ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13ಕ್ಕೆ ಪೆಟ್ರೋಲ್‌ ಬಂಕ್‌ ಬಂದ್‌

Last Updated 7 ಅಕ್ಟೋಬರ್ 2017, 19:40 IST
ಅಕ್ಷರ ಗಾತ್ರ

ಮುಂಬೈ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೆಟ್ರೋಲ್ ವಿತರಕರು ಅಕ್ಟೋಬರ್ 13ರಂದು ಒಂದು ದಿನದ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಕಮಿಷನ್ ಹೆಚ್ಚಳ ಮತ್ತು ತೈಲ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವ ಬೇಡಿಕೆಯನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಲಾಗುತ್ತಿದೆ ಎಂದು ಯುನೈಟೆಡ್ ಪೆಟ್ರೋಲಿಯಂ ಫ್ರಂಟ್‌ (ಯುಪಿಎಫ್‌) ತಿಳಿಸಿದೆ.

ಯುಪಿಎಫ್‌ನಲ್ಲಿ ಇರುವ ಒಟ್ಟು 54 ಸಾವಿರ ಪೆಟ್ರೋಲ್ ಬಂಕ್‌ ಮಾಲೀಕರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಅಕ್ಟೋಬರ್‌ 13ರಂದು ಪೆಟ್ರೋಲ್‌ ಮತ್ತು ಡೀಸೆಲ್ ಖರೀದಿ ಮತ್ತು ಮಾರಾಟ ಇರುವುದಿಲ್ಲ. ಬೇಡಿಕೆಗೆ ಸ್ಪಂದಿಸದೇ ಇದ್ದರೆ ಅಕ್ಟೋಬರ್ 27ರಿಂದ ತೈಲ ಖರೀದಿ ಮತ್ತು ಮಾರಾಟವನ್ನು ಅನಿರ್ದಿಷ್ಟಾವಧಿಗೆ ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

2016ರ ನವೆಂಬರ್‌ನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಮತ್ತು ವಿತರಕರ ಮಧ್ಯೆ ಒಪ್ಪಂದ ನಡೆದಿತ್ತು. ಅದರಂತೆ ಪ್ರತಿ ಆರು ತಿಂಗಳಿಗೆ ಒಮ್ಮೆ ವಿತರಕರಿಗೆ ನೀಡುವ ಕಮಿಷನ್ ದರ ಪರಿಷ್ಕರಣೆ, ಕಾರ್ಮಿಕರು, ಸಾರಿಗೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹಾಗೂ ನಷ್ಟ ನಿರ್ವಹಣೆ ಮೊತ್ತ ನೀಡಬೇಕು ಎಂದು ವಿತರಕರ ಒಕ್ಕೂಟ ಬೇಡಿಕೆ ಸಲ್ಲಿಸಿತ್ತು.

ಆದರೆ ಈ ಎಲ್ಲಾ ಬೇಡಿಕೆಗಳನ್ನೂತೈಲ ಕಂಪೆನಿಗಳು ನಿರ್ಲಕ್ಷ್ಯಮಾಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಬೇಡಿಕೆಗಳನ್ನು ಈಡೇರಿಸುವಂತೆ ತೈಲ ಕಂಪೆನಿಗಳಿಗೆ ಪತ್ರ ಬರೆಯಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದೆ.

ಮಾರುಕಟ್ಟೆ ಶಿಸ್ತು ಕಾಪಾಡಿಕೊಳ್ಳಲು ತೈಲ ಕಂಪೆನಿಗಳು ಜಾರಿಗೊಳಿಸಿರುವ ಮಾರ್ಗಸೂಚಿಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದೆ.

ನಿತ್ಯವೂ ದರ ಪರಿಷ್ಕರಣೆಗೆ ವಿರೋಧ: ತೈಲ ಮಾರಾಟ ಕಂಪೆನಿಗಳು ಜುಲೈ 1 ರಿಂದ ನಿತ್ಯವೂ ದರ ಪರಿಷ್ಕರಣೆ ಮಾಡುತ್ತಿವೆ. ಈ ನಿರ್ಧಾರದ ಬಗ್ಗೆ ವಿತರಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಗ್ರಾಹಕರಿಗೆ ಅಥವಾ ವಿತರಕರಿಗೆ ಯಾವುದೇ ಲಾಭ ಇಲ್ಲ ಎಂದು ಹೇಳಿದ್ದಾರೆ.

ನಾಳೆಯಿಂದ 2 ದಿನ ಲಾರಿ ಮುಷ್ಕರ

ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಂತೆ ಒತ್ತಾಯಿಸಿ ಸೋಮವಾರ ಮತ್ತು ಮಂಗಳವಾರ (ಇದೇ 9 ಮತ್ತು 10) ದೇಶವ್ಯಾಪಿ  ಮುಷ್ಕರ ನಡೆಸುವುದಾಗಿ ಲಾರಿ ಮಾಲೀಕರು ಎಚ್ಚರಿಕೆ ನೀಡಿದ್ದಾರೆ.

9ರಂದು ಬೆಳಗ್ಗೆ 8ರಿಂದ 10ರಂದು ರಾತ್ರಿ 8ರವರೆಗೂ ಮುಷ್ಕರ ನಡೆಸಲಾಗುವುದು. ಸರ್ಕಾರ ಸ್ಪಂದಿಸದೇ ಇದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್‌ ಕಾಂಗ್ರೇಸ್‌ (ಎಐಎಂಟಿಸಿ), ಆಲ್ ಇಂಡಿಯಾ ಟ್ರಾನ್ಸ್‌ಪೋರ್ಟರ್ಸ್‌ ವೆಲ್‌ಫೇರ್‌ ಅಸೋಸಿಯೇಶನ್‌ ಮತ್ತು ಆಲ್ ಇಂಡಿಯಾ ಕಾನ್ಫೆಡರೇಷನ್ ಆಫ್ ಗೂಡ್ಸ್ ವೆಹಿಕಲ್ಸ್ ಓನರ್ಸ್‌ ಅಸೋಸಿಯೇಶನ್ಸ್‌ ಜಂಟಿಯಾಗಿ ಮುಷ್ಕರ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT