ಅಮರನಾಥ ಯಾತ್ರಿಗಳ ನಿಧನಕ್ಕೆ ಉಭಯ ಸದನಗಳಲ್ಲಿ ಸಂತಾಪ: ಅಧಿವೇಶನ ಮುಂದೂಡಿಕೆ

ನವದೆಹಲಿ: ಉಗ್ರರರ ದಾಳಿಯಲ್ಲಿ ಮೃತಪಟ್ಟ ಅಮರನಾಥ ಯಾತ್ರಿಗಳು ಹಾಗೂ ಮಾಜಿ ಸದಸ್ಯರ ನಿಧನಕ್ಕೆ ಸಂತಾಪ ಸೂಚಿಸಿ ಉಭಯ ಸದನಗಳ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ಸೋಮವಾರದಿಂದ ಸಂಸತ್ ಮುಂಗಾರು ಅಧಿವೇಶನ ಆರಂಭಗೊಂಡಿದೆ. ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಅಮರನಾಥ ಯಾತ್ರಾರ್ಥಿಗಳು ಹಾಗೂ ಸಂಸತ್ ಮಾಜಿ ಸದಸ್ಯರ ನಿಧನಕ್ಕೆ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸಂತಾಪ ಸೂಚಿಸಿದರು.
ಮೌನಾಚರಿಸಿ ಸದಸ್ಯರು ಸಂತಾಪ ಸೂಚಿಸಿದ ಬಳಿಕ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಇದಕ್ಕೂ ಮುನ್ನ ಫಾರೂಕ್ ಅಬ್ದುಲ್ಲಾ ಮತ್ತು ಪಿ.ಕುನ್ಹಲಿಕುಟ್ಟಿ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಉಗ್ರರ ದಾಳಿ ಕುರಿತು ಖಂಡನೆ ವ್ಯಕ್ತಪಡಿಸಿ ಮೃತ ಯಾತ್ರಾರ್ಥಿಗಳಿಗೆ ಸಂತಾಪ ಸೂಚಿಸಿದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ರಾಜ್ಯಸಭಾ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.
ದೇಶದ ನೂತನ ರಾಷ್ಟ್ರಪತಿ ಆಯ್ಕೆಗಾಗಿ ಸೋಮವಾರ ಮತದಾನ ಪ್ರಕ್ರಿಯೆಯು ನಡೆಯುತ್ತಿದೆ.
I hope all political parties, #MPs will work for national interest & will engage in high standard of debate, provide value addition: PM.
— Press Trust of India (@PTI_News) July 17, 2017
ಚರ್ಚೆಗೆ: ದೇಶದಾದ್ಯಂತ ಏಕರೂಪ ತೆರಿಗೆ ಜಿಎಸ್ಟಿ ಜಾರಿಯಾದ ನಂತರ ನಡೆಯುತ್ತಿರುವ ಮೊದಲ ಅಧಿವೇಶ ಇದಾಗಿದೆ. ಗೋರಕ್ಷಕರಿಂದ ಹಲವು ಕಡೆ ನಡೆದಿರುವ ದಾಳಿ, ಭಯೋತ್ಪಾದಕರ ದಾಳಿ, ಪಶ್ಚಿಮ ಬಂಗಾಳದಲ್ಲಿ ಮತೀಯ ಗಲಭೆ ಹಾಗೂ ಸಿಕ್ಕಿಂ ಡೋಕ್ಲಾಮ್ ಪ್ರದೇಶದಲ್ಲಿ ಚೀನಾ ತಗಾದೆ ಕುರಿತಾದ ಚರ್ಚೆ ನಿರೀಕ್ಷಿಸಲಾಗಿದೆ.
‘ಸರ್ವ ಪಕ್ಷಗಳ ಸಂಸತ್ ಸದಸ್ಯರು ದೇಶದ ಹಿತಾಸಕ್ತಿಗಾಗಿ ಉತ್ತಮ ಚರ್ಚೆ ನಡೆಸಲಿದ್ದಾರೆ ಎನ್ನುವ ಭರವಸೆ ಇದೆ. ಗುಣಮಟ್ಟದ ಹಾಗೂ ಮೌಲ್ಯ ಹೆಚ್ಚಿಸುವ ಚರ್ಚೆಯಾಗಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.