ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದ ಹಿಂದೆ ಪೂರ್ಣಗೊಂಡ ಕಾಲುವೆ ಒಡೆದರು

Last Updated 17 ಜುಲೈ 2017, 19:38 IST
ಅಕ್ಷರ ಗಾತ್ರ

ಬೆಂಗಳೂರು: ಕೋರಮಂಗಲದ ಶ್ರೀನಿವಾಗಿಲು ಮುಖ್ಯರಸ್ತೆಯ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ಬಳಿ ₹1.20 ಕೋಟಿ ವೆಚ್ಚದಲ್ಲಿ ಇತ್ತೀಚೆಗೆ ನಿರ್ಮಿಸಿದ್ದ ಮಳೆನೀರು ಕಾಲುವೆಯನ್ನು ಈಗ ಒಡೆಯಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕಾಲುವೆಯನ್ನು ಒಡೆಯುವ ಪರಿಸ್ಥಿತಿ ಬಂದಿದೆ ಎಂದು ಸ್ಥಳೀಯರು ದೂರಿದ್ದಾರೆ.

ಪಾಸ್‌ಪೋರ್ಟ್‌ ಕಚೇರಿಯಿಂದ ಕ್ರೀಡಾ ಸಂಕೀರ್ಣ ಪಕ್ಕದ ವಾಣಿಜ್ಯ ತೆರಿಗೆ ಕಚೇರಿಯವರೆಗೆ ಮಳೆನೀರು ಕಾಲುವೆ ಇದೆ. ಇದರ ಒಂದು ಬದಿಗೆ ಆಡು
ಗೋಡಿ ವಾರ್ಡ್‌ ವ್ಯಾಪ್ತಿಯ ರಾಜೇಂದ್ರ ನಗರ, ಇನ್ನೊಂದು ಬದಿಗೆ ಈಜಿಪುರ ವಾರ್ಡ್‌ ಬರುತ್ತದೆ.

ಕೋರಮಂಗಲ 8ನೇ ಬ್ಲಾಕ್‌ ಹಾಗೂ ರಾಜೇಂದ್ರ ನಗರದ ಕಡೆಯಿಂದ ಬರುವ ನೀರು ಈ ಕಾಲುವೆಗೆ ಸೇರುತ್ತದೆ. ಈ ಕಾಲುವೆಯು ಆಡುಗೋಡಿಯ ಕಡೆ
ಯಿಂದ ಬರುವ ರಾಜಕಾಲುವೆಗೆ ಸೇರುತ್ತದೆ. ಆದರೆ, ಮಳೆನೀರು ಕಾಲುವೆ, ಅದರ ಸಂಪರ್ಕ ಕಾಲುವೆಗಳು ತುಂಬಾ ಹಳೆಯವು. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ, ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಕಾಂಕ್ರೀಟ್‌ ಕಾಲುವೆ ನಿರ್ಮಿಸಲು ಬಿಬಿಎಂಪಿ ಮುಂದಾಗಿತ್ತು.

ಕಾಲುವೆ ಕಾಮಗಾರಿಯ ಗುತ್ತಿಗೆಯನ್ನು ರವೀಂದ್ರ ಎಂಬುವರಿಗೆ ನೀಡಲಾಗಿತ್ತು.  ಮೂರು ತಿಂಗಳ ಹಿಂದೆ ಕಾಮಗಾರಿ ಆರಂಭಗೊಂಡಿತ್ತು. 10 ಅಡಿ ಅಗಲ ಹಾಗೂ 5 ಅಡಿ ಆಳದ ಕಾಲುವೆಯನ್ನು ನಿರ್ಮಿಸಿ, ಅದನ್ನು ಮುಚ್ಚಲಾಗಿತ್ತು. ಆದರೆ, ಕಾಲುವೆಯು ರಸ್ತೆಗಿಂತ ಮೂರು ಅಡಿ ಕೆಳ ಭಾಗದಲ್ಲಿ ನಿರ್ಮಿಸಲಾಗಿತ್ತು. ವಾರದ ಹಿಂದೆ ಕಾಮಗಾರಿ ಪೂರ್ಣಗೊಂಡಿತ್ತು. ಈಗ ಅದನ್ನು ಎತ್ತರಿಸಲು ಉದ್ದೇಶಿಸಲಾಗಿದೆ.

ಸಚಿವರಿಂದ ಅಧಿಕಾರಿಗಳ ತರಾಟೆ: ಕಾಮಗಾರಿಯ ಮೇಲ್ವಿಚಾರಣೆ ನಡೆಸದ ಮಳೆನೀರು ಕಾಲುವೆಯ ಎಂಜಿನಿಯರ್‌
ಗಳನ್ನು ಬಿಟಿಎಂ ಲೇಔಟ್‌ ಕ್ಷೇತ್ರದ ಶಾಸಕರೂ ಆಗಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘ರಸ್ತೆಗಿಂತ ಕೆಳಭಾಗದಲ್ಲಿ ಕಾಲುವೆಯನ್ನು ನಿರ್ಮಿಸಲಾಗಿತ್ತು.  ನೀರು ಸರಾಗವಾಗಿ ಹರಿಯುತ್ತಿರಲಿಲ್ಲ. ಪಾದಚಾರಿಗಳು ಓಡಾಡಲೂ ಕಷ್ಟವಾಗಿತ್ತು. ಇದನ್ನು ಒಡೆದು, ರಸ್ತೆಗೆ ಸಮನಾಗಿ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಆದರೆ, ಕಾಲುವೆಯನ್ನು ಪೂರ್ಣ ಪ್ರಮಾಣದಲ್ಲಿ ಒಡೆಯುವುದಿಲ್ಲ. ಮುಚ್ಚಿರುವ ಭಾಗವನ್ನು ಮಾತ್ರ ತೆಗೆಯಲಾಗುತ್ತದೆ’ ಎಂದು ರಾಮಲಿಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಎಂಜಿನಿಯರ್‌ಗಳಿಗೆ ತಲೆ ಇಲ್ಲ. ಅವರ ಬೇಜವಾಬ್ದಾರಿಯಿಂದ ಈ ಕಾಮಗಾರಿ ನಡೆದಿದೆ. ಅವರನ್ನು ಅಮಾನತು ಮಾಡುವಂತೆ ಸೂಚಿಸಿದ್ದೆ. ಆದರೆ, ಮತ್ತೊಮ್ಮೆ ಇಂತಹ ತಪ್ಪುಗಳನ್ನು ಮಾಡುವುದಿಲ್ಲ ಎಂದು ಅವರು ಕ್ಷಮೆ ಕೋರಿದ್ದಾರೆ’ ಎಂದರು.

‘ರಾಜೇಂದ್ರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಗ್ರಹಿಸಿದ ಕಸವನ್ನು ಲಾರಿಗಳಿಗೆ ತುಂಬುವ ಸ್ಥಳವೂ ಪಾಸ್‌ಪೋರ್ಟ್‌ ಕಚೇರಿ ಬಳಿ ಇದೆ. ಕಸ ತುಂಬುವ ವೇಳೆ ಲಾರಿಗಳು ರಸ್ತೆಯಲ್ಲಿ ನಿಲ್ಲುತ್ತಿದ್ದರಿಂದ ವಾಹನ ಸವಾರರಿಗೂ ತೊಂದರೆ ಉಂಟಾಗುತ್ತಿತ್ತು. ಮಳೆನೀರು ಕಾಲುವೆಯನ್ನು ಎತ್ತರಿಸಿದರೆ, ಅದರ ಮೇಲೆ ಲಾರಿಗಳನ್ನು ನಿಲ್ಲಿಸಬಹುದು. ಇದರಿಂದ ಸಂಚಾರ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದು ಎಂದು ಸ್ಥಳೀಯರು ಮನವಿ ಮಾಡಿದ್ದರು’ ಎಂದು  ಈಜಿಪುರ ವಾರ್ಡ್‌ ಸದಸ್ಯ ಟಿ.ರಾಮಚಂದ್ರ ತಿಳಿಸಿದರು.

‘ಕಾಲುವೆಯನ್ನು ನಿರ್ಮಿಸಲು 2–3 ತಿಂಗಳು ತೆಗೆದುಕೊಂಡಿದ್ದರು. ಕಾಲುವೆಯಲ್ಲಿ ತುಂಬಿದ್ದ ಹೂಳು, ಕಲ್ಲುಗಳನ್ನು ರಸ್ತೆಗೆ ಸುರಿಯಲಾಗಿತ್ತು. ಇದರಿಂದ ವಾಹನ ಸವಾರರಿಗೆ ತೊಂದರೆ ಅನುಭವಿಸಿದ್ದರು. ಈಗ ನಿರ್ಮಿಸಿರುವ ಕಾಲುವೆಯನ್ನು ಒಡೆಯುತ್ತಿದ್ದಾರೆ. ಈ ಮೂಲಕ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿ ಪೆರುಮಾಳ್‌ ದೂರಿದರು.

‘ಅಧಿಕಾರಿಗಳ ವೈಫಲ್ಯ’
‘ಕಾರ್ಖಾನೆಗಳಲ್ಲಿ ಕಟ್ಟಡದ ಭಾಗಗಳನ್ನು ನಿರ್ಮಿಸಿ, ಅವುಗಳನ್ನು ಬೇರೆಡೆ ಸಾಗಿಸಿ ಅಳವಡಿಸುವಂತಹ ಸುಧಾರಿತ ತಂತ್ರಜ್ಞಾನ ಈಗ ಲಭ್ಯ ಇದೆ. ಆದರೆ, ಸಣ್ಣ ಕಾಲುವೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಅಧಿಕಾರಿಗಳ ವೈಫಲ್ಯವನ್ನು ಎತ್ತಿ ತೋರಿಸುತ್ತದೆ’ ಎಂದು ಅಂಬೇಡ್ಕರ್‌ ನಗರದ ನಿವಾಸಿ ವೆಂಕಟೇಶ್‌ ದೂರಿದರು.

‘ಶೀಟು, ಪರದೆ ಮುಚ್ಚಿ ಕಾಮಗಾರಿ’
‘ಕಾಲುವೆಯನ್ನು ಒಡೆಯುವ ವಿಷಯ ಸಾರ್ವಜನಿಕರಿಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಶೀಟು ಹಾಗೂ ಪರದೆಗಳನ್ನು ಕಟ್ಟಿದ್ದಾರೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಅಧಿಕಾರಿಗಳು ಭಾವಿಸಿದ್ದಾರೆ’ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT