ಶನಿವಾರ, ಡಿಸೆಂಬರ್ 7, 2019
16 °C

ಪೊಲೀಸರಲ್ಲಿ ಆತ್ಮಸ್ಥೈರ್ಯ ತುಂಬಲು ಸೈಕಲ್ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸರಲ್ಲಿ ಆತ್ಮಸ್ಥೈರ್ಯ ತುಂಬಲು ಸೈಕಲ್ ಜಾಥಾ

ಕೊಪ್ಪಳ: ಪೊಲೀಸರು ಆತ್ಮಸ್ಥೈರ್ಯದ ಕೊರತೆಯಿಂದ ಆತ್ಮಹತ್ಯೆ, ಮಾನಸಿಕ ಹಿಂಸೆಗೆ ಒಳಗಾಗುತ್ತಿದ್ದಾರೆ ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ರಾವ್ ಹೇಳಿದರು.

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ‘ಕರ್ನಾಟಕ ದರ್ಶನ’ ಎಂಬ ಶೀರ್ಷಿಕೆ ಅಡಿಯಲ್ಲಿ ನಡೆಯುತ್ತಿರುವ 6ನೇ ದಿನದ ರಾಜ್ಯ ಸೈಕಲ್‌ ಜಾಥಾ ಕುರಿತ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪೊಲೀಸರನ್ನು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಂತೆ  ಕ್ರಿಯಾಶೀಲರನ್ನಾಗಿ ಮಾಡಲು, ಆತ್ಮಸ್ಥೈರ್ಯ  ತುಂಬಲು ಜಾಥಾ ಹಮ್ಮಿಕೊಳ್ಳಲಾಗಿದೆ.  ಜಾಥಾ ವೇಳೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದೇವೆ ಮತ್ತು ಹಳ್ಳಿಗಳಲ್ಲಿ ಇರುವ ಶಾಲೆಗಳಿಗೆ ತೆರಳಿ ಮಕ್ಕಳೊಂದಿಗೆ ಸಂವಾದ ಮಾಡುತ್ತಿದ್ದೇವೆ. ರಾಜ್ಯದಲ್ಲಿ 14 ಕೆಎಸ್‌ಆರ್‌ಪಿ ಬಟಾಲಿಯನ್‌ಗಳಿವೆ. ಅವುಗಳಲ್ಲಿ ಪ್ರತಿ ಬಟಾಲಿಯನ್‌ನಿಂದ ಮೂರು ಜನ ಪೊಲೀಸರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಆರಂಭದ ಮೂರು ದಿನ ಎದುರುಗಾಳಿ ಇತ್ತು. ಆದ್ದರಿಂದ ಹೆಚ್ಚು ದೂರ ಸಂಚರಿಸಲು ಆಗಲಿಲ್ಲ. ಆದರೆ, ಈಗ ಅಷ್ಟು ಗಾಳಿ ಇಲ್ಲ. ಅದಕ್ಕಾಗಿ  ಗದಗದಿಂದ ಕೊಪ್ಪಳವನ್ನು ಕಡಿಮೆ ಸಮಯದಲ್ಲಿ ತಲುಪಿದ್ದೇವೆ’ ಎಂದರು.

ಸೈಕಲ್‌ ಸವಾರ ವಿಜಯಕುಮಾರ ಮಾತನಾಡಿ, ‘ಈ ಜಾಥಾದಿಂದ ಬೇರೆ ಬೇರೆ ಜನರ ಪರಿಚಯ ಆಯಿತು. ಅಲ್ಲದೆ, ಹಲವು ಸ್ಥಳಗಳನ್ನು ನೋಡಲು ಸಾಧ್ಯವಾಗಿದೆ. ಈ ರೀತಿಯ ಸೈಕಲ್‌ ಸವಾರಿಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.

ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವೂ ಇದೆ ’ ಎಂದು ಹೇಳಿದರು. ಹೆಡ್‌ಕಾನ್‌ಸ್ಟೆಬಲ್ ಮುದುಕಪ್ಪ ಬೀರಲದಿನ್ನಿ ಅವರನ್ನು ಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಐ.ಆರ್‌.ಪಿ ಯ ಕಮಾಡೆಂಟ್‌ ಡಾ.ರಾಮಕೃಷ್ಣ, ಗುಪ್ತಚರ ವಿಭಾಗದ ಎಸ್‌ಪಿ ಅಯ್ಯಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅನೂಪ್‌ಶೆಟ್ಟಿ, ವಿಶೇಷ ಪೊಲೀಸ್‌ ಠಾಣೆಯ ಸಿಪಿಐ ರುದ್ರೇಶ ಉಜ್ಜಿನಕೊಪ್ಪ, ಪೊಲೀಸ್‌ ಇನ್‌ಸ್ಪೆಕ್ಟರ್‌ ರವಿ ಉಕ್ಕುಂದ ಇದ್ದರು.

ಸೈಕಲ್‌ ಜಾಥಾಗೆ ಅದ್ಧೂರಿ ಸ್ವಾಗತ

ಮುನಿರಾಬಾದ್‌: ಬೀದರ್‌ನಿಂದ ಬೆಂಗಳೂರಿಗೆ ಹೊರಟ ಎಡಿಜಿಪಿ ಭಾಸ್ಕರ್‌ರಾವ್‌ ನೇತೃತ್ವದ ‘ಕೆಎಸ್‌ಆರ್‌ಪಿ ಕರ್ನಾಟಕ ದರ್ಶನ’ ಸೈಕಲ್‌ ಜಾಥಾ ತಂಡ ಇಲ್ಲಿನ ಭಾರತೀಯ ರಿಸರ್ವ ಬೆಟಾಲಿಯನ್‌ಗೆ (ಐಆರ್‌ಬಿ) ಸೋಮವಾರ ಬಂದಾಗ ಅದ್ಧೂರಿ ಸ್ವಾಗತ ಕೋರಲಾಯಿತು.

ಐಆರ್‌ಬಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಪಿ ಪೊಲೀಸ್‌ ತರಬೇತಿ ಶಾಲೆಯ ಪ್ರಾಚಾರ್ಯ ಡಾ.ರಾಮಕೃಷ್ಣ ಮುದ್ದೇಪಾಲ್‌ ಜಾಥಾದ ನೇತೃತ್ವ ವಹಿಸಿರುವ ಭಾಸ್ಕರ್‌ರಾವ್‌ ಅವರನ್ನು ಸನ್ಮಾನಿಸಿದರು.‘ಜಾಥಾ ಇಲ್ಲಿಂದ ಹಂಪಿ, ಶಿಗ್ಗಾವಿ, ಶಿವಮೊಗ್ಗ, ಹಾಸನ ಮತ್ತು ಮೈಸೂರು ಮೂಲಕ ಜು 25ರಂದು ವಿಧಾನಸೌಧ ತಲುಪಲಿದೆ.   ಎಲ್ಲರೂ ಧೈರ್ಯ ಪ್ರದರ್ಶಿಸುವ ಮೂಲಕ ಯಶಸ್ಸು ಪಡೆಯಬಹುದು. ಅಧಿಕಾರಿ ಮತ್ತು ಸಿಬ್ಬಂದಿಗೆ ಆತ್ಮಸ್ಥೈರ್ಯ, ಚೈತನ್ಯ ತುಂಬುವ ಉದ್ದೇಶವೂ ಜಾಥಾದ್ದಾಗಿದೆ’ ಎಂದು ಹೇಳಿದರು. ಇಂಟೆಲಿಜೆನ್ಸ್‌ ವಿಭಾಗದ ಅಯ್ಯಪ್ಪ, ಕ್ರೀಡಾಧಿಕಾರಿ ಸಮಂತ್‌, ಉಪ ಕಮ್ಯಾಂಡೆಂಟ್‌ ವಿ.ಬಿ.ಬೆಲ್ಲದ ಮತ್ತು ಐ.ಜಿ.ಸುಬ್ಬಯ್ಯ ಇದ್ದರು.

* * 

ಪೊಲೀಸರು ಆತ್ಮಸ್ಥೈರ್ಯದ ಕೊರತೆಯಿಂದ ಆತ್ಮಹತ್ಯೆ, ಮಾನಸಿಕ ಒತ್ತಡಕ್ಕೆ ಒಳಾಗುತ್ತಿದ್ದಾರೆ. ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಜಾಥಾ ಹಮ್ಮಿಕೊಳ್ಳಲಾಗಿದೆ

ಭಾಸ್ಕರ್‌ರಾವ್‌

ಕೆಎಸ್ಆರ್‌ಪಿ ಎಡಿಜಿಪಿ

ಪ್ರತಿಕ್ರಿಯಿಸಿ (+)