7

ಸಂಸ್ಕೃತ ಕಾವ್ಯ ಪರಂಪರೆ – 1

Published:
Updated:

ಸಂಸ್ಕೃತ ಎಂದರೆ ಹಲವರಿಗೆ ಭಯ. ಆ ಭಯಕ್ಕೆ ಕಾರಣ – ಸಂಸ್ಕೃತ ತುಂಬ ಕಠಿಣವಾದ ಭಾಷೆ ಎನ್ನುವುದು. ಗಣಿತವನ್ನು ವಿಜ್ಞಾನದ ಭಾಷೆ ಎನ್ನುವುದುಂಟು. ಗಣಿತ ಎಂದರೆ ಹೆದರುವವರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ ಭಾಷೆಗಳಲ್ಲಿಯೇ ಅತ್ಯಂತ ಕಠಿಣವಾದದ್ದು ಸಂಸ್ಕೃತ ಎಂಬ ಅನಿಸಿಕೆಯೂ ಕೆಲವರಲ್ಲಿ ಉಂಟೆನ್ನಿ! ಈ ಮಾತಿನ ಸತ್ಯಾಸತ್ಯಗಳ ವಿಶ್ಲೇಷಣೆಗೆ ಸದ್ಯ ಇಲ್ಲಿ ತೊಡಗುವುದು ಬೇಡ. ಆದರೆ ಸಂಸ್ಕೃತ ತುಂಬ ವ್ಯವಸ್ಥಿತವಾದ ಭಾಷೆ ಎನ್ನುವುದಂತೂ ಸತ್ಯ.

ವ್ಯಾಕರಣದ ಕ್ರಮಬದ್ಧತೆಯಲ್ಲಿ ಈ ಭಾಷೆಯ ಉಗಮ–ವಿಕಾಸ–ಉಪಯೋಗಗಳು ನಿಂತಿವೆ. ಈ ಕಾರಣದಿಂದಲೇ ಸಾವಿರಾರು ವರ್ಷಗಳ ಹಿಂದೆ ರಚಿತವಾದ ಸಂಸ್ಕೃತ ಗ್ರಂಥವನ್ನು ಸಂಸ್ಕೃತ ಕಲಿತ ಇಂದಿನ ಯುವಕ–ಯುವತಿಯರೂ ಅರ್ಥ ಮಾಡಿಕೊಳ್ಳಬಹುದು.

ಉದಾಹರಣೆಗೆ, ರಾಮಾಯಣದ ಸಂಸ್ಕೃತವನ್ನು ಅರ್ಥ ಮಾಡಿಕೊಳ್ಳಲು, ಅಥವಾ ರಾಮಾಯಣದ ಸಂಸ್ಕೃತದಲ್ಲಿಯೇ ಬರೆಯಲು ನಾವು ‘ಸಂಸ್ಕೃತ’ವನ್ನು ಕಲಿತರಷ್ಟೆ ಸಾಕು, ಸಂಸ್ಕೃತದಲ್ಲಿ ಪ್ರಾಚೀನ ಸಂಸ್ಕೃತ, ಮಧ್ಯಕಾಲೀನ ಸಂಸ್ಕೃತ, ನೂತನ ಸಂಸ್ಕೃತ ಎನ್ನುವಂಥ ವ್ಯತ್ಯಾಸಗಳು ಇಲ್ಲ. ಅಂದು ಅನ್ವಯವಾಗುವ ವ್ಯಾಕರಣವೂ ಇಂದಿಗೂ ಅನ್ವಯವಾಗುವ ವ್ಯಾಕರಣವೂ ಒಂದೇ; ಸಾವಿರಾರು ವರ್ಷಗಳ ಹಿಂದಿನ ಪಾಣಿನಿ ವ್ಯಾಕರಣದ ಸೂತ್ರಗಳೇ ಅಂದಿನ ಸಂಸ್ಕೃತಕ್ಕೂ ಇಂದಿನ ಸಂಸ್ಕೃತಕ್ಕೂ ಮೂಲ.

(ಸಂಸ್ಕೃತದಲ್ಲಿ ಪಾಣಿನಿಯ ವ್ಯಾಕರಣವಲ್ಲದೆ ಮತ್ತೂ ಹಲವು ವ್ಯಾಕರಣಪದ್ಧತಿಗಳು ಇದ್ದುದ್ದಕ್ಕೆ ಉಲ್ಲೇಖಗಳಿವೆ; ಆದರೆ ಇಂದು ಲಭ್ಯವಾಗಿರುವ ಸಂಸ್ಕೃತವಾಙ್ಮಯವು ಪಾಣಿನಿಯ ವ್ಯಾಕರಣಪದ್ಧತಿಯನ್ನೇ ಹೆಚ್ಚಾಗಿ ಆಶ್ರಯಿಸಿ ಬೆಳೆದುಬಂದಿದೆ; ವೈದಿಕಸಂಸ್ಕೃತ ಇದಕ್ಕಿಂತ ಸ್ವಲ್ಪ ಭಿನ್ನ.)

ಸಂಸ್ಕೃತದ ಕಲಿಕೆ ಎಷ್ಟು ಕಷ್ಟವೋ ಸುಲಭವೋ, ಅದು ಕಲಿಯುವವರನ್ನೂ ಕಲಿಸುವವರನ್ನೂ ಆಧರಿಸಿದೆ ಎನ್ನಬಹುದೆನಿಸುತ್ತದೆ. ಆದರೆ ಸಂಸ್ಕೃತ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು; ಮಾತ್ರವಲ್ಲ, ಇಂದಿಗೂ ಜೀವಂತವಾಗಿರುವ ಭಾಷೆ. ಮಾತ್ರವಲ್ಲ, ಸಂಸ್ಕೃತ ಅತ್ಯಂತ ಸುಂದರ ಭಾಷೆಯೂ ಹೌದು. ಈ ಭಾಷೆಯ ಸೌಂದರ್ಯದ ಹಲವು ಆಯಾಮಗಳನ್ನು ಸವಿಯಲು ನಾವು ಸಂಸ್ಕೃತಕಾವ್ಯ ಪರಂಪರೆಯನ್ನು ನೋಡಬೇಕಾಗುತ್ತದೆ.

ಭಾಷೆಯೊಂದು ಎಷ್ಟೊಂದು ನೆಲೆಗಳಲ್ಲಿ ಉಪಯೋಗಕ್ಕೆ ಬರಬಹುದು ಎಂಬುದರ ವಿರಾಟ್‌ ಸ್ವರೂಪವನ್ನು ಸಂಸ್ಕೃತಕಾವ್ಯ ಪರಂಪರೆಯನ್ನು ಅಧ್ಯಯನ ಮಾಡಿದರೆ ತಿಳಿಯುತ್ತದೆ. ಒಂದೇ ಪದಕ್ಕೆ ಎರಡು ಅರ್ಥಗಳು, ನಾಲ್ಕು ಅರ್ಥಗಳು, ಹತ್ತಾರು ಅರ್ಥಗಳು; ಪದಕ್ಕೆ ಏಕೆ, ಒಂದು ಅಕ್ಷರಕ್ಕೇ ಹಲವು ಅರ್ಥಗಳು; ಪದಗಳ ವಿನ್ಯಾಸದಲ್ಲಿ ಸಣ್ಣ ಪಲ್ಲಟವೊಂದರಿಂದ ಅರ್ಥದಲ್ಲಾಗುವ ಬೆಳವಣಿಗೆ; ವ್ಯಾಕರಣದ ಸೂತ್ರಗಳನ್ನು ಬಳಸಿಕೊಂಡು ಸೃಷ್ಟಿಸಬಹುದಾದ ಲಕ್ಷ ಲಕ್ಷ ಪದಗಳು – ಹೀಗೆ ಆ ಭಾಷೆ ತನ್ನಲ್ಲಿಯೇ ಹಲವು ಸ್ವಾರಸ್ಯಗಳನ್ನು ಅಡಗಿಸಿಕೊಂಡಿದೆ.

ಇನ್ನು ಆ ಭಾಷೆಯ ಬಂಧವೇ ಹಲವು ಸ್ತರಗಳಲ್ಲಿ ಮೂಡಿಸುವ ವಿಶೇಷಗಳೂ ಹಲವು. ಒಟ್ಟಿನಲ್ಲಿ ಸಂಸ್ಕೃತಭಾಷೆಯ ಸಾವಿರದ ಸುಂದರಮುಖಗಳನ್ನು ಆಸ್ವಾದಿಸಬೇಕೆಂದರೆ ಸಂಸ್ಕೃತಕಾವ್ಯ ಪರಂಪರೆಯನ್ನು ಪ್ರವೇಶಿಸಬೇಕು. ಇಂಥ ಸಂಸ್ಕೃತದ ಆದಿಕಾವ್ಯವೇ ರಾಮಾಯಣ. ಸಂಸ್ಕೃತಕಾವ್ಯದ ಹಲವು ಸ್ವಾರಸ್ಯ ಸಂಗತಿಗಳನ್ನು ಮುಂದೆ ನೋಡೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry