ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಮಹಿಳಾ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್‌

23ರಿಂದ 29ರ ವರೆಗೆ ಪಂದ್ಯಗಳು; ‘ಬಿ’ ಡಿವಿಷನ್‌ನ ‘ಎ’ ಗುಂಪಿನಲ್ಲಿ ಭಾರತ ತಂಡ
Last Updated 17 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಫೆಡರೇಷನ್‌ (ಫಿಬಾ) ಆಯೋಜಿಸಿರುವ ಮಹಿಳೆಯರ ಏಷ್ಯಾ ಕಪ್‌ ಬ್ಯಾಸ್ಕೆಟ್‌ಬಾಲ್‌ಗೆ ಬೆಂಗಳೂರು ಆತಿಥ್ಯ ವಹಿಸಲಿದೆ.

ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣ ಮತ್ತು ಕೋರಮಂಗಲ ಕ್ರೀಡಾಂಗಣದಲ್ಲಿ ಜುಲೈ 23ರಿಂದ 29ರ ವರೆಗೆ ಪಂದ್ಯಗಳು ನಡೆಯಲಿವೆ ಎಂದು ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್ ಅಧ್ಯಕ್ಷ ಕೆ.ಗೋವಿಂದರಾಜು ಪತ್ರಕರ್ತರಿಗೆ ಮಾಹಿತಿ ನೀಡಿದರು.

‘ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. 2009ರ ನಂತರ ಭಾರತದಲ್ಲಿ ಇದೇ ಮೊದಲ ಬಾರಿ ಫಿಬಾ ಆಶ್ರಯದ ಸ್ಪರ್ಧೆ ನಡೆಯುತ್ತಿದೆ. ಬೆಂಗಳೂರಿಗೆ ಒಂದು ದಶಕದ ನಂತರ ಈ ಅವಕಾಶ ಲಭಿಸಿದೆ. 2004ರಲ್ಲಿ 18 ವರ್ಷದೊಳಗಿನ ಪುರುಷರ ಚಾಂಪಿಯನ್‌ಷಿಪ್ ಇಲ್ಲಿ ನಡೆದಿತ್ತು’ ಎಂದು ಗೋವಿಂದರಾಜು ತಿಳಿಸಿದರು.

‘ಎ’ ಡಿವಿಷನ್‌ನ ‘ಎ’ ಗುಂಪಿನಲ್ಲಿ ನ್ಯೂಜಿಲೆಂಡ್‌, ಚೀನಾ ಥೈಪೆ, ಉತ್ತರ ಕೊರಿಯಾ ಗಣರಾಜ್ಯ ಹಾಗೂ ಚೀನಾ ಇದ್ದು ‘ಬಿ’ ಗುಂಪಿನಲ್ಲಿ ದಕ್ಷಿಣ ಕೊರಿಯಾ, ಫಿಲಿಪ್ಪೈನ್ಸ್‌, ಜಪಾನ್‌ ಹಾಗೂ ಆಸ್ಟ್ರೇಲಿಯಾ ತಂಡಗಳು ಇವೆ. ‘ಬಿ’ ಡಿವಿಷನ್‌ನ ‘ಎ’ ಗುಂಪಿನಲ್ಲಿ ಶ್ರೀಲಂಕಾ, ಭಾರತ, ಉಜ್ಬೆಕಿಸ್ತಾನ ತಂಡಗಳು ಸ್ಥಾನ ಪಡೆದಿದ್ದು ‘ಬಿ’ ಗುಂಪಿನಲ್ಲಿ ಲೆಬನಾನ್‌, ಸಿಂಗಪುರ, ಕಜಕಸ್ತಾನ್‌ ಮತ್ತು ಫಿಜಿ ತಂಡಗಳು ಇವೆ.

‘1965ರಿಂದ ಏಷ್ಯಾಕಪ್‌ ಬ್ಯಾಸ್ಕೆಟ್‌ಬಾಲ್‌ ನಡೆಯುತ್ತಿದೆ. ಹಿಂದೆ ಇದನ್ನು ಫಿಬಾ ಏಷ್ಯಾ ಚಾಂಪಿಯನ್‌ಷಿಪ್‌ ಎಂದು ಕರೆಯಲಾಗುತ್ತಿತ್ತು. ಬೆಸ ಸಂಖ್ಯೆಯ ವರ್ಷಗಳಲ್ಲಿ (2011, 2013, 2015 ಇತ್ಯಾದಿ) ಏಷ್ಯಾಕಪ್‌ ಆಯೋಜಿಸಲಾಗುತ್ತದೆ. ಕಳೆದ ಬಾರಿ ಚೀನಾದ ವುಹಾನ್‌ನಲ್ಲಿ ನಡೆದಿತ್ತು. ಅಂತಿಮ ಪಂದ್ಯದಲ್ಲಿ ಜಪಾನ್ ಎದುರು ಚೀನಾ ಸೋತಿತ್ತು’ ಎಂದು ಗೋವಿಂದರಾಜು ಹೇಳಿದರು.

‘1970ರಲ್ಲಿ ಮೊದಲ ಬಾರಿ ಭಾರತ ಏಷ್ಯಾಕಪ್‌ನಲ್ಲಿ ಪಾಲ್ಗೊಂಡಿದ್ದು ಈ ವರೆಗೆ 17 ಬಾರಿ ಸ್ಪರ್ಧಿಸಿದೆ. ಭಾರತದ ಅತ್ಯುತ್ತಮ ಫಲಿತಾಂಶ 2013ರಲ್ಲಿ ಬಂದಿತ್ತು. ಆಗ ತಂಡ ಐದನೇ ಸ್ಥಾನ ಗಳಿಸಿತ್ತು’ ಎಂದು ಅವರು ವಿವರಿಸಿದರು.

₹ 100ರಿಂದ ₹ 2000ದ ವರೆಗೆ ಟಿಕೆಟ್ ದರ ನಿಗದಿ ಮಾಡಲಾಗಿದೆ. ಜುಲೈ 11ರಿಂದ ಆನ್‌ಲೈನ್‌ನಲ್ಲಿ (www.ticketgenie.in/fiba-tickets) ಟಿಕೆಟ್‌ ಮಾರಾಟ ಆರಂಭವಾಗಿದೆ. ಜುಲೈ 22ರಿಂದ ಕಂಠೀರವ ಕ್ರೀಡಾಂಗಣದಲ್ಲೂ ಟಿಕೆಟ್‌ಗಳು ಲಭ್ಯ’ ಎಂದು ಅವರು ತಿಳಿಸಿದರು.

ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಚಂದರ್‌ಮುಖಿ ಶರ್ಮಾ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ್ ಅಗರವಾಲ್‌ ಇದ್ದರು.

ಬ್ಯಾಸ್ಕೆಟ್‌ಬಾಲ್ ಅಂಗಳ ನವೀಕರಣ
ಮಹಿಳೆಯರ ಏಷ್ಯಾಕಪ್‌ ಬ್ಯಾಸ್ಕೆಟ್‌ಬಾಲ್‌ ನಡೆಯಲಿರುವ ಕಂಠೀರವ ಮತ್ತು ಕೋರಮಂಗಲ ಕ್ರೀಡಾಂಗಣಗಳ ನವೀಕರಣ ಕಾರ್ಯ ನಡೆದಿದ್ದು ಆಟಕ್ಕೆ ಯೋಗ್ಯ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗಿದೆ ಎಂದು ಗೋವಿಂದರಾಜು ತಿಳಿಸಿದರು.

‘ಸರ್ಕಾರ ಮತ್ತು ಮಹಾನಗರ ಪಾಲಿಕೆಯಿಂದ ಉತ್ತಮ ಸಹಕಾರ ದೊರಕಿದ ಕಾರಣ ಕ್ರೀಡಾಂಗಣಗಳ ಒಳಗೆ ಮತ್ತು ಹೊರಗೆ ಮೂಲಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿದೆ. ಕಂಠೀರವ ಕ್ರೀಡಾಂಗಣವನ್ನು ಆರು ತಿಂಗಳ ಮೊದಲೇ ನವೀಕರಿಸಿದ್ದು ಕೋರಮಂಗಲ ಕ್ರೀಡಾಂಗಣದ ಅಭಿವೃದ್ಧಿ ಕೆಲಸ ಈಗಷ್ಟೇ ಮುಗಿದಿದೆ.

ಕಂಠೀರವ ಕ್ರೀಡಾಂಗಣದಲ್ಲಿ 3,700 ಮಂದಿ ಕುಳಿತುಕೊಳ್ಳುವ ಆಸನ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ಕೋರಮಂಗಲ ಕ್ರೀಡಾಂಗಣದಲ್ಲಿ 2400 ಮಂದಿ ಕುಳಿತು ಪಂದ್ಯ ವೀಕ್ಷಿಸಬಹುದು. ಅಕ್ಟೋಬರ್‌ 22ರಿಂದ 28ರ ವರೆಗೆ ಏಷ್ಯಾದ 16 ವರ್ಷದೊಳಗಿನವರ ಮಹಿಳೆಯರ ಟೂರ್ನಿ ಕೂಡ ಬೆಂಗಳೂರಿನಲ್ಲಿ ನಡೆಯಲಿದೆ’ ಎಂದೂ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT