ಶುಕ್ರವಾರ, ಡಿಸೆಂಬರ್ 6, 2019
19 °C

ನಾಮಪತ್ರ ಸಲ್ಲಿಸಿದ ವೆಂಕಯ್ಯ, ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

ನಾಮಪತ್ರ ಸಲ್ಲಿಸಿದ ವೆಂಕಯ್ಯ, ಗಾಂಧಿ

ನವದೆಹಲಿ: ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುತ್ತಿರುವ ಎನ್‌ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಮತ್ತು 18 ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಅವರು, ಮಂಗಳವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೆ ಮಂಗಳವಾರ  ಕಡೆಯ ದಿನವಾಗಿತ್ತು. ಈ ಇಬ್ಬರಲ್ಲದೆ ಇನ್ನೂ 36 ಮಂದಿ ಮಂಗಳವಾರಕ್ಕೂ ಮೊದಲೇ ನಾಮಪತ್ರವನ್ನು ಸಲ್ಲಿಸಿದ್ದರು.

ಬೆಳಿಗ್ಗೆ ಸಂಸತ್‌ ಭವನದ ಗ್ರಂಥಾಲಯ ಕಟ್ಟಡದಲ್ಲಿ ಎನ್‌ಡಿಎ ನಾಯಕರು, ತಮ್ಮ ಅಭ್ಯರ್ಥಿ ವೆಂಕಯ್ಯ ನಾಯ್ಡು ಅವರ ಜತೆ ಸಭೆ ನಡೆಸಿದರು.

ಆನಂತರ ಅಲ್ಲಿಂದ ನಾಮಪತ್ರ ಸಲ್ಲಿಸಲು, ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಸಂಶೇರ್ ಷರೀಫ್ ಅವರ ಕಚೇರಿವರೆಗೆ ಕಾಲ್ನಡಿಗೆಯಲ್ಲಿ ತೆರಳಿದರು.

ವೆಂಕಯ್ಯ ಅವರ ಜತೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪಕ್ಷದ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ, ಸಚಿವೆ ಸುಷ್ಮಾ ಸ್ವರಾಜ್‌ ಇದ್ದರು.

ವೆಂಕಯ್ಯ ನಾಯ್ಡು ಅವರು ಸೋಮವಾರ ರಾತ್ರಿಯೇ, ನಗರಾಭಿವೃದ್ಧಿ ಖಾತೆ ಮತ್ತು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರ ಸ್ಥಾನಕ್ಕೆ ರಾಜೀನಾಮೆ  ನೀಡಿದ್ದಾರೆ. ಅಲ್ಲದೆ, ಬಿಜೆಪಿಯ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ನಾಮಪತ್ರ ಸಲ್ಲಿಸಲು ಬಂದ ಗೋಪಾಲಕೃಷ್ಣ ಗಾಂಧಿ ಅವರ ಜತೆ ಮಾಜಿ ಪ್ರಧಾನಿ ಮನಮೋಹನ ಸಿಂಗ್‌, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ,  ಜೆಡಿಯುನ ಶರದ್ ಯಾದವ್, ಸಿಪಿಎಂನ ಸೀತಾರಾಮ್‌ ಯೆಚೂರಿ, ಸಿಪಿಐನ ಡಿ.ರಾಜಾ, ಎನ್‌ಸಿಪಿಯ ತಾರೀಕ್ ಅನ್ವರ್, ಪ್ರಫುಲ್ ಪಟೇಲ್, ಎನ್‌ಸಿಯ ಫಾರೂಕ್ ಅಬ್ದುಲ್ಲಾ ಹಾಗೂ ಡಿಎಂಕೆಯ ಕನಿಮೊಳಿ ಇದ್ದರು. ಗಾಂಧಿ ಅವರು ಮತಯಾಚನೆಗಾಗಿ ಅಂಚೆ ಕಾರ್ಡ್‌ಗಳ ಮೊರೆ ಹೋಗಲಿದ್ದಾರೆ.

‘ಹುದ್ದೆಗೆ ನ್ಯಾಯ ಸಲ್ಲಿಸುತ್ತೇನೆ’

‘ಉಪರಾಷ್ಟ್ರಪತಿ ಹುದ್ದೆಯ ಜವಾಬ್ದಾರಿಗಳೇ ಬೇರೆ. ಅದಕ್ಕೆ ನಾನು ನ್ಯಾಯ ಸಲ್ಲಿಸುತ್ತೇನೆ ಎಂಬ ನಂಬಿಕೆ ನನಗಿದೆ’ ಎಂದು ವೆಂಕಯ್ಯ ನಾಯ್ಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ‘ಸಣ್ಣ ವಯಸ್ಸಿನಲ್ಲೇ ನಾನು ಅಮ್ಮನನ್ನು ಕಳೆದುಕೊಂಡೆ. ಅಮ್ಮನ ಸ್ಥಾನದಲ್ಲಿ ನಿಂತು ಪಕ್ಷ ನನ್ನನ್ನು ಬೆಳೆಸಿತು. ಅದನ್ನು ಈಗ ಬಿಡಬೇಕಾದ ಪರಿಸ್ಥಿತಿ, ತೀರಾ ನೋವು ತರುತ್ತಿದೆ’ ಎಂದು ಅವರು ಭಾವುಕರಾದರು.

‘ಈಗ ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ’ ಎಂದೂ ಅವರು ಹೇಳಿದ್ದಾರೆ.

**

ಈಗ ಸಂಸತ್ತಿನ ಎರಡೂ ಸದನಗಳಲ್ಲಿ ಅಧಿವೇಶನ ನಡೆಯುತ್ತಿರುವ ಕಾರಣ ನಾನು ಚುನಾವಣಾ ಪ್ರಚಾರ ಮತ್ತು ಮತಯಾಚನೆ ನಡೆಸುವುದಿಲ್ಲ

-ವೆಂಕಯ್ಯ ನಾಯ್ಡು

ನಾನು ಯಾವ ಪಕ್ಷವನ್ನೂ ಪ್ರತಿನಿಧಿಸುತ್ತಿಲ್ಲ. ವಿರುದ್ಧ ತೀರಗಳಲ್ಲಿ ಇರುವ ಜನರು ಮತ್ತು ರಾಜಕಾರಣಿಗಳ ಮಧ್ಯೆ ಸೇತುವೆಯಾಗಲು ಬಯಸುತ್ತೇನೆ

-ಗೋಪಾಲಕೃಷ್ಣ ಗಾಂಧಿ

ಪ್ರತಿಕ್ರಿಯಿಸಿ (+)