ಶನಿವಾರ, ಡಿಸೆಂಬರ್ 7, 2019
24 °C

ಮತೀಯ ದ್ವೇಷ: 10 ವರ್ಷದಲ್ಲಿ 9 ಬಲಿ

ವಿ.ಎಸ್. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಮತೀಯ ದ್ವೇಷ: 10 ವರ್ಷದಲ್ಲಿ 9 ಬಲಿ

ಮಂಗಳೂರು: ಪೊಲೀಸ್‌ ದಾಖಲೆಗಳ ಪ್ರಕಾರ ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯನ್ನು ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತು ವರ್ಷಗಳ ಅವಧಿಯಲ್ಲಿ ಮತೀಯ ದ್ವೇಷದಿಂದ ಒಂಬತ್ತು ಕೊಲೆಗಳು ನಡೆದಿವೆ. 

ಇವೆಲ್ಲವೂ ಬಂಟ್ವಾಳ ತಾಲ್ಲೂಕಿನಲ್ಲಿಯೇ ನಡೆದ ಕೊಲೆಗಳು. ಇದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವಿಭಾಗದಲ್ಲಿ ದಾಖಲಾಗಿರುವ ಮತೀಯ ದ್ವೇಷದ ಪ್ರಕರಣಗಳ ಮಾಹಿತಿಯನ್ನು ಅವಲೋಕಿಸಿದಾಗ ಕಣ್ಣಿಗೆ ರಾಚುವ ಸತ್ಯ. ಬಂಟ್ವಾಳ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಬಂಟ್ವಾಳ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಐದು ಕೊಲೆಗಳು ಮತೀಯ ದ್ವೇಷದಿಂದ ನಡೆದಿವೆ. ಪಕ್ಕದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಕೊಲೆ ಪ್ರಕರಣಗಳು ದಾಖಲಾಗಿವೆ. ಇದೇ ತಾಲ್ಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಕೊಲೆ ಮತೀಯ ದ್ವೇಷದಿಂದ ನಡೆದಿದೆ.

ಬಂಟ್ವಾಳ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2008, 2014 ಮತ್ತು 2015ರಲ್ಲಿ ತಲಾ ಒಬ್ಬರು ಮತೀಯ ದ್ವೇಷಕ್ಕೆ ಬಲಿಯಾಗಿದ್ದಾರೆ. ಈ ವರ್ಷ ಒಂದು ತಿಂಗಳ ಅವಧಿಯಲ್ಲೇ ಎರಡು ಕೊಲೆಗಳು ನಡೆದಿವೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2009, 2011 ಮತ್ತು 2015ರಲ್ಲಿ ತಲಾ ಒಬ್ಬರು ಕೋಮು ದ್ವೇಷದಲ್ಲಿ ಹತರಾಗಿದ್ದಾರೆ. ವಿಟ್ಲ ಪೊಲೀಸ್‌ ಠಾಣೆಯಲ್ಲಿ 2017ರಲ್ಲಿ ಒಬ್ಬ ವ್ಯಕ್ತಿ ಕೋಮು ಗೂಂಡಾಗಳಿಗೆ ಬಲಿಯಾಗಿದ್ದಾರೆ ಎಂಬುದನ್ನು ಪೊಲೀಸ್‌ ದಾಖಲೆಗಳು ಹೇಳುತ್ತವೆ.

ಹತ್ತು ವರ್ಷಗಳಲ್ಲಿ ಮತೀಯ ದ್ವೇಷದಿಂದ ನಡೆದಿರುವ ಕೊಲೆಯತ್ನ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಒಟ್ಟು 39 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 25 ಪ್ರಕರಣಗಳು ಬಂಟ್ವಾಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ನಡೆದ ಕೃತ್ಯಗಳಿಗೆ ಸಂಬಂಧಿಸಿದವು. ಬಂಟ್ವಾಳ ನಗರ ಠಾಣೆಯಲ್ಲಿ 18 ಕೊಲೆಯತ್ನ ಪ್ರಕರಣಗಳು ದಾಖಲಾಗಿದ್ದರೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಮೂರು ಮತ್ತು ವಿಟ್ಲ ಪೊಲೀಸ್‌ ಠಾಣೆಯಲ್ಲಿ ನಾಲ್ಕು ಕೊಲೆಯತ್ನ ಪ್ರಕರಣಗಳು ಈ ಅವಧಿಯಲ್ಲಿ ದಾಖಲಾಗಿವೆ. ಇದೇ ಅವಧಿಯಲ್ಲಿ ಉಪ್ಪಿನಂಗಡಿಯಲ್ಲಿ ಠಾಣೆಯಲ್ಲಿ ಏಳು, ಪುತ್ತೂರು ನಗರ ಠಾಣೆಯಲ್ಲಿ ಮೂರು, ಕಡಬ ಠಾಣೆಯಲ್ಲಿ ಎರಡು, ಬೆಳ್ತಂಗಡಿ ಮತ್ತು ಪೂಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.

ಪ್ರತಿ ಬಾರಿಯೂ ಕೊಲೆ, ಕೊಲೆಯತ್ನ ನಡೆದಾಗ ಆ ಪ್ರದೇಶದಲ್ಲಿ ಮತೀಯ ದ್ವೇಷದ ಜ್ವಾಲೆ ಹೊತ್ತಿ ಉರಿದಿದೆ. ತಿಂಗಳುಗಟ್ಟಲೆ ಆ ಪ್ರದೇಶಗಳು ಗಲಭೆಯ ತಾಣವಾಗಿ ಪರಿವರ್ತನೆಯಾಗುತ್ತಿವೆ ಎಂಬುದನ್ನು ಅಪರಾಧ ದಾಖಲೆಗಳು ಸಾರಿ ಹೇಳುತ್ತಿವೆ. ಮತೀಯ ದ್ವೇಷದ ಕಿಡಿ ಹೊತ್ತಿದ ಸಂದರ್ಭದಲ್ಲಿ ಇಲ್ಲಿನ ಪೊಲೀಸ್‌ ಠಾಣೆಗಳಲ್ಲಿ ಕೆಲವೇ ದಿನಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಇದಕ್ಕೆ ನಿದರ್ಶನ.

ಅರ್ಧಕ್ಕಿಂತ ಹೆಚ್ಚು ಪ್ರಕರಣ: 2007ರಿಂದ ಮಂಗಳವಾರದವರೆಗೆ (2017ರ ಜುಲೈ 18) ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮತೀಯ ದ್ವೇಷದಲ್ಲಿ ನಡೆದಿರುವ ಕೃತ್ಯಗಳಿಗೆ ಸಂಬಂಧಿಸಿದಂತೆ 279 ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬಂಟ್ವಾಳ ತಾಲ್ಲೂಕಿನಲ್ಲೇ ನಡೆದಿವೆ. ಆಗಾಗ ಮತೀಯ ದ್ವೇಷದ ಕಿಚ್ಚು ಹೊತ್ತಿಕೊಳ್ಳುವ ಕಲ್ಲಡ್ಕದಿಂದ ಫರಂಗಿಪೇಟೆವರೆಗಿನ ಪ್ರದೇಶದ ವ್ಯಾಪ್ತಿಯನ್ನು ಹೊಂದಿರುವ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಹತ್ತು ವರ್ಷಗಳ ಅವಧಿಯಲ್ಲಿ ಮತೀಯ ದ್ವೇಷದಲ್ಲಿ ನಡೆದ ಕೃತ್ಯಗಳಿಗೆ ಸಂಬಂಧಿಸಿದಂತೆ ನಡೆದ ಪ್ರಕರಣಗಳ ಸಂಖ್ಯೆ 113. ನೆರೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಇದೇ ಅವಧಿಯಲ್ಲಿ 19 ಪ್ರಕರಣಗಳು ದಾಖಲಾಗಿದ್ದರೆ, ವಿಟ್ಲ ಪೊಲೀಸ್‌ ಠಾಣೆಯಲ್ಲಿ 10 ಪ್ರಕರಣ ದಾಖಲಾಗಿವೆ.

ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಮತೀಯ ಗಲಭೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹತ್ತು ವರ್ಷಗಳ ಅವಧಿಯಲ್ಲಿ 63 ಪ್ರಕರಣಗಳು ದಾಖಲಾಗಿವೆ. ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ 20 ಪ್ರಕರಣಗಳು ದಾಖಲಾಗಿವೆ. ಬಂಟ್ವಾಳ ನಗರ, ಗ್ರಾಮಾಂತರ, ವಿಟ್ಲ, ಉಪ್ಪಿನಂಗಡಿ ಮತ್ತು ಪುತ್ತೂರು ನಗರ ಪೊಲೀಸ್‌ ಠಾಣೆಗಳ ವ್ಯಾಪ್ತಿಯ  ಪ್ರದೇಶಗಳು ಇತ್ತೀಚಿನ ವರ್ಷಗಳಲ್ಲಿ ಮತೀಯ ಸೂಕ್ಷ್ಮ ಪ್ರದೇಶಗಳಾಗಿ ಪರಿವರ್ತನೆಯಾಗಿವೆ ಎಂಬುದು ಇದರಿಂದ ವೇದ್ಯವಾಗುತ್ತದೆ.

ಆತಂಕಕಾರಿ ಬೆಳವಣಿಗೆ

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಿತರೇ ಹೆಚ್ಚಿನ ಸಂಖ್ಯೆಯಲ್ಲಿ ಮತೀಯ ದ್ವೇಷದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಾರೆ. ಇಂತಹ ಕೃತ್ಯಗಳಿಂದ ಯಾರಿಗೂ ಲಾಭವಾಗುವುದಿಲ್ಲ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು ಅದರ ಬೆಲೆ ತೆರುತ್ತಲೇ ಇದ್ದಾರೆ. ಆದರೆ, ಒಮ್ಮೆ ಮತೀಯ ದ್ವೇಷದ ಹಿಂದೆ ಬಿದ್ದವರನ್ನು ನಿಯಂತ್ರಿಸುವುದು ಬಹಳ ಕಷ್ಟದ ಕೆಲಸ. ಯುವಕರು ಯಾರದ್ದೋ ಮಾತಿನಿಂದ ಪ್ರಚೋದನೆಗೆ ಒಳಗಾಗಿ ಧರ್ಮದ ಹೆಸರಿನಲ್ಲಿ ಕೊಲೆ, ಹಲ್ಲೆ, ಗಲಭೆ ಮಾಡುತ್ತಾರೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಭವಿಷ್ಯ ಮಂಕಾಗುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎನ್ನುತ್ತಾರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅನುಭವವಿರುವ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು.(ಮುಂದುವರಿಯುವುದು)

ಪ್ರತಿಕ್ರಿಯಿಸಿ (+)