ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ನೈತಿಕತೆ ಕುಸಿಯುತ್ತಿದೆ: ಸಿನ್ಹಾ ಚಾಟಿ

ಅಮಿತ್‌ ಷಾ ಪುತ್ರನ ವಿರುದ್ಧದ ಅವ್ಯವಹಾರ ಪ್ರಕರಣ: ಸತ್ಯಾಂಶ ಹೊರಬರಲು ತನಿಖೆಗೆ ಆಗ್ರಹ
Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಪಟ್ನಾ: ಅಕ್ರಮ ವಹಿವಾಟು ಪ್ರಕರಣದಲ್ಲಿ ಸಿಲುಕಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಪುತ್ರ ಜಯ್‌ ಷಾ ಬೆಂಬಲಕ್ಕೆ ನಿಲ್ಲುವ ಮೂಲಕ ಪಕ್ಷ ತನ್ನ ನೈತಿಕತೆ ಕಳೆದುಕೊಂಡಿದೆ ಎಂದು ಹಿರಿಯ ನಾಯಕ ಯಶವಂತ್‌ ಸಿನ್ಹಾ ಅವರು ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಅನೇಕ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ನೈತಿಕತೆ ಇತ್ತೀಚಿನ ದಿನಗಳಲ್ಲಿ ಕಳೆದು ಹೋಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸುದ್ದಿ ಜಾಲತಾಣ ಪ್ರಕಟಿಸಿದ ವರದಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಇದು ವಿಚಾರಣೆ ಮತ್ತು ತನಿಖೆಗೆ ಸಂಬಂಧಿಸಿದ ವಿಚಾರ. ಸತ್ಯ ತಿಳಿಯಲು ಸರ್ಕಾರ ಪ್ರಕರಣದ ತನಿಖೆಗೆ ಆದೇಶಿಸಲಿ. ಅದನ್ನು ಬಿಟ್ಟು ಕೇಂದ್ರ ಸಚಿವರು ಮತ್ತು ಪಕ್ಷದ ಮುಖಂಡರು ಬಹಿರಂಗವಾಗಿಯೇ ಜಯ್‌ ಷಾ ಬೆಂಬಲಕ್ಕೆ ನಿಲ್ಲುವುದು ಸರಿಯಲ್ಲ ಎಂದರು.

ಬಿಜೆಪಿ ನಾಯಕರ ಈ ವರ್ತನೆ ಜನರಿಗೆ ತಪ್ಪು ಸಂದೇಶ ರವಾನಿಸುತ್ತದೆ. ಪೈಪೋಟಿಯ ಮೇಲೆ ಜಯ್‌ ಷಾ ರಕ್ಷಣೆಗೆ ಮುಂದಾಗಿರುವುದನ್ನು ಗಮನಿಸಿದರೆ ಆರೋಪದಲ್ಲಿ ನಿಜವಿದೆ ಎಂಬ ಸಂಶಯ ಮೂಡುತ್ತದೆ ಎಂದು ಸಿನ್ಹಾ ಶಂಕೆ ವ್ಯಕ್ತಪಡಿಸಿದ್ದಾರೆ.

ಪೀಯೂಷ್‌ ಗೋಯಲ್‌ ತಾವು ಕೇಂದ್ರ ಸಚಿವ ಎಂಬುವುದನ್ನು ಮರೆತು ಬಹಿರಂಗವಾಗಿ ಜಯ್‌ ಷಾ ಸಮರ್ಥನೆಗೆ ಇಳಿದಿದ್ದು ನಾಚಿಕೆಗೇಡಿನ ವಿಷಯ. ಅವರು ಜಯ್‌ ಷಾ ಲೆಕ್ಕ ಪರಿಶೋಧಕರಂತೆ ವರ್ತಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಅಕ್ರಮ ವಹಿವಾಟು ಬಯಲಿಗೆ ಎಳೆದ ಸುದ್ದಿ ಜಾಲತಾಣದ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವ ನಿರ್ಧಾರವನ್ನು ಅವರು ಖಂಡಿಸಿದರು. ಮಾಧ್ಯಮದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಸಾಧುವಲ್ಲ ಎಂದು ಸಿನ್ಹಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ಜಯಂತಿ ಸಮಾರಂಭದಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜಯ್‌ ಪರ ವಕಾಲತ್ತು ವಹಿಸಲು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಮುಂದಾಗಿರುವುದಕ್ಕೂ ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಸಿನ್ಹಾ ವಿರೋಧ ಪಕ್ಷ ಕಾಂಗ್ರೆಸ್‌ ಜತೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದೆ.

ಮೋದಿ ಜತೆ ಮುಖಾಮುಖಿ
ಪಟ್ನಾದಲ್ಲಿ ಶನಿವಾರ ನಡೆಯಲಿರುವ ಬಿಹಾರ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಯಶವಂತ್‌ ಸಿನ್ಹಾ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಮುಖಾಮುಖಿಯಾಗುವ ಸಾಧ್ಯತೆ ಇದೆ.

ಪಟ್ನಾ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಮತ್ತು ಉಪನ್ಯಾಸಕರಾಗಿದ್ದ ಯಶವಂತ್‌ ಸಿನ್ಹಾ ಅವರು ಮೋದಿ ಅವರ ಆರ್ಥಿಕ ನೀತಿಗಳ ಕಟು ವಿಮರ್ಶಕರಾಗಿದ್ದಾರೆ. ಈ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿಗಳಾದ ಶತ್ರುಘ್ಞ ಸಿನ್ಹಾ, ರವಿಶಂಕರ್‌ ಪ್ರಸಾದ್‌, ಲಾಲು ಪ್ರಸಾದ್‌, ನಿತೀಶ್‌ ಕುಮಾರ್‌, ಸುಶೀಲ್‌ ಮೋದಿ ಅವರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

₹100 ಕೋಟಿ ಮಾನನಷ್ಟ ಪ್ರಕರಣದ ವಿಚಾರಣೆ ಮುಂದೂಡಿಕೆ
ಅಹಮದಾಬಾದ್‌:
ತಮ್ಮ ವಿರುದ್ಧ ಸುದ್ದಿ ಪ್ರಕಟಿಸಿದ್ದ ಸುದ್ದಿ ಜಾಲತಾಣದ ವಿರುದ್ದ ಅಮಿತ್‌ ಷಾ ಪುತ್ರ ಜಯ್ ಷಾ ಹೂಡಿದ್ದ ₹100 ಕೋಟಿ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಯನ್ನು ಸ್ಥಳೀಯ ನ್ಯಾಯಾಲಯ ಮುಂದೂಡಿದೆ.

ಬುಧವಾರ ಪ್ರಕರಣದ ವಿಚಾರಣೆಯ ವೇಳೆ ಷಾ ಪರ ವಕೀಲ ಹಾಜರಾಗದ ಕಾರಣ ನ್ಯಾಯಾಲಯ ವಿಚಾರಣೆಯನ್ನು ಅ.16ಕ್ಕೆ ಮುಂದೂಡಿತು.

‘ಪ್ರಧಾನಿಯ ಕಣ್ಣೊರೆಸುವ ತಂತ್ರ’
ಜಮ್ಮು:
ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ವಿರೋಧಿ ಹೇಳಿಕೆಗಳು ಕೇವಲ ಜನರನ್ನು ಮರಳು ಮಾಡುವ   ತಂತ್ರ ಎಂದು ಕಾಂಗ್ರೆಸ್‌ ಟೀಕಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಪುತ್ರನ ಹಗರಣದ ಬಗ್ಗೆ ಮೌನ ವಹಿಸಿರುವ ಪ್ರಧಾನಿ ಹೇಗೆ ದೇಶವನ್ನು ರಕ್ಷಿಸುತ್ತಾರೆ ಎಂದು ಕಾಂಗ್ರೆಸ್‌ ವಕ್ತಾರ ಅಜಯ್‌ ಕುಮಾರ್‌ ಬುಧವಾರ ಪ್ರಶ್ನಿಸಿದ್ದಾರೆ.

ಮೋದಿ ಅವರು ಜನರ ಕಣ್ಣೊರೆಸುವ ತಂತ್ರ ಕೈಬಿಟ್ಟು, ತಕ್ಷಣ ಹಗರಣದ ತನಿಖೆಗೆ ಆದೇಶಿಸಬೇಕು. ಅಮಿತ್‌ ಷಾ ಅವರನ್ನು ಪಕ್ಷದ ಅಧ್ಯಕ್ಷ ಹುದ್ದೆಯಿಂದ ವಜಾ ಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಿಬಿಐ, ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದಂತಹ ಹಲವಾರು ಸಂಸ್ಥೆಗಳಿರುವಾಗ ಈ ಹಗರಣವನ್ನು ಯಾಕೆ ಈ ಸಂಸ್ಥೆಗಳಿಗೆ ವಹಿಸಬಾರದು ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT