ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ನೀನಾಸಮ್ ‘ತಿರುಗಾಟ’

Last Updated 13 ಅಕ್ಟೋಬರ್ 2017, 5:25 IST
ಅಕ್ಷರ ಗಾತ್ರ

ರಂಗಪ್ರಿಯರಿಗೆ ನೀನಾಸಮ್‌ ‘ತಿರುಗಾಟ’ದ ಕುರಿತು ವಿಶೇಷವಾಗಿ ಹೇಳುವುದೇನೂ ಬೇಕಿಲ್ಲ. ಜನರಿದ್ದಲ್ಲಿಗೇ ರಂಗಭೂಮಿಯನ್ನು ಕೊಂಡೊಯ್ಯುವ ಉದ್ದೇಶದಿಂದ ಒಂದಿಷ್ಟು ಜನ ನಟನಟಿಯರ, ತಂತ್ರಜ್ಞರ ತಂಡವನ್ನು ಕಟ್ಟಿಕೊಂಡು ಕರ್ನಾಟಕದ ವಿವಿಧ ಭಾಗಗಳಿಗೆ ತೆರಳಿ ನಾಟಕವನ್ನು ಪ್ರದರ್ಶಿಸುವ ವಿಶಿಷ್ಟ ಯೋಜನೆ ‘ತಿರುಗಾಟ’. ಕನ್ನಡ ರಂಗಭೂಮಿಯ ಅನೇಕ ‘ಕ್ಲಾಸಿಕ್‌’ ಎನ್ನಬಹುದಾದ ನಾಟಕಗಳು ಈ ತಿರುಗಾಟದ ಭಾಗವಾಗಿವೆ.

ಈ ಸಲ ನೀನಾಸಮ್‌, ಭಾಸ ಕವಿಯ ‘ಮಧ್ಯಮ ವ್ಯಾಯೋಗ’ ಮತ್ತು ಇಟಲಿಯ ಪ್ರಹಸನಕಾರ ಕಾರ್ಲೋ ಗೋಲ್ಡೋನಿಯ ‘ಸರ್ವೆಂಟ್‌ ಆಫ್‌ ಟೂ ಮಾಸ್ಟರ್ಸ್‌’ನ ಕನ್ನಡ ರೂಪ ‘ಸು ಬಿಟ್ರೆ ಬಣ್ಣ, ಬ ಬಿಟ್ರೆ ಸುಣ್ಣ’ ನಾಟಕಗಳನ್ನು ಸಿದ್ಧಪಡಿಸಿಕೊಂಡು ತಿರುಗಾಟದಲ್ಲಿ ತೊಡಗಿದೆ. ಅಕ್ಟೋಬರ್‌ 14 ಮತ್ತು 15ರಂದು ನಗರದ ರಂಗಶಂಕರದಲ್ಲಿ ಈ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಮಧ್ಯಮ ವ್ಯಾಯೋಗ: ಪ್ರಸಿದ್ಧ ಸಂಸ್ಕೃತ ನಾಟಕಕಾರ ಭಾಸನ ಈ ನಾಟಕವು ಮಹಾಭಾರತದ ಕಥೆ ಮತ್ತು ಪಾತ್ರಗಳ ಚೌಕಟ್ಟಿನೊಳಗೇ ಹೊಸದೊಂದು ಕುಟುಂಬ ಕಥನ ಆವಿಷ್ಕಾರವನ್ನು ಮಾಡುವ ಮೂಲಕ ಹೊಸ ಚಿತ್ರವೊಂದನ್ನು ನಮ್ಮ ಮುಂದಿರಿಸುತ್ತದೆ. ಸ್ಮೃತಿ– ವಿಸ್ಮೃತಿಗಳ ನಡುವಿನ ಸಂಘರ್ಷ, ಮನುಷ್ಯನನ್ನು ಸದಾಕಾಲ ಆಳವಾಗಿ ಕಲುಕಿ ಕಾಡುತ್ತಲೇ ಇರುವ ಸಂಗತಿಗಳನ್ನು ಈ ನಾಟಕವು ತನ್ನ ಪಠ್ಯದೊಳಗೆ ಇರಿಸಿಕೊಂಡಿದೆ. ಕನ್ನಡ ವಿದ್ವಾಂಸರೂ ಬರಹಗಾರರೂ ಆಗಿರುವ ಎಲ್‌. ಗುಂಡಪ್ಪನವರು ಈ ಸಂಸ್ಕೃತ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಸಾಮಾನ್ಯವಾಗಿ ವಿರೂಪ, ಭಯಾನಕ ರಕ್ಕಸಿಯಾಗಿಯೇ ಚಿತ್ರಿತವಾಗಿರುವ ಹಿಡಂಬೆ, ಘಟೋತ್ಕಚರಂಥವರು ಈ ನಾಟಕದಲ್ಲಿ ಬೇರೆಯದೇ ಆಯಾಮದಲ್ಲಿ ಕಾಣಿಸಿಕೊಳ್ಳುತ್ತಾರೆ. ಹಿಡಂಬಿಯೆಂಬವಳು ಪುರುಷಾಹಂಕಾರದ ಫಲವಾಗಿ ಮತ್ತೆ ಮತ್ತೆ ಆಗುತ್ತಲೇ ಇರುವ ಕಲಹ– ಯುದ್ಧಗಳಲ್ಲಿ ಅಕಾರಣ ಶೋಷಣೆಗೊಳಗಾಗುತ್ತಲೇ ಬಂದ ಮಹಿಳಾ ಸಮುದಾಯದ ಪ್ರತಿನಿಧಿಯಾಗಿ ಕಾಣಿಸುತ್ತಾಳೆ.

ಕ್ಲಾಸಿಕ್‌ ಕಾವ್ಯದ ಎಲ್ಲ ಲಕ್ಷಣಗಳನ್ನೂ ಒಳಗೊಳ್ಳುವುದರ ಜತೆಗೆ ಸಮಕಾಲೀನ ಸಮಾಜದ ಹಲವು ಬಿರುಕುಗಳನ್ನು ಎದ್ದು ಕಾಣಿಸುವ ಶಕ್ತಿಯೂ ಈ ನಾಟಕಕ್ಕಿದೆ. ನೀನಾಸಮ್‌ ರಂಗಶಿಕ್ಷಣ ಕೇಂದ್ರದ ಪಧವಿಧರರಾಗಿರುವ ಸಾಲಿಯಾನ್‌ ಉಮೇಶ ನಾರಾಯಣ ಅವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ.

‘ಸು ಬಿಟ್ರೆ ಬಣ್ಣ, ಬ ಬಿಟ್ರೆ ಸುಣ್ಣ’: ‘ಮಧ್ಯಮ ವ್ಯಾಯೋಗ’ ಗಾಂಭೀರ್ಯಕ್ಕೆ, ಅದರ ಗುಣ ಸ್ವಭಾವಗಳಿಗೆ ಪೂರ್ತಿ ಭಿನ್ನವಾದ ನಾಟಕ ‘ಸು ಬಿಟ್ರೆ ಬಣ್ಣ, ಬ ಬಿಟ್ರೆ ಸುಣ್ಣ’. ಹೆಸರೇ ಹೇಳುವಂತೆ ಇದು ಹಾಸ್ಯ, ವ್ಯಂಗ್ಯ, ವಿಡಂಬನೆಯನ್ನೇ ಮುಖ್ಯವಾಗಿಸಿಕೊಂಡು ಪ್ರೇಕ್ಷಕರನ್ನು ನಗುವಿನ ಧಾರೆಯಲ್ಲಿ ಮನದಣಿಯೆ ಮೀಯಿಸುತ್ತದೆ.

18ನೇ ಶತಮಾನದ ಇಟಲಿಯ ಹೆಸರಾಂತ ಪ್ರಹಸನಕಾರ ಕಾರ್ಲೋ ಗೋಲ್ಡೋನಿಯ ‘ಸರ್ವೆಂಟ್‌ ಆಫ್‌ ಟೂ ಮಾಸ್ಟರ್ಸ್‌’ ಎಂಬ ಕೃತಿಯನ್ನು ಆಧರಿಸಿ ಲೇಖಕ ಜೋಗಿ ಅವರು ಕನ್ನಡದಲ್ಲಿ ಮರುರಚಿಸಿದ್ದಾರೆ. ಇಕ್ಬಾಲ್‌ ಅಹ್ಮದ್‌ ಈ ನಾಟಕವನ್ನು ನಿರ್ದೇಶಿಸಿದ್ದಾರೆ.

ಚುರುಕು ಸಂಭಾಷಣೆ, ನಗುವುಕ್ಕಿಸುವ ಅಭಿನಯ, ಎಲ್ಲೋ ಹೊಡೆದು ಇನ್ನೆಲ್ಲೋ ತಾಕುವ ರಂಜನಾತ್ಮಕ ಹಾಡುಗಳು ಈ ನಾಟಕದ ಧನಾತ್ಮಕ ಅಂಶಗಳು. ಮನಸನ್ನು ಹಗುರಗೊಳಿಸುತ್ತಲೇ ಇಂದು ನಮ್ಮನ್ನು ಎಡಬಿಡದೆ ಕಾಡುತ್ತಿರುವ ಆಹಾರ, ಎಡಬಲಗಳ ಕಿತ್ತಾಟ, ಜನಪ್ರಿಯ ಮಾದರಿಯ ಸಿನಿಮಾಗಳ, ಸ್ಟಿರಿಯೊಟೈಪ್‌ ಮಾದರಿಗಳು ಎಲ್ಲವನ್ನೂ ಈ ನಾಟಕ ವ್ಯಂಗ್ಯವಾಗಿ ನೋಡುತ್ತದೆ. ‘ಸುಬ್ಬಣ್ಣ’ ಇಬ್ಬರು ಮಾಲೀಕರ ನಡುವೆ ತೊಳಲಾಡುವ ಸಾಮಾನ್ಯನೋ ಅಸಾಮಾನ್ಯನೋ ಹೇಳಲಾಗದಂಥ ಪಾತ್ರವೇ ಈ ನಾಟಕ ಕೇಂದ್ರಬಿಂದು. ನಗಿಸುತ್ತಲೇ ‘ನಿಜ’ದ ಸೂಜಿಮೊನೆಯನ್ನೂ ಈ ನಾಟಕ ಅಲ್ಲಲ್ಲಿ ಚುಚ್ಚುತ್ತದೆ.

ಒಟ್ಟಾರೆ ಈ ಸಲದ ತಿರುಗಾಟ ರಂಗಪ್ರಿಯರಿಗೆ ‘ಶಾಸ್ತ್ರೀಯತೆ’ಯ ರಸಾಯನ ಮತ್ತು ‘ಮನರಂಜನೆ’ಯ ರಾಸಾಯನಿಕ ಎರಡನ್ನೂ ಇಟ್ಟುಕೊಂಡು ನಗರಕ್ಕೆ ಬರುತ್ತಿದೆ. ಎರಡೂ ನಾಟಕಗಳು ಬೇರೆ ಬೇರೆ ರೀತಿಗಳಲ್ಲಿ ನಮ್ಮ ಇಂದಿನ ಸ್ಥಿತಿಗತಿಗಳನ್ನು ಅದರ ಅಪಸವ್ಯಗಳನ್ನು ನಮ್ಮೆದುರು ಬಿಚ್ಚಿಡುತ್ತವೆ ಎನ್ನುವುದು ವಿಶೇಷ. ಎರಡು ವಿಭಿನ್ನ ರಂಗ ಮಾದರಿಗಳನ್ನು ನೋಡುವ ಅನುಭವ ನಿಮ್ಮದಾಗಬೇಕಾದರೆ ನಿಮ್ಮ ಈ ವಾರಾಂತ್ಯದ ಸಂಜೆಗಳನ್ನು ರಂಗಶಂಕರದ ಹೆಸರಿಗೆ ಬರೆದುಕೊಡಿ.

ಸಮಯ: ಮಧ್ಯಾಹ್ನ 3.30 ಮತ್ತು ಸಂಜೆ 7.30

ದಿನ: ಅಕ್ಟೋಬರ್‌ 14 ಮತ್ತು 15 (ಶನಿವಾರ ಮತ್ತು ಭಾನುವಾರ)

ವಿಳಾಸ: ರಂಗಶಂಕರ, 8ನೇ ಅಡ್ಡರಸ್ತೆ, ಜೆ.ಪಿ. ನಗರ ಎರಡನೇ ಹಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT