ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ತಂಡದ ಬಸ್‌ ಮೇಲೆ ಕಲ್ಲು: ಇಬ್ಬರ ಬಂಧನ

ಬರ್ಸಾಪಾರ ಕ್ರೀಡಾಂಗಣದಲ್ಲಿ ನಡೆದ ಘಟನೆ: ಪ್ರವಾಸಿ ಆಟಗಾರರ ಆತಂಕ
Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಗುವಾಹತಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಇದ್ದ ಬಸ್‌ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ ಘಟನೆಯು ಮಂಗಳವಾರ ತಡರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬರ್ಸಾಪಾರ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 8 ವಿಕೆಟ್‌ಗಳಿಂದ ಭಾರತ ತಂಡವನ್ನು ಸೋಲಿಸಿತ್ತು. ಆ ನಂತರ ತಂಡವು ತಂಗಿದ್ದ ಹೋಟೆಲ್‌ ಸಮೀಪ ಬಸ್‌ ಮೇಲೆ ಕೆಲವರು ಕಲ್ಲು ತೂರಿದರು. ಇದರಿಂದಾಗಿ ಬಸ್‌ನ ಒಂದು ಬದಿಯ ಕಿಟಕಿಯ ಗಾಜು ಒಡೆದು ಪುಡಿಯಾಯಿತು. ಆದರೆ ಈ  ಘಟನೆಯಲ್ಲಿ  ಯಾರಿಗೂ ಗಾಯಗಳಾಗಿಲ್ಲ.

ಭದ್ರತೆ ವೈಫಲ್ಯ: ಭದ್ರತಾ ಸಿಬ್ಬಂದಿ ಎದುರಿನಲ್ಲಿಯೇ ಈ ಘಟನೆ ನಡೆದಿದೆ. ಇದರಿಂದಾಗಿ ಭದ್ರತೆಯ ಬಗ್ಗೆ ಆಸ್ಟ್ರೇಲಿಯಾ ಆಟಗಾರರು ಆತಂಕ
ವ್ಯಕ್ತಪಡಿಸಿದ್ದಾರೆ.

‘ಶ್ರೇಷ್ಠ ಪಂದ್ಯದ ನಂತರ ಕೆಟ್ಟ ಘಟನೆ ನಡೆಯಿತು. ಹೊಟೇಲ್‌ಗೆ ಹೊರಟ ಸಂದರ್ಭದಲ್ಲಿ ಬಸ್‌ ಕಿಟಕಿಯ ಗಾಜಿಗೆ ಕಲ್ಲು ಅಪ್ಪಳಿಸಿತ್ತು. ಅದರಿಂದಾಗಿ ನಮಗೆ ತೀವ್ರ ಹೆದರಿಕೆ ಆಯಿತು’ ಎಂದು ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಆ್ಯರನ್ ಫಿಂಚ್ ಟ್ವೀಟ್ ಮಾಡಿದ್ದಾರೆ.

ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿರುವ ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ್ ಸೋನೊವಾಲ್, ‘ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಕ್ಷಮೆಯಾಚಿಸುತ್ತೇವೆ’ ಎಂದಿದ್ದಾರೆ.

‘ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಆದರೂ ಈ ಕುಕೃತ್ಯ ನಡೆದಿರುವುದು ಅಚ್ಚರಿ ಮೂಡಿಸಿದೆ. ಜನದಟ್ಟಣೆಯಿದ್ದ ಪ್ರದೇಶದಲ್ಲಿ ಬಸ್‌ ಬಂದಾಗ ಈ ಘಟನೆ ನಡೆದಿಲ್ಲ. ಆದರೆ ಹೋಟೆಲ್‌ ಸಮೀಪಿಸಿದಾಗ ಕೆಲವರು ಕಲ್ಲು ತೂರಿದರು’ ಎಂದು ಅಸ್ಸಾಂ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಪ್ರದೀಪ್ ಬುರಾಗೊಹೇನ್ ತಿಳಿಸಿದ್ದಾರೆ.

ರಾಜ್ಯವರ್ಧನ್ ಆಕ್ರೋಶ: ‘ಗುವಾಹತಿಯು ದೇಶದ ಪ್ರಮುಖ ಕ್ರೀಡಾ ತಾಣವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಂತಹ ಸಂದರ್ಭದಲ್ಲಿ ನಡೆದಿರುವ ಈ ಘಟನೆಯು ನಾಚಿಕೆಗೇಡಿನದ್ದು. ಭಾರತವು ಆತಿಥ್ಯ ನೀಡುವಲ್ಲಿ ಶ್ರೇಷ್ಠ ಹೆಸರು ಪಡೆದಿದೆ. ಆದರೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ದೇಶದಲ್ಲಿ ಫಿಫಾ ಜೂನಿಯರ್ ವಿಶ್ವಕಪ್ ಫುಟ್‌ಬಾಲ್ ಮತ್ತು ಕ್ರಿಕೆಟ್ ಸರಣಿಗಳು ನಡೆಯುತ್ತಿವೆ. ಉತ್ತಮ ಆಯೋಜನೆ ನಡೆಯಬೇಕು’ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ.

ಆರ್. ಅಶ್ವಿನ್ ಕೂಡ ಘಟನೆಯನ್ನು ಖಂಡಿಸಿದ್ದಾರೆ. ಸರಣಿಯ ಮೂರನೇ ಪಂದ್ಯ ಶುಕ್ರವಾರ ಹೈದರಾಬಾದ್‌ನಲ್ಲಿ ನಡೆಯಲಿದೆ. ಅದಕ್ಕಾಗಿ ಬಿಗಿಭದ್ರತೆ ಏರ್ಪಡಿಸುವಂತೆ ಬಿಸಿಸಿಐ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT