7

ಸಿನಿಮಾ ಪ್ರಮಾಣಪತ್ರ: ಹೊಸ ಮಾರ್ಗದ ಅಗತ್ಯ

ಎ.ಸೂರ್ಯ ಪ್ರಕಾಶ್
Published:
Updated:
ಸಿನಿಮಾ ಪ್ರಮಾಣಪತ್ರ: ಹೊಸ ಮಾರ್ಗದ ಅಗತ್ಯ

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಈಗ ಹೊಸ ಅಧ್ಯಕ್ಷರು ಬಂದಿದ್ದಾರೆ. ಮಂಡಳಿಯನ್ನು ಕಾಡಿದ ವಿವಾದಗಳು ಈಗ ನೇಪಥ್ಯಕ್ಕೆ ಸರಿದಿವೆ ಎಂದು ಭಾವಿಸಬಹುದು, ಚಲನಚಿತ್ರಗಳಿಗೆ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ಮಂಡಳಿಯು ಇನ್ನಷ್ಟು ಪ್ರಗತಿಪರವಾದ ಕ್ರಮಗಳನ್ನು ಅನುಸರಿಸುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. ಚಲನಚಿತ್ರಗಳಿಗೆ ಪ್ರಮಾಣಪತ್ರ ನೀಡುವ ಸಂಸ್ಥೆಯಾಗಿರುವ ಸಿಬಿಎಫ್‌ಸಿಯು ಚಿತ್ರಗಳಿಗೆ ಕತ್ತರಿ ಹಾಕುವ ಸಂಸ್ಥೆಯೂ ಹೌದು ಎಂಬಂತಹ ದೃಷ್ಟಿಕೋನವನ್ನು ಹೋಗಲಾಡಿಸುವುದು ಮೊದಲು ಆಗಬೇಕಿರುವ ಕೆಲಸ.

ಮಂಡಳಿಯ ಈ ಹಿಂದಿನ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಅವರು ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವ ವೇಳೆ ಸವಕಲು ಮಾದರಿಗಳನ್ನು ಅನುಸರಿಸಿದ್ದಕ್ಕೆ, ಕೆಲವು ಬಾರಿ ಪುರುಷರ ಪಕ್ಷಪಾತಿ ಧೋರಣೆ ತಳೆದಿದ್ದಕ್ಕೆ ಟೀಕೆಗೆ ಒಳಗಾಗಿದ್ದರು. ನಿಹಲಾನಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಲವು ಚಲನಚಿತ್ರಗಳು ಮಂಡಳಿಯಿಂದ ತೊಂದರೆ ಎದುರಿಸಿದವು. ‘ನಾನು ಭಾರತೀಯ ಸಂಸ್ಕೃತಿಯನ್ನು ರಕ್ಷಿಸುತ್ತಿದ್ದೇನೆ’ ಎಂದು ನಿಹಲಾನಿ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದುದು ಇನ್ನಷ್ಟು ತೊಂದರೆಗಳನ್ನು ಉಂಟುಮಾಡುತ್ತಿತ್ತು. ‘ಭಾರತೀಯ ಸಂಸ್ಕೃತಿ’ ಎಂಬುದರ ಅರ್ಥವೇನು, ಅದನ್ನು ರಕ್ಷಿಸುವ ಕೆಲಸ ಮಂಡಳಿಯದ್ದೇ ಎಂಬ ಬಗ್ಗೆ ನಿಹಲಾನಿ ಅಥವಾ ಮಂಡಳಿಯ ಯಾವುದೇ ಅಧಿಕಾರಿ ವಿವರಿಸಲಾರರು. ಮಧುರ್ ಭಂಡಾರ್ಕರ್ ಅವರ ‘ಇಂದು ಸರ್ಕಾರ್’, ಅಲಂಕೃತಾ ಶ್ರೀವಾಸ್ತವ ಅವರ ‘ಲಿಪ್‌ಸ್ಟಿಕ್‌ ಅಂಡರ್ ಮೈ ಬುರ್ಖಾ’ ಸೇರಿದಂತೆ ಹಲವು ಸಿನಿಮಾಗಳು ಈಚಿನ ದಿನಗಳಲ್ಲಿ ಮಂಡಳಿಯಿಂದ ತೊಂದರೆ ಎದುರಿಸಿದ್ದವು. ಶಾರುಖ್‌ ಖಾನ್‌ ಅವರ ಇತ್ತೀಚಿನ ಸಿನಿಮಾದ ಟ್ರೇಲರ್‌ನಲ್ಲಿನ ‘intercourse’ (ಸಂಭೋಗ) ಪದವನ್ನು ತೆಗೆಯಬೇಕು ಎಂದೂ ನಿಹಲಾನಿ ಹೇಳಿದ್ದರು. ಈ ಎಲ್ಲ ಕ್ರಮಗಳ ಕಾರಣದಿಂದಾಗಿ ಸಿಬಿಎಫ್‌ಸಿಯು ಹಾಸ್ಯದ ವಸ್ತುವಾಗಿತ್ತು, ಚಲನಚಿತ್ರಗಳಿಗೆ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯು ಒಂದು ಅಣಕದ ವಸ್ತುವಾಗಿತ್ತು.

