ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ಉತ್ತೇಜನ ನೀಡಿ, ಜೀವ ಜಲ ಸಂರಕ್ಷಿಸಿ

Last Updated 7 ಅಕ್ಟೋಬರ್ 2017, 5:38 IST
ಅಕ್ಷರ ಗಾತ್ರ

ಬೀದರ್: ರಾಜ್ಯ ಸರ್ಕಾರ, ಸಾವಯವ ಕೃಷಿ ಹಾಗೂ ಜೀವ ಜಲ ಸಂರಕ್ಷಣೆಗೆ ಆದ್ಯತೆ ನೀಡುವುದರ ಜತೆಗೆ ಯುವಕರನ್ನು ಕೃಷಿಯತ್ತ ಸೆಳೆಯಲು ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ವಿಷನ್-2025 ಕಾರ್ಯಾಗಾರದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಪ್ರಮುಖರು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾಉಲ್ಲಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪ್ರಗತಿಪರ ಕೃಷಿಕರು, ರೈತ ಮುಖಂಡರು ಹಾಗೂ ಕೃಷಿ ಸಹಕಾರ ಪತ್ತಿನ ಸಂಘಗಳ ಪ್ರತಿನಿಧಿಗಳು ಕೃಷಿ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಮಾರುಕಟ್ಟೆಯಲ್ಲಿ ಯಾವುದೇ ವಸ್ತು ತಯಾರಾದರೂ ಅದರ ಬೆಲೆ ಮೊದಲೆ ನಿಗದಿ ಆಗುತ್ತದೆ. ಆದರೆ, ರೈತರು ವರ್ಷಪೂರ್ತಿ ಶ್ರಮ ವಹಿಸಿ ಬೆಳೆ ಬೆಳೆದರೂ ಬೆಲೆ ನಿಗದಿ ಮಾಡಲು ಸಾಧ್ಯವಾಗುವುದಿಲ್ಲ. ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳು ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವುದು ನಿಲ್ಲಬೇಕು. ಸರ್ಕಾರ ನೇರವಾಗಿ ಖರೀದಿ ಕೇಂದ್ರಗಳ ಮೂಲಕ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಬೇಕು’ ಎಂದು ಮನವಿ ಮಾಡಿದರು.

ವೈಜನಾಥ ನೌಬಾದೆ ಮಾತನಾಡಿ, ‘ರೈತ ಉದ್ದು, ತೊಗರಿ ಮಾರಾಟ ಮಾಡಿದ ನಂತರ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದರೆ ಪ್ರಯೋಜನ ಆಗುವುದಿಲ್ಲ. ಬೆಳೆ ಕಟಾವು ಆರಂಭವಾದ ತಕ್ಷಣ ಖರೀದಿ ಕೇಂದ್ರ ತೆರೆಯಬೇಕು’ ಎಂದು ಕೋರಿದರು.

ಹುಡಗಿ ಗ್ರಾಮದ ರೈತ ಗುರುಲಿಂಗಪ್ಪ ಮಾತನಾಡಿ, ‘ಕೃಷಿ ಕ್ಷೇತ್ರವನ್ನು ಸರ್ಕಾರವೇ ಹಾಳು ಮಾಡುತ್ತಿದೆ. ಉಚಿತ ಆಹಾರಧಾನ್ಯ ಕೊಡುವ ಮೂಲಕ ಯುವಕರನ್ನು ಸೋಮಾರಿಗಳನ್ನಾಗಿ ಮಾಡಿದೆ. ಮೊದಲು ಬಿಟ್ಟಿ ಕೊಡುವುದನ್ನು ನಿಲ್ಲಿಸಬೇಕು. ಕಾಯಕ ಪ್ರವೃತ್ತಿ ಬೆಳೆಸಬೇಕು’ ಎಂದರು.

‘ಪ್ರತಿಯೊಂದು ಗ್ರಾಮದಲ್ಲಿ ಗೋದಾಮು ನಿರ್ಮಿಸಬೇಕು. ಪತಿ ಹೊಲಕ್ಕೆ ಹೊರಟರೆ ಪತ್ನಿ ವಿಚ್ಛೇದನ ನೀಡುವ ಸ್ಥಿತಿ ಬಂದಿದೆ. ಆದ್ದರಿಂದ ಕೃಷಿಯನ್ನು ಲಾಭದಾಯಕವಾಗಿ ಮಾಡಬೇಕು. ಯುವಜನಾಂಗ ಕೃಷಿಗೆ ಮರಳುವಂತೆ ಯೋಜನೆ ರೂಪಿಸಬೇಕು’ ಎಂದು ಸಲಹೆ ನೀಡಿದರು.

ಮರಕಲ್‌ನ ರೈತ ವೈಜನಾಥ, ‘ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನದ ಶಿಕ್ಷಣ ಪಡೆಯಲು ಯುವಕರು ಮುಗಿ ಬೀಳುತ್ತಿದ್ದಾರೆ. ಅದೇ ಒಕ್ಕಲುತನಕ್ಕೆ ಬರುತ್ತಿಲ್ಲ. ರೈತರು ಕೃಷಿ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸರ್ಕಾರ, ಕೃಷಿ ಕಾರ್ಯಕ್ಕೆ ಟ್ರ್ಯಾಕ್ಟರ್ ಕೊಟ್ಟರೆ ಕೆಲವರು ಬಾಡಿಗೆಗೆ ಕೊಡುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಮಾಲ್ಡಿಂಡಿ ಹಾಗೂ ಬಿಳಿಜೋಳದ ತಳಿಗಳ ಅವಿಷ್ಕಾರದ ನಂತರ ಹೊಸ ತಳಿಗಳ ಸಂಶೋಧನೆ ನಡೆದಿಲ್ಲ. ಹೊಸ ತಳಿಗಳ ಸಂಶೋಧನೆ ಮಾಡಬೇಕು. ಹೊಲಗಳಲ್ಲಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಒತ್ತು ಕೊಡಬೇಕು’ ಎಂದು ತಿಳಿಸಿದರು.

ರವಿ ಶಂಭು ಮಾತನಾಡಿ, ‘ಪ್ರದೇಶ ಹಾಗೂ ಹೊಲದಲ್ಲಿನ ಮಣ್ಣು ಆಧರಿಸಿ ಯಾವ ಬೆಳೆ ಬೆಳೆಯಬೇಕು ಎನ್ನುವ ಮಾಹಿತಿ ರೈತರಿಗೆ ಸಕಾಲದಲ್ಲಿ ದೊರೆಯಬೇಕು’ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಸುಧೀರ ಕಾಡಾದೆ ಮಾತನಾಡಿ,‘ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಜಾನುವಾರು ಪಾಲನೆಗೆ ಸರ್ಕಾರ ಉತ್ತೇಜನ ನೀಡಬೇಕು. ಕೃಷಿ ಜತೆಗೆ ಉಪ ಕಸುಬು ಕೈಗೊಂಡರೆ ಉತ್ತಮ ಆದಾಯ ಪಡೆಯಬಹುದು’ ಎಂದರು.

ಚಿಟ್ಟಾದ ಶಾಂತಲಿಂಗ ವೀರಯ್ಯ ಮಾತನಾಡಿ, ‘ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡಿದವರನ್ನೇ ಚುನಾವಣೆಯಲ್ಲಿ ಆಯ್ಕೆ ಮಾಡಬೇಕು. ಎಲ್ಲರೂ ಒಂದೇ ಬೆಳೆ ಬೆಳೆದರೆ ಲಾಭ ನಿರೀಕ್ಷಿಸಲಾಗದು. ಮಿಶ್ರ ಬೆಳೆ ಬೆಳೆಯಬೇಕು. ಗೋ ಆಧಾರಿತ ಕೃಷಿ ಮಾಡಬೇಕು’ ಎಂದರು.

‘ಶ್ರೀಗಂಧ ಹಾಗೂ ರಕ್ತ ಚಂದನಕ್ಕೆ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಇದೆ. ಒಂದು ಎಕರೆ ಪ್ರದೇಶದಲ್ಲಿ 112 ರಕ್ತ ಚಂದನ ಹಾಗೂ 105 ಶ್ರೀಗಂಧ ಬೆಳೆಯಬಹುದು. ರೈತರು 15 ವರ್ಷಗಳಲ್ಲಿ ಕೋಟ್ಯಂತರ ಆದಾಯ ಪಡೆಯಬಹುದಾಗಿದೆ. ಈ ಸಸಿಗಳನ್ನು ಬೆಳೆಸಲು ಸರ್ಕಾರ ಉತ್ತೇಜನ ನೀಡಬೇಕು’ ಎಂದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯಕುಮಾರ ಪಾಟೀಲ ಗಾದಗಿ, ಹೊನ್ನಿಕೇರಿಯ ಪ್ರಗತಿಪರ ರೈತ ರವೀಂದ್ರ ಪಾಟೀಲ, ಸಹಕಾರ ಮುಖಂಡ ಗುರುನಾಥ ಜ್ಯಾಂತಿಕರ್‌, ಗುನ್ನಳ್ಳಿಯ ನಾಗಶೆಟ್ಟಿ ಬಿರಾದಾರ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT