ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಶಾಲೆ ಉಳಿಸಲು ಸರ್ಕಾರ ಸೋತಿದೆ’

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಕಿಡಿ
Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಏನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಜ್ಞಾನವಿಲ್ಲ. ಕನಿಷ್ಠ ಆ ಕುರಿತು ಅಧ್ಯಯನ ಮಾಡಿದ ವ್ಯಕ್ತಿಗಳೊಂದಿಗೆ ಚರ್ಚಿಸುವ ಸೌಜನ್ಯವೂ ಇಲ್ಲ’ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ ಆಳ್ವ ಟೀಕಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಆಯೋಜಿಸಿದ್ದ 2016–17ನೇ ಸಾಲಿನಲ್ಲಿ ‘ಪ್ರವೇಶ, ಕಾವ, ಜಾಣ, ರತ್ನ ಮತ್ತು ಶಾಸನಶಾಸ್ತ್ರ’ ಡಿಪ್ಲೊಮಾ ಪರೀಕ್ಷೆಗಳಲ್ಲಿ ರ್‌್್ಯಾಂಕ್‌ ಪಡೆದ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 58 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.

‘ಜಿಲ್ಲೆಗೊಂದು ಕನ್ನಡ ಶಾಲೆಯನ್ನು ಉಳಿಸಿಕೊಳ್ಳಲಾಗದ ಹಂತವನ್ನು ಸರ್ಕಾರ ತಲುಪಿದೆ. ದಿನವೂ ಒಂದೊಂದು ಕನ್ನಡ ಶಾಲೆಯನ್ನು ಮುಚ್ಚಿಸುತ್ತಿದೆ. ಹಾಗಾಗಿ ಭಾಷೆಯ ಸೋಲಿಗೆ ಪರೋಕ್ಷವಾಗಿ ಸರ್ಕಾರವೇ ಕಾರಣ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ವರ್ಷ ನಮ್ಮ ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆಗೆ ಸೇರಲು 17,500 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದರ್ಶ ಶಾಲೆಯಾಗಿ ರೂಪಿಸಿದರೆ, ಖಂಡಿತವಾಗಿ ಪೋಷಕರು ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುತ್ತಾರೆ’ ಎಂದು ಹೇಳಿದರು.

‘ರಾಜ್ಯದಲ್ಲಿ 592 ಮೊರಾರ್ಜಿ ದೇಸಾಯಿ ಕನ್ನಡ ಮಾಧ್ಯಮ ಶಾಲೆಗಳಿದ್ದವು. ಸರ್ಕಾರ ಅವುಗಳನ್ನು ಮುಚ್ಚಿಸುತ್ತಿದೆ. ಈಗ 32 ಶಾಲೆಗಳು ಮಾತ್ರ ಉಳಿದಿವೆ. ಅವುಗಳನ್ನು ಈಗಇಂಗ್ಲಿಷ್ ಮಾಧ್ಯಮವನ್ನಾಗಿ ಮಾಡಬೇಕೆಂದು ಸುತ್ತೋಲೆ ಹೊರಡಿಸಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣತಜ್ಞ ಪ್ರೊ. ವಿ.ಪಿ. ನಿರಂಜನಾರಾಧ್ಯ, ‘ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿಶೇ 30ರಷ್ಟು ಮೀಸಲಾತಿ ನೀಡಬೇಕು. ಆಗ ಕನ್ನಡದ ಬಗ್ಗೆ ಜನರಿಗೆ ಇರುವ ಮನಸ್ಥಿತಿ ಬದಲಾಗುತ್ತದೆ’ ಎಂದರು.

‘ಕನ್ನಡ ಮಾಧ್ಯಮ ಶಾಲೆಗಳಿಗೆ ಬೇಕಾದ ಸಂಪನ್ಮೂಲ ಒದಗಿಸಲು ಸರ್ಕಾರ ಸೋತಿದೆ. ಹೀಗೆ ಮುಂದುವರಿದರೆ ಇನ್ನೆರಡು ವರ್ಷಗಳಲ್ಲಿ ಎಲ್ಲಾ ಕನ್ನಡ ಶಾಲೆಗಳು ಮುಚ್ಚುತ್ತವೆ.

ರಾಜಕಾರಣಿಗಳ ಹಿಡಿತದಲ್ಲಿರುವ ಬಹುತೇಕ ಶಾಲೆಗಳಿಗೆ ಉಪಯೋಗ ಮಾಡಿಕೊಡುವ ಹುನ್ನಾರ ಇದರ ಹಿಂದಿದೆ’  ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT