ಎ ಗ್ರಾಮರ್ ಆಫ್ ಕರ್ನಾಟ ಲಾಂಗ್ವೇಜ್

7
ಮುದ್ರಣದ ಸೌಭಾಗ್ಯವನ್ನು ಕಂಡ ಕನ್ನಡದ ಮೊದಲ ಕೃತಿ

ಎ ಗ್ರಾಮರ್ ಆಫ್ ಕರ್ನಾಟ ಲಾಂಗ್ವೇಜ್

Published:
Updated:
ಎ ಗ್ರಾಮರ್ ಆಫ್ ಕರ್ನಾಟ ಲಾಂಗ್ವೇಜ್

ವಿಲಿಯಂ ಕೇರಿ ರಚಿಸಿದ ‘ಎ ಗ್ರಾಮರ್ ಆಫ್ ಕರ್ಣಾಟ ಲಾಂಗ್ವೇಜ್’ - ಎಂಬ ಕೃತಿ ಕನ್ನಡದಲ್ಲಿ ಮುದ್ರಣ ಭಾಗ್ಯ ಕಂಡ ಮೊದಲ ಕೃತಿ. 1817ರ ಆಗಸ್ಟ್ 17ರಂದು ಇದು ಪ್ರಕಟವಾಯಿತು. ಕನ್ನಡಕ್ಕೆ ಹೊಸತನ ತಂದಿತ್ತವರು ವಿದೇಶಿ ಮಿಶನರಿಗಳು, ಇದು ಅವರಿಗೆ ಸಾಧ್ಯವಾದುದು ಮುದ್ರಣಯಂತ್ರದ ಅಳವಡಿಕೆ, ಕನ್ನಡ ಗ್ರಂಥಗಳ ಪ್ರಕಟಣೆ, ಹೊಸ ಶಿಕ್ಷಣ ಪದ್ಧತಿಯ ಜಾರಿ ಹಾಗೂ ಕನ್ನಡ ಭಾಷಾ ಹಾಗೂ ಸಾಹಿತ್ಯವನ್ನು ಹೊಸ ದೃಷ್ಟಿಕೋನದಿಂದ ಪರಿಶೀಲಿಸುವ ಪ್ರಯತ್ನದಿಂದ. ಕಲ್ಕತ್ತಾದ ಹೊರವಲಯದ ಶ್ರೀರಾಂಪುರ (ಬ್ರಿಟಿಷರು ಹೇಳುವಂತೆ ಸೆರಾಂಪುರ್) ಡೇನಿಶ್ ವಸಾಹತು ಕೇಂದ್ರದಲ್ಲಿ 1780ರ ಹೊತ್ತಿಗಾಗಲೇ ಚಿಕ್ಕ ಮುದ್ರಣಾಲಯವೊಂದು ಕೆಲಸ ನಿರ್ವಹಿಸುತ್ತಿತ್ತು.

ವಿಲಿಯಂ ಕೇರಿ ಈ ಮುದ್ರಣಾಲಯವನ್ನು ವಿಸ್ತರಿಸಿ ಅಲ್ಲಿ ಬಂಗಾಳಿ, ಕನ್ನಡ, ಮರಾಠಿ, ತೆಲುಗು, ಒರಿಯಾ, ಪಂಜಾಬಿ, ಅರಬಿ, ಪರ್ಷಿಯನ್, ಚೀನಿ, ಹೀಬ್ರೂ ಭಾಷೆಯ ಅಚ್ಚಿನ ಮೊಳೆಗಳ ಬಳಕೆಗೆ ಏರ್ಪಾಟು ಮಾಡಿದ. ಬೈಬಲ್‌ನ ವಿವಿಧ ಭಾಷಿಕ ಆವೃತ್ತಿಗಳ ನಿರ್ಮಾಣ ಹಾಗೂ ಮುದ್ರಣ ಇದರ ಹಿಂದಿನ ಉದ್ದೇಶವಾಗಿತ್ತು. ಅದಕ್ಕಾಗಿ ದೇಶೀಯ ಪಂಡಿತರ ನೆರವಿನಿಂದ ವಿಲಿಯಂ ಕೇರಿ ಹಿಂದೂಸ್ತಾನಿ, ಬಂಗಾಳಿ, ಕನ್ನಡ, ಒರಿಯಾ, ತೆಲುಗು, ಪಂಜಾಬಿ, ಪರ್ಷಿಯನ್ ಭಾಷೆಗಳಲ್ಲಿ ಸಲುವಳಿ ಮಾಡಿಕೊಂಡು ವಿಶೇಷವಾಗಿ ಸಂಸ್ಕೃತ ಹಾಗೂ ಬಂಗಾಳಿ ಭಾಷೆಗಳಲ್ಲಿ ಪ್ರೌಢ ಪಾಂಡಿತ್ಯವನ್ನೇ ಗಳಿಸಿಕೊಂಡು ಭಾರತದ ವಿವಿಧ ಭಾಷೆಗಳಲ್ಲಿ ಬೈಬಲ್ ಅವತರಣಿಕೆಗಳನ್ನು ರೂಪಿಸುವ ಹಿನ್ನೆಲೆಯಲ್ಲಿ ವ್ಯಾಕರಣ ಹಾಗೂ ನಿಘಂಟು ರಚನೆಯ (ಸಮಗ್ರವಲ್ಲವಾದರೂ) ವ್ಯಾಪಕ ಕೆಲಸದಲ್ಲಿ ತೊಡಗಿದ. ಈ ಪ್ರಕ್ರಿಯೆಯ ಅಂಗವಾಗಿ ಬಂಗಾಳಿ (1801), ಮರಾಠಿ (1805), ಪಂಜಾಬಿ (1812), ತೆಲುಗು (1814), ಕನ್ನಡ (1817) ವ್ಯಾಕರಣ ಗ್ರಂಥಗಳು ಸೆರಾಂಪುರ್‌ದಿಂದ ಅಚ್ಚಾದವು.

ಕನ್ನಡ ಭಾಷೆಯ ರಚನೆಯ ಕುರಿತಂತೆ ಆತ ಇಂಗ್ಲಿಷ್‌ನಲ್ಲಿ ಬರೆದ ‘ಎ ಗ್ರಾಮರ್ ಆಫ್ ಕರ್ನಾಟ ಲಾಂಗ್ವೇಜ್' ಗ್ರಂಥದೊಳಗೆ ಉದಾಹರಣೆಗಳೆಲ್ಲ ಕನ್ನಡದಲ್ಲಿದ್ದು ಅವುಗಳ ವಿವರಣೆಗಳೆಲ್ಲವೂ ಇಂಗ್ಲಿಷ್‌ನಲ್ಲಿ ಇದೆ. ಕನ್ನಡ ಭಾಷಿಕ ರಚನೆಯನ್ನು ಕುರಿತಂತೆ ಅಚ್ಚಾದ ಈ ಗ್ರಂಥ, ಕನ್ನಡದ ಮೊತ್ತಮೊದಲ ಮುದ್ರಿತ ಕೃತಿಯಾಗಿದೆ. ಈ ಗ್ರಂಥದ ರಚನೆಯಲ್ಲಿ ಆತನಿಗೆ ಭಾರತ(ತಿ)ರಮಣ ಹಾಗೂ ಸುಬ್ಬರಾವ್ ಎನ್ನುವ ಇಬ್ಬರು ದೇಶೀಯ ಪಂಡಿತರು ನೆರವಾಗಿದ್ದರೆಂದು ಡಾ. ಶ್ರೀನಿವಾಸ ಹಾವನೂರರು ಬರೆಯುತ್ತಾರೆ(ಹೊಸಗನ್ನಡ ಅರುಣೋದಯ, 2000 ಪುಟ 340).

ವಿದೇಶಿ ಪಂಡಿತನೊಬ್ಬ ಉತ್ತರ ಭಾರತದ ಬಂಗಾಳದಲ್ಲಿ ನೆಲೆಸಿ ಭಾರತೀಯ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ ಮನ್ನಣೆ ನೀಡಿ ವ್ಯಾಕರಣ ಬರೆದಿದ್ದಾನೆ ಎನ್ನುವುದನ್ನು ಗಮನಿಸಬೇಕು. ಇದರ ಮೊದಲಿಗೆ ಕೇರಿ ಒಂದು ಪುಟ್ಟ ಪ್ರಸ್ತಾವನೆಯನ್ನು ಇಂಗ್ಲಿಷ್‌ನಲ್ಲಿ ಬರೆದಿದ್ದಾನೆ.

ಕನ್ನಡ ಭಾಷೆಯ ವ್ಯಾಕರಣ ರಚನೆಯ ಉದ್ದೇಶ ಹಾಗೂ ಕಾರ್ಯವಿಧಾನವನ್ನು ಪ್ರಾಮಾಣಿಕವಾಗಿ ಮುಂದಿಟ್ಟಿದ್ದಾನೆ. ‘ಧರ್ಮಗ್ರಂಥಗಳ ಅನುವಾದಕಾರ್ಯ ತನ್ನ ಪ್ರಾಥಮಿಕ ಉದ್ದೇಶ. ಆ ಕೆಲಸ ಯಶಸ್ವಿಯಾಗಬೇಕಾದರೆ ಆಯಾ ಭಾಷೆಗಳಲ್ಲಿ ವ್ಯಾಕರಣ ರಚನೆ ಅವಶ್ಯಕವಾಗಿ ಆಗಬೇಕು’ ಎಂದು ಬರೆಯುತ್ತಾನೆ. ಫ್ರಾನ್ಸಿಸ್ ಎಲ್ಲಿಸ್‌ನ ತೆಲುಗು ಭಾಷೆ ಕುರಿತ ಲೇಖನವನ್ನು ಬಿಟ್ಟರೆ ದ್ರಾವಿಡ ಭಾಷೆಗಳ ಕುರಿತ ಅಧ್ಯಯನ ನಡೆದಿರಲಿಲ್ಲ. ‘ತನಗಿಂತ ಹೆಚ್ಚಿನ ಪಾಂಡಿತ್ಯವನ್ನೂ, ಕರ್ಣಾಟ ಭಾಷೆಯ ಬಗೆಗಿನ ತಿಳಿವಳಿಕೆಯನ್ನು ಹೊಂದಿರುವ ಇನೊಬ್ಬನು ಹೆಚ್ಚು ಪರಿಷ್ಕೃತವಾದ ವ್ಯಾಕರಣವನ್ನು ಬರೆದಲ್ಲಿ ಇದೀಗ ತಾನು ರಚಿಸಿರುವ ಕನ್ನಡ ವ್ಯಾಕರಣಕ್ಕಿಂತ ಮಿಗಿಲಾಗುವುದರಲ್ಲಿ ಸಂಶಯವಿಲ್ಲ.

ಇದರಿಂದ ತನಗೆ ಖಂಡಿತಾ ಬೇಸರವಾಗುವುದಿಲ್ಲ. ಯುರೋಪಿಯನ್ ವಿದ್ವಾಂಸರ ಗಮನಕ್ಕೆ ಬಾರದೆ ಹಿಂದುಳಿದಿರುವ ಕನ್ನಡದಂತಹ ಭಾಷೆಗಳಲ್ಲಿ ಹೆಚ್ಚಿನ ಅಧ್ಯಯನ ನಡೆಯಬೇಕು ಎನ್ನುವುದು ತನ್ನ ಆಶಯ. ತಲಂಗ(ತೆಲುಗು) ಭಾಷೆಯಲ್ಲಿ ನಡೆದಷ್ಟು ಅಧ್ಯಯನ ಕನ್ನಡದಲ್ಲಿ ನಡೆಯದೆ ಸ್ವಲ್ಪಮಟ್ಟಿಗಿನ ಹಿನ್ನಡೆಯಲ್ಲಿರುವ ಕನ್ನಡ ಭಾಷೆಯು ಬ್ರಿಟಿಷ್ ಆಡಳಿತ ವಲಯದ ಒಂದು ವಿಶಾಲ ಭೂಪ್ರದೇಶದಲ್ಲಿ ಬಳಕೆಯಲ್ಲಿರುವುದರಿಂದ ಆ ಭಾಷೆಯಲ್ಲಿ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ ಎಂದು ನನಗೆ ಅನ್ನಿಸುತ್ತದೆ (ಕರ್ಣಾಟ ಗ್ರಾಮರ್ ಪುಸ್ತಕಕ್ಕೆ ಬರೆದ ಮುನ್ನುಡಿಯಿಂದ ಉದ್ಧೃತ)’. ಫ್ರಾನ್ಸಿಸ್ ಎಲ್ಲಿಸ್‌ನಂಥ ವಿದ್ವಾಂಸರು ತೆಲುಗು ಭಾಷೆ ಕುರಿತು ವಿಶೇಷ ಅಧ್ಯಯನ ನಡೆಸಿದುದು ಕೇರಿ ಗಮನಕ್ಕೆ ಬಂದಿತ್ತು. ಆದರೆ ಕನ್ನಡವನ್ನು ಕುರಿತು ಆ ಹೊತ್ತಿಗೆ ಯಾವುದೇ ಯುರೋಪಿನ ವಿದ್ವಾಂಸ ಕೆಲಸ ಮಾಡಿರಲಿಲ್ಲ. ಹೀಗಾಗಿ ತೆಲುಗಿಗೆ ಹೋಲಿಸಿದಲ್ಲಿ ಕನ್ನಡ ಹಿನ್ನೆಡೆಯಲ್ಲಿದೆ ಎಂಬ ತನ್ನ ಪೂರ್ವಗ್ರಹ ಪೀಡಿತ ಗ್ರಹಿಕೆಯನ್ನು ಪ್ರಕಟಿಸಿರಬೇಕು.

ಕೇರಿ ಕಾಲಕ್ಕಾಗಲೇ ಕನ್ನಡವೇ ಮುಂತಾದ ದ್ರಾವಿಡ ಭಾಷೆಗಳು ಸಂಸ್ಕೃತಜನ್ಯ ಎಂಬ ಭ್ರಾಮಕ ಕಲ್ಪನೆ ಗಟ್ಟಿಯಾಗಿತ್ತು. ಫ್ರಾನ್ಸಿಸ್ ಎಲ್ಲಿಸ್ ತೆಲುಗು, ಕನ್ನಡ, ತಮಿಳು ಮುಂತಾದ ದ್ರಾವಿಡ ಭಾಷೆಗಳು ಸಂಸ್ಕೃತಜನ್ಯವಲ್ಲ ಎಂದು ಆಗಲೇ ಬರೆದಿದ್ದ. ಕನ್ನಡ ವ್ಯಾಕರಣ ಗ್ರಂಥದ ಮುನ್ನುಡಿಯಲ್ಲಿ ಕೇರಿ ಈ ವಿಷಯವನ್ನು ಪ್ರಸ್ತಾಪಿಸಿ ’ಕನ್ನಡವನ್ನು ಇನ್ನೂ ಸಂಸ್ಕೃತಜನ್ಯ ಎಂದು ಹೇಳುವುದು ಸರಿಯಲ್ಲ’ ಎನ್ನುತ್ತಾನೆ. ಅಷ್ಟೇ ಅಲ್ಲ ಎಲ್ಲಿಸ್ ಈ ವಿಷಯದ ಬಗ್ಗೆ ಬರೆದಿರುವುದನ್ನು ಗಮನಿಸಿಯೂ, ಪರ್ಯಾಯ ದ್ವೇಷದ ಭಾಷೆಗಳ ತಾಯಿ ಸಂಸ್ಕೃತವೇ ಎಂಬ ಪ್ರಶ್ನೆಯನ್ನೆತ್ತುವುದು ದೊಡ್ಡ ಮೂರ್ಖತನವೆಂದು ಘೋಷಿಸುತ್ತಾನೆ.

ಕನ್ನಡವನ್ನು ಕುರಿತು ಈ ಇಂಗ್ಲಿಷ್ ಗ್ರಂಥ ಅದು ಬಳಕೆಯಲ್ಲಿರುವ ಪ್ರದೇಶದ ನಡುವೆ ಪ್ರಚುರವಾದರೆ ‘ಕರ್ಣಾಟ ಭಾಷೆಯ ಕಲಿಕೆಯ ಬಗೆಗಿನ ಆಸಕ್ತಿ ಹಾಗೂ ಉತ್ಸುಕತೆ ಹೆಚ್ಚಾಗಬಹುದೆಂಬ ಆಶಾವಾದ ಆತನದು. ತನ್ನ ವ್ಯಾಕರಣ ಗ್ರಂಥವು ರಚಿತವಾದ ಅತ್ಯಂತ ಮಹತ್ವದ ಭಾಷೆಗಳಲ್ಲಿ ಒಂದಾದ ಕರ್ಣಾಟ ಭಾಷೆಯಲ್ಲಿ ಹೆಚ್ಚು ಪರಿಷ್ಕೃತವಾದ ವ್ಯಾಕರಣ ಗ್ರಂಥವನ್ನೂ ಶಬ್ದಕೋಶವನ್ನೂ ರಚಿಸಲು ತಾನು ಅದನ್ನು ತುಂಬು ಅಭಿಮಾನದಿಂದ ಸ್ವಾಗತಿಸುತ್ತೇನೆ ಎಂದು ಬರೆಯುತ್ತಾನೆ. ಕೇರಿಯ ಈ ಕನಸು ಮುಂದೆ ಮೆಕ್ಕೆರಲ್ ಹಾಗೂ ರೀವ್ ಅವರಿಂದ ಸಾಕಾರಗೊಂಡುದನ್ನು ನೆನೆಯಬೇಕು. ಗುಣಾತ್ಮಕವಾಗಿ ಕೇರಿಯ ವ್ಯಾಕರಣಗ್ರಂಥ ದೊಡ್ಡ ಕೊಡುಗೆಯೇನೂ ಅಲ್ಲ ‘ಮೂಲಕ ಮಹಾಶಯರಿಬ್ಬರ ನೆರವಿನೊಂದಿಗೆ ಇದು ರಚನೆಯಾದ ಸಲುವಾಗಿ ಅನೇಕ ದೋಷಗಳು ನುಸುಳಿವೆ. ಆದರೆ ಪಾರಂಪರಿಕ ವ್ಯಾಕರಣ ರಚನೆಯ ಮಾದರಿಯನ್ನು ಮುರಿದು ಅಂದು ಬಳಕೆಯಲ್ಲಿದ್ದ ಭಾಷಾಶಾಸ್ತ್ರ(Philology)ದ ಹಿನ್ನೆಲೆಯಲ್ಲಿ ಅಷ್ಟವಿಧ ವರ್ಗೀಕರಣ ಪದ್ಧತಿಯನ್ನು ಮೊದಲಬಾರಿಗೆ ಕನ್ನಡಕ್ಕೆ ಅಳವಡಿಸಿದ ಕೀರ್ತಿ ಅವನದು. ಕನ್ನಡ ಪದ ಮತ್ತು ವಾಕ್ಯಗಳನ್ನು ಅಚ್ಚಿನ ಮೊಳೆಗೆ ಅಳವಡಿಸಿದ ಮೊದಲ ಪ್ರಯತ್ನವೂ ಹೌದು. ಆದರೆ ಆತ ಬಳಸಿದ ಲಿಪಿ ಕನ್ನಡಕ್ಕಿಂತ ತೆಲುಗು ಲಿಪಿಯನ್ನೇ ಹೆಚ್ಚು ಹೋಲುತ್ತಿರುವುದು ಒಂದು ವೈಪರೀತ್ಯ! ಆದರೂ, ಕನ್ನಡದಲ್ಲಿ ಮುದ್ರಣ ಸೌಭಾಗ್ಯವನ್ನು ಕಂಡ ಮೊದಲ ಕೃತಿ ಎಂಬ ಚಾರಿತ್ರಿಕ ಕಾರಣಕ್ಕಾಗಿ ‘ಎ ಗ್ರಾಮರ್ ಆಫ್ ಕರ್ಣಾಟ ಲಾಂಗ್ವೇಜ್’ ಗ್ರಂಥವನ್ನು ಗಮನಿಸಬೇಕು.

(ಕೃಪೆ : ನುಡಿಜಾಗರ)

***

ವಿಲಿಯಂ ಕೇರಿಯು ಕ್ರಿ.ಶ. 1761 ರಲ್ಲಿ ಲಂಡನ್ ನಗರದ ಪ್ಯಾಡಿಂಗ್ಟನ್‌ನಲ್ಲಿ ಜನ್ಮವೆತ್ತಿದನು. ಇವನ ತಂದೆ ಪಾದರಕ್ಷೆಯ ಅಂಗಡಿಯನ್ನಿಟ್ಟುಕೊಂಡಿದ್ದನು. ಎಳವೆಯಿಂದಲೇ ಇವನಿಗೆ ಭಾಷೆಗಳನ್ನು ಕಲಿಯುವುದರಲ್ಲಿ ವಿಶೇಷ ಆಸಕ್ತಿ; ಜೊತೆಗೆ ಬೈಬಲ್ ಪಠಣದಲ್ಲಿ ಎಲ್ಲಿಲ್ಲದ ಉತ್ಸಾಹ. ಹೀಗಾಗಿ ಗ್ರೀಕ್, ಹೀಬ್ರೂ, ಡಚ್, ಜರ್ಮನ್ ಮುಂತಾದ ಭಾಷೆಗಳಲ್ಲಿ ಪರಿಣತಿಯನ್ನು ಪಡೆದ. ಕ್ರಿ. ಶ. 1783ರಲ್ಲಿ ಭಾರತದ ದಲಿತ ಹಾಗೂ ರೋಗಪೀಡಿತ ಬಡಜನರ ಶುಶ್ರೂಷೆಗಾಗಿ ಕೇರಿ ಭಾರತಕ್ಕೆ ಬಂದನು. ಕರುಣಾಮಯಿಯಾದ ಕೇರಿ ಕಲ್ಕತ್ತಾ ಪರಿಸರದಲ್ಲಿ ಬೇಗನೆ ಜನಪ್ರಿಯನಾದನು.

ಕೇರಿ ದೊಡ್ಡ ಸಂಸ್ಕೃತ ಪಂಡಿತನೂ ಆಗಿದ್ದ. ಪಾಣಿನಿಯ ವ್ಯಾಕರಣದ ಹಿನ್ನೆಲೆಯಲ್ಲಿ ಈತ ರಚಿಸಿದ ಸಂಸ್ಕೃತ ವ್ಯಾಕರಣವು 1806ರಲ್ಲಿ ರಚಿತವಾಯಿತು. ಆತನ ಸಹವಂದಿಗ ಜೆ. ಮಾರ್ಷಮನ್ ಜೊತೆ ಸೇರಿ ವಾಲ್ಮೀಕಿ ರಾಮಾಯಣವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದನು (1806). ಈ ಮೊದಲೇ ಆತ ‘ಹಿತೋಪದೇಶ’ವನ್ನು ಪ್ರಕಟಿಸಿದ್ದ. ದೇಶೀಯ ಭಾಷಾ ವ್ಯಾಕರಣ ರಚನೆಯಲ್ಲೂ ಆತ ತನ್ನ ಕೈ ನುರಿಯಿಸಿಕೊಂಡಿದ್ದ. 1805ರಲ್ಲಿ ಮರಾಠಿ ಭಾಷಾ ವ್ಯಾಕರಣ, 1812ರಲ್ಲಿ ಪಂಜಾಬಿ ವ್ಯಾಕರಣವೂ, 1814ರಲ್ಲಿ ತೆಲುಗು ವ್ಯಾಕರಣವೂ, 1817ರಲ್ಲಿ ಕನ್ನಡ ವ್ಯಾಕರಣವೂ, ಶ್ರೀರಾಂಪುರದ ಮುದ್ರಣಾಲಯದಿಂದ ಪ್ರಕಟಗೊಂಡವು. ಕೇರಿ ರಚಿಸಿದ ಬಂಗಾಳಿ - ಇಂಗ್ಲಿಷ್ ಅರ್ಥಕೋಶವು 1827ರಲ್ಲಿ ಎರಡನೇ ಬಾರಿ (ಪ್ರ.ಮು. 1812) ಪ್ರಕಟವಾಯಿತು. ಸ್ಕೊಯೆಟರ್ ಜೊತೆ ಸೇರಿ ಆತ ಬರೆದ ಭೂತಾನಿ - ಇಂಗ್ಲಿಷ್ ನಿಘಂಟು (1819) ಮತ್ತೆ ಮತ್ತೆ ಪ್ರಕಟಣೆಯಾಗುತ್ತಾ ಬಂದಿತು. ವಿಲಿಯಂ ಕೇರಿ ಭಾರತೀಯ ಹಾಗೂ ವಿದೇಶಿಯ ಭಾಷೆಗಳನ್ನು ಕುರಿತು ಬರೆದ ನಿಘಂಟುಗಳು, ವ್ಯಾಕರಣಗಳು, ಭಾಷಾಸಂಬಂಧಿ ಬರಹಗಳು ನೂರಾಐವತ್ತಕ್ಕೂ ಹೆಚ್ಚಿವೆ.

ಕ್ರಿ. ಶ. 1811ರಲ್ಲಿ ಗೋವಾದಲ್ಲಿದ್ದ ಪೋರ್ಚುಗೀಸ್ ಪಾದ್ರಿ ಹೆನ್ರಿ ಟಾರ್ಟಾನ್ ಗೋವಾದಲ್ಲಿ ಅಂದು ನೆಲೆಸಿದ್ದ ಇಪ್ಪತ್ತು ಸಾವಿರ ಕನ್ನಡಿಗರಿಗೆ ವಿತರಿಸಲು ಕನ್ನಡ ಭಾಷಾ ಬೈಬಲ್‌ನ ಅವಶ್ಯಕತೆ ಇದೆ ಎಂದಾಗ ಅದಕ್ಕೆ ಪ್ರತಿಕ್ರಿಯೆಯಾಗಿ ವಿಲಿಯಂ ಕೇರಿ ಬೈಬಲನ್ನು ಕನ್ನಡಕ್ಕೆ ತರುವ ಆಲೋಚನೆ ಮಾಡಿದನು.

ವಿಲಿಯಂ ಕೇರಿಯ ಬೈಬಲ್ ಭಾಷಾಂತರವು 1823ರಲ್ಲಿ ಶ್ರೀರಾಮಪುರದಿಂದ ಪ್ರಕಟವಾಯಿತು (ಜಾನ್ ಹ್ಯಾಂಡ್ಸ್‌ನ್ ಬೈಬಲ್ ಭಾಷಾಂತರವು 1820ರಲ್ಲಿ ಮದ್ರಾಸ್‌ದಿಂದ ಪ್ರಕಟವಾಯಿತು). ವಿಲಿಯಂ ಕೇರಿಯ ಬೈಬಲ್ ಭಾಷಾಂತರದ ಒಂದು ಮಾದರಿ:

ನಿನ್ನ ಹತ್ತಿರೆ ಯಿರುವ ಜನರನ್ನು ಕುರಿತು ಪ್ರತಿ (ಪ್ರೀತಿ)

ಮಾಡು ನಿನ್ನ ಶತ್ರುವುಗಳನ್ನು ಅಸಹ್ಯಪಡು

ಈ ಮಾತು ಯಾವದು ಹೆಳಲಪಟ್ಟಿತ್ತೊ ಇದರನ್ನು ಕೆಳಿಧಿರಿ!

ಮತ್ತೆನೆಂದರೆ ನಾನು ನಿಮ್ಮನ್ನು ಕುರಿತು ಹೆಳುತೆನೆ

ನಿವು ನಿಮ್ಮಗಳ ಸ್ವರ್ಗದಲ್ಲಿರುವ ತಂದೆಯ

ಕೂಸುಗಳಾಗದವರ ನಿಮಿತ್ತವಾಗಿ ನಿಮ್ಮಗಳ ಶತ್ರುಗಳನ್ನು

ಕುರಿತು ಪ್ರಿತಿ ಮಾಡಿರಿ ಯಾರು ನಿಮ್ಮನನ್ನು ಶಪಿಸು

ತ್ತಾರೋ ಅವರುಗಳನ್ನು ಕುರಿತು ಆಶೀರ್ವಾದವು

ಮಾಡಿರಿ ಯಾರು ನಿಮ್ಮನ್ನು ಅಸಹ್ಯಪಡುತ್ತಾರೋ ಅವರಿಗೆ

ಮಂಗಳವಾಗುವ ವ್ಯಾಪಾರವನ್ನು ಮಾಡಿರಿ ಯಾರು

ನಿಮ್ಮನನ್ನು ಹಿಂಸೆ ಮಾಡುತ್ತಾರೋ ಅವರುಗಳ ಕಾರಣ

ಪ್ರಾರ್ಥನೆಯನ್ನು ಮಾಡಿರಿ

ಬೈಬಲ್ ಭಾಷಾಂತರದಲ್ಲಿ ಆತ ಬಳಸಿದ ಕನ್ನಡ ಬಹುಶಃ ಆತನ ಕನ್ನಡ ಮುನ್ಶಿಯ ಅರೆಬರೆ ಕನ್ನಡ ಜ್ಞಾನವಿರಬಹುದು. ಅದೂ ಸಮಕಾಲದ ಆಡುಮಾತಿನ ನುಡಿಯ ಕನ್ನಡವಿರಬೇಕು. ಏನೇ ಇರಲಿ ಆಧುನಿಕ ಗದ್ಯ ರೂಪುಗೊಳ್ಳುತ್ತಿದ್ದ ಕಾಲದ ಮುಂಗುರುಹುಗಳನ್ನು ಬೈಬಲ್ ಭಾಷಾಂತರದ ಗದ್ಯದಲ್ಲಿ ಕಾಣಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry