ಭಾನುವಾರ, ಡಿಸೆಂಬರ್ 8, 2019
21 °C
ವಕೀಲರ ಮೂಲಕ ಲಿಖಿತ ಹೇಳಿಕೆ ಸಲ್ಲಿಕೆ

ವಜ್ರದೇಹಿ ಸ್ವಾಮೀಜಿ ವಿಚಾರಣೆಗೆ ಗೈರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಜ್ರದೇಹಿ ಸ್ವಾಮೀಜಿ ವಿಚಾರಣೆಗೆ ಗೈರು

ಬಂಟ್ವಾಳ: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ಕುಮಾರ್‌ ಕೊಲೆ ಪ್ರಕರಣದ ಕುರಿತು ಸ್ಫೋಟಕ ಮಾಹಿತಿ ಹೊಂದಿರುವುದಾಗಿ ಹೇಳಿಕೆ ನೀಡಿದ್ದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಬಂಟ್ವಾಳ ಪೊಲೀಸ್‌ ಠಾಣೆಗೆ ಸೋಮವಾರ ವಿಚಾರಣೆಗೆ ಹಾಜರಾಗಲಿಲ್ಲ. ಅವರ ವಕೀಲರು ಹಾಜರಾಗಿ ಲಿಖಿತ ಹೇಳಿಕೆ ಸಲ್ಲಿಸಿದರು.

‘ಶರತ್‌ಕುಮಾರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಸ್ಫೋಟಕ ಮಾಹಿತಿ ಇದೆ. ರಾಷ್ಟ್ರೀಯ ತನಿಖಾ ದಳಕ್ಕೆ ಪ್ರಕರಣದ ತನಿಖೆ ಹಸ್ತಾಂತರಿಸಿದರೆ ನನ್ನ ಬಳಿ ಇರುವ ಮಾಹಿತಿಯನ್ನು ತನಿಖಾ ತಂಡಕ್ಕೆ ತಿಳಿಸುತ್ತೇನೆ’ ಎಂದು ಶುಕ್ರವಾರ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು. ಅದೇ ದಿನ ನೋಟಿಸ್‌ ನೀಡಿದ್ದ ಪ್ರಕರಣದ ತನಿಖಾಧಿಕಾರಿ, ಸೋಮವಾರ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಸೋಮವಾರ ಬೆಳಿಗ್ಗೆ ತನಿಖಾ ತಂಡದ ಅಧಿಕಾರಿಗಳನ್ನು ಭೇಟಿಮಾಡಿದ ಮಹೇಶ್‌ ಕಜೆ ನೇತೃತ್ವದ ಮೂವರು ವಕೀಲರ ತಂಡ, ಲಿಖಿತ ರೂಪದಲ್ಲಿದ್ದ ಸ್ವಾಮೀಜಿಯ ಉತ್ತರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ವಕಿಲ ಮಹೇಶ್ ಕಜೆ, ‘ಸ್ವಾಮೀಜಿಯವರು ಚಾತುರ್ಮಾಸ ಮತ್ತು ಆಷಾಢ ಮಾಸದ ವೃತಾಚರಣೆಯಲ್ಲಿ ನಿರತರಾಗಿದ್ದಾರೆ. ಈ ಕಾರಣದಿಂದ ಠಾಣೆಗೆ ಬಂದು ಹೇಳಿಕೆ ನೀಡಲು ಸಾಧ್ಯವಾಗಿಲ್ಲ’  ಎಂದು ತಿಳಿಸಿದರು.

ಸ್ಪೋಟಕ ಮಾಹಿತಿ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸರ್ಕಾರದ ವೈಫಲ್ಯ ಮತ್ತು ಅದಕ್ಕೆ ಪೂರಕವಾದಂತೆ ಸಾಮಾನ್ಯ ಜನರು ಹೇಳಲು ಸಾಧ್ಯವಾಗದಂತಹ ವಿಚಾರವನ್ನು ಸಂತರೊಬ್ಬರು ನಿರ್ಭಯವಾಗಿ ಹೇಳಿದ್ದಾರೆ. ಸ್ವಾಮೀಜಿ ಹೇಳಿಕೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಎದ್ದಿದ್ದವು. ಈಗ ತನಿಖಾಧಿಕಾರಿ ನೋಟಿಸ್‌ಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜನರಿಗೆ ಸತ್ಯಾಂಶ ಗೊತ್ತಾಗಲಿದೆ’ ಎಂದರು.

ಪ್ರತಿಕ್ರಿಯಿಸಿ (+)