ಶನಿವಾರ, ಡಿಸೆಂಬರ್ 7, 2019
25 °C
1 ಲಕ್ಷ ಕೋಟಿ ಟನ್‌ ತೂಕ: ಸಮುದ್ರಯಾನಕ್ಕೆ ಅಪಾಯ

ಅಂಟಾರ್ಕ್ಟಿಕಾ: ಬೃಹತ್‌ ಮಂಜುಗಡ್ಡೆ ಹೋಳು

ಪಿಟಿಐ Updated:

ಅಕ್ಷರ ಗಾತ್ರ : | |

ಅಂಟಾರ್ಕ್ಟಿಕಾ: ಬೃಹತ್‌ ಮಂಜುಗಡ್ಡೆ ಹೋಳು

ಲಂಡನ್‌: ಅಂಟಾರ್ಕ್ಟಿಕಾದಲ್ಲಿ ಬೃಹತ್‌ ಮಂಜುಗಡ್ಡೆ ಹೋಳಾಗಿದೆ.

ಹಲವು ತಿಂಗಳುಗಳಿಂದ ಇದು ಹೋಳಾಗುವ ಸ್ಥಿತಿಯಲ್ಲಿತ್ತು. ಈ ಬೃಹತ್‌ ಮಂಜುಗಡ್ಡೆ 1 ಲಕ್ಷ ಸಾವಿರ ಕೋಟಿ ಟನ್‌ ತೂಕದಷ್ಟು ಭಾರವಿದೆ ಎಂದು ಅಂದಾಜಿಸಲಾಗಿದೆ.

ಕಳೆದ ವರ್ಷ ನವೆಂಬರ್‌ 10ರಂದು ‘ಲಾರ್ಸೆನ್‌ ಸಿ’ ಹೆಸರಿನ ಮಂಜುಗಡ್ಡೆಯಲ್ಲಿ ಬಿರುಕು ಉಂಟಾಗಿರುವ ಚಿತ್ರಗಳನ್ನು ನಾಸಾ ವಿಜ್ಞಾನಿಗಳು ಬಿಡುಗಡೆ ಮಾಡಿದ್ದರು.

‘ಲಾರ್ಸೆನ್‌ ಸಿ’ ಮಂಜುಗಡ್ಡೆಯಿಂದ ಬೇರ್ಪಟ್ಟಿರುವ ಈ ಮಂಜುಗಡ್ಡೆ ಅಂಟಾರ್ಕ್ಟಿಕಾದ ಸುತ್ತಮುತ್ತಲಿನ ಹಡಗುಗಳ ಸಂಚಾರಕ್ಕೆ ಸಮಸ್ಯೆಯಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಂಟಾರ್ಕ್ಟಿಕಾದ ಮಂಜುಗಡ್ಡೆಗಳ ಕುರಿತು ಹಲವು ವರ್ಷಗಳಿಂದ ನಿಗಾ ವಹಿಸಿರುವ ಸಂಶೋಧಕರು, ಜುಲೈ 10 ಹಾಗೂ 12ರ ನಡುವಿನ ಅವಧಿಯಲ್ಲಿ ಮಂಜುಗಡ್ಡೆ ಹೋಳಾಗಿದೆ ಎಂದು ಹೇಳಿದ್ದಾರೆ.

ಈ ಮಂಜುಗಡ್ಡೆ 5,800 ಚದರ ಕಿಲೋ ಮೀಟರ್‌ ವಿಸ್ತೀರ್ಣ ಹೊಂದಿದೆ. ಈಗ ಮಂಜುಗಡ್ಡೆ ಹೋಳಾಗಿದ್ದರಿಂದ ‘ಲಾರ್ಸೆನ್‌ ಸಿ’ ವಿಸ್ತೀರ್ಣದಲ್ಲಿ ಶೇಕಡ 12ರಷ್ಟು ಕಡಿಮೆಯಾಗಿದೆ ಮತ್ತು  ಆಕಾರವೂ ಶಾಶ್ವತವಾಗಿ ಬದಲಾಗಿದೆ.

‘ಹಲವು ತಿಂಗಳುಗಳಿಂದ ಮಂಜುಗಡ್ಡೆ ಹೋಳಾಗುವುದನ್ನು ಕಾಯುತ್ತಿದ್ದೆವು. ಮಂಜುಗಡ್ಡೆಯ ಕೊನೆಯ ಕೆಲವು ಕಿಲೋ ಮೀಟರ್‌ ಭಾಗ ಹೋಳಾಗಲು ಸುದೀರ್ಘ ಸಮಯ ಬೇಕಾಯಿತು’ ಎಂದು ಲಂಡನ್‌ನ ಸ್ವಾನ್ಸಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಏಡ್ರಿಯನ್‌ ಲಕ್‌ಮನ್‌ ಹೇಳಿದ್ದಾರೆ.

ಸಮುದ್ರಯಾನಕ್ಕೆ ಅಪಾಯ ಸಾಧ್ಯತೆ: ಅಂಟಾರ್ಕ್ಟಿಕಾದಲ್ಲಿ ಮಂಜುಗಡ್ಡೆಗಳು ಹೋಳಾಗುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಈಗ ಬೇರ್ಪಟ್ಟಿರುವ ಮಂಜುಗಡ್ಡೆ ಭಾರಿ ದೊಡ್ಡದಾಗಿದ್ದರಿಂದ ಇದು ಸಮುದ್ರಯಾನಕ್ಕೆ ಅಪಾಯ ಒಡ್ಡುವ ಭೀತಿ ಇದೆ. ಆದ್ದರಿಂದ ಹೋಳಾಗಿರುವ ಈ ಮಂಜುಗಡ್ಡೆ ಸಮುದ್ರದಲ್ಲಿ ಯಾವ ಕಡೆ ಸಂಚರಿಸುತ್ತದೆ ಎನ್ನುವ ಕುರಿತು ನಿಗಾ ವಹಿಸಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹೋಳಾಗಿರುವ ಒಂದು ಭಾಗಕ್ಕೆ ‘ಎ68’ ಎಂದು ಹೆಸರಿಡುವ ನಿರೀಕ್ಷೆ ಇದೆ. ನಾಸಾದ ‘ಆಕ್ವಾ ಮೋಡಿಸ್‌’ ಉಪಗ್ರಹದ ಮುಖಾಂತರ ಮಂಜುಗಡ್ಡೆ ಹೋಳಾಗಿರುವ ಪ್ರಕ್ರಿಯೆಯನ್ನು ಪತ್ತೆ ಮಾಡಲಾಗಿದೆ.

‘ಲಾರ್ಸೆನ್‌ ಸಿ’ ಮಂಜುಗಡ್ಡೆ ಮತ್ತೆ ನೈಸರ್ಗಿಕವಾಗಿ ಬೆಳವಣಿಗೆಯಾಗುತ್ತದೆ. ಆದರೂ ಹೋಳಾಗುವ ಮೊದಲಿನಷ್ಟು ಸದೃಢವಾಗಿ ಬೆಳವಣಿಗೆಯಾಗುವ ಸಾಧ್ಯತೆ ಕಡಿಮೆ ಎಂದು ಸಂಶೋಧಕರು ಹಿಂದಿನ ಉದಾಹರಣೆಗಳನ್ನು ನೀಡಿದ್ದಾರೆ.

ಸದ್ಯ ‘ಲಾರ್ಸೆನ್‌ ಸಿ’ಯಿಂದ ಬೇರ್ಪಡೆಗೊಂಡಿರುವ ಮಂಜುಗಡ್ಡೆ  ತೇಲುವ ಸ್ಥಿತಿಯಲ್ಲಿದ್ದು, ಇನ್ನೂ ಛಿದ್ರಗೊಂಡಿಲ್ಲ. ಹೀಗಾಗಿ ಸದ್ಯಕ್ಕೆ ಸಮುದ್ರದ ಮಟ್ಟದ ಮೇಲೆ ಪರಿಣಾಮ ಬೀರುವುದಿಲ್ಲ. ಕೆಲವು ದಿನಗಳ ಕಾಲ ಒಂದೇ ತುಂಡಾಗಿ ಇದು ಉಳಿಯುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಇದು ಹೋಳಾಗಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಜಾಗತಿಕ ತಾಪಮಾನದಿಂದಾಗಿ ಮಂಜುಗಡ್ಡೆ ಹೋಳಾಗಲು ಪ್ರಮುಖ ಕಾರಣ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಪ್ರತಿಕ್ರಿಯಿಸಿ (+)