ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ನಿರ್ಮೂಲನೆಗೆ ಶ್ರಮಿಸಿದ್ದ ಗಾಂಧೀಜಿ

ತ್ರಿಪುರ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ
Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಗಾಂಧೀಜಿ ಆರಂಭದ ದಿನಗಳಲ್ಲಿ ಜಾತಿ ವ್ಯವಸ್ಥೆ ಒಪ್ಪಿದ್ದರು. ಆದರೆ, ಕ್ರಮೇಣ ಅದು ಸಾಮಾಜಿಕ ಪಿಡುಗಾಗಿ ಬೆಳೆಯುತ್ತಿದ್ದುದನ್ನು ಮನಗಂಡು ಜಾತಿ ನಿರ್ಮೂಲನೆಗೆ ಪ್ರಾಮಾಣಿಕ ಹೋರಾಟ ನಡೆಸಿದ್ದಾರೆ’ ಎಂದು ತ್ರಿಪುರ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಹಪ್ರಾಧ್ಯಾಪಕ ಡಾ.ನಿಶಿಕಾಂತ್ ಕೊಲ್ಗೆ ಅಭಿಪ್ರಾಯಪಟ್ಟರು.

ಶೇಷಾದ್ರಿಪುರ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ 'ಜಾತಿ ವಿರುದ್ಧ ಗಾಂಧಿ' ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಗಾಂಧೀಜಿ ಬರವಣಿಗೆಯಲ್ಲಿ ಅಷ್ಟೇ ಅಲ್ಲ, ಬದುಕಿನ ನಡವಳಿಕೆಯಲ್ಲೂ ಜಾತಿ ವ್ಯವಸ್ಥೆಯ ವಿರುದ್ಧವಾಗಿದ್ದರು. ಅಂತರ್ಜಾತಿ ಮತ್ತು ಅಂತರ್‌ ಧರ್ಮೀಯ ವಿವಾಹ ಪ್ರೋತ್ಸಾಹಿಸಿದ್ದರು. ಸ್ವಂತ ಮಕ್ಕಳಿಗೆ ಅಂತರ್ಜಾತಿ ವಿವಾಹ ಮಾಡಿಸಿದ್ದರು. ಅಂತರ್ಜಾತಿ ವಿವಾಹಗಳಲ್ಲಿ ಮಾತ್ರ ಪಾಲ್ಗೊಂಡು ಬದ್ಧತೆ ಪ್ರದರ್ಶಿಸಿದ್ದರು’ ಎಂದು ಹೇಳಿದರು.

‘ಸ್ವಾತಂತ್ರ್ಯ ಮತ್ತು ಆರ್ಥಿಕಾಭಿವೃದ್ಧಿಗೆ ಜಾತಿ ತೊಡಕಾಗಬಾರದು. ದೇಶದಲ್ಲಿ ಜಾತಿ ವ್ಯವಸ್ಥೆ ಸಂಪೂರ್ಣ ನಿರ್ಮೂಲನೆ ಆಗಬೇಕೆನ್ನುವುದು ಅವರ ಇಂಗಿತವಾಗಿತ್ತು. ದಲಿತರು, ಶೂದ್ರರಿಗೆ ಪ್ರವೇಶ ಇರದ ಕಡೆಗೆ ಅವರು ಕಾಲಿಡುತ್ತಿರಲಿಲ್ಲ’ ಎಂದು 'ಗಾಂಧಿ ಅಗೆನೆಸ್ಟ್‌ ಕ್ಯಾಸ್ಟ್' ಕೃತಿಯ ಲೇಖಕ ಕೊಲ್ಗೆ ತಿಳಿಸಿದರು.

ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್‌ ಮಾತನಾಡಿ, ‘ಇಂದು ಸಾಮಾಜಿಕ ರಂಗದಲ್ಲಿ ಜಾತಿ ವ್ಯವಸ್ಥೆ ಇಲ್ಲ. ಆದರೆ, ರಾಜಕೀಯ ಕ್ಷೇತ್ರದಲ್ಲಿ ಇದು ಗಟ್ಟಿಯಾಗಿ ಬೇರೂರಿದೆ. 1950- 60ರ ದಶಕಗಳಲ್ಲಿ ಹೋಟೆಲ್‌ಗಳಲ್ಲಿ ಬ್ರಾಹ್ಮಣರು ಮತ್ತು ಲಿಂಗಾಯಿತರನ್ನು ಬಿಟ್ಟು ಉಳಿದವರಿಗೆ ಕುಡಿಯುವ ನೀರಿನ ಲೋಟಗಳನ್ನು ಹೊರಗಡೆ ಇಡುತ್ತಿದ್ದರು. ದಲಿತರಿಗೆ ಹೋಟೆಲ್‌, ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಿಸುತ್ತಿದ್ದರು. ಸಾರ್ವಜನಿಕ ಬಾವಿ, ಕೆರೆಗಳಲ್ಲಿ ದಲಿತರು ನೀರು ಮುಟ್ಟುವಂತಿರಲಿಲ್ಲ. ಸಾಮಾಜಿಕ ಜೀವನದಲ್ಲಿ ಅಸ್ಪೃಶ್ಯತೆ ಕಡಿಮೆಯಾಗುತ್ತಿದ್ದರೂ, ಕಾರ್ಪೋರೇಟ್‌ ವಲಯದಲ್ಲಿ ಮತ್ತೊಂದು ಬಗೆಯ ಅಸ್ಪೃಶ್ಯತೆ ತಲೆ ಎತ್ತಿದೆ’ ಎಂದುಬೇಸರ ವ್ಯಕ್ತಪಡಿಸಿದರು.

ಗಾಂಧಿ ಶಾಂತಿ ಪ್ರತಿಷ್ಠಾನ ಅಧ್ಯಕ್ಷ ಡಾ.ವೊಡೇ ಪಿ.ಕೃಷ್ಣ ಮಾತನಾಡಿ, ‘ಹಸಿವು, ಜಾತಿ ಹಾಗೂ ಭ್ರಷ್ಟಾಚಾರಮುಕ್ತ ದೇಶ ನಿರ್ಮಿಸುವ ಸವಾಲು ಯುವಜನರ ಮುಂದಿದೆ’ ಎಂದು ಹೇಳಿದರು.

* ಗಾಂಧಿ ಮತ್ತು ಅಂಬೇಡ್ಕರ್‌ ಹೋರಾಟದ ಮಾರ್ಗಗಳು ಬೇರೇ ಬೇರೆಯಾಗಿದ್ದರೂ, ಗುರಿ ಒಂದೇ ಆಗಿತ್ತು. ಇದನ್ನು ಯುವಜನರು ಅರ್ಥ ಮಾಡಿಕೊಳ್ಳಬೇಕು.

-ಡಾ.ಡಿ.ಜೀವನ್‌ಕುಮಾರ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಗೌರವ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT