ಶುಕ್ರವಾರ, ಡಿಸೆಂಬರ್ 13, 2019
20 °C

ಹೆದ್ದಾರಿ ಡಿನೋಟಿಫೈ ‘ಸುಪ್ರೀಂ’ ಸಮ್ಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆದ್ದಾರಿ ಡಿನೋಟಿಫೈ ‘ಸುಪ್ರೀಂ’ ಸಮ್ಮತಿ

ನವದೆಹಲಿ: ನಗರ ಪ್ರದೇಶಗಳ ವ್ಯಾಪ್ತಿಯಲ್ಲಿನ ಹೆದ್ದಾರಿಯನ್ನು ಡಿನೋಟಿಫೈ ಮಾಡಿ ಚಂಡೀಗಡದ ಸ್ಥಳೀಯ ಆಡಳಿತ ಕೈಗೊಂಡ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಸಮ್ಮತಿ ಸೂಚಿಸಿದೆ.

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಪಕ್ಕದ 500 ಮೀಟರ್‌ ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿಗಳನ್ನು ಬಂದ್‌ ಮಾಡುವಂತೆ ಕಳೆದ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶದಿಂದ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮುಚ್ಚುವ ಭೀತಿ ಎದುರಿಸಿದ್ದ ಮದ್ಯದಂಗಡಿಗಳು ಹಾಗೂ ಬಾರ್‌ಗಳ ಮಾಲೀಕರಲ್ಲಿ ಇದರಿಂದ ಆಶಾಭಾವ ಮೂಡಿದೆ.

ಚಂಡೀಗಡ ನಗರದಲ್ಲಿ ಹಾದು ಹೋಗಿದ್ದ 12 ರಾಜ್ಯ ಹೆದ್ದಾರಿಗಳನ್ನು ಕಳೆದ ಮಾರ್ಚ್‌ 16ರಂದು ಡಿನೋಟಿಫೈ ಮಾಡಿದ್ದ ಅಲ್ಲಿನ ಸರ್ಕಾರವು, ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆಗಳ ರಸ್ತೆಗಳು ಎಂದು ಬದಲಿಸಿದೆ. ಅಲ್ಲದೆ, ಸ್ಥಳೀಯ ಸಂಸ್ಥೆಯೇ ಆ ರಸ್ತೆಗಳ ನಿರ್ವಹಣೆ ಮತ್ತು ದುರಸ್ತಿಯ ಹೊಣೆ ಹೊರಲಿದೆ ಎಂಬ ಆದೇಶ ಹೊರಡಿಸಿದೆ.

ಇದರ ವಿರುದ್ಧ ಸ್ವಯಂ ಸೇವಾ ಸಂಸ್ಥೆಯೊಂದು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ನೇತೃತ್ವದ ತ್ರಿಸದಸ್ಯ ಪೀಠವು, ಚಂಡೀಗಡ ಆಡಳಿತವು ಕೈಗೊಂಡ ನಿರ್ಧಾರವನ್ನು ಪುರಸ್ಕರಿಸಿದ್ದ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಗಳ ಆದೇಶವನ್ನು ಎತ್ತಿಹಿಡಿಯಿತು.

‘ನಗರ ವ್ಯಾಪ್ತಿಯಲ್ಲಿನ ಹೆದ್ದಾರಿಗಳನ್ನು ಡಿನೋಟಿಫೈ ಮಾಡಬಹುದಾಗಿದೆ. ಆದರೆ, ಮದ್ಯದ ಅಂಗಡಿಗಳಿಗೆ ನೆರವು ನೀಡುವ ಸಲುವಾಗಿ ನಗರ ಮತ್ತು ಪಟ್ಟಣಗಳ ಆಚೆ ಇರುವ ಹೆದ್ದಾರಿಗಳನ್ನು ಡಿನೋಟಿಫೈ ಮಾಡಲು ನಮ್ಮ ಸಮ್ಮತಿ ಇದೆ ಎಂದು ಭಾವಿಸಬೇಕಿಲ್ಲ’ ಎಂದು ಡಿ.ವೈ. ಚಂದ್ರಚೂಡ ಹಾಗೂ ಎಲ್‌.ನಾಗೇಶ್ವರ ರಾವ್‌ ಅವರನ್ನು ಒಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ನಗರ ಪ್ರದೇಶದ ವ್ಯಾಪ್ತಿಯಲ್ಲಿನ ಹೆದ್ದಾರಿಗಳನ್ನು ರಾಜ್ಯಗಳೇ ಡಿನೋಟಿಫೈ ಮಾಡಿಕೊಳ್ಳಬಹುದು ಎಂದು ಇದೇ 4ರಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ರಾಜ್ಯದ ಬೆಂಗಳೂರು ಹಾಗೂ ಇತರ ಕೆಲವು ನಗರಗಳಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದೀಗ ಸುಪ್ರೀಂ ಕೋರ್ಟ್‌ನ ಸಮ್ಮತಿ ದೊರೆತಂತಾಗಿದೆ.

ಆದರೆ, ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ನಿರ್ಧಾರ ಕೈಗೊಳ್ಳಬೇಕಿರುವ ಕೇಂದ್ರ ಸರ್ಕಾರ ಈ ಕುರಿತು ಕೆಲವು ದಿನಗಳ ಹಿಂದೆಯೇ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಯನ್ನು ಪುರಸ್ಕರಿಸಿಲ್ಲ.

ಮದ್ಯದಂಗಡಿ ತೆರೆಯಲು ಚಿಂತನೆ

ಬೆಂಗಳೂರು:
ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಬಿಟ್ಟು ಕೊಟ್ಟಿರುವ ಸುಪ್ರೀಂ ಕೋರ್ಟ್‌ ಆದೇಶ ಆಧರಿಸಿ, ನಗರ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಮುಚ್ಚಿರುವ ಮದ್ಯದಂಗಡಿಗಳನ್ನು ತೆರೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

‘ಸುಪ್ರೀಂ ಕೋರ್ಟ್ ಮಂಗಳವಾರ ನೀಡಿದ ಆದೇಶದ ಪ್ರತಿಗಾಗಿ ನಾವು ಕಾಯುತ್ತಿದ್ದೇವೆ. ನಗರ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಲು ನಮಗೆ ಅಧಿಕಾರ ಇದೆಯೇ ಅಥವಾ ಈ ಬಗ್ಗೆ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೇ ಎನ್ನುವುದನ್ನು ಕಾನೂನು ಇಲಾಖೆ ಹೇಳಬೇಕು’ ಎಂದು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ತಿಳಿಸಿದರು.

ರಾಜ್ಯ ಸರ್ಕಾರ ಈಗಾಗಲೇ 1,476.69 ಕಿ.ಮೀ ಉದ್ದ ರಾಜ್ಯ ಹೆದ್ದಾರಿಯನ್ನು ನಗರ ಸ್ಥಳೀಯ ಸಂಸ್ಥೆಯ ರಸ್ತೆಗಳಾಗಿ ಡಿನೋಟಿಫೈ ಮಾಡಿದೆ. ಮುಚ್ಚಿರುವ 3,244 ಮದ್ಯದಂಗಡಿಗಳು ಮತ್ತೆ ತೆರೆಯಲು ಸಾಧ್ಯವಿರುವ ಎಲ್ಲ ಅವಕಾಶಗಳನ್ನು ಸರ್ಕಾರ ಪರಿಶೀಲಿಸುತ್ತಿದೆ,

ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ 77.64 ಕಿ.ಮೀ ಸೇರಿದಂತೆ ಒಟ್ಟು 858 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಡಿನೋಟಿಫೈ ಮಾಡುವಂತೆ  ರಾಜ್ಯ ಸರ್ಕಾರ ಜೂನ್‌ 15ರಂದು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ತಿರಸ್ಕರಿಸಿತ್ತು.

‘ಸುಪ್ರೀಂ ಕೋರ್ಟ್ ಆದೇಶದಿಂದ ಒಂದಷ್ಟು ಸ್ಪಷ್ಟತೆ ಸಿಕ್ಕಿದೆ. ಆದರೂ, ರಾಜ್ಯ ಸರ್ಕಾರಕ್ಕೆ ಅಭಿಪ್ರಾಯ ತಿಳಿಸುವ ಮೊದಲು ಈ ಆದೇಶವನ್ನು ಅಧ್ಯಯನ ನಡೆಸಬೇಕಿದೆ. ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ನೀಡಿದೆ. ಆದರೆ, ರಾಷ್ಟ್ರೀಯ ಹೆದ್ದಾರಿಗಳನ್ನೂ ಡಿನೋಟಿಫೈ ಮಾಡುವ ಅಧಿಕಾರ ರಾಜ್ಯಕ್ಕೆ ಇದೆಯೇ ಎಂದು ಪರಿಶೀಲಿಸಬೇಕಿದೆ’ ಎಂದು ಕಾನೂನು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪ್ರತಿಕ್ರಿಯಿಸಿ (+)