ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್‌ ಶಾ ಪುತ್ರ ಜಯ್‌ ಶಾ ಕಂಪೆನಿ ವಿರುದ್ಧ ತನಿಖೆ ನಡೆಸಲು ಮೋದಿಗೆ ಕಾಂಗ್ರೆಸ್‌, ಎಎಪಿ ಒತ್ತಾಯ

Last Updated 8 ಅಕ್ಟೋಬರ್ 2017, 13:40 IST
ಅಕ್ಷರ ಗಾತ್ರ

ನವದೆಹಲಿ: ‘ಅಮಿತ್‌ ಶಾ ಪುತ್ರ ಜಯ್‌ ಶಾ ಒಡೆತನದ ಟೆಂಪಲ್‌ ಎಂಟರ್‌ಪ್ರೈಸಸ್‌ ವಿರುದ್ಧ ಸಮಗ್ರ ತನಿಖೆಗೆ ಆದೇಶಿಸಬೇಕು’ ಎಂದು ಕಾಂಗ್ರೆಸ್‌ ಮತ್ತು ಎಎಪಿ ಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿವೆ.

‘ಜಯ್‌ ಶಾ ನಿರ್ದೇಶಕರಾಗಿರುವ ಟೆಂಪಲ್‌ ಎಂಟರ್‌ಪ್ರೈಸಸ್‌ನ ಆದಾಯ ಒಂದು ವರ್ಷದ ಅವಧಿಯಲ್ಲಿ ₹50 ಸಾವಿರದಿಂದ ₹ 80 ಕೋಟಿಗೆ ಏರಿಕೆಯಾಗಿದೆ’ ಎಂದು ‘ದಿ ವೈರ್‌’ ಸುದ್ದಿತಾಣ ವರದಿ ಮಾಡಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಶಾ‌ ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಕಾಂಗ್ರೆಸ್ ಮತ್ತು ಎಎಪಿ ಆಗ್ರಹಿಸಿವೆ.

ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌, ‘2013 ಮತ್ತು 2014ರಲ್ಲಿ ನಷ್ಟದಲ್ಲಿದ್ದ ಟೆಂಪಲ್‌ ಎಂಟರ್‌ಪ್ರೈಸಸ್‌ 2016ರಲ್ಲಿ ₹ 80 ಕೋಟಿ ಆದಾಯ ಗಳಿಸಿದ್ದು ಹೇಗೆ? ನಷ್ಟದಲ್ಲಿದ್ದ ಕಂಪೆನಿ ಹೀಗೆ ಏಕಾಏಕಿ ಭಾರೀ ಪ್ರಮಾಣದಲ್ಲಿ ಆದಾಯ ಗಳಿಸಲು ಸಾಧ್ಯವೇ?’ ಎಂದು ಪ್ರಶ್ನಿಸಿದ್ದಾರೆ.

‘ನೀವೀಗ ಸಿಬಿಐ ತನಿಖೆಗೆ ಆದೇಶಿಸುತ್ತೀರಾ? ಜಾರಿ ನಿರ್ದೇಶನಾಲಯದ ತನಿಖೆಗೆ ಆದೇಶಿಸುತ್ತೀರಾ? ನೀವು ಜಯ್‌ ಶಾ ಬಂಧನಕ್ಕೆ ಆದೇಶಿಸುತ್ತೀರಾ? ಅಥವಾ ಈ ಪ್ರಶ್ನೆಗಳಿಗೆ ಮೌನ ವಹಿಸುತ್ತೀರಾ?’ ಎಂದು ಸಿಬಲ್‌ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

‘ಜಯ್‌ ಶಾ ವಿರುದ್ಧದ ಆರೋಪಗಳ ಬಗ್ಗೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನಿಖೆ ನಡೆಸಬೇಕು. ಇದು ದೊಡ್ಡ ಅವ್ಯವಹಾರದ ಪ್ರಕರಣ. ಈ ಪ್ರಕರಣದ ಬಗ್ಗೆ ಮೋದಿ ಮೌನ ವಹಿಸುವಂತಿಲ್ಲ’ ಎಂದು ಸಿಬಲ್‌ ಒತ್ತಾಯಿಸಿದ್ದಾರೆ.

ರಾಹುಲ್‌ ಟ್ವೀಟ್‌
‘ನೋಟು ರದ್ದತಿಯ ಫಲಾನುಭವಿಗಳು ಯಾರು ಎಂಬುದು ಕೊನೆಗೂ ಗೊತ್ತಾಯಿತು. ಅದು ಆರ್‌ಬಿಐ ಅಲ್ಲ, ಬಡವರು ಅಥವಾ ರೈತರೂ ಅಲ್ಲ. ಅದು ಶಾ ಕುಟುಂಬ. ಜೈ ಅಮಿತ್‌’ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT