ಪೇಟೆ ವಹಿವಾಟಿನ ಮೇಲೆ ಹಣದುಬ್ಬರ ಕೈಗಾರಿಕಾ ಪ್ರಗತಿಯ ಪ್ರಭಾವ ನಿರೀಕ್ಷೆ

ಶನಿವಾರ, ಮೇ 25, 2019
25 °C

ಪೇಟೆ ವಹಿವಾಟಿನ ಮೇಲೆ ಹಣದುಬ್ಬರ ಕೈಗಾರಿಕಾ ಪ್ರಗತಿಯ ಪ್ರಭಾವ ನಿರೀಕ್ಷೆ

Published:
Updated:

ನವದೆಹಲಿ: ಹಣದುಬ್ಬರದ ಅಂಕಿ–ಅಂಶ, ಕೈಗಾರಿಕಾ ಪ್ರಗತಿ ಸೂಚ್ಯಂಕ ಮತ್ತು ಕಂಪೆನಿಗಳ ತ್ರೈಮಾಸಿಕದ ಆರ್ಥಿಕ ಸಾಧನೆ ಈ ವಾರದ ಷೇರುಪೇಟೆ ವಹಿವಾಟಿನ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳಾಗಿವೆ.

ಜುಲೈ–ಸೆಪ್ಟೆಂಬರ್‌ ಅವಧಿಯ ಕಂಪೆನಿಗಳ ಆರ್ಥಿಕ ಸಾಧನೆಯ ಪ್ರಕಟಣೆ ಗುರುವಾರದಿಂದ ಆರಂಭವಾಗಲಿದೆ.  ಕಂಪೆನಿಗಳ ಫಲಿತಾಂಶದ ಆಧಾರದ ಮೇಲೆ ಷೇರುಗಳ ಮೌಲ್ಯದಲ್ಲಿ ವ್ಯತ್ಯಾಸವಾಗಿ, ಸೂಚ್ಯಂಕದ ಏರಿಳತಕ್ಕೆ ಕಾರಣವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.  ಮೊದಲಿಗೆ ದೇಶದ ಅತಿ ದೊಡ್ಡ ಐ.ಟಿ ಸಂಸ್ಥೆ ಟಿಸಿಎಸ್‌ ಗುರುವಾರ ತನ್ನ ಆರ್ಥಿಕ ಸಾಧನೆ ಪ್ರಕಟಿಸಲಿದೆ.

ಆರ್ಥಿಕ ಪ್ರಗತಿಯನ್ನು ಸೂಚಿಸುವ ಚಿಲ್ಲರೆ ಹಣದುಬ್ಬರದ ಸೆಪ್ಟೆಂಬರ್‌ ತಿಂಗಳ ಅಂಕಿ–ಅಂಶ ಮತ್ತು ಕೈಗಾರಿಕಾ ಉತ್ಪಾದನೆ ಸೂಚ್ಯಂಕದ (ಐಐಪಿ) ಆಗಸ್ಟ್‌ ತಿಂಗಳ ಮಾಹಿತಿ ಗುರುವಾರ ಹೊರಬೀಳಲಿದೆ. ಇದರ ಆಧಾರದ ಮೇಲೆ ವಹಿವಾಟಿನ ದಿಕ್ಕು ನಿರ್ಧಾರವಾಗಲಿದೆ ಎಂದು ಪರಿಣತರು ಹೇಳಿದ್ದಾರೆ.

‘ಜಿಎಸ್‌ಟಿ ಜಾರಿಯಿಂದ ಆಗಿರುವ ಕೆಲವು ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ತ್ರೈಮಾಸಿಕ ಫಲಿತಾಂಶದ ಮೇಲೆ ಷೇರುಪೇಟೆ ಚಟುವಟಿಕೆ ನಿರ್ಧಾರವಾಗಲಿದೆ’ ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಪಿಸಿಜಿ ಸಂಶೋಧನಾ ವಿಭಾಗದ ಉಪಾಧ್ಯಕ್ಷ ಸಂಜೀವ್ ಜರ್ಬಾಡೆ ತಿಳಿಸಿದ್ದಾರೆ.

ಶುಕ್ರವಾರ (ಅ.6) ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ 27 ಸರಕುಗಳ ತೆರಿಗೆ ದರ ತಗ್ಗಿಸಲಾಗಿದೆ.

ಸಣ್ಣ ಉದ್ಯಮಗಳಿಗೆ ಕಂಪೋಸಿಶನ್ ಸ್ಕೀಮ್‌ ಆಯ್ಕೆ ಮಾಡಿಕೊಳ್ಳಲು ಇದ್ದ ವಹಿವಾಟು ಮಿತಿಯನ್ನು ₹75 ಲಕ್ಷದಿಂದ ₹1 ಕೋಟಿಗೆ ಹೆಚ್ಚಿಸಲಾಗಿದೆ. ರಫ್ತುದಾರರಿಗೆ ಕೆಲವು ವಿನಾಯ್ತಿ ನೀಡಲಾಗಿದೆ. ಈ ಅಂಶಗಳು ಷೇರುಪೇಟೆ ವಹಿವಾಟಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆ ಮಾಡಲಾಗಿದೆ.

‘ಹಣದುಬ್ಬರದ ಅಂಕಿ–ಅಂಶ ಮತ್ತು ತ್ರೈಮಾಸಿಕದಲ್ಲಿ ಕಂಪೆನಿಗಳ ಆರ್ಥಿಕ ಸಾಧನೆ ಹೂಡಿಕೆ ಪ್ರಮಾಣವನ್ನು ನಿರ್ಧರಿಸಲಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವೀಸಸ್‌ನ ಮಾರುಕಟ್ಟೆ ತಂತ್ರಗಾರಿಕೆ ವಿಭಾಗದ ಮುಖ್ಯಸ್ಥ ಆನಂದ್ ಜೇಮ್ಸ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವಾರದ ವಹಿವಾಟಿನಲ್ಲಿ ಬಿಎಸ್ಇ ಸಂವೇದಿ ಸೂಚ್ಯಂಕ 530 ಅಂಶ, ಎನ್‌ಎಸ್‌ಇ ನಿಫ್ಟಿ 191 ಅಂಶಗಳಷ್ಟು ಏರಿಕೆ ಕಂಡಿವೆ.

ಎರಡು ಕಂಪೆನಿಗಳು ಷೇರುಪೇಟೆಗೆ

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಎರಡು ಕಂಪೆನಿಗಳು ಈ ವಾರ ಷೇರುಪೇಟೆ ಪ್ರವೇಶಿಸಲಿವೆ.

ಇಂಡಿಯನ್ ಎನರ್ಜಿ ಎಕ್ಸ್‌ಚೇಂಜ್‌ ₹1,001 ಕೋಟಿ ಮತ್ತು ಜನರಲ್ ಇನ್ಶುರನ್ಸ್‌ ಕಾರ್ಪೊರೇಷನ್ ಆಫ್ ಇಂಡಿಯಾ (ಜಿಐಸಿ) ₹11,370 ಕೋಟಿ,  ಒಟ್ಟಾರೆ ₹12,371 ಕೋಟಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿವೆ.

ಇಂಡಿಯನ್‌ ಎನರ್ಜಿ ಎಕ್ಸ್‌ಚೇಂಜ್‌ 60 ಲಕ್ಷ ಷೇರುಗಳನ್ನು ಬಿಡುಗಡೆ ಮಾಡಲಿದ್ದು, ಪ್ರತಿ ಷೇರಿನ ಬೆಲೆ ₹1,645 ರಿಂದ ₹1,650ಕ್ಕೆ ನಿಗದಿ ಮಾಡಿದೆ. ಅಕ್ಟೋಬರ್ 9 ರಿಂದ 11ರವರೆಗೆ ಐಪಿಒ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಜಿಐಸಿ ಶೇ 14.22 ರಷ್ಟು ಷೇರುಗಳನ್ನು ಬಿಡುಗಡೆ ಮಾಡಲಿದ್ದು, ಷೇರಿನ ಬೆಲೆ  ಕನಿಷ್ಠ ₹855 ರಿಂದ ಗರಿಷ್ಠ ₹912 ರವರೆಗೆ ನಿಗದಿ ಮಾಡಿದೆ. ಅಕ್ಟೋಬರ್ 11 ರಂದು ಐಪಿಒ ಆರಂಭವಾಗಲಿದ್ದು, ಅ.13ಕ್ಕೆ ಕೊನೆಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry