ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಧರ್ಮೀಯರ ‘ಮೊಹರಂ’ ಭಾವೈಕ್ಯ

Last Updated 1 ಅಕ್ಟೋಬರ್ 2017, 5:45 IST
ಅಕ್ಷರ ಗಾತ್ರ

ಭುಜಂಗನಗರ (ಸಂಡೂರು): ಇಲ್ಲಿ ಮುಸ್ಲಿಂ ಧರ್ಮದ ಒಂದು ಮನೆಯೂ ಇಲ್ಲ. ಆದಾಗ್ಯೂ ಇಲ್ಲಿರುವ ಸರ್ವ ಜನಾಂಗದವರು ಪೀರಲದೇವರನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸುತ್ತಾರೆ. ಇಂತಹ ಅಪೂರ್ವ ಆಚರಣೆ ಚಾಲ್ತಿಯಲ್ಲಿರುವುದು ತಾಲ್ಲೂಕಿನ ಭುಜಂಗನಗರ ಗ್ರಾಮದಲ್ಲಿ.

ಭಾವೈಕ್ಯತೆಗೆ ನಾಂದಿ: ಇಲ್ಲಿ ಎಲ್ಲಾ ಜನಾಂಗದವರು ಒಟ್ಟಿಗೆ ಸೇರಿ ಪೀರಲ ದೇವರುಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಪೀರಲ ದೇವರ ಆಲಯದ ಮುಂದೆ ಕುಣಿ ತೋಡುವುದು, ದೇವರುಗಳನ್ನು ಕಾಯುವುದು, ಕುಣಿಯನ್ನು ಮುಚ್ಚುವ ಕೆಲಸವನ್ನು ಹಿಂದೂ ಧರ್ಮದ ವಿವಿಧ ಜನಾಂಗದವರು ಒಟ್ಟಿಗೆ ಸೇರಿ ಮಾಡುತ್ತಾರೆ.

ಸಂಡೂರಿನ ಮುಸ್ಲಿಂ ಕುಟುಂಬವೊಂದು ಹಲವು ಶತಮಾನಗಳಿಂದ ಇಲ್ಲಿ ಪೀರಲ ದೇವರ ಪೂಜೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಪ್ರಸ್ತುತ ಸಂಡೂರಿನ ದಸ್ತಗಿರ್ ಮುಜಾವರ್ ಅವರು ಇಲ್ಲಿನ ಪೀರಲ ದೇವರನ್ನು ಹೋರುವುದಲ್ಲದೆ, ಅವರ ಕುಟುಂಬದವರೆ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಾರೆ.

ನೂರಾರು ವರ್ಷಗಳ ಹಿಂದೆ ದನ ಕಾಯುವ ಹುಡುಗರು ಗ್ರಾಮದ ಬಳಿಯ ಬಗಟಿ ಗುಡ್ಡದ ಹತ್ತಿರ ದನ ಮೇಯಿಸಲು ಹೊದಾಗ, ಅಲ್ಲಿ ಪೀರಲ ದೇವರ ಮೂರ್ತಿ ಕಂಡು ಬಂದಿದೆ. ವಿಷಯವನ್ನು ಹುಡುಗರು ಗ್ರಾಮದ ಮುಖಂಡರಿಗೆ ತಿಳಿಸಿದಾಗ, ಗ್ರಾಮಸ್ಥರು ಹೋಗಿ ಮೂರ್ತಿಯನ್ನು ತಂದು ಪೂಜಿಸಿದ್ದಾರೆ. ಈ ಪೀರಲ ದೇವರನ್ನು ಹೊನ್ನೂರಸ್ವಾಮಿ ಎಂದು ಇಲ್ಲಿ ಪೂಜಿಸಲಾಗುತ್ತಿದೆ. ಗ್ರಾಮದಲ್ಲಿ ಪೀರಲ ದೇವರನ್ನು ಪ್ರತಿಷ್ಠಾಪಿಸಿದ ಮೇಲೆ ಊರಿಗೆ ಒಳ್ಳೆಯದಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ವಿವಿಧ ಜಾತಿಯವರು ಪೀರಲ ದೇವರಿಗೆ ನಡೆದುಕೊಳ್ಳುತ್ತಾರೆ ಎಂದು ಗ್ರಾಮದ ಮುಖಂಡರಾದ ಚಂದ್ರಶೇಖರ್ ಮೇಟಿ, ಪಂಪಣ್ಣ ಹೇಳಿದರು.

ಈ ಹಿಂದೆ ಇಲ್ಲಿನ ಪೀರಲ ದೇವರು ಸಂಡೂರಿಗೆ ಹೋಗಿ ಬರುತ್ತಿತ್ತು. ಒಮ್ಮೆ ಜನರೊಂದಿಗೆ ಸಂಡೂರಿಗೆ ಹೋಗಿ ರಾತ್ರಿ ಬರುವಾಗ ನಾರಿಹಳ್ಳದಲ್ಲಿ ನೀರು ಹೆಚ್ಚಾಗಿ ಪಂಜು ಆರಿ ಹೋಗಿದೆ. ಅದನ್ನು ಪುನಾ ಉರಿಸಲು ಎಣ್ಣೆಯೂ ಖಾಲಿಯಾಗಿದೆ. ಆಗ ಪೀರಲ ದೇವರು ಹಳ್ಳದ ನೀರನ್ನು ಹಾಕಿ ಉರಿಸಿರೆಂದಾಗ, ಜನ ಹಾಗೆಯೇ ಮಾಡಿ, ನೀರಿನಿಂದ ಪಂಜನ್ನು ಉರಿಸಿ ಗ್ರಾಮಕ್ಕೆ ದೇವರನ್ನು ಕರೆ ತಂದಿದ್ದರಂತೆ ಎಂದು ತಮ್ಮ ಹಿರಿಯರು ಹೇಳಿದ ಮಾತನ್ನು ಚಂದ್ರಶೇಖರ ಮೇಟಿ ಅವರು ನೆನಪಿಸಿಕೊಂಡರು.

ಈಗಲು ಕತ್ತಲರಾತ್ರಿಯ ದಿನ ಮಳೆ, ಬೆಳೆ ಹಾಗೂ ಜನರ ಯೋಗಕ್ಷೇಮ ಕುರಿತು ಹೊನ್ನೂರಸ್ವಾಮಿ ಪೀರಲ ದೇವರ ಹೇಳಿಕೆಯಾಗುತ್ತದೆ. ಈ ಹೇಳಿಕೆಯ ಮೇಲೆ ಜನತೆಗೆ ಹೆಚ್ಚಿನ ನಂಬಿಕೆ ಇದೆ. ಹೇಳಿಕೆ ಖಂಡಿತವಾಗಿ ನೆರವೇರುತ್ತದೆ ಎನ್ನುತ್ತಾರೆ ಚಂದ್ರಶೇಖರ ಮೇಟಿ.

ಗ್ರಾಮದ ಎಲ್ಲಾ ಜಾತಿ ಜನಾಂಗದವರು ಕೂಡಿ ಗ್ರಾಮದಲ್ಲಿ ಪೀರಲ ದೇವರ ಹಬ್ಬವನ್ನು ಆಚರಿಸುವ ಮೂಲಕ ಗ್ರಾಮದಲ್ಲಿ ಭಾವೈಕ್ಯತೆ ನೆಲೆಗೊಳ್ಳುವಂತೆ ಮಾಡಿದ್ದಾರೆ. ಗ್ರಾಮದಲ್ಲಿ ನೆಲೆಗೊಂಡಿರುವ ಭಾವೈಕ್ಯತೆ, ಸಾಮರಸ್ಯ ಹೀಗೆಯೇ ಮುಂದುವರಿಯಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT