ಶುಕ್ರವಾರ, ಡಿಸೆಂಬರ್ 6, 2019
17 °C
ಡಿಕ್ವೆಲಾ–ಅಸೇಲಾ ಅವರ ಉತ್ತಮ ಜೊತೆಯಾಟ; ಪೆರೇರಾ ತಾಳ್ಮೆಯ ಆಟ

ಶ್ರೀಲಂಕಾಗೆ ದಾಖಲೆಯ ಗೆಲುವು

Published:
Updated:
ಶ್ರೀಲಂಕಾಗೆ ದಾಖಲೆಯ ಗೆಲುವು

ಕೊಲಂಬೊ: ಏಕದಿನ ಸರಣಿಯಲ್ಲಿ ಸೋತು ಟೀಕೆಗೆ ಗುರಿಯಾಗಿದ್ದ ಶ್ರೀಲಂಕಾ ತಂಡದ ಯುವ ಆಟಗಾರರು ತಮ್ಮ ನೈಜ ಸಾಮರ್ಥ್ಯವನ್ನು ಮೆರೆದರು.

ಜಿಂಬಾಬ್ವೆ ಎದುರಿನ ಏಕೈಕ ಟೆಸ್ಟ್‌ ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿದರು. ಪ್ರವಾಸಿ ತಂಡ ಮುಂದಿಟ್ಟ 388 ರನ್‌ಗಳ ಜಯದ ಗುರಿ ಬೆನ್ನತ್ತಿದ ಆತಿಥೇಯರು ಕೊನೆಯ ದಿನವಾದ ಮಂಗಳವಾರ 114.5ನೇ ಓವರ್‌ನಲ್ಲಿ ಗೆದ್ದರು.

ಇದು ತವರಿನಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಶ್ರೀಲಂಕಾ ಯಶಸ್ವಿಯಾಗಿ ಬೆನ್ನಟ್ಟಿದ ಅತಿದೊಡ್ಡ ಮೊತ್ತ. ಒಟ್ಟಾರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ ಬೆನ್ನತ್ತಿದ ಐದನೇ ಅತಿದೊಡ್ಡ ಮೊತ್ತ. ಇದೇ ಕ್ರೀಡಾಂಗಣದಲ್ಲಿ 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ 352 ರನ್‌ಗಳ ಗುರಿಯನ್ನು ಲಂಕಾ ಯಶಸ್ವಿಯಾಗಿ ಬೆನ್ನಟ್ಟಿತ್ತು.

ಹೊಸ ನಾಯಕ ದಿನೇಶ್‌ ಚಾಂದಿಮಲ್ ಅವರ ನೇತೃತ್ವದಲ್ಲಿ ಅಂಗಳಕ್ಕೆ ಇಳಿದ ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ 10 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಜಿಂಬಾಬ್ವೆ 377 ರನ್‌ ಗಳಿಸಿ ಸವಾಲಿನ ಗುರಿಯನ್ನು ಮುಂದಿಟ್ಟಿತ್ತು. ನಾಲ್ಕನೇ ದಿನದಾಟದ ಮುಕ್ತಾಯದ ವೇಳೆ ಲಂಕಾ 48 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 170 ರನ್ ಗಳಿಸಿತ್ತು. ಕುಶಾಲ್‌ ಮೆಂಡಿಸ್‌ ಮತ್ತು ಏಂಜಲೊ ಮ್ಯಾಥ್ಯೂಸ್‌ ಕ್ರೀಸ್‌ನಲ್ಲಿದ್ದರು.

ಇವರಿಬ್ಬರೂ ಮಂಗಳವಾರ ಮೊದಲ ಒಂದು ತಾಸಿನ ಒಳಗೆ ಪೆವಿಲಿಯನ್ ಸೇರಿದರು. 66 ರನ್‌ ಗಳಿಸಿದ ಮೆಂಡಿಸ್ ಮತ್ತು 25 ರನ್‌ ಗಳಿಸಿದ ಮ್ಯಾಥ್ಯೂಸ್ ನಾಯಕ ಗ್ರೇಮ್‌ ಕ್ರೀಮರ್‌ಗೆ ವಿಕೆಟ್ ಒಪ್ಪಿಸಿದರು. ಗೆಲುವಿಗೆ ಇನ್ನೂ 185 ರನ್ ಬೇಕಾಗಿದ್ದಾಗ ಪ್ರಮುಖ ಐದು ಮಂದಿ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡ ಶ್ರೀಲಂಕಾ ಸಂಕಷ್ಟಕ್ಕೆ ಸಿಲುಕಿತು.

ಈ ಸಂದರ್ಭದಲ್ಲಿ ಜೊತೆಗೂಡಿದ ನಿರೋಷನ್ ಡಿಕ್ವೆಲಾ ಮತ್ತು ಅಸೆಲಾ ಗುಣರತ್ನೆ ಜಿಂಬಾಬ್ವೆ ಆಡಿ ಇನಿಂಗ್ಸ್ ಕಟ್ಟಿದರು. ಮೊದಲ ಐದು ವಿಕೆಟ್‌ಗಳ ಪೈಕಿ ನಾಲ್ಕನ್ನು ತಮ್ಮದಾಗಿಸಿಕೊಂಡಿದ್ದ ಲೆಗ್‌ಬ್ರೇಕ್‌ ಬೌಲರ್‌ ಹಾಗೂ ನಾಯಕ ಕ್ರೀಮರ್‌ ಅವರೊಂದಿಗೆ ಎಡಗೈ ಸ್ಪಿನ್ನರ್‌ ಸೀನ್ ವಿಲಿಯಮ್ಸ್‌ ಮತ್ತು ಆಫ್‌ಸ್ಪಿನ್ನರ್‌ ಸಿಕಂದರ್ ರಾಜ ಪರಿಣಾಮಕಾರಿ ಬೌಲಿಂಗ್‌ ಮೂಲಕ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಆದರೆ ಅಮೋಘ ಜೊತೆಯಾಟಕ್ಕೆ ತಡೆ ಹಾಕಲು ಅವರಿಗೆ ಸಾಧ್ಯವಾಗಲಿಲ್ಲ.  ಡಿಕ್ವೆಲಾ ಮತ್ತು ಗುಣರತ್ನೆ ಆರನೇ ವಿಕೆಟ್‌ಗೆ 121 ರನ್‌ ಸೇರಿಸಿದರು. ವಿಲಿಯಮ್ಸ್‌ ಎಸೆತದಲ್ಲಿ ಡಿಕ್ವೇಲಾ (81; 118 ಎ, 6 ಬೌಂ) ಔಟಾದಾಗ ತಂಡದ ಜಯಕ್ಕೆ 64 ರನ್‌ಗಳು ಬೇಕಾಗಿದ್ದವು. ಹೀಗಾಗಿ ಆತಂಕ ಮುಂದುವರಿದಿತ್ತು. ಆದರೆ ಗುಣರತ್ನೆಗೆ ಜೊತೆಯಾದ ಎಂಟನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ದಿಲ್ರುವಾನ್ ಪೆರೇರಾ ಮುರಿಯದ ಏಳನೇ ವಿಕೆಟ್‌ಗೆ 67 ರನ್ ಸೇರಿಸಿ ತಂಡಕ್ಕೆ ಜಯ ತುಂದುಕೊಟ್ಟರು.

181 ಎಸೆತ ಎದುರಿಸಿದ ಗುಣರತ್ನೆ 80 ರನ್ ಗಳಿಸಿದರು. ಇದರಲ್ಲಿ ಆರು ಬೌಂಡರಿಗಳು ಸೇರಿದ್ದವು. ಪೆರೇರಾ 76 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 29 ರನ್‌ ಗಳಿಸಿದರು. ವಿಲಿಯಮ್ಸ್ ಎಸೆತವನ್ನು ಕವರ್‌ ಮೂಲಕ ಡ್ರೈವ್ ಮಾಡಿ ಬೌಂಡರಿಗೆ ಅಟ್ಟುವ ಮೂಲಕ ಪೆರೇರಾ ದಾಖಲೆ ಜಯದ ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌

ಜಿಂಬಾಬ್ವೆ, ಮೊದಲ ಇನಿಂಗ್ಸ್‌: 94.4 ಓವರ್‌ಗಳಲ್ಲಿ 356; ಶ್ರೀಲಂಕಾ: 102.3 ಓವರ್‌ಗಳಲ್ಲಿ 346; ಜಿಂಬಾಬ್ವೆ, ಎರಡನೇ ಇನಿಂಗ್ಸ್‌: 107.1 ಓವರ್‌ಗಳಲ್ಲಿ 377; ಶ್ರೀಲಂಕಾ: 114.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 391(ಕುಶಾಲ್‌ ಮೆಂಡಿಸ್‌ 66, ಏಂಜಲೊ ಮ್ಯಾಥ್ಯೂಸ್‌ 25, ನಿರೋಷನ್ ಡಿಕ್ವೇಲಾ 81, ಅಸೇಲಾ ಗುಣರತ್ನೆ ಔಟಾಗದೆ 80, ದಿಲ್ರುವಾನ್ ಪೆರೇರಾ ಔಟಾಗದೆ 29). ಫಲಿತಾಂಶ: ಏಕೈಕ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾಕ್ಕೆ ನಾಲ್ಕು ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ–ಅಸೇಲಾ ಗುಣರತ್ನೆ (ಶ್ರೀಲಂಕಾ), ಸರಣಿಯ ಉತ್ತಮ ಆಟಗಾರ–ರಂಗನಾ ಹೇರಾತ್‌ (ಶ್ರೀಲಂಕಾ).

ಪ್ರತಿಕ್ರಿಯಿಸಿ (+)