ಶನಿವಾರ, ಸೆಪ್ಟೆಂಬರ್ 21, 2019
24 °C

ಚನ್ನಗಿರಿ: ಬಡ ಜನರಿಗೆ ಮರೀಚಿಕೆಯಾದ ವಸತಿ ಸೌಕರ್ಯ

Published:
Updated:
ಚನ್ನಗಿರಿ: ಬಡ ಜನರಿಗೆ ಮರೀಚಿಕೆಯಾದ ವಸತಿ ಸೌಕರ್ಯ

ಚನ್ನಗಿರಿ: ಪಟ್ಟಣದ ಆಶ್ರಯ ಲೇ ಔಟ್‌ ನಿರ್ಮಾಣ ಕಾಮಗಾರಿ ಐದು ವರ್ಷಗಳಿಂದ ಸ್ಥಗಿತಗೊಂಡಿದ್ದು, ವಸತಿಹೀನರು ಇನ್ನೂ ಚಾತಕಪಕ್ಷಿಗಳಂತೆ ಕಾಯುವ ಸ್ಥಿತಿ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ. ಬಡ ವರ್ಗದ ಜನರಿಗೆ ವಸತಿ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಐದು ವರ್ಷಗಳ ಹಿಂದೆ ಪಟ್ಟಣ ಪಂಚಾಯ್ತಿ 4 ಎಕರೆ ಜಮೀನನ್ನು ಖರೀದಿಸಿತ್ತು.

ರಾಜೀವ್‌ ಗಾಂಧಿ ವಸತಿ ನಿಗಮದಿಂದ 150ಕ್ಕೂ ಹೆಚ್ಚು ಆಶ್ರಯ ಮನೆಗಳನ್ನು ನಿರ್ಮಿಸಲು ₹ 7 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಕಾಮಗಾರಿ ಗುತ್ತಿಗೆಯನ್ನು ಭೂಸೇನಾ ನಿಗಮದವರು ಪಡೆದುಕೊಂಡಿದ್ದರು. ಆಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ವಿ. ಸೋಮಣ್ಣ ಗುದ್ದಲಿ ಪೂಜೆ ನೆರವೇರಿಸಿದ್ದರು.

ಮನೆಗಳನ್ನು ನಿರ್ಮಿಸಲು ನಿಗದಿಯಾಗಿದ್ದ ಜಾಗ ಪುರಾತತ್ವ ಇಲಾಖೆಗೆ ಸೇರಿದ ಕೋಟೆ ಪ್ರದೇಶ ವ್ಯಾಪ್ತಿಯಲ್ಲಿ ಇತ್ತು. ಹೀಗಾಗಿ ಆ ಇಲಾಖೆಯವರು ಕಾಮಗಾರಿಗೆ ತಡೆ ಒಡ್ಡಿದರು. ನಂತರ ಸಂಸದ ಜಿ.ಎಂ. ಸಿದ್ದೇಶ್ವರ ಸಂಬಂಧಪಟ್ಟ ಪುರಾತತ್ವ ಇಲಾಖೆಯವರೊಂದಿಗೆ ಮಾತನಾಡಿ, ಕಾಮಗಾರಿಯನ್ನು ಮುಂದುವರೆಸಲು ಅನುಮತಿ ಕೊಡಿಸಿದ್ದರು. ಪಟ್ಟಣ ಪಂಚಾಯ್ತಿ ಪುರಸಭೆಯಾಗಿ ಮೇಲ್ದರ್ಜೆಗೇರಿ ಎರಡು ವರ್ಷ ಕಳೆಯುತ್ತಾ ಬಂದರೂ ಇದುವರೆಗೆ ಮನೆಗಳನ್ನು ನಿರ್ಮಿಸಿಲ್ಲ.

ಪಟ್ಟಣ ಪಂಚಾಯ್ತಿಯವರು ಆಶ್ರಯ ಲೇ ಔಟ್‌ ಮಾಡಿ, ಮನೆಗಳನ್ನು ₹ 1.20 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ವಿತರಣೆ ಮಾಡಲು ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಿದರು. ಒಂದು ಮನೆಗೆ ₹ 10 ಸಾವಿರ ಡಿಡಿಯನ್ನು ಪಡೆದುಕೊಂಡು ಐದು ವರ್ಷಗಳು ಕಳೆದಿವೆ. ಇದುವರೆಗೆ ಒಂದು ಮನೆಯನ್ನೂ ನಿರ್ಮಿಸಿಲ್ಲ ಎನ್ನುತ್ತಾರೆ ಅನಿತಾ, ಹನುಮಂತಪ್ಪ.

‘ಪುರಸಭೆಯಿಂದ ಯಾವುದೇ ಸಮಸ್ಯೆ ಇಲ್ಲ. ಭೂಸೇನಾ ನಿಗಮದವರ ಅನೇಕ ಸಮಸ್ಯೆಗಳಿಂದ ನಮಗೆ ತುಂಬಾ ನಷ್ಟವಾಗಿದೆ. ಕಚ್ಚಾ ಸಾಮಗ್ರಿಗಳ ದರ ಕೂಡ ಹೆಚ್ಚಾಗಿದೆ. ಐದು ವರ್ಷದ ಹಿಂದೆ ಟೆಂಡರ್‌ನಲ್ಲಿ ನಮೂದಿಸಿದ ದರದಲ್ಲಿ ಮನೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ.

ಹೊಸ ದರ ನೀಡಬೇಕು ಎಂದು ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದರಿಂದ ಮನೆಗಳ ನಿರ್ಮಾಣ ಸ್ಥಗಿತಗೊಂಡಿದೆ. ಅದೇ ರೀತಿ ಪಟ್ಟಣದ ಬೇರೆ ಕಡೆ ಮನೆಗಳನ್ನು ನಿರ್ಮಿಸಲು ಅಗತ್ಯವಾದ ಜಮೀನನ್ನು ಖರೀದಿಸಲು ಚಿಂತನೆ ನಡೆಸಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಟಿ. ಜಯ್ಯಣ್ಣ ತಿಳಿಸಿದರು.

Post Comments (+)