ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಯೂಕಿ–ದಿವಿಜ್‌ ‘ರನ್ನರ್ಸ್‌’ ಅಪ್‌

Published:
Updated:
ಯೂಕಿ–ದಿವಿಜ್‌ ‘ರನ್ನರ್ಸ್‌’ ಅಪ್‌

ತಾಷ್ಕೆಂಟ್‌: ಭಾರತದ ಯೂಕಿ ಭಾಂಬ್ರಿ ಮತ್ತು ದಿವಿಜ್‌ ಶರಣ್‌ ಅವರು ತಾಷ್ಕೆಂಟ್‌ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ‘ರನ್ನರ್ಸ್‌ ಅಪ್‌’ ಸಾಧನೆ ಮಾಡಿದ್ದಾರೆ.

ಶುಕ್ರವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಯೂಕಿ ಮತ್ತು ದಿವಿಜ್‌ 4–6, 2–6ರ ನೇರ ಸೆಟ್‌ಗಳಿಂದ ಎರಡನೇ ಶ್ರೇಯಾಂಕಿತ ಜೋಡಿ ಹಾನ್ಸ್‌ ‍ಪೊಡ್ಲಿಪ್‌ನಿಕ್‌ ಕ್ಯಾಸ್ಟಿಲೊ ಮತ್ತು ಆ್ಯಂಡ್ರೆ ವಸೆಲೆವ್‌ಸ್ಕಿ ವಿರುದ್ಧ ಸೋತರು.

ದಿವಿಜ್‌, ಈ ಋತುವಿನಲ್ಲಿ ಚಾಲೆಂಜರ್‌ ಟೂರ್‌ನಲ್ಲಿ ಎರಡನೇ ಬಾರಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ್ದರು. ಫ್ರಾನ್ಸ್‌ನಲ್ಲಿ ನಡೆದ  ಬೊರ್ಡಿಯುಕ್ಸ್‌ ಓಪನ್‌ನಲ್ಲಿ ಪುರವ ರಾಜಾ ಜೊತೆಗೂಡಿ ಆಡಿದ್ದ ಅವರು ಪ್ರಶಸ್ತಿ ಗೆದ್ದಿದ್ದರು.

ಯೂಕಿ ಈ ಋತುವಿನಲ್ಲಿ ಆಡಿದ ಏಳು ಟೂರ್ನಿಗಳ ಪೈಕಿ ಮೊದಲ ಬಾರಿಗೆ ಡಬಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದರು. ಹಿಂದಿನ ಪಂದ್ಯಗಳಲ್ಲಿ ಅಮೋಘ ಆಟ ಆಡಿ ಗಮನ ಸೆಳೆದಿದ್ದ ಭಾರತದ ಜೋಡಿ ಫೈನಲ್‌ನಲ್ಲಿ ಮೋಡಿ ಮಾಡಲು ವಿಫಲವಾಯಿತು.

ಮೊದಲ ಸೆಟ್‌ನಲ್ಲಿ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಿದ ಯೂಕಿ ಮತ್ತು ದಿವಿಜ್‌ 4–4ರಲ್ಲಿ ಸಮಬಲ ಮಾಡಿಕೊಂಡಿದ್ದರು. ಆದರೆ ನಂತರ ಹಾನ್ಸ್‌ ಮತ್ತು ವಸೆಲೆವ್‌ಸ್ಕಿ ದಿಟ್ಟ ಆಟ ಆಡಿ ಗೆದ್ದರು.

ಎರಡನೇ ಸೆಟ್‌ನಲ್ಲಿ ಭಾರತದ ಜೋಡಿ ತಿರುಗೇಟು ನೀಡಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು. ಆರಂಭದಿಂದಲೇ ಅಬ್ಬರಿಸಿದ ಹಾನ್ಸ್‌ ಮತ್ತು ವಸೆಲೆವ್‌ಸ್ಕಿ ತಮ್ಮ ಸರ್ವ್‌ ಉಳಿಸಿಕೊಳ್ಳುವ ಜೊತೆಗೆ ಭಾರತದ ಆಟಗಾರರ ಸರ್ವ್‌ಗಳನ್ನು ಮುರಿದು ಜಯದ ತೋರಣ ಕಟ್ಟಿದರು.

Post Comments (+)