ಪುಕ್ಕಟೆ ಔಷಧಿ ಅಂದರೆ ನಂಗೂ ತಲೆನೋವು ಅಂದ್ರಂತೆ

ಬುಧವಾರ, ಜೂನ್ 26, 2019
28 °C

ಪುಕ್ಕಟೆ ಔಷಧಿ ಅಂದರೆ ನಂಗೂ ತಲೆನೋವು ಅಂದ್ರಂತೆ

Published:
Updated:
ಪುಕ್ಕಟೆ ಔಷಧಿ ಅಂದರೆ ನಂಗೂ ತಲೆನೋವು ಅಂದ್ರಂತೆ

ನಾನು ಡಾಕ್ಟರಿಕೆ ಆರಂಭ ಮಾಡಿದ ಮೊದಲ ದಿನಗಳವು. ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರಾಗಿ ಕೆಲಸ ಮಾಡುತ್ತಿದ್ದೆ. ಆಗ ಪುಕ್ಕಟೆ ಬರುವ ಫಿಸಿಶಿಯನ್ಸ್ ಸ್ಯಾಂಪಲ್‌ಗಳನ್ನು ಮನೆಗೆ ತೆಗೆದುಕೊಂಡು ಬಂದು ಸಂಗ್ರಹಿಸುವ ಒಂದು ಕೆಟ್ಟ ಬುದ್ಧಿ ಇತ್ತು. ಮೆಡಿಕಲ್ ರೆಪ್ರೆಸೆಂಟೇಟಿವ್‍ಗಳು ರೋಗಿಗಳಿಗೆ ಕೊಡಿ ಎಂಬ ಸದುದ್ದೇಶದಿಂದ ಕೊಟ್ಟರೂ ಅವರ ಸರಕನ್ನು ನನ್ನಿಂದ ಮಾರಾಟ ಮಾಡಿಸುತ್ತಿದ್ದಾರೆ. ಏನು ಮಾಡಿದರೂ ಆ ಕಂಪೆನಿಯವರ ಔಷಧಿ ಬರೆಯುವುದಿಲ್ಲ ಎಂದು ಹಟ ಹಿಡಿದು ಹುಡುಕಿ ಹುಡುಕಿ ಬೇರೆ ಕಂಪೆನಿಯ ಔಷಧಿಯನ್ನೇ ಬರೆಯುತ್ತಿದ್ದೆ.

ಎಲ್ಲೋ ಓದಿದ ಪುಸ್ತಕಗಳ, ನೋಡಿದ ಸಿನಿಮಾಗಳ ಬೂಜ್ರ್ವಾವಿರೋಧಿ ಕ್ರಾಂತಿಕಾರಿ ಐಡಿಯಾಗಳು ಎಂದು ನಾನೇ ನಂಬಿದ್ದರೂ ಇದೊಂತರಾ ರಿವರ್ಸ್ ಸೈಕಾಲಜಿ- ಅವರಿಂದ ಸ್ಯಾಂಪಲ್‌ಗಳನ್ನು ತೆಗೆದುಕೊಂಡು ಮನೆಗೆ ಒಯ್ಯುವುದು. ಆದರೆ. ಆ ಔಷಧಿ ಬಿಟ್ಟು ಬೇರೆಲ್ಲವನ್ನೂ ಬರೆಯುವುದು. ಜನರನ್ನು ಹೊಟ್ಟೆಬಾಕ ಔಷಧಿ ಕಂಪೆನಿಗಳ ದುಬಾರಿ ಔಷಧಿಗಳಿಂದ ಕಾಪಾಡುತ್ತಿದ್ದೇನೆ ಎಂದು ನಾನು ಪ್ರಾಮಾಣಿಕವಾಗಿ ನಂಬಿದ್ದೆ.

ಆಗ ಶಿವಮೊಗ್ಗದಲ್ಲಿ ನನ್ನೆಲ್ಲ ಬಂಧುಗಳು ಇದ್ದರೂ ಆಸ್ಪತ್ರೆ ಕೊಟ್ಟ ಒಂದು ರೂಮಿನಲ್ಲಿ ನನ್ನ ವಾಸ. ದಿನಾ ಶೇಖರಿಸಿದ ಈ ಸ್ಯಾಂಪಲ್‌ಗಳನ್ನು ನನ್ನ ಸಣ್ಣ ರೂಮಿನಲ್ಲಿಡಲು ಜಾಗವಿಲ್ಲದೆ ನನ್ನ ಬಂಧುಗಳೆಲ್ಲರು ಮತ್ತು ನಾಗಮಂಗಲದಲ್ಲಿ ವಾಸಿಸುತ್ತಿದ್ದ ನಮ್ಮಪ್ಪ, ಇಬ್ಬರ ನಡುವೆ ಈ ನನ್ನ ಸ್ಯಾಂಪಲ್‌ಗಳನ್ನು ವಿತರಣೆ ಮಾಡುವ ಆಲೋಚನೆಯಿತ್ತು.

ಇಷ್ಟು ಮಾತ್ರ ಅಲ್ಲ ನನ್ನ ಕುಟುಂಬದಲ್ಲಿ ಬೇರೆ ಯಾರೂ ಈ ವೈದ್ಯಕೀಯ ರಂಗದಲ್ಲಿ ಇಲ್ಲದೇ ಇದ್ದ ಕಾರಣ ನಾನೇ ಈ ಔಷಧಿಗಳನ್ನು ಯಾವ್ಯಾವಾಗ ಯ್ಯಾರಾರು ತೆಗೆದುಕೊಳ್ಳಬೇಕು, ಹೇಗೆ ತೆಗೆದುಕೊಳ್ಳಬೇಕು ಇತ್ಯಾದಿ ವಿವರ ಬರೆದಿಡಬೇಕಾಗಿತ್ತು. ಇದು ಬಿ.ಪಿಗೆ, ಇದು ಜ್ವರಕ್ಕೆ, ಇದು ತಲೆನೋವಿಗೆ, ಇದು ಕೆಮ್ಮಿಗೆ, ಇದು ಮೈಕೈ ನೋವಿಗೆ, ತೀರಾ ನೋವು ತಡೆದುಕೊಳ್ಳದಾದರೆ, ಇದು ವಾಂತಿಗೆ, ಇದು ಬೇಧಿಗೆ ಎಂದು ವರ್ಗೀಕರಿಸಿ ಇಟ್ಟೆ.

ಪ್ರತಿಯೊಂದನ್ನೂ ಬೇರೆ ಬೇರೆ ಮಾಡಿ ಒಂದೊಂದು ಸಣ್ಣ ಡಬ್ಬಗಳಲ್ಲಿ ಹಾಕಿ ಎಲ್ಲಕ್ಕೂ ಒಂದು ಲೇಬಲ್ ಹಚ್ಚಿ ಯಾವ್ಯಾವ ಮನೆಯಲ್ಲಿ ಯಾರಿಗೆ ಯಾವ ಮಾತ್ರಗಳ ಅವಶ್ಯಕತೆ ಜಾಸ್ತಿ ಇರುತ್ತದೋ ಅವರಿಗೆ ಅಂತ ಮಾತ್ರೆಗಳನ್ನು ಕೊಟ್ಟು ಬರುವಾ ಎನ್ನುವ ಯೋಜನೆಯಿತ್ತು. ನಮ್ಮಪ್ಪನಿಗೆ ಬಿ.ಪಿ ಇದ್ದುದರಿಂದ ಅವರು ತೆಗೆದುಕೊಳ್ಳುತ್ತಿದ್ದ ಮಾತ್ರೆಗಳನ್ನು ಊರಿಗೆ ಹೋಗುವ ಬಸ್ ಡ್ರೈವರ್ ಜತೆ ಕಳಿಸಿದ್ದೆ.

ಆಗಲೇ ನನಗೆ ಮನುಷ್ಯರಿಗೆ ಔಷಧಿಗಳ ಮೇಲೆ ಇಷ್ಟು ವ್ಯಾಮೋಹ ಇರುತ್ತದೆ ಎಂದು ಗೊತ್ತಾದದ್ದು. ನಮ್ಮಪ್ಪನಿಗೆ ನಾನು ಈ ಮಾತ್ರೆಗಳನ್ನು ನನ್ನ ಬಳಗದಲ್ಲಿ ವಿತರಿಸುತ್ತಿದ್ದೇನೆ ಎಂಬ ವಿಷಯ ಗೊತ್ತಾಗಿ ನಮ್ಮ ಆಸ್ಪತ್ರೆಗೆ ಒಂದು ಲೈಟ್ನಿಂಗ್ ಕಾಲ್ ಹೊಡೆದರು.

ಐ.ಸಿ.ಯುನಲ್ಲಿ ಯಾರನ್ನೋ ನೋಡುತ್ತಿದ್ದ ನನಗೆ ಊರಿಂದ ಟ್ರಂಕ್ ಕಾಲ್ ಬಂದಿದೆ ಎಂದ ತಕ್ಷಣ ಏನಾಗಿದೆಯೋ ಏನೋ ಎಂದು ಓಡಿ ಬಂದು ರಿಸೆಪ್ಷನ್‍ನಲ್ಲಿದ್ದ ಫೋನಿನಲ್ಲಿ ನಮ್ಮಪ್ಪನ ಜತೆಯಲ್ಲಿ ಮಾತಾಡಿದಾಗ ನಾನು ಯಾರಿಗೂ ಮಾತ್ರೆಗಳನ್ನು ಪುಕ್ಕಟೆ ಕೊಡುವುದು ಬೇಡವೆಂದೂ ಮಾತ್ರೆಗಳ ಎಕ್ಸ್‌ಪೈರಿ ಡೇಟ್, ಅವುಗಳ ಉಪಯೋಗ, ಇತರೆ ಎಲ್ಲ ನೋಡಿ ಅವ್ಯಾವೂ ತಮಗೆ ಉಪಯೋಗಕ್ಕೆ ಬರುವುದಿಲ್ಲ ಎನಿಸಿದರೆ ಅವರೇ ಯಾರಿಗೆ ಏನು ಕೊಡಬೇಕೆಂದು ನಿರ್ಧಾರ ಮಾಡುತ್ತಾರೆಂದೂ ಹೇಳಿದರು.

ನಾನು ‘ಅಣ್ಣ ನಿನಗಿರುವುದು ಬಿ.ಪಿ ಒಂದು. ನಿನಗೆ ಬೇರೆ ಯಾವ ಮಾತ್ರೆಗಳ ಅವಶ್ಯಕತೆ ಇದೆ’ ಎಂದು ಕೇಳಿದಾಗ ಅಪ್ಪ ‘ನಿನಗೆಂತದೂ ಗೊತ್ತಾಗುವುದಿಲ್ಲ. ನೀನಿನ್ನೂ ಈಗ ಡಾಕ್ಟರಾಗಿದೀಯ. ನನಗೆ ಬಿ.ಪಿ ಮಾತ್ರ ಇರಬಹುದು. ಮನುಷ್ಯ ಅಂದಮೇಲೆ ಜ್ವರ, ಕೆಮ್ಮು ನೆಗಡಿ ಬರದೇ ಇರುತ್ತದೆಯೇ? ಅವುಗಳಿಗೆ ನಿಮ್ಮ ರೆಪ್ರೆಸೆಂಟೇಟಿವ್ ಸ್ಯಾಂಪಲ್ ಕೊಟ್ಟಿದ್ದಾನೋ ಇಲ್ಲವೋ’ ಎಂದು ಕೇಳಿದ್ದರು.

ನಾನು ಸುಳ್ಳು ಹೇಳಲಾಗದೇ ಹೌದು ಇದೆ. ಅವುಗಳನ್ನು ಇಲ್ಲಿ ಸಣ್ಣ ಮಕ್ಕಳಿರುವ ಮನೆಗೆ ಕೊಡೋಣ. ಅವರಿಗೆ ಅನುಕೂಲವಾಗುತ್ತದೆ ಎಂದುಕೊಂಡಿದ್ದೆ ಎನ್ನಲು ಅಪ್ಪ, ಸಣ್ಣ ಮಕ್ಕಳು ಮಾತ್ರೆ ತಿನ್ನಲ್ಲವೋ ಅವಕ್ಕೆ ಯಾವುದಾದರೂ ಸಿರಪ್ ಕೊಟ್ಟು ಸುಮ್ಮನಾಗು. ಯಾವ ಕಾರಣಕ್ಕೂ ಈ ಔಷಧಿಗಳ ವಿತರಣೆ ಅವರ ಮೂಲಕವೇ ಆಗಬೇಕೆಂದು ಫರ್ಮಾನು ಹೊರಡಿಸಿದರು.

ಫೋನಿನಲ್ಲಿ ನಮ್ಮಪ್ಪನ ಧ್ವನಿ ಯಾವುದೋ ಡ್ರಗ್ ಡೀಲರ್‌ನ ಧ್ವನಿಯಂತೆ ಕೇಳಿಸಿತು. ಅಪ್ಪ ಅಷ್ಟು ಹೇಳಿದ್ದರೂ ಅವರಿಗೆ ಎಲ್ಲ ಮಾತ್ರೆಗಳನ್ನು ಕೊಡಲೂ ಆಗದೇ ಬಿಡಲೂ ಆಗದೆ ನಾನು ಈ ಸ್ಯಾಂಪಲ್‌ಗಳನ್ನು ಎರಡು ಭಾಗ ಮಾಡಿ ಒಂದು ಭಾಗವನ್ನು ಪೂರಾ ನಮ್ಮಪ್ಪನಿಗೂ ಇನ್ನುಳಿದ ಭಾಗವನ್ನು ನನ್ನ ಬಂಧು ಬಳಗದವರೆಲ್ಲರಿಗೂ ಹಂಚಲು ತೆಗೆದಿಟ್ಟುಕೊಂಡೆ.

ಮೂರು ದಿನದ ನಂತರ ಅಪ್ಪನಿಂದ ನನಗೆ ಮತ್ತೆ ಫೋನು ಬಂತು. ನನಗೆ ಔಷಧಿ ಸರಿಯಾಗಿ ಲೇಬಲ್ ಮಾಡಲು ಸರಿಯಾಗಿ ಬರುವುದಿಲ್ಲವೆಂದು ತರಾಟೆಗೆ ತೆಗೆದುಕೊಂಡರು. ಬೇಧಿಗೆ ಎಂದರೆ ಬೇಧಿ ಆಗುವುದಕ್ಕೋ, ಬೇಧಿ ನಿಲ್ಲುವುದಕ್ಕೋ, ವಾಂತಿ ಎಂದರೆ ವಾಂತಿ ಆಗುವುದಕ್ಕೋ ವಾಂತಿ ನಿಲ್ಲುವುದಕ್ಕೋ, ಜ್ವರ ಎಂದರೆ ಜ್ವರ ಬರುವುದಕ್ಕೋ, ಜ್ವರ ನಿಲ್ಲುವುದಕ್ಕೋ ಎಂದು ಕೇಳಿದರು. ನಾನು ಕಲಿತ ವೈದ್ಯಕೀಯ ವಿಜ್ಞಾನವೆಲ್ಲ ನನ್ನ ಕಣ್ಣ ಮುಂದೆ ಗಿರಗಿರನೆ ತಿರುಗಿತು.

ಮಲಬದ್ಧತೆ ಮತ್ತು ಮಲಜಲ ಎರಡಕ್ಕೂ ಬೇರೆ ಔಷಧಿ ಇರುವುದರಿಂದ ಬೇಧಿ ಆಗುವುದಕ್ಕೋ ನಿಲ್ಲುವುದಕ್ಕೋ ಎಂಬುದನ್ನು ಲೇಬಲ್ ಮಾಡದೇ ಇರುವುದು ನನ್ನ ತಪ್ಪಿರಬಹುದು. ಯಾಕೆಂದರೆ ಅದು ಒಂಥರಾ ಡೆಲಿಕೇಟ್ ಬ್ಯಾಲೆನ್ಸ್. ಕಲ್ಲಾದರೂ ಕಷ್ಟ. ನೀರಾದರೂ ಕಷ್ಟ. ಈ ಕನ್‌ಪ್ಯೂಷನ್‌ ಕಾರಣಬದ್ಧವಾಗಿದೆ. ಆದರೆ, ವಾಂತಿ ಆಗುವುದಕ್ಕೆ, ಜ್ವರ ಬರುವುದಕ್ಕೆ ಯಾವ ವೈದ್ಯರು ಮಾತ್ರೆ ಕೊಡುತ್ತಾರೆ.

ನಾನು ಅಪ್ಪನನ್ನು ಕೇಳಿದೆ. ನಮ್ಮ ಮಂಗಳೂರು ಡಾಕ್ಟರು ಫಾಲಿಡಾಲ್ ಕುಡಿದು ಬರುವವರಿಗೆ ವಾಂತಿ ಮಾಡಿಸಲು ಔಷಧಿ ಕೊಡುತ್ತಾರೆ, ಮತ್ತೆ ಕೆಲವೊಂದು ಬ್ಯಾಕ್ಟೀರಿಯಾಗಳಿಂದ ಜ್ವರ ಬಂದರೆ ಅಂಥ ಜ್ವರ ಇಳಿಸಬಾರದಂತೆ. ಕೆಂಡದಂಥ ಜ್ವರ ದೇಹದಲ್ಲಿಯೇ ಈ ಕ್ರಿಮಿಗಳನ್ನು ಸುಟ್ಟು ಹಾಕುತ್ತವಂತೆ. ಆದ್ದರಿಂದ ಜ್ವರಕ್ಕೆ ಎಂದರೆ ಜ್ವರ ಬರುವುದಕ್ಕೋ ನಿಲ್ಲುವುದಕ್ಕೋ ಎಂದು ಸರಿಯಾಗಿ ಬರೆದು ಕಳಿಸಬೇಕೆಂದು ಗದರಿಕೊಂಡರು.

ಮನೆಯಲ್ಲಿ ಯಾರು ಫಾಲಿಡಾಲ್ ಕುಡಿಯುತ್ತಾರೆ ಎಂಬ ಪ್ರಶ್ನೆ ಕೇಳಲು ಹೋಗಿ ಸುಮ್ಮನಾದೆ. ನನ್ನ ಸಂಗ್ರಹದಲ್ಲಿ ವಾಂತಿ ಆಗುವ ಯಾವ ಮಾತ್ರೆಗಳೂ ಇಲ್ಲದಿರಲು ಯಾವುದಕ್ಕೂ ಇರಲಿ ಎಂದು ಆಗ ಸಿಗುತ್ತಿದ್ದ ಇಪೆಕಾಕ್ ಸಿರಪ್ಪನ್ನು ನಾನೇ ಅಂಗಡಿಯಲ್ಲಿ ಕೊಂಡು ‘ವಾಂತಿ ಆಗುವುದಕ್ಕೆ’ ಎಂದು ಲೇಬಲ್ ಹಾಕಿ ಕಳಿಸಿದ್ದೆ. ನನ್ನ ಕಲೆಕ್ಷನ್‍ನಲ್ಲಿ ‘ಮುಟ್ಟು ಮುಂದೆ ಹೋಗುವುದಕ್ಕೆ’ ಮತ್ತು ‘ಮುಟ್ಟು ನಿಂತವರಿಗೆ’ ಕೆಟಗರಿಗಳು ಕೂಡ ಇದ್ದವು. ಮನೆಯಲ್ಲಿ ಅಮ್ಮ, ಅಣ್ಣ ಇಬ್ಬರೇ ಇರುವುದರಿಂದ ಆವರಿಗೆ ಇದರ ಅವಶ್ಯಕತೆ ಇರಲಾರದು ಎನಿಸಿದರೂ ಅಪ್ಪನಿಗೆ ಹೆದರಿ ಅವನ್ನೂ ಕಳಿಸಿದ್ದೆ.

‘ಕಾಮನ್ ಸೆನ್ಸ್ ಬೇಡನು, ಮುಂಡೆದು ಡಾಕ್ಟ್ರು ಬೇರೆ ಆಗಿದೆ. ಇಲ್ಲೆಲ್ಲ ಋಶ್ಪಂಚ್ಮಿ ಮಾಡಿರೋರೆ ಇರದು. ಅಲ್ಲಿ ಶಿವಮೊಗ್ಗದಲ್ಲಿ ಚಾತುರ್ಮಾಸ ಶುರುವಾಗುತ್ತೆ. ಅಲ್ಲಿನ ಹುಡುಗ್ರಿಗೆ ಕೊಡು. ಬೇಕಾಗತ್ತೆ’ ಎಂದು ಡ್ರೈವರ್ ಹತ್ರ ಆ ಎರಡು ಗುಂಪಿನ ಮಾತ್ರೆಗಳನ್ನು ವಾಪಸ್ ಕಳಿಸಿದ್ದರು ನಮ್ಮಪ್ಪ.

ನಮ್ಮಪ್ಪನಿಗೆ ಮಾತ್ರ ಈ ಮಾತ್ರೆಗಳ ಚಟ ಅಂದುಕೊಂಡಿದ್ದೆ. ಆದರೆ ನಮ್ಮಪ್ಪನ ಬಳಗಕ್ಕೆಲ್ಲ ಈ ಹವ್ಯಾಸ ಜೋರಾಗೇ ಇತ್ತು.

ಮೊದಲು ಶಿವಮೊಗ್ಗದಿಂದ ಶಿವಮೊಗ್ಗ- ಚೀನ್ಯಾ ಬಸ್ಸಿನ ಡ್ರೈವರ್ ಬೀರಪ್ಪನ ಜತೆ ನಮ್ಮಪ್ಪನಿಗೆ ನನ್ನ ಡ್ರಗ್ಸ್ ಎಲ್ಲ ಹೋಗುತ್ತಿತ್ತು. ಅದನ್ನು ಮೊದಲು ಪರಿಶೀಲಿಸಿ ಪರಾಂಬರಿಸಿ ನಂತರ ತನಗೆ ಉಪಯೋಗವಿಲ್ಲ ಅನಿಸಿದ್ದನ್ನು ಅಪ್ಪ ವಾಪಸ್ ಕಳಿಸುತ್ತಿದ್ದರು. ನನ್ನ ಔಷಧಿಗಳು ಮತ್ತೆ ನನಗೇ ವಾಪಸ್ ಬಂದ ಮೇಲೆ ಎಲ್ಲ ಮಾತ್ರೆಗಳನ್ನೂ ಮೂಟೆಕಟ್ಟಿಕೊಂಡು ನನ್ನ ದೊಡ್ಡಪ್ಪನ ಮನೆಗೆ ಹೋಗಿ ಅಲ್ಲಿ ಎಲ್ಲ ಹರಡಿಕೊಂಡು ಕೂರುತ್ತಿದ್ದೆ. ಎಲ್ಲವನ್ನೂ ಎಲ್ಲರೂ ನೋಡುತ್ತಿದ್ದರು.

ಅಷ್ಟೇ ಅಲ್ಲ ತಮಗೆ ಯಾವುದಾದರೂ ತೊಂದರೆ ಇದ್ದರೆ ಅದಕ್ಕೆ ಬೇಕಾದ ಮಾತ್ರೆಗಳನ್ನು ಆರಿಸಿಕೊಳ್ಳುವ ಬದಲು ಯಾವ ಮಾತ್ರೆ ಇದೆಯೋ ಅದಕ್ಕೆ ಸರಿಹೊಂದುವ ಕಾಯಿಲೆ ತಮಗೂ ಇದೆ ಅಥವಾ ಮುಂದೆ ಬರಬಹುದು ಎನ್ನುವವರೇ ಹೆಚ್ಚಾಗಿದ್ದರು. ಇದು ಮೈಗ್ರೇನ್‍ಗೆ ಎಂದರೆ ನಮ್ಮ ಬಂಧುವೊಬ್ಬರು ‘ನನಗೂ ಆಗಾಗ ಸಿಕ್ಕಾಪಟ್ಟೆ ತಲಿಶೂಲಿ ಬರುತ್ತೋ ಮಾರಾಯ. ಇರ್ಲಿ ಇಟ್ಕೊಂಡಿರ್ತೀನಿ’ ಎಂದು ಎತ್ತಿಟ್ಟುಕೊಂಡರು. ಬಿ.ಪಿ ಕೊಂಚ ಇದೆ ಅಂತ ಡಾಕ್ಟ್ರು ಹೇಳಿಯಾರೆ, ಈ ಮಾತ್ರೆ ತಗಂಡರೆ ಕಮ್ಮಿ ಆಗಬಹುದೇನೋ ನೋಡ್ಲನು ಎಂದು ಕೇಳಿದರು ಇನ್ನೊಬ್ಬರು. ನನಗೆ ಕೊಂಚ ಹೆದರಿಕೆಯಾಯಿತು.

ನನ್ನ ಹತ್ತಿರ ಹೃದಯರೋಗಿಗಳಿಗೆ ಕೊಡುವ ನೈಟ್ರೋಗ್ಲಿಸರಿನ್ ಇಂದ ಹಿಡಿದು ಅಪಸ್ಮಾರಕ್ಕೆ ಕೊಡುವ ಗಾರ್ಡಿನಾಲ್ ತನಕ ಎಲ್ಲ ಸ್ಯಾಂಪಲ್‍ಗಳೂ ಇದ್ದವು. ಒಂದು ಹೋಗಿ ಇನ್ನೊಂದಾಗುತ್ತದೆ ಎಂದನ್ನಿಸತೊಡಗಿತು. ಯಾರಾದರೂ ಬಿ.ಪಿ ಮಾತ್ರೆ ತೆಗೆದುಕೊಂಡು ತಲೆತಿರುಗಿ ಬಿದ್ದರೆ? ಅಪ್ಪ ಹೇಳಿದಹಾಗೆ ಬೇಧಿ ನಿಲ್ಲುವ ಬದಲು ಬೇಧಿ ಆಗುವ ಮಾತ್ರೆ ತೆಗೆದುಕೊಂಡರೆ? ಈಗ ಚಿಂತಿಸಿ ಪ್ರಯೋಜನವಿರಲಿಲ್ಲ.

ವಿವರವಾಗಿ ಮಾತ್ರೆಯ ಪೆಟ್ಟಿಗೆಗಳ ಮೇಲೆ ಆಯಾ ಮಾತ್ರೆಗಳ ವಿವರ ಬರೆದಿಟ್ಟಿದ್ದೆ. ಉದಾಹರಣೆ–ಲೋಮೋಟಿಲ್, ಬೇಧಿ ನಿಲ್ಲುವುದಕ್ಕೆ. ದಿನಕ್ಕೆ ನಾಲ್ಕು ಮಾತ್ರೆಯ ಮೇಲೆ ತೆಗೆದುಕೊಳ್ಳಬಾರದು. ಮಾತ್ರೆ ತೆಗೆದುಕೊಂಡ ಮೇಲೆ ಹೊಟ್ಟೆ ಉಬ್ಬರಿಸಿದರೆ ಅಥವಾ ಜ್ವರ ಬಂದರೆ ಮಾತ್ರೆ ನಿಲ್ಲಿಸುವುದು ಇತ್ಯಾದಿ, ಇತ್ಯಾದಿ.

ನಿಫಿಡೆಪಿನ್- ಬಿ.ಪಿ ಜಾಸ್ತಿ ಇದ್ದರೆ, ತೆಗೆದುಕೊಂಡು ತಲೆತಿರುಗು ಬಂದಲ್ಲಿ ಅಥವಾ ಹೊತ್ತಿಕೊಂಡು ಬಿದ್ದಲ್ಲಿ ಮತ್ತೆ ತೆಗೆದುಕೊಳ್ಳಬಾರದು. ತಕ್ಷಣ ಡಾಕ್ಟರ್ ಹತ್ತಿರ ಹೋಗಬೇಕು. ಇದು ಈಗ ಹಾಸ್ಯಾಸ್ಪದವೆನಿಸಬಹುದು. ಆದರೆ, ನಮ್ಮ ಬಂಧುವರ್ಗದವರ ಈ ಮಾತ್ರಾಮೋಹವನ್ನು ನೀವೊಮ್ಮೆ ನೋಡಿದರೆ ಇಂಥ ವಿಸ್ತಾರ ವಿವರಣೆಗಳ ಅವಶ್ಯಕತೆ ಎಷ್ಟಿದೆ ಎಂದು ಅರ್ಥವಾಗುತ್ತದೆ.

ನಾನಂದುಕೊಂಡಂತೆ ಎಡವಟ್ಟಾಯಿತು. ನನ್ನ ಬಂಧುಗಳೊಬ್ಬರು ಶಿವಮೊಗ್ಗ ಸಮೀಪದ ಊರಿಗೆ ಕೆಲಸಕ್ಕೆ ಹೋಗುತ್ತಿದ್ದರು. ಅವರಿಗೆ ಆಗಾಗ್ಗೆ ತಲೆನೋವು ಬರುತ್ತಿತ್ತು. ಅವತ್ತು ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ತಲೆನೋವು ಶುರು ಆದದ್ದು ನಿಲ್ಲಲೇ ಇಲ್ಲ. ನನಗೆ ಕೊಟ್ಟಿದ್ದ ಸ್ಯಾಂಪಲ್‍ನಲ್ಲಿ ಪೆಂಟಜೋಸಿನ್ ಎನ್ನುವ ನೋವುನಿವಾರಕ ಮಾತ್ರೆಯೊಂದಿತ್ತು.

ಅದು ಮಾರ್ಫೀನ್ ಗುಂಪಿಗೆ ಸೇರಿದ ನಾರ್ಕಾಟಿಕ್ ಅಂದರೆ ನೋವನ್ನು ಉಪಶಮನಗೊಳಿಸುವುದರ ಜತೆಗೆ ಮತ್ತನ್ನೂ ತರುವ ಔಷಧಿ. ಈ ಮಾತ್ರೆಗಳ ಮಾರಾಟ ವಿತರಣೆಯೆಲ್ಲ ಈಗ ಬಹಳ ನಿಯಂತ್ರಿತವಾಗಿದ್ದು ಅಂಗಡಿಯಲ್ಲಿ ಪ್ರಿಸ್ಕ್ರಿಪ್ಷನ್ ಕೊಟ್ಟರೂ ಸಿಗುವುದಿಲ್ಲ. ಆದರೆ, ಆ ಮಾತ್ರೆಗಳನ್ನು ನನಗೆ ಯಾರು ಸ್ಯಾಂಪಲ್ ಕೊಟ್ಟಿದ್ದರೋ ಗೊತ್ತಿಲ್ಲ. ಒಟ್ಟು ಅದು ಕೂಡ ವಿತರಿತವಾಗಿತ್ತು. ಆ ಮಾತ್ರೆಯ ಡಬ್ಬಿಯ ಮೇಲೆ-ಸಿಕ್ಕಾಪಟ್ಟೆ ನೋವಿದ್ದಾಗ ಮಾತ್ರ ತೆಗೆದುಕೊಳ್ಳುವುದು ಎಂದು ಬರೆದಿದ್ದೆ.

ನಮ್ಮ ಈ ಬಂಧುಗಳು ಅದರ ಮೇಲಿದ್ದ ವಿವರಣೆ ಓದಿದ್ದಾರೆ. ಪಾಪ, ಅವರ ಪ್ರಕಾರ ಅವರಿಗೆ ಇದು ಸಿಕ್ಕಾಪಟ್ಟೆ ನೋವು, ಸೀವಿಯರ್ ಪೇನ್. ಮಾತ್ರೆ ನುಂಗಿ ತಮ್ಮ ಟೂವೀಲರ್‌ನಲ್ಲಿ ಕೆಲಸಕ್ಕೆ ಹೋಗಿದ್ದಾರೆ. ಶಿವಮೊಗ್ಗ ಬಿಟ್ಟು ಸ್ವಲ್ಪದೂರ ಹೋಗುವ ಹೊತ್ತಿಗೆ ನನಗೆ ಫೋನು ಬಂತು ‘ಪ್ರಸಾದೂ, ನಾನ್ ತಲೀಮೇಲ್ ಹೆಲ್ಮೆಟ್ ಹಾಕದಿದ್ರೂ ಹಾಕಿದಂಗೆ ಆಗುತ್ತಿದ್ಯಲೋ, ಅಪ’ ಎಂದರು.

ನನಗೆ ಓಹೋ, ಇಂಥದ್ದೇನೋ ಮಾತ್ರೆ ತೆಗೆದುಕೊಂಡಿದ್ದಾರೆ ಎನಿಸಿತು. ನಂತರ ಆ ಕಡೆಯಿಂದ ಅವರು ಸಣ್ಣಗೆ ಮುಖೇಶನ ಹಾಡು ಗುನುಗುತ್ತಾ ಇರುವುದು ಕೇಳಿಸಿತು. ಒಂದು ರೀತಿ ಹವಾದಲ್ಲಿದ್ದಾರೆ ಮನುಷ್ಯ ಅನಿಸಿತು. ನನ್ನ ತಲೆಯಲ್ಲಿ ಎಲ್ಲ ಯೋಚನೆಗಳೂ ಒಟ್ಟಿಗೆ ಬಂದವು. ದ್ವಾದಶಿ ಪಾರಣೆ ಮಾಡಿ ಅಂಗಾರಕ್ಷತಿ ಹಚ್ಚಿಕೊಂಡು ಇವರು ಬೆಳ್ಳಂಬೆಳಗ್ಗೆ ಮುಖೇಶನ ಹಾಡನ್ನು ಹಾಡಿಕೊಂಡು ಕೆಲಸಕ್ಕೆ ಹೋದರೆ ನೋಡಿದವರು ಏನಂದುಕೊಳ್ಳುತ್ತಾರೆ.

ಬಾಯಲ್ಲಿ ತಾಂಬೂಲ ಬೇರೆ. ಜರ್ದಾ ಗಿರ್ದಾ ಹಾಕಿಕೊಂಡಿದ್ದಾರೆ ಎನಿಸಿದರೆ. ಮತ್ತೆ ತೀರ್ಥಹಳ್ಳಿ ರೋಡಿನಲ್ಲಿ ಮಿನಿಬಸ್ಸುಗಳು ಯದ್ವಾತದ್ವಾ ಸ್ಪೀಡಿನಲ್ಲಿ ಓಡುತ್ತಿರುತ್ತವೆ. ಏನಾದರೂ ಹೆಚ್ಚುಕಮ್ಮಿ ಅಗಿ ಇವರಿಗೆ ಅಪಘಾತವೇನಾದರೂ ಆದರೆ. ನನಗೆ ಅವರ ಕುಟುಂಬದವರೆಲ್ಲರ ಚಿತ್ರ ಕಣ್ಣಮುಂದೆ ಬಂತು. ಪುಣ್ಯಕ್ಕೆ ಆಗ ಮೊಬೈಲ್‌ಗಳು ಇರಲಿಲ್ಲ.

ಆದ್ದರಿಂದ ಅವರು ಗಾಡಿ ಓಡಿಸುತ್ತಾ ಫೋನ್‌ ಮಾಡಿರಲಿಲ್ಲ. ತಮಗೆ ಏನೋ ಸರಿ ಇಲ್ಲ ಎಂದನಿಸಿದ ಕೂಡಲೇ ಪಕ್ಕ ನಿಲ್ಲಿಸಿ ಯಾವುದೋ ಫೋನ್‍ ಬೂತ್‌ನಿಂದ ಫೋನ್ ಮಾಡಿದ್ದಾರೆ. ನಾನು ‘ದಯವಿಟ್ಟು ನೀವು ಡ್ರೈವ್ ಮಾಡಬೇಡಿ ಎಂದು ಹೇಳಿ, ಈಗ ಹೇಗಿದ್ದೀರ’ ಎಂದು ಕೇಳಿದಾಗ ‘ಎಂಥ ಮಾತ್ರಿನೋ ಮಾರಾಯ ಅದು. ತಲಿಶೂಲಿ ಹಾಳಾಗಿಹೋಗ್ಲಿ ಮತ್ತು ಬಂದಂಗೆ ಆಗಿ ಈಗ ವಾಂತಿ ಆಗೋಹಂಗಾಯ್ತು’ ಎನ್ನುವಷ್ಟರಲ್ಲಿಯೇ ಫೋನ್ ಕಟ್ ಆಗಿ ಆತ ಪಕ್ಕ ವಾಂತಿ ಮಾಡಿಕೊಳ್ಳುತ್ತಿರುವುದು ಕೇಳಿಸಿತು.

ನಾನು ‘ಸಾವರಿಸಿಕೊಳ್ಳಿ ನಾನು ಬರುತ್ತೇನೆ. ಯಾವ ಕಾರಣಕ್ಕೂ ಗಾಡಿ ಓಡಿಸಬೇಡಿ’ ಎಂದು ಹೇಳಿದೆ. ‘ತೊಂದ್ರಿ ಇಲ್ಲ ಬಿಡು. ವಾಂತಿ ನಿಲ್ಲೋದಕ್ಕೆ ಮಾತ್ರಿ ಇದೆಯಲ್ಲ. ಅದನ್ನೂ ಇರ್ಲಿ ಅಂತ ಎರಡು ಕಿಸೀಗ ಹಾಕ್ಕಂಡೇ ಬಂದೀನಿ’ ಎಂದು ನನ್ನನ್ನೇ ಸಾಂತ್ವನ ಮಾಡಿದರು. ಅವರನ್ನು ವಾಪಸ್ ಮನೆಗೆ ಕರಕೊಂಡು ಬಂದು ಆ ಮಾತ್ರೆಗಳನ್ನೆಲ್ಲ ತೆಗೆದು ಬಿಸಾಕುವ ತನಕ ನನಗೆ ಜೀವದಲ್ಲಿ ಜೀವ ಇರಲಿಲ್ಲ.

ನಮ್ಮ ಅಜ್ಜಿ ತುಂಬಾ ಮಡಿ, ಮಡಿಹೆಂಗಸು. ಆಕೆ ಬಹಳ ಚಟುವಟಿಕೆಯಿಂದ ಓಡಾಡಿಕೊಂಡಿದ್ದರು. ನಾನು ಈ ಮಾತ್ರೆಗಳನ್ನು ಬಿಕರಿ ಮಾಡುವಾಗ ಅವರೂ ಇದ್ದರು. ಅವರಿಗೆ ಕೈಕಾಲು ನೋವು ಮತ್ತು ಗ್ಯಾಸ್ಟ್ರಿಕ್. ಅವರು ತಮ್ಮ ಪಾಲಿನ ಸ್ಯಾಂಪಲ್‍ಗಳನ್ನು ತೆಗೆದಿಟ್ಟುಕೊಂಡಿದ್ದರು. ಮೊಮ್ಮಗ ಡಾಕ್ಟರಾದ ಎಂದು ಅವರಿಗೆ ಖುಷಿಯಿದ್ದರೂ ಅವರಿಗೆ ಇದ್ದ ಒಂದೇ ಫಿರ್ಯಾದೆ ಎಂದರೆ ಈ ಮಡಿ ಮೈಲಿಗೆಯಿಲ್ಲದೆ ಎಲ್ಲ ಮಾತ್ರೆಗಳನ್ನೂ ಒಟ್ಟಿಗೆ ಬೆರೆಸಿಡುವುದು. ಅವರೆಷ್ಟು ಮಡಿ ಎಂದರೆ ಮುಟ್ಟಾದ ಹೆಂಗಸರಿರಲಿ, ಈ ಹೆಂಗಸರ ಮುಟ್ಟು ಮುಂದೆ ಹಾಕುವ ಮಾತ್ರೆಗಳನ್ನು ಕೂಡ ಬೇರೆ ಮಾತ್ರೆಗಳ ಜತೆ ಇಡುವುದನ್ನು ಅವರು ಸಹಿಸುತ್ತಿರಲಿಲ್ಲ. ‘ಪ್ರಕೃತೀನ ಮುಂದೆ ಹಾಕೋದೇ ತಪ್ಪು.

ಅದೂ ನಿರ್ವಾಹ ಇಲ್ಲ ಅಂದ್ರೆ ಮಾಡ್ಲೇಬಕು, ಒಪ್ತೀನಿ. (ಅವರ ಪ್ರಕಾರ ನಿರ್ವಾಹ ಇಲ್ಲಂದರೆ ಎಳ್ಳಮಾವಾಸೆ. ಎಳೆಯಷ್ಟಮಿ, ಬನದಹುಣ್ಣಿಮೆ, ನಾಗರ ಚೌತಿ, ಇತ್ಯಾದಿ) ಆದರೂ ‘ಮಡೀಹುಡೀ ಇಲ್ಲದೆ ಎಲ್ಲಕಡಿ ಏಕ ಮಾಡಿಕೊಂಡು ಆ ಮಾತ್ರಿ ಇಡಬೇಡ್ರವ. ಅದನ್ನು ಹೊರಗಿಟ್ಟುಕೊಂಡು ತಗಳ್ರಿ’ ಎಂದು ಮಕ್ಕಳು ಸೊಸೆಯರಿಗೆ ಎಲ್ಲ ಹೇಳಿದ್ದರು. ಹಾಗಾಗಿ ಪ್ರಿಮೊಲ್ಯೂಟ್ 10ರ ಜಾಗ ಅಂಗಳದಲ್ಲಿದ್ದ ಒಂದು ಹಳೆಯ ಕಪಾಟು. ಮಳೆಗೆ ನೆನೆದು ಹಾಳಾಗಬಾರದೆಂದು ಅದನ್ನು ಒಂದು ಪ್ರಾಸ್ಟಿಕ್ ಕವರಿನಲ್ಲಿ ಕಟ್ಟಿಟ್ಟಿದ್ದರು.

ನಮ್ಮ ಮನೆಗೆ ಹಿಂದೆ ಕಟ್ಟಿಗೆ ಕಡಿಯಲು ಆಯನೂರಿನಿಂದ ಸೋಮಣ್ಣ ಎಂಬ ವ್ಯಕ್ತಿ ಬರುತ್ತಿದ್ದ. ಹೊಸದಾಗಿ ಮದುವೆಯಾಗಿದ್ದ. ಆತ ಕಟ್ಟುಮಸ್ತಾದ ಆಳು. ನಾನು ಪುಕ್ಕಟೆ ಮಾತ್ರೆ ಕೊಡುತ್ತೇನೆ ಎಂದು ಗೊತ್ತಾದಾಗ ಆತ ‘ಸಾಮಿ, ನನಗೂ ಸ್ವಲ್ಪ ತಾಕತ್ತಿಗೆ ಏನಾರ ಮಾತ್ರೆ ಕೊಡಿ ಸಾಮಿ’ ಎಂದು ಆಸೆಯಿಂದ ಕೇಳುತ್ತಿದ್ದ. ಆತ ನಿಜವಾಗಿಯೂ ಗರಡಿ ಮನೆಗೆ ಹೋಗುತ್ತಿದ್ದನಂತೆ.

ನನಗೆ ಆತ ಕೇಳುತ್ತಿದ್ದ ತಾಕತ್ತು ಯಾವುದು ಎಂದು ಆಗಾಗ್ಗೆ ಗೊಂದಲವಾಗುತ್ತಿತ್ತು. ಈಗಿನ ಹಾಗೆ ಆಗ ಬೇರೆ ಬೇರೆ ತಾಕತ್ತಿನ ಮಾತ್ರೆಗಳು ಇಲ್ಲದೇ ಇದ್ದುದರಿಂದ ಆತನ ತಾಕತ್ತೆಂದರೆ ಗರಡಿ ಮನೆಯಲ್ಲಿ ಮಿಂಚುವ ತಾಕತ್ತೆಂದೇ ನಾನು ತಿಳಿದಿದ್ದೆ. ಇಂಥ ಮಾಂಸಖಂಡಮೋಹಿಗಳಿಗೆ ಅನಬಾಲಿಕ್ ಸ್ಟಿರಾಯ್ಡ್ ಕೊಡುವ ಕೆಟ್ಟ ಪದ್ಧತಿಯೊಂದಿದೆ. ನಾನು ಡಾಕ್ಟರಾದ ಹೊಸತರಲ್ಲಿ ಇದು ತಪ್ಪು ಅನ್ನುವ ಪ್ರಾಥಮಿಕ ಜ್ಞಾನವೂ ನನಗಿರಲಿಲ್ಲ.

‘ಸೋಮಣ್ಣ, ಸುಮ್ನಿರು. ನಾನು ಯಾವುದಾದರೂ ಮೆಡಿಕಲ್ ರೆಪ್ರೆಸೆಂಟೇಟಿವ್ ಅನ್ನು ಕೇಳಿ ಇಸಕೊಂಡು ನಿನಗೆ ತಾಕತ್ ಬರುವ ಇಂಜಕ್ಷನ್ ಕೊಡುತ್ತೇನೆ’ ಎಂದು ಸಮಾಧಾನ ಮಾಡಿದೆ. ‘ಏನ್ಸಾಮಿ ಆ ಇಂಜಕ್ಷನ್?’ ಎಂದು ಕೇಳಿದಾಗ ‘ಅದು ಒಂಥರಾ ಹಾರ್ಮೋನು. ನಿನಗೆ ಗೊತ್ತಾಗೋದಿಲ್ಲ, ಸುಮ್ಮನಿರು’ ಎಂದು ಸಮಾಧಾನ ಮಾಡಿದ್ದೆ.

ಕೆಲವು ದಿನಗಳಲ್ಲಿ ಆತ ಅನಾಹುತವಾದಂತೆ ನನ್ನ ಬಳಿ ಬಂದ. ‘ಸ್ವಾಮೀ, ನನಗೆಂಥದೋ ಆಗ್ತಾ ಐತಿ. ನೋಡ್ರಲಾ’ ಎಂದ. ‘ಏನಾಯ್ತೋ’ ಎಂದು ಕೇಳಿದಾಗ ‘ಸಾಮೀ, ನನ್ಕಥೀ ಮುಗೀತು ಸಾಮೀ, ನಂಗ್ ಮಲೀ ಬರಕ್ ಹತ್ತೈತಿ. ಹಿಚುಕುದ್ರೆ ಹಾಲೂ ಬಂದಂಗಾಗತೈತಿ’ ಎಂದ. ನನಗೆ ತಲೆ ಕೆಟ್ಟಿತು. ಹಿಂದುಗಡೆ ಹೋಗಿ ರೂಮಿನಲ್ಲಿ ಪರೀಕ್ಷೆ ಮಾಡಿದಾಗ ಆತ ಹೇಳಿದ್ದು ನಿಜವಾಗಿತ್ತು.

ಈತ ಯಾರ ಹತ್ತಿರವೋ ಹೋಗಿ ಏನಾದರೂ ಔಷಧಿ ತೆಗೆದುಕೊಂಡಿದ್ದಾನೋ ಅಥವಾ ಇನ್ನೇನಾರಾ ಕಾಯಿಲೆಯಿದೆಯಾ ಎಂದು ಯೋಚಿಸಹತ್ತಿದೆ. ನನ್ನ ತಲೆಯಲ್ಲಿ ಗಂಡಸಿಗೆ ಹೀಗಾದಾಗ ಇರಬಹುದಾದ ಡಿಫರೆಂಟಿಯಲ್ ಡಯಗ್ನೊಸಿಸ್ ಎಲ್ಲ ತಲೆಯಲ್ಲಿ ಓಡತೊಡಗಿತು.

ಒಂದು ಕ್ಷಣ ಅನುಮಾನವಾಗಿ ಅಲ್ಲಿ ಮೈಲಿಗೆಯಲ್ಲಿಟ್ಟಿದ್ದ ಮುಟ್ಟು ಮುಂದೂಡುವ ಮಾತ್ರೆಯ ಕಡೆ ನನ್ನ ಗಮನ ಹೋಯಿತು. ಆ ಡಬ್ಬಿಯಲ್ಲಿ ನಾನೆಣಿಸಿಟ್ಟಿದ್ದ ಅರ್ಧಕ್ಕೂ ಹೆಚ್ಚಿನ ಮಾತ್ರೆಗಳು ಖಾಲಿಯಾಗಿದ್ದವು. ಮನೆಯಲ್ಲಿ ಫಲವತ್ತಾಗಿರುವ ಹೆಂಗಸರೆಲ್ಲಾ ಒಂದೇ ಬಾರಿಗೆ ಈ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾದ ಪ್ರಸಂಗ ಬಂದರೂ ಇನ್ನೂ ಬೇಕಾದಷ್ಟು ಮಾತ್ರೆಗಳು ಉಳಿದಿರಬೇಕಾಗಿತ್ತು.

ಮೇಲಾಗಿ ಆಗ ಶ್ರಾವಣ ಮಾಸವೂ ಅಲ್ಲ. ಹಾಗಾಗಿ ಈ ಸೋಮಪ್ಪ ರೆಡ್‍ಹ್ಯಾಂಡಾಗಿ ಸಿಕ್ಕಿಹಾಕಿಕೊಂಡ ಎಂದೆನಿಸಿ ‘ಈ ಮಾತ್ರೆಗಳನ್ನು ತೆಗೆದುಕೊಂಡಿದ್ದೆಯೇನೋ’ ಎಂದು ಕೇಳಿದಾಗ ‘ಸ್ವಾಮೀ ಆಕ್ಕಾರು ಹೇಳಿದ್ರು ಅದೂ ಹಾರ್ಮನಂತ. ನೀವೂ ನಂಗೆ ಅದರದ್ದೇ ಇಂಜಕ್ಷನ್ ಕೊಡ್ತೀನಿ ಅಂತ ಹೇಳಿದ್ರಿ. ನೀವು ಎಷ್ಟು ದಿನಾದರೂ ಕೊಡಲಿಲ್ಲ. ನಾನೇನು ಮಾಡಲಿ. ಒಂದು ಇಂಜಕ್ಷನ್ ಇನ್ನೊಂದು ಮಾತ್ರೆ. ಎಲ್ಲ ಒಂದೇ ಅಂತ ನಾನೇ ತಕ್ಕಂಡೆ’ ಎಂದು ಅಳತೊಡಗಿದ.

ಆದದ್ದಿಷ್ಟು. ನಮ್ಮಜ್ಜಿ ಆ ಮಾತ್ರೆಗಳನ್ನು ಹೊರಗಿಡಲೇಬೇಕು ಎಂದು ಹಟಮಾಡಿದಾಗ ನನ್ನ ಕಸಿನ್ ಒಬ್ಬಳು ಆ ಡಬ್ಬಿಯ ಮೇಲೆ ನಾನು ವಿವರವಾಗಿ ಬರೆದಿದ್ದ ಅದನ್ನು ಯಾರು ತೆಗೆದುಕೊಳ್ಳಬೇಕು, ಏಕೆ ತೆಗೆದುಕೊಳ್ಳಬೇಕು ಎಂಬುದನ್ನು ಮುಖ್ಯವಾಗಿ ‘ಮುಟ್ಟು ಮುಂದೂಡುವ ಮಾತ್ರೆ’ ಎಂಬ ಲೇಬಲ್‌ ಅನ್ನು ನೋಡಿ ‘ಛೀ ಅಸಯ್ಯ, ಇದನ್ನು ಅಜ್ಜಿ ಬೀದಿ ಮೇಲೆ ಬೇರೆ ಇಟ್ಟಿದ್ದಾಳೆ’ ಎಂದು ತೆಗೆದುಬಿಟ್ಟಿದ್ದಳು. ಇದು ಹೆಂಗಸರ ವಿಷಯವಾದ್ದರಿಂದ ಮನೆಯ ಹೆಂಗಸರಲ್ಲಿ ಈ ವಿಷಯ ಸರ್ವಸಮ್ಮತವಾಗಿತ್ತು. ಸೋಮಪ್ಪ ಆಕೆಯನ್ನು ಅಕ್ಕಾರ ಅದೇನ್ ಮಾತ್ರೆ ಎಂದು ಕೇಳಿದ್ದಾಗ ಅದು ಒಂತರಾ ಹಾರ್ಮೋನು, ಶಕ್ತಿ ಬರೋಕೆ ಟಾನಿಕ್ ಇದ್ದಂಗೆ ಎಂದು ಜಾರಿಕೆಯ ಉತ್ತರ ಕೊಟ್ಟಿದ್ದಾಳೆ.

ಎಲ್ಲ ಹಾರ್ಮೋನುಗಳು ಒಂದೇ ಎಂದು ತಿಳಿದ ಸೋಮಪ್ಪ ಪಾಪ ಈ ಪೋಸ್ಟ್‌ಪೋನ್‍ಮೆಂಟ್ ಮಾತ್ರೆ ತೆಗೆದುಕೊಂಡಿದ್ದ. ಅದೂ ಯಾರಿಗೂ ಹೇಳದೆ ಕೇಳದೇ ತಿಂಗಳುಗಟ್ಟಲೇ. ತಾಕತ್ತು ಬರಬೇಕೆನ್ನುವ ಆಸೆಯಿದ್ದ ಸೋಮಪ್ಪನಿಗೆ ಅದು ಉಲ್ಟಾ ಹೊಡೆದಿತ್ತು. ನಾನು ಆತನನ್ನು ಸಮಾಧಾನಗೊಳಿಸಿ ಅಜ್ಜಿಯೊಂದಿಗೆ ಜಗಳ ಕಾದು, ಈ ಮಾತ್ರೆಗಳನ್ನು ಸರಿಯಾದ ಲೇಬಲ್ಲುಗಳಿಲ್ಲದಿದ್ದರೆ ತರುವುದೇ ಇಲ್ಲ ಎಂದು ಹೆದರಿಸಿದೆ.

ಅಜ್ಜಿ ತನ್ನ ಗ್ಯಾಸ್ ಮಾತ್ರೆಗಳಿಗೂ ಸಂಚಕಾರ ಬರುತ್ತದೆಂದು ವರಾಂಡದಲ್ಲಿ ಚಪ್ಪಲಿ ಇಡುವ ಮಾಡದ ಮೇಲೆ ಸ್ವಲ್ಪ ಜಾಗ ಮಾಡಿ ಅಲ್ಲಿ ಇಡುವುದಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಮಾತ್ರೆ ನಿಲ್ಲಿಸಿದ ಮೇಲೆ ಸೋಮಪ್ಪ ಸರಿಹೋದ. ಮತ್ತೆ ತಾಕತ್ತಿಗೆ ಮಾತ್ರೆ ಕೇಳಲಿಲ್ಲ.

ಅದೇ ಕೊನೆ. ಆಮೇಲೆ ನನ್ನ ಈ ಡ್ರಗ್ ಡೀಲರ್‌ಶಿಪ್ ಹೆಚ್ಚು ದಿನ ನಡೆಯಲಿಲ್ಲ. ಬೇಕೆಂತಲೇ ಮಾತ್ರೆಗಳನ್ನು ಮನೆಗೆ ತರುವುದನ್ನು ಕಮ್ಮಿ ಮಾಡಿದೆ ಅಥವಾ ಆಸ್ಪತ್ರೆಯಲ್ಲಿಯೇ ವಿಲೇವಾರಿ ಮಾಡತೊಡಗಿದೆ.

ನಂತರ ಕೆಲವೇ ದಿನಗಳಲ್ಲಿ ಅಮೆರಿಕಕ್ಕೆ ಬಂದೆ. ಅಮೆರಿಕದಲ್ಲಿ ಈ ರೀತಿಯ ಸ್ಯಾಂಪಲ್‌ಗಳಿಗೆ ಬಹಳ ನಿರ್ಬಂಧವಿದೆ. ಡಾಕ್ಟರ್‌ಗಳು ಔಷಧಿ ಕಂಪೆನಿಯವರಿಂದ ಯಾವುದೇ ಸ್ಯಾಂಪಲ್‌ಗಳನ್ನು ಇಸಕೊಂಡರೂ ಅದಕ್ಕೆ ಲೆಕ್ಕ ಇಡಬೇಕು. ಅದರ ವಿಲೇವಾರಿ ಕೂಡ ನಿಯಮಬದ್ಧವಾಗಿಯೇ ನಡೆಯಬೇಕು. ಈ ರಗಳೆಯೇ ಬೇಡ ಎಂದು ನಾನು ಯಾವ ರೆಪ್ರೆಸೆಂಟೆಟೀವ್ ಹತ್ತಿರವೂ ಪುಕ್ಕಟೆ ಸ್ಯಾಂಪಲ್‌ಗಳನ್ನು ಇಸಕೊಳ್ಳುವುದನ್ನೂ ಬಿಟ್ಟುಬಿಟ್ಟಿದ್ದೇನೆ. ಹಾಗಾಗಿ, ನಾನು ಡ್ರಗ್ ಫ್ರೀ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry