ಭಾನುವಾರ, ಡಿಸೆಂಬರ್ 15, 2019
23 °C

ಖಾಸಗಿತನ ಮೂಲಭೂತ ಹಕ್ಕೇ? : ಸುಪ್ರೀಂ ಕೋರ್ಟ್‌ನಲ್ಲಿ ಇಂದಿನಿಂದ ವಿಚಾರಣೆ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ಖಾಸಗಿತನ ಮೂಲಭೂತ ಹಕ್ಕೇ? : ಸುಪ್ರೀಂ ಕೋರ್ಟ್‌ನಲ್ಲಿ ಇಂದಿನಿಂದ ವಿಚಾರಣೆ ಆರಂಭ

ನವದೆಹಲಿ : ಖಾಸಗಿತನದ ಹಕ್ಕು ಮೂಲಭೂತವೇ ಎಂಬುದನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಬುಧವಾರದಿಂದಲೇ ವಿಚಾರಣೆ ಆರಂಭಿಸಲಿದೆ.

‘ಆಧಾರ್‌ ಯೋಜನೆಯು ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆ ತರುತ್ತದೆ’ ಎಂದು ಆರೋಪಿಸಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಯ್ಯ ಅವರ ಮುಂದಾಳತ್ವದಲ್ಲಿ ಹಲವರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವುಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್ ಅವರ ನೇತೃತ್ವದ ಐದು ಸದಸ್ಯರ ಪೀಠವು ಮಂಗಳವಾರ ಈ ನಿರ್ಧಾರ ತೆಗೆದುಕೊಂಡಿದೆ.

ಅದಕ್ಕೂ ಮುನ್ನ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ‘ಸಂವಿಧಾನ ರಚನಾಕಾರರು, ಖಾಸಗಿತನವನ್ನು ಪ್ರಜ್ಞಾಪೂರ್ವಕವಾಗಿಯೇ ಮೂಲಭೂತ ಹಕ್ಕುಗಳ ವ್ಯಾಪ್ತಿಗೆ ಸೇರಿಸಿಲ್ಲ’ ಎಂದರು.

ಅಲ್ಲದೆ,  ‘ಇಂಥದ್ದೇ ವಿಚಾರಕ್ಕೆ ಸಂಬಂಧಿಸಿದಂತೆ 1950ರಲ್ಲಿ ಎಂ.ಪಿ. ಶರ್ಮಾ ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವೆ ವ್ಯಾಜ್ಯ ತಲೆದೋರಿತ್ತು. 1960ರಲ್ಲಿ  ಅಂಥದ್ದೇ ವ್ಯಾಜ್ಯ ಖಾರಕ್ ಸಿಂಗ್ ಮತ್ತು ಸತೀಶ್ ಚಂದ್ ಅವರ ನಡುವೆಯೂ ತಲೆದೋರಿತ್ತು. ಎರಡೂ ಪ್ರಕರಣಗಳಲ್ಲಿ ಕ್ರಮವಾಗಿ ಎಂಟು ಮತ್ತು ಆರು ಸದಸ್ಯರ ಪೀಠಗಳು, ‘ಖಾಸಗಿತನ ಮೂಲಭೂತ ಹಕ್ಕು ಅಲ್ಲ’ ಎಂದು ತೀರ್ಪು ನೀಡಿದ್ದವು’ ಎಂದರು.

ಆಗ ಪೀಠವು, ‘ಖಾಸಗಿತನ ಮೂಲಭೂತ ಹಕ್ಕೇ, ಅಲ್ಲವೇ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕಿದೆ. ಅಲ್ಲದೆ, ಖಾರಕ್ ಮತ್ತು ಶರ್ಮಾ ಪ್ರಕರಣಗಳಲ್ಲಿ ನೀಡಿರುವ ತೀರ್ಪುಗಳು ಸರಿಯಾದುದೇ ಇಲ್ಲವೇ ಎಂಬುದನ್ನೂ ಪರಿಶೀಲಿಸಬೇಕಿದೆ’ ಎಂದು ಅಭಿಪ್ರಾಯಪಟ್ಟಿತು.

* ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ತೀರ್ಪು ನೀಡಿದ ನಂತರವಷ್ಟೇ, ಆಧಾರ್‌ ಯೋಜನೆಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಗಣಿಸಲಾಗುತ್ತದೆ

-ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್ ನೇತೃತ್ವದ ಪೀಠ

ಪ್ರತಿಕ್ರಿಯಿಸಿ (+)