ಸಿಬಿಎಫ್‌ಸಿಯ ನೂತನ ಅಧ್ಯಕ್ಷ ಪ್ರಸೂನ್ ಜೋಷಿ ಅವರು ಚಲನಚಿತ್ರ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ಮಂಡಳಿಯನ್ನು ಆಧುನಿಕ ಹಾಗೂ ಪ್ರಗತಿಪರ ನೆಲೆಯೆಡೆ ಕೊಂಡೊಯ್ಯುತ್ತಾರೆ, ಶ್ಯಾಮ್‌ ಬೆನಗಲ್ ನೇತೃತ್ವದ ತಜ್ಞರ ಸಮಿತಿ ನೀಡಿರುವ ವರದಿಗೆ ಸೂಕ್ತ ಗಮನ ನೀಡುತ್ತಾರೆ ಎಂಬ ನಿರೀಕ್ಷೆ ಇದೆ. ಈಗಿರುವ ಪ್ರಕ್ರಿಯೆಗಳನ್ನು ಪರಿಶೀಲಿಸಿರುವ ಈ ಸಮಿತಿಯು, ಚಲನಚಿತ್ರಗಳಿಗೆ ಪ್ರಮಾಣಪತ್ರ ನೀಡುವ ವೇಳೆ ಸಿಬಿಎಫ್‌ಸಿ ಅನುಸರಿಸಬೇಕಿರುವ ಕ್ರಮಗಳ ಬಗ್ಗೆ ವಿಸ್ತೃತ ನಿಯಮಾವಳಿಗಳು ಹಾಗೂ ಪ್ರಕ್ರಿಯೆಗಳನ್ನು ಸೂಚಿಸಿದೆ.

ಸಿನಿಮಾಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅನುಮತಿ ನೀಡುವ ಮೊದಲು ಅವುಗಳಲ್ಲಿನ ವಸ್ತು ಏನು ಎಂಬ ಬಗ್ಗೆ ಪ್ರಮಾಣಪತ್ರ ನೀಡುವ ಶಾಸನಬದ್ಧ ಸಂಸ್ಥೆ ಸಿಬಿಎಫ್‌ಸಿ. ಈ ಸಂಸ್ಥೆಯನ್ನು ಸಿನಿಮಾಟೊಗ್ರಾಫ್‌ ಕಾಯ್ದೆ – 1952ರ ಅಡಿ ಸ್ಥಾಪಿಸಲಾಗಿದೆ. ಸಿನಿಮಾಗಳ ಸಾರ್ವಜನಿಕ ಪ್ರದರ್ಶನವನ್ನು ನಿಯಂತ್ರಣಕ್ಕೆ ಒಳಪಡಿಸುವುದು ಇದರ ಕೆಲಸ. ಸಿಬಿಎಫ್‌ಸಿಯು ಈ ಕಾಯ್ದೆಯ ಸೆಕ್ಷನ್‌ 5ಬಿ(ಐ) ಅನ್ನು ಪ್ರಮುಖವಾಗಿ ಗಮನದಲ್ಲಿ ಇಟ್ಟುಕೊಳ್ಳಬೇಕು. ಸಿನಿಮಾದ ಯಾವುದೇ ಭಾಗ ದೇಶದ ಸಾರ್ವಭೌಮತ್ವ ಹಾಗೂ ಸಮಗ್ರತೆಗೆ ಧಕ್ಕೆ ತರುವಂತಿದ್ದರೆ, ದೇಶದ ಭದ್ರತೆಗೆ, ದೇಶವು ವಿದೇಶಗಳ ಜೊತೆ ಹೊಂದಿರುವ ಸ್ನೇಹಸಂಬಂಧಕ್ಕೆ ಧಕ್ಕೆ ತರುವಂತಿದ್ದರೆ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತೆ ಇದ್ದರೆ, ಮಾನಹಾನಿಗೆ ಹಾಗೂ ನ್ಯಾಯಾಂಗ ನಿಂದನೆಗೆ ಕಾರಣವಾಗುವಂತಹ ಅಂಶಗಳು ಅಥವಾ ಸಿನಿಮಾದಲ್ಲಿನ ಯಾವುದೇ ಭಾಗ ಅಪರಾಧ ಕೃತ್ಯಕ್ಕೆ ಕಾರಣವಾಗುವಂತೆ ಇದ್ದರೆ ಅಂತಹ ಸಿನಿಮಾಕ್ಕೆ ಪ್ರಮಾಣಪತ್ರ ನೀಡುವಂತಿಲ್ಲ ಎನ್ನುತ್ತದೆ ಈ ಸೆಕ್ಷನ್. 1991ರಲ್ಲಿ ಹೊರಡಿಸಿದ ಮಾರ್ಗಸೂಚಿಗಳಲ್ಲೂ ಈ ವಿಚಾರಗಳು ಇವೆ, ಈ ಮಾರ್ಗಸೂಚಿಗಳು ಕೂಡ ಸಿನಿಮಾದ ಭಾಗಗಳಿಗೆ ಕತ್ತರಿ ಹಾಕುವಂತೆ ಹೇಳುವ ಅಧಿಕಾರವನ್ನು ಸಿಬಿಎಫ್‌ಸಿಗೆ ನೀಡುತ್ತವೆ.

ಕಳೆದ ಇಪ್ಪತ್ತೈದು ವರ್ಷಗಳಿಂದ ನಡೆದಿರುವ ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವ ಪ್ರಕ್ರಿಯೆಗಳಿಗೆ ಈ ಸೆಕ್ಷನ್ ಹಾಗೂ 1991ರ ಮಾರ್ಗಸೂಚಿಗಳು ಕಾನೂನಿನ ನೆಲೆ ಒದಗಿಸಿವೆ. ಸಿನಿಮಾಗಳಿಗೆ ಪ್ರಮಾಣಪತ್ರ ನೀಡಬೇಕಿರುವ ಮಂಡಳಿಯೊಂದು ಸಿನಿಮಾ ಭಾಗಗಳಿಗೆ ಕತ್ತರಿ ಹಾಕುವ ಮಂಡಳಿಯಾಗಿ ಪರಿವರ್ತನೆ ಕಾಣಲೂ ಈ ಕಾನೂನುಗಳು ಕಾರಣವಾಗಿವೆ. ಕತ್ತರಿ ಹಾಕುವ ಕೆಲಸವು ಸೃಜನಶೀಲತೆಗೆ ಪೂರಕವಲ್ಲದಿರುವ ಕಾರಣದಿಂದಾಗಿ, ಈ ಕಾನೂನುಗಳು ವಿವಾದದ ಮೂಲ ಕೂಡ ಆಗಿವೆ.

ಬಹುಪಾಲು ವಿವಾದಗಳು ಸಿನಿಮಾ ಭಾಗಗಳಿಗೆ ಕತ್ತರಿ ಹಾಕುವಂತೆ ಈ ಸಂಸ್ಥೆ ಸೂಚಿಸುವುದಕ್ಕೆ ಸಂಬಂಧಿಸಿದವು. ಬೆನಗಲ್ ಸಮಿತಿಯ ಮುಖ್ಯ ಶಿಫಾರಸುಗಳನ್ನು ಒಪ್ಪಿಕೊಂಡರೆ ಈ ಸಮಸ್ಯೆಯನ್ನು ನಿವಾರಿಸಬಹುದು. ‘ಸಿನಿಮಾ ಮೇಲಿನ ಹಕ್ಕುಸ್ವಾಮ್ಯ ಹೊಂದಿರುವ ವ್ಯಕ್ತಿ ಆ ಸಿನಿಮಾದ ಹೂರಣದ ಮೇಲೆ ಪೂರ್ಣ ಪ್ರಮಾಣದ ಹಕ್ಕು ಹೊಂದಿರುತ್ತಾನೆ. ಸಿನಿಮಾದಲ್ಲಿ ಯಾವುದೇ ಬದಲಾವಣೆಯನ್ನು ಆತ ಮಾತ್ರ ತರಬಹುದು’ ಎಂಬ ತತ್ವವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಮಿತಿಯು, ‘ಸಿನಿಮಾದ ಭಾಗಗಳಿಗೆ ಕತ್ತರಿ ಹಾಕಲು ಸಿಬಿಎಫ್‌ಸಿಗೆ ಅಧಿಕಾರ ನೀಡುವ ಮಾರ್ಗಸೂಚಿಗಳನ್ನು ಪರಿಷ್ಕರಿಸಬೇಕು’ ಎಂದು ಒಮ್ಮತದ ಅಭಿಪ್ರಾಯ ನೀಡಿದೆ. ‘ಕತ್ತರಿ ಹಾಕುವಂತೆ ಒತ್ತಡ ಹೇರುವ (ಈಗ ಇರುವಂತೆ) ವ್ಯವಸ್ಥೆ ಇರಲೇಬಾರದು. ಮಂಡಳಿಯ ಹೆಸರು ಸೂಚಿಸುವಂತೆ, ಸಿಬಿಎಫ್‌ಸಿಯು ಸಿನಿಮಾಗಳಿಗೆ ಪ್ರಮಾಣಪತ್ರವನ್ನು ಮಾತ್ರ ನೀಡುವ ಸಂಸ್ಥೆಯಾಗಿ ಪರಿವರ್ತನೆ ಹೊಂದಬೇಕು’ ಎಂದು ಸಮಿತಿಯು ಸ್ಪಷ್ಟವಾಗಿ ಹೇಳಿದೆ.

ಯಾವ ಅಂಶವು ಒಂದು ವಿಚಾರವನ್ನು ವೈಭವೀಕರಿಸುತ್ತದೆ ಅಥವಾ ಆ ವಿಚಾರಕ್ಕೆ ಉತ್ತೇಜನ ನೀಡುತ್ತದೆ ಎಂಬುದನ್ನು ತೀರ್ಮಾನಿಸುವ ಮೂಲಕ ಹಾಗೂ ‘ಯಾವುದು ನೀತಿ, ಯಾವುದು ಅನೀತಿ’ ಎಂಬುದನ್ನು ನಿರ್ಧರಿಸುವ ಕೆಲಸವನ್ನು ಸಿಬಿಎಫ್‌ಸಿ ಮಾಡುವಂತಿಲ್ಲ ಎಂದು ಸಮಿತಿ ಹೇಳಿರುವುದು ಬಹಳ ಮುಖ್ಯ. ಚಿತ್ರವೊಂದನ್ನು ಯಾರು ಹಾಗೂ ಯಾವ ವರ್ಗದ ಜನ ವೀಕ್ಷಿಸಬಹುದು ಎಂಬುದನ್ನು ತೀರ್ಮಾನಿಸುವ ಕೆಲಸ ಮಾಡುವುದು ಮಾತ್ರ ಮಂಡಳಿಯ ಕೆಲಸ ಆಗಬೇಕು. ಯಾವುದೇ ಸಿನಿಮಾವು ಸಿನಿಮಾಟೊಗ್ರಾಫ್ ಕಾಯ್ದೆಯ 5ಬಿ(ಐ) ಸೆಕ್ಷನ್‌ ಉಲ್ಲಂಘಿಸಿದರೆ ಅಥವಾ ಸಮಿತಿಯು ಶಿಫಾರಸು ಮಾಡಿರುವ ಯಾವುದೇ ಪ್ರಮಾಣಪತ್ರದ ಮಿತಿಯಲ್ಲಿ ಬಾರದಿದ್ದರೆ, ಅಂತಹ ಸಿನಿಮಾಕ್ಕೆ ಪ‍್ರಮಾಣಪತ್ರ ನೀಡುವುದಿಲ್ಲ ಎಂದು ಹೇಳುವ ಅಧಿಕಾರ ಮಂಡಳಿಗೆ ಇರುತ್ತದೆ. ಆದರೆ, ಸಿನಿಮಾದ ಭಾಗಗಳಿಗೆ ಕತ್ತರಿ ಹಾಕುವಂತೆ ನಿರ್ದೇಶನ ನೀಡುವ, ಬದಲಾವಣೆ ತರುವಂತೆ ಹೇಳುವ ಅಧಿಕಾರವನ್ನು ಮಂಡಳಿಗೆ ನೀಡಬಾರದು. ಸಿನಿಮಾ ವೀಕ್ಷಿಸಲು ಮುಂದಾಗುವವರಿಗೆ, ಆ ಸಿನಿಮಾದಲ್ಲಿ ಯಾವ ಬಗೆಯ ದೃಶ್ಯ, ಹೂರಣ ಇದೆ ಎಂಬ ಬಗ್ಗೆ ಮುನ್ನೆಚ್ಚರಿಕೆ ನೀಡುವ ರೂಪದಲ್ಲಿ ಮಾತ್ರ ಸಿನಿಮಾಗಳನ್ನು ಸಿಬಿಎಫ್‌ಸಿ ವರ್ಗೀಕರಿಸಬೇಕು ಎಂದು ಸಮಿತಿ ಹೇಳಿದೆ. ‘ಸಿಬಿಎಫ್‌ಸಿಯು ಶಾಸನಬದ್ಧವಾದ ಇಂಥದ್ದೊಂದು ಎಚ್ಚರಿಕೆಯನ್ನು ನೀಡಿದ ನಂತರ, ಆ ಸಿನಿಮಾ ವೀಕ್ಷಿಸುವುದು ಆ ವರ್ಗದ ಜನರಿಗೆ ಬಿಟ್ಟ ವಿಚಾರ. ಸಿನಿಮಾ ವೀಕ್ಷಣೆ ಸ್ವಇಚ್ಛೆಯಿಂದ ಆಗುವಂಥದ್ದು’. ಸಿನಿಮಾಗಳನ್ನು ವರ್ಗೀಕರಿಸುವುದರಲ್ಲಿ ಕೂಡ ಬದಲಾವಣೆ ಆಗಬೇಕು. ಹಿಂಸೆ, ವ್ಯಕ್ತಿಗಳು ನಗ್ನವಾಗಿರುವುದನ್ನು ತೋರಿಸುವ ದೃಶ್ಯಗಳಿರುವ ಸಿನಿಮಾಗಳಿಗೆ ಹೊಸ ಎ–ಸಿ (ವಯಸ್ಕರು ಮುನ್ನೆಚ್ಚರಿಕೆಯೊಂದಿಗೆ ವೀಕ್ಷಿಸಬಹುದು) ಪ್ರಮಾಣಪತ್ರ ನೀಡಬೇಕು ಎಂದು ಸಲಹೆ ಮಾಡಿದೆ. ನಿರ್ದಿಷ್ಟ ವರ್ಗದ ವೀಕ್ಷಕರಿಗೆ ಅಶ್ಲೀಲ, ಅಶ್ಲೀಲ ಸೂಚಕ ಹಾಡುಗಳು ಮತ್ತು ನೃತ್ಯಗಳು ಇರುವ ಸಿನಿಮಾಗಳನ್ನು ನಿರ್ದೇಶಕರು ರೂಪಿಸದಂತೆ ಇದು ತಡೆಯುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಸಿಬಿಎಫ್‌ಸಿಯ ಕಾರ್ಯ ಸ್ವರೂಪದ ಬಗ್ಗೆ ಬೆನಗಲ್ ಸಮಿತಿಯು ಪರಿಶೀಲಿಸುವುದಕ್ಕಿಂತಲೂ ಮೊದಲು, ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿದೆ. ‘ಸಲಹೆ ನೀಡುವ ಈ ಮಂಡಳಿಯ ಕೆಲವು ಸದಸ್ಯರು ತಾವೇ ಮಂಡಳಿ ಎಂದು ಭಾವಿಸಿದ್ದರು. ದೃಶ್ಯಗಳಿಗೆ ಕತ್ತರಿ ಹಾಕುವ ಅಧಿಕಾರ ತಮಗಿದೆ ಎಂದು ಭಾವಿಸಿದ್ದರು. ಈ ಸದಸ್ಯರು ತಾವು ನಂಬಿದ್ದ ನೈತಿಕ, ರಾಜಕೀಯ ಅಥವಾ ಧಾರ್ಮಿಕ ನಿಯಮಗಳನ್ನು ಸಿನಿಮಾ ಮೇಲೆ ಹೇರಿದ್ದರು. ಸಂಭಾಷಣೆಗಳಲ್ಲಿ ಬಾಯ್‌ಫ್ರೆಂಡ್‌, ಕಿಸ್‌ ಎಂಬಂತಹ ಪದಗಳು ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು’ ಎಂದು ಮುದ್ಗಲ್ ಸಮಿತಿ ಕಂಡುಕೊಂಡಿತ್ತು.

‘ಸಿನಿಮಾ ಎಂಬುದು ಒಂದು ಕಲೆ. ಅದರ ಗುಣದ ಕಾರಣದಿಂದಾಗಿ ಸಿನಿಮಾವನ್ನು ಬೇರೆ ಬೇರೆ ರೀತಿಗಳಲ್ಲಿ ವ್ಯಕ್ತಪಡಿಸಲು, ಬೇರೆ ಬೇರೆ ರೀತಿಗಳಲ್ಲಿ ವ್ಯಾಖ್ಯಾನಿಸಲು ಸಾಧ್ಯವಿದೆ’ ಎಂದು ಸಮಿತಿ ಹೇಳಿದೆ. ಅತಿಯಾದ ಹಿಂಸೆ, ನೈತಿಕತೆ ಮತ್ತು ಅಶ್ಲೀಲ ಎಂಬ ಪದಗಳಿಗೆ ಅರ್ಥ ನೀಡಲು ನ್ಯಾಯಾಲಯಗಳು ವರ್ಷಗಳ ಕಾಲ ಹೆಣಗಿವೆ ಎಂದೂ ಸಮಿತಿ ಹೇಳಿದೆ. ‘ಇಂತಹ ಪದಗಳಿಗೆ ಸುಸ್ಪಷ್ಟವಾದ ವ್ಯಾಖ್ಯಾನ ನೀಡುವುದು ಸಾಧ್ಯವಿಲ್ಲ. ಹಾಗಾಗಿ ಈ ಪದಗಳನ್ನು ಅರ್ಥೈಸುವಿಕೆಯ ವಿಧಾನ ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ’ ಎಂದು ಸಮಿತಿ ಹೇಳಿದೆ.

ಸಿನಿಮಾಗಳಲ್ಲಿನ ದೃಶ್ಯಗಳಿಗೆ ಅಸೂಕ್ಷ್ಮವಾಗಿ, ಆಲೋಚನಾರಹಿತವಾಗಿ ಕತ್ತರಿ ಹಾಕುವುದರ ವಿರುದ್ಧದ ವಾದಗಳು ಬಲವಾಗಿರುವ ಕಾರಣ, ಸಿಬಿಎಫ್‌ಸಿಯು ಕಾಲದ ಜೊತೆ ಹೆಜ್ಜೆ ಹಾಕುತ್ತದೆ, ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವುದಕ್ಕೆ ಮಾತ್ರ ತನ್ನನ್ನು ಸೀಮಿತಗೊಳಿಸಿಕೊಳ್ಳುತ್ತದೆ ಎಂದು ಆಶಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry