ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯಗಳಿಲ್ಲದೆ ಪರದಾಟ

ನಗರದ ಹೃದಯಭಾಗದ ‘ಅರಳೆಪೇಟೆ’ ಬಡಾವಣೆಯ ಅಧ್ವಾನ ಸ್ಥಿತಿ
Last Updated 17 ಜುಲೈ 2017, 6:19 IST
ಅಕ್ಷರ ಗಾತ್ರ

ತುಮಕೂರು: ಈ ಬಡಾವಣೆಯ ಹೆಸರು ಅರಳೆಪೇಟೆ. ಈಗ ಹೆಸರಿಗೆ ಮಾತ್ರ ಪೇಟೆಯಾಗಿ ಉಳಿದಿದೆ. ಮೂಲಸೌಕರ್ಯ ಕೊರತೆಯಿಂದ ಬಡಾವಣೆ ಜನರು ನಿತ್ಯ ಪರದಾಡುತ್ತಿದ್ದಾರೆ.

ನಗರದ ಹೃದಯಭಾಗದಲ(ಎಡಭಾಗದಲ್ಲಿ ಎಂ.ಜಿ. ರಸ್ತೆ , ಬಲಭಾಗದಲ್ಲಿ ಹೊರಪೇಟೆ, ಜನರಲ್ ಕಾರ್ಯಪ್ಪ ರಸ್ತೆ) ಈ ಬಡಾವಣೆ ಇದ್ದರೂ ರಸ್ತೆ, ಚರಂಡಿ ದುರಸ್ತಿಗೆ, ಕುಡಿಯುವ ನೀರಿಗೆ, ನೈರ್ಮಲ್ಯಕ್ಕೆ  ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ.

ಮಹಾನಗರ ಪಾಲಿಕೆಯ16ನೇ ವಾರ್ಡ್‌ ವ್ಯಾಪ್ತಿಯಲ್ಲಿ ಈ ಬಡಾವಣೆ ಇದೆ. ಜನರಲ್ ಕಾರ್ಯಪ್ಪ  ರಸ್ತೆಯಲ್ಲಿರುವ ಸಂಚಾರ ಠಾಣೆ ಹಿಂಭಾಗದಿಂದ ಒಂದು ರಸ್ತೆ ಈ ಬಡಾವಣೆಗೆ ಸಂಪರ್ಕಿಸುತ್ತದೆ. ಆದರೆ, ಈಗ ಸಂಚಾರ ಠಾಣೆ ಪಕ್ಕದ ನೀರಿನ ಟ್ಯಾಂಕ್ ದುರಸ್ತಿ ನಡೆದಿರುವುದರಿಂದ ಈ ಸಂಪರ್ಕ ರಸ್ತೆ ಬಂದ್ ಮಾಡಲಾಗಿದೆ.

ಈ ವರ್ಷ ನಗರದ ಇತರ ಕಡೆ ನೀರಿನ ಸಮಸ್ಯೆ ಆದಂತೆಯೇ ಈ ಬಡಾವಣೆಯ ಜನರೂ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹಣ ಕೊಡುತ್ತೇವೆ ಎಂದರೂ ಟ್ಯಾಂಕರ್‌ನವರು ಬಂದು ನೀರು ಪೂರೈಸಲು ಒಪ್ಪುವುದಿಲ್ಲ. ಕಾರಣ ಇಕ್ಕಟ್ಟಾದ ರಸ್ತೆಗಳು, ಆ ರಸ್ತೆಗಳೂ ಹದಗೆಟ್ಟಿರುವುದು ಪ್ರಮುಖ ಕಾರಣವಾಗಿದೆ ಎಂದು ಬಡಾವಣೆ ನಿವಾಸಿಗಳು ದೂರುತ್ತಾರೆ.

(ಖಾಲಿ ನಿವೇಶನ ಕಸ ತೊಟ್ಟಿಯಾಗಿರುವುದು)

ಮಳೆ ಬಂದರೆ ಬಡಾವಣೆ ರಸ್ತೆಗಳೇ ಕೆರೆಗಳಂತಾಗುತ್ತವೆ. ಮಳೆ ಬಂದಾಗ  ಈ ಬಡಾವಣೆ ರಸ್ತೆಗಳಲ್ಲಿ ಕೊಳಚೆ ತುಂಬಿ ನೀರು ಹರಿಯುತ್ತಿರುತ್ತದೆ. ಚರಂಡಿಗಳು ಎಲ್ಲೆಂದರಲ್ಲಿ ಹೂತು ಹೋಗಿರುವುದರಿಂದ ನೀರು ಹರಿದು ಹೋಗಲು ಬೇರೆ ದಾರಿ ಇಲ್ಲ. ಮಳೆ ನಿಂತರೂ ರಸ್ತೆಯಲ್ಲಿ  ಕೊಳಚೆ ನೀರು ತುಂಬಿ ಹರಿಯುತ್ತಲೇ ಇರುತ್ತದೆ. ಮನೆಯಿಂದ ಯಾರೂ ರಸ್ತೆಗೆ ಇಳಿಯದಂತಹ ಸ್ಥಿತಿ ಎದುರಿಸುತ್ತಿದ್ದಾರೆ. ಮಳೆಯಾಗಿ ಒಂದೆರೆಡು ದಿನವಾದರೂ ಕೊಳಚೆ ದುರ್ವಾಸನೆ ಬಡಾವಣೆ ಆವರಿಸಿರುತ್ತದೆ.  ಬಡಾವಣೆ ಜನರಿಗೆ ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ.

‘ನಮಗೆ ಕೊಳಚೆ ಪ್ರದೇಶದಲ್ಲಿದ್ದ ಅನುಭವವಾಗುತ್ತಿದೆ. ಅನೈರ್ಮಲ್ಯ ಹೆಚ್ಚಾಗಿದೆ. ವಿಪರೀತ ಸೊಳ್ಳೆ ಇದ್ದು, ನಮ್ಮ ಮಗನಿಗೂ ಡೆಂಗಿ ಜ್ವರ ಬಂದಿತ್ತು. ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ’ ಎಂದು ಬಡಾವಣೆ ನಿವಾಸಿ ಗುರುಪ್ರಸಾದ್ ಪ್ರಜಾವಾಣಿ’ಗೆ ತಿಳಿಸಿದರು.

‘ಸಮುದಾಯವೊಂದಕ್ಕೆ ಖಾಲಿ ನಿವೇಶನದಲ್ಲಿ ಗಿಡಗಂಟೆ ಬೆಳೆದಿದ್ದು, ಸ್ವಚ್ಛಗೊಳಿಸಲು ಸಂಘದ ಪದಾಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ’ಶ್ರೀಶೈಲ ಪ್ರೆಸ್ ಮಾಲೀಕ ಎ.ಆರ್. ಮಲ್ಲಿಕಾರ್ಜುನ್ ಹೇಳಿದರು.

**

ಖಾಲಿ ನಿವೇಶನ ಕಿರಿಕಿರಿ, ಹಾವು, ಹೆಗ್ಗಣಗಳ ಕಾಟ

ಅರಳೆಪೇಟೆ  ಮುಖ್ಯರಸ್ತೆಗೆ ಹೊಂದಿಕೊಂಡು ಖಾಲಿ ನಿವೇಶನವಿದೆ. ಇದಕ್ಕೆ ಕಾಂಪೌಂಡ್ ಹಾಕಲಾಗಿದೆ. ಆದರೆ, ಒಳಗಡೆ ಗಿಡಗಂಟಿಗಳು ಬೆಳೆದಿವೆ. ಸಾರ್ವಜನಿಕರು ಕಸ ತಂದು ಸುರಿಯುತ್ತಿದ್ದಾರೆ. ಹೀಗಾಗಿ, ಇದು ಕಸದ ತೊಟ್ಟಿಯಾಗಿದೆ. ಹಾವು, ಹೆಗ್ಗಣ, ನಾಯಿಗಳು
ಇವೆ. ರಾತ್ರಿಯಾದರೆ ಸಾಕು ರಸ್ತೆಗಳಲ್ಲಿ ಹರಿದಾಡುತ್ತವೆ. ರಾತ್ರಿ ಸಂಚರಿಸಲು ಭಯ ಆಗುತ್ತದೆ ಎಂದು ನಿವಾಸಿ ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

**

‘ಕೋಟಿ ಅನುದಾನ ಬಂದರೂ ಬಡಾವಣೆ ಅಭಿವೃದ್ಧಿ ಇಲ್ಲ

ಅರಳೆಪೇಟೆ ಬಡಾವಣೆ ಎಂದರೆ ನಗರದ ಹೃದಯಭಾಗ. ಇಲ್ಲಿನ ನಿವಾಸಿಗಳಾದ ನಮಗೇ ಮೂಲಸೌಕರ್ಯ ಇಲ್ಲ. ನಗರ ಬೆಳೆಯುತ್ತಿದೆ. ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಆದರೆ, ನಮ್ಮ ಬಡಾವಣೆ ಅಭಿವೃದ್ಧಿಗೆ ಪಾಲಿಕೆ ಒತ್ತು ನೀಡಿಲ್ಲ’ ಎಂದು ನಿವಾಸಿ ಎ.ಆರ್.ಮಲ್ಲಿಕಾರ್ಜುನ್ ದೂರುತ್ತಾರೆ.

‘ಮಹಾನಗರ ಪಾಲಿಕೆ, ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಶಾಸಕರು, ವಾರ್ಡ್ ಸದಸ್ಯರಿಗೂ ಮನವಿ ಮಾಡಲಾಗಿದೆ. ಆದರೆ, ಇಂದಿಗೂ ಯಾರೊಬ್ಬರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಪಾಲಿಕೆಗೆ ಸಾಕಷ್ಟು ಹಣ ಹರಿದು ಬಂದರೂ ಬಡಾವಣೆಗೆ ನಯಾಪೈಸೆ ಖರ್ಚು ಮಾಡಿಲ್ಲ.  ಸ್ಮಾರ್ಟ್ ಸಿಟಿ  ಅನುದಾನದಲ್ಲಾದರೂ ನಮ್ಮ ಬಡಾವಣೆ ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT