ಸ್ವಾತಂತ್ರ್ಯದ ಹಂಬಲ ಈಡೇರುವುದೇ?

ಬುಧವಾರ, ಜೂನ್ 19, 2019
31 °C

ಸ್ವಾತಂತ್ರ್ಯದ ಹಂಬಲ ಈಡೇರುವುದೇ?

Published:
Updated:
ಸ್ವಾತಂತ್ರ್ಯದ ಹಂಬಲ ಈಡೇರುವುದೇ?

* ಕ್ಯಾಟಲೋನಿಯಾ ಎಲ್ಲಿದೆ?

ಸ್ಪೇನಿನ ಈಶಾನ್ಯ ದಿಕ್ಕಿನಲ್ಲಿರುವ ಅತ್ಯಂತ ಶ್ರೀಮಂತ ಪ್ರಾಂತ್ಯ ಕ್ಯಾಟಲೋನಿಯಾ. ಸ್ಪೇನಿನ ಒಳಗೆ ಪ್ರತ್ಯೇಕ ರಾಷ್ಟ್ರದ ರೀತಿಯಲ್ಲೇ ಅದು ಕಾರ್ಯನಿರ್ವಹಿಸುತ್ತದೆ. ಆ ಮಟ್ಟಿನ ಸ್ವಾಯತ್ತತೆ ಅದಕ್ಕೆ ಇದೆ. ಬಾರ್ಸಿಲೋನಾ ಅದರ ರಾಜಧಾನಿ. ಕ್ಯಾಟಲೋನಿಯಾ ತನ್ನದೇ ಆದ ಭಾಷೆ ಹೊಂದಿದೆ. ತನ್ನದೇ ಆದ ಸಂಸತ್ತು, ಧ್ವಜ, ರಾಷ್ಟ್ರಗೀತೆಯನ್ನೂ ಹೊಂದಿದೆ. ಪ್ರತ್ಯೇಕ ಪೊಲೀಸ್‌ ಪಡೆಯನ್ನೂ ಕ್ಯಾಟಲೋನಿಯಾ ಸರ್ಕಾರ ಹೊಂದಿದೆ. ಶಿಕ್ಷಣ, ಆರೋಗ್ಯದಂತಹ ಕೆಲವು ಸಾರ್ವಜನಿಕ ಸೇವೆಗಳನ್ನು ಸ್ಥಳೀಯ ಸರ್ಕಾರವೇ ನಿರ್ವಹಿಸುತ್ತದೆ.

1,000 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಕ್ಯಾಟಲೋನಿಯಾ, ಸ್ಪೇನಿನ ಅತ್ಯಂತ ಸಿರಿವಂತ ಮತ್ತು ಹೆಚ್ಚು ಉತ್ಪಾದಕ ಸಾಮರ್ಥ್ಯ ಹೊಂದಿರುವ ಪ್ರಾಂತ್ಯಗಳಲ್ಲಿ ಒಂದು. ಪ್ರವಾಸಿ ಕೇಂದ್ರವಾಗಿಯೂ ಜನಪ್ರಿಯ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ದೊಡ್ಡ ದೊಡ್ಡ ಕಂಪೆನಿಗಳು, ಸಂಶೋಧನಾ ಸಂಸ್ಥೆಗಳು ಇಲ್ಲಿವೆ.

* ಈಗಿನ ಬಿಕ್ಕಟ್ಟಿಗೆ ಕಾರಣ ಏನು?

‘ಕ್ಯಾಟಲೋನಿಯಾ ಸ್ಪೇನ್‌ನಿಂದ ಸ್ವತಂತ್ರಗೊಳ್ಳಬೇಕೇ’ ಎಂದು ಅಕ್ಟೋಬರ್‌ 1ರಂದು ನಡೆದಿದ್ದ ಜನಮತ ಸಂಗ್ರಹ ಈ ಬಿಕ್ಕಟ್ಟಿನ ಮೂಲ. ಒಟ್ಟು 23 ಲಕ್ಷ ಮಂದಿ ಈ ಜನಮತ ಸಂಗ್ರಹ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಶೇ 90ರಷ್ಟು ಜನರು ಕ್ಯಾಟಲೋನಿಯಾ ಸ್ವತಂತ್ರಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲಿನ ಸಂಸತ್ತು ಕೂಡ ಜನಾಭಿಪ್ರಾಯವನ್ನು ಅಂಗೀಕರಿಸಿದೆ.

ಆದರೆ, ಈ ಜನಮತ ಸಂಗ್ರಹಕ್ಕೆ ಸ್ಪೇನ್‌ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ‘ಜನಮತ ಸಂಗ್ರಹ ಸಂವಿಧಾನಬಾಹಿರ; ಇದಕ್ಕೆ ಮಾನ್ಯತೆ ಇಲ್ಲ’ ಎಂದು ಅದು ಆಕ್ರೋಶ ವ್ಯಕ್ತಪಡಿಸಿದೆ. ಸ್ಪೇನ್‌ನ ಉನ್ನತ ನ್ಯಾಯಾಲಯ ಕೂಡ ಜನಮತ ಸಂಗ್ರಹ ಪ್ರಕ್ರಿಯೆಯನ್ನು ಅಸಿಂಧು ಎಂದು ವ್ಯಾಖ್ಯಾನಿಸಿದೆ.

ಜನಾಭಿಪ್ರಾಯ ಸಂಗ್ರಹ ಪ್ರಕ್ರಿಯೆ ನಿಲ್ಲಿಸಲು ಸ್ಪೇನ್‌ ಸರ್ಕಾರ ಯತ್ನಿಸಿತ್ತು. ಮತದಾನ ಕೇಂದ್ರಗಳಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಸಂಘರ್ಷದಲ್ಲಿ ನೂರಾರು ಜನರು ಗಾಯಗೊಂಡಿದ್ದರು. ಈ ಹಿಂಸಾಚಾರ ಜಾಗತಿಕವಾಗಿ ಸುದ್ದಿಯಾಗಿತ್ತು.

ಸ್ಪೇನ್‌ ಮತ್ತು ಕ್ಯಾಟಲೋನಿಯಾ ಸರ್ಕಾರಗಳು ತಮ್ಮ ನಿಲುವಿಗೆ ಅಂಟಿಕೊಂಡಿರುವುದರಿಂದ, ಇದು ಸ್ಪೇನ್‌ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಂವಿಧಾನಿಕ ಬಿಕ್ಕಟ್ಟಾಗಿ ಬದಲಾಗಿದೆ.

* ಜನಮತ ಸಂಗ್ರಹದ ಬಗ್ಗೆ ತಕರಾರು ಏಕೆ?

ಅಕ್ಟೋಬರ್‌ 1ರಂದು ನಡೆದಿರುವ ಜನಮತ ಸಂಗ್ರಹದ ಬಗ್ಗೆಯೇ ಹಲವು ಗೊಂದಲಗಳಿವೆ. 75 ಲಕ್ಷ ಜನಸಂಖ್ಯೆ ಇರುವ ಕ್ಯಾಟಲೋನಿಯಾದಲ್ಲಿ 55 ಲಕ್ಷ ಜನರಿಗೆ ಮತದಾನದ ಹಕ್ಕಿದೆ. ಈ ಪೈಕಿ ಮೊನ್ನೆ ನಡೆದ ಜನಮತ ಸಂಗ್ರಹಣೆಯಲ್ಲಿ ಭಾಗವಹಿಸಿದ್ದು 23 ಲಕ್ಷ ಮಂದಿ ಮಾತ್ರ. ಕ್ಯಾಟಲೋನಿಯಾ ಸರ್ಕಾರ ನೀಡಿರುವ ಮಾಹಿತಿಯಂತೆ ಮತದಾನದ ಪ್ರಮಾಣ ಶೇ 43ರಷ್ಟು ಮಾತ್ರ.

ಜನಮತ ಸಂಗ್ರಹದಲ್ಲಿ ಅರ್ಧಕ್ಕೂ ಹೆಚ್ಚು ಕ್ಯಾಟಲೋನಿಯನ್ನರು ಮತದಾನ ಮಾಡಿಲ್ಲ. ಅಲ್ಲದೇ ಮತದಾನದ ಸಂದರ್ಭದಲ್ಲಿ ಅಕ್ರಮ ನಡೆದಿರುವ ಬಗ್ಗೆಯೂ ದೂರುಗಳು ಕೇಳಿ ಬಂದಿವೆ.

* ಮುಂದೇನು?

ಕ್ಯಾಟಲೋನಿಯಾ ಸ್ವತಂತ್ರ ರಾಷ್ಟ್ರವಾಗಬೇಕು ಎಂದು ಜನಮತ ಸಂಗ್ರಹದಲ್ಲಿ ಬಂದಿರುವ ಅಭಿಪ್ರಾಯಕ್ಕೆ ಅಲ್ಲಿನ ಅಧ್ಯಕ್ಷ ಕಾರ್ಲ್ಸ್‌ ಪ್ಯುಗ್ಡೆಮೊಂಟ್ ಅವರು ಅಕ್ಟೋಬರ್‌ 10ರಂದು ಸಹಿ ಹಾಕಿದ್ದಾರೆ. ‘ಕ್ಯಾಟಲೋನಿಯಾ ಸ್ವತಂತ್ರ ರಾಷ್ಟ್ರ’ ಎಂದು ಅವರು ಇನ್ನೇನು ಅಧಿಕೃತವಾಗಿ ಘೋಷಿಸುತ್ತಾರೆ ಎನ್ನುವಾಗಲೇ ಹಠಾತ್‌ ಆಗಿ ಆ ಘೋಷಣೆಯನ್ನು ಸ್ವಲ್ಪದಿನಗಳವರೆಗೆ ಅಮಾನತಿನಲ್ಲಿಟ್ಟಿದ್ದಾರೆ.

ಬಿಕ್ಕಟ್ಟು ಪರಿಹಾರಕ್ಕಾಗಿ ಸ್ಪೇನ್‌ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಅಂತರರಾಷ್ಟ್ರೀಯ ಸಮುದಾಯ ಅದರಲ್ಲೂ ವಿಶೇಷವಾಗಿ ಐರೋಪ್ಯ ಒಕ್ಕೂಟ ಮಧ್ಯಸ್ಥಿಕೆ ವಹಿಸಬೇಕು ಎಂದೂ ಅವರು ಹೇಳಿದ್ದಾರೆ.

ಇತ್ತ, ಸ್ಪೇನ್‌ ಪ್ರಧಾನಿ ಮಾರಿಯಾನೊ ರಜೊಯ್‌ ಅವರು ಕಾರ್ಲ್ಸ್‌ ಪ್ಯುಗ್ಡೆಮೊಂಟ್ ಮಾತಿಗೆ ಸೊಪ್ಪು ಹಾಕಿಲ್ಲ. ತೆಗೆದುಕೊಂಡಿರುವ ನಿರ್ಧಾರವನ್ನು ಕೈ ಬಿಡಲು ಕ್ಯಾಟಲೋನಿಯಾ ಸರ್ಕಾರಕ್ಕೆ ಅವರು ಅಕ್ಟೋಬರ್‌ 16ರ ಗಡುವು ವಿಧಿಸಿದ್ದಾರೆ.

ಇಲ್ಲದಿದ್ದರೆ ಸಂವಿಧಾನದ ಕಲಂ 155 ಅಡಿಯಲ್ಲಿ ಕ್ಯಾಟಲೋನಿಯಾಕ್ಕೆ ನೀಡಿರುವ ಸ್ವಾಯತ್ತತೆಯನ್ನು ವಾಪಸ್‌ ಪಡೆದು, ಸ್ಪೇನ್‌ ಸರ್ಕಾರದ ನೇರ ಆಡಳಿತ ಹೇರುವ ಬೆದರಿಕೆಯನ್ನು ಅವರು ಒಡ್ಡಿದ್ದಾರೆ (1978ರಲ್ಲಿ ಹೊಸ ಸಂವಿಧಾನವನ್ನು ಅಳವಡಿಸಿಕೊಂಡ ನಂತರ ಕಲಂ 155 ಅನ್ನು ಸ್ಪೇನ್‌ ಸರ್ಕಾರ ಇದುವರೆಗೆ ಬಳಸಿಲ್ಲ). ಒಂದು ವೇಳೆ ಕಲಂ 155 ಅನ್ನು ರಜೊಯ್‌ ಪ್ರಯೋಗಿಸಿದರೆ, ಕ್ಯಾಟಲೋನಿಯಾ, ಸ್ಪೇನ್‌ ಸರ್ಕಾರದ ನೇರ ನಿಯಂತ್ರಣಕ್ಕೆ ಒಳಪಡಲಿದೆ. ನಂತರ ಅಲ್ಲಿ ಸ್ಥಳೀಯವಾಗಿ ಚುನಾವಣೆ ನಡೆಯಲಿದೆ.

ಆದರೆ, ಮಾರಿಯಾನೊ ರಜೊಯ್‌ ಅವರ ಬೆದರಿಕೆಗೆ ಕ್ಯಾಟಲೋನಿಯಾ ಸರ್ಕಾರ ಮಣಿಯುವ ಸಾಧ್ಯತೆ ಇಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ, ಸದ್ಯಕ್ಕಂತೂ ಈ ಬಿಕ್ಕಟ್ಟು ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.

* ಕ್ಯಾಟಲೋನಿಯಾ ಸ್ವತಂತ್ರ ರಾಷ್ಟ್ರವಾದರೆ...?

ಒಂದು ವೇಳೆ, ಕ್ಯಾಟಲೋನಿಯಾವು ಸ್ಪೇನ್‌ ಸಂವಿಧಾನವನ್ನು ಧಿಕ್ಕರಿಸಿ ಅಧಿಕೃತವಾಗಿ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಂಡರೆ, ಅದರ ಭವಿಷ್ಯದ ಹಾದಿ ಅಂದುಕೊಂಡಷ್ಟು ಸರಳವಾಗಿಲ್ಲ.

ಅದು ಸ್ಪೇನ್‌ನಿಂದ ಪ್ರತ್ಯೇಕಗೊಂಡ ತಕ್ಷಣ ಐರೋಪ್ಯ ಒಕ್ಕೂಟದಿಂದ ಹೊರಬರಬೇಕಾಗುತ್ತದೆ. ಅದರ ಒಟ್ಟು ದೇಶಿ ಆಂತರಿಕ ಉತ್ಪನ್ನ (ಜಿಡಿಪಿ) ಏಕಾಏಕಿ ಕುಸಿಯಲಿದೆ. ಈಗಾಗಲೇ ಶೇ 13ರಷ್ಟು ಇರುವ ನಿರುದ್ಯೋಗದ ಸಮಸ್ಯೆ ದುಪ್ಪಟ್ಟಾಗಲಿದೆ. ಸಾಲದ ಹೊರೆ ಮತ್ತಷ್ಟು ಹೆಚ್ಚಲಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಜಾಗತಿಕ ವೇದಿಕೆಯಲ್ಲಿ ತಾನೊಂದು ಪ್ರತ್ಯೇಕ ರಾಷ್ಟ್ರ ಎಂದು ಗುರುತಿಸಿಕೊಳ್ಳಬೇಕಾದ ಸವಾಲು ಅದಕ್ಕೆ ಎದುರಾಗಲಿದೆ.

ಈಗ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ದೊಡ್ಡ ದೊಡ್ಡ ಕಂಪೆನಿಗಳು ತಮ್ಮ ಕಚೇರಿಗಳನ್ನು ಕ್ಯಾಟಲೋನಿಯಾದಿಂದ ಸ್ಥಳಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿವೆ. ಕೆಲವು ಬ್ಯಾಂಕುಗಳು ತಮ್ಮ ಪ್ರಧಾನ ಕಚೇರಿಯನ್ನು ಸ್ಪೇನ್‌ನ ಇತರ ಭಾಗಕ್ಕೆ ವರ್ಗಾಯಿಸಲು ನಿರ್ಧರಿಸಿವೆ. ಇದು ಕ್ಯಾಟಲೋನಿಯಾ ಸರ್ಕಾರಕ್ಕೆ ಆಗುತ್ತಿರುವ ಹಿನ್ನಡೆ ಎಂದೇ ಬಣ್ಣಿಸಲಾಗುತ್ತಿದೆ.

* ಕ್ಯಾಟಲೋನಿಯಾ ಪ್ರತ್ಯೇಕತೆಯ ಹಾದಿ...

ಸ್ವತಂತ್ರ ರಾಷ್ಟ್ರದ ಕನಸು ಕ್ಯಾಟಲೋನಿಯನ್ನರಲ್ಲಿ