್ರ ಬರೆದಿದ್ದರು’ ಎಂದು ಮೂಲಗಳು ತಿಳಿಸಿವೆ.

ಆದರೆ ಬಹುತೇಕ ಸಂಸ್ಥೆಗಳು ಎಸ್‌ಜಿಎಂ ಬಗ್ಗೆ ಯಾವುದೇ ತಕರಾರು ಸಲ್ಲಿಸಿಲ್ಲ.  ಅದರಲ್ಲೂ ಶ್ರೀನಿವಾಸನ್ ವಿರೋಧಿ ಸಂಸ್ಥೆಗಳು ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿವೆ.

‘2002ರಲ್ಲಿ ಜಗಮೋಹನ್ ದಾಲ್ಮಿಯಾ ಅವರು ಅಧ್ಯಕ್ಷರಾಗಿದ್ದಾಗ ಕೇವಲ ಎರಡು ದಿನಗಳ ಮುನ್ನ ಸಭೆಯ ಮಾಹಿತಿ ನೀಡಲಾಗಿತ್ತು. ಆಗ ಅವರಿಗೆ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಸಭೆಯು ನಡೆದಿತ್ತು’ ಎಂದು ಮೂಲಗಳು ತಿಳಿಸಿವೆ.

ಸುದ್ದಿ ಅಲ್ಲಗಳೆದಿದ್ದ ಬಿಸಿಸಿಐ

ವಿನೋದ್ ರಾಯ್ ಅವರ ಸೂಚನೆಯ ನಂತರ ಕ್ರಿಕೆಟ್ ವಲಯದಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ಕೆಲವು ಟಿ.ವಿ. ವಾಹಿನಿಗಳು ಮತ್ತು ಅಂತರ್ಜಾಲ ಮಾಧ್ಯಮಗಳಲ್ಲಿ ರವಿಶಾಸ್ತ್ರಿ ಕೋಚ್ ಸ್ಥಾನಕ್ಕೆ ನೇಮಕವಾದ ಸುದ್ದಿಗಳು ಸಂಜೆ ಐದೂವರೆಯಿಂದಲೇ  ಹರಿದಾಡಿದ್ದವು. ಆದರೆ ರಾತ್ರಿ  ಹತ್ತು ಗಂಟೆಯವರೆಗೂ ಬಿಸಿಸಿಐ ಈ ಸುದ್ದಿಗಳನ್ನು ಅಲ್ಲಗಳೆದಿತ್ತು.

‘ನೂತನ ಕೋಚ್ ನೇಮಕದ ಕುರಿತು ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸೋಮವಾರದ  ಸಂದರ್ಶನದ  ಕುರಿತು ಎಸಿಯು ಬಿಸಿಸಿಐಗೆ ವಿವರಗಳನ್ನು ನೀಡುತ್ತಿದೆ. ಇನ್ನೂ ಮಾತುಕತೆ ನಡೆಯುತ್ತಿದೆ. ಕೆಲವು ಟಿ.ವಿ. ವಾಹಿನಿಗಳು ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು  ಸತ್ಯಕ್ಕೆ ದೂರವಾಗಿವೆ.  ಕೋಚ್ ಹೆಸರು ತಿಳಿದುಕೊಳ್ಳಲು ನಮಗೂ ಕೂಡ ನಿಮ್ಮಷ್ಟೇ ಕುತೂಹಲ ಇದೆ’ ಎಂದು ಬಿಸಿಸಿಐ ಹಂಗಾಮಿ ಜಂಟಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಸುದ್ದಿಗಾರರಿಗೆ ಹೇಳಿದ್ದರು.

ಪ್ರತಿಕ್ರಿಯಿಸಿ (+)