ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಸಚಿವರ ಹೆಸರು ಬಳಸಿ ಪುಂಡಾಟಿಕೆಗೆ ಜೋಶಿ ಖಂಡನೆ

Published:
Updated:
ಸಚಿವರ ಹೆಸರು ಬಳಸಿ ಪುಂಡಾಟಿಕೆಗೆ ಜೋಶಿ ಖಂಡನೆ

ಧಾರವಾಡ: ತಾಲ್ಲೂಕಿನ ಅಮ್ಮಿನಭಾವಿಯಲ್ಲಿ ಆಸ್ತಿಗಾಗಿ ನಡೆದ ಗಲಾಟೆಯಲ್ಲಿ ಹಲ್ಲೆಗೊಳಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದವ್ವ ತೀದಿ ಎಂಬುವವರನ್ನು ಸಂಸದ ಪ್ರಹ್ಲಾದ ಜೋಶಿ ಶುಕ್ರವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ನಂತರ ಮಾತನಾಡಿದ ಅವರು,‘ಹಲ್ಲೆ ನಡೆದರೂ ದೂರು ದಾಖಲಿಸಿಕೊಳ್ಳದ ಪೊಲೀಸರ ಕ್ರಮ ಸರಿಯಲ್ಲ. ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರ ಹೆಸರು ಬಳಸಿಕೊಂಡು ಪುಂಡಾಟಿಕೆಯಲ್ಲಿ ತೊಡಗಿರುವವರನ್ನು ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿದರು.

‘ತನ್ನ ರಕ್ಷಣೆಗೆ ಸಚಿವ ವಿನಯ ಕುಲಕರ್ಣಿ ಅಣ್ಣ ಇದ್ದಾರೆ ಎಂದು ಹಲ್ಲೆ ನಡೆಸಿದಾತ ಬೆದರಿಕೆ ಹಾಕಿರುವುದನ್ನು ಸಿದ್ದವ್ವ ತೀದಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿರುವುದನ್ನಾದರೂ ಪರಿಗಣಿಸಿ ಪೊಲೀಸರು ಕ್ರಮ ಕೈಗೊಳ್ಳಬೇಕಿತ್ತು. ಇದು ಪೊಲೀಸರ ನಿಷ್ಕ್ರಿಯತೆ ತೋರಿಸುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹಲ್ಲೆಗೆ ಒಳಗಾದ ಮಹಿಳೆಗೆ ಪೊಲೀಸರು ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದ ಜೋಶಿ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸೀಮಾ ಮಸೂತಿ, ತವನಪ್ಪ ಅಷ್ಟಗಿ, ಶಶಿ ಕುಲ್ಕರ್ಣಿ, ಪ್ರೇಮಾ ದೇಸಾಯಿ, ಸುನೀಲ ಗುಡಿ, ಶಿವು ಕವಳಿ, ಯಲ್ಲಪ್ಪ ಅರವಾಳದ ಇದ್ದರು.

Post Comments (+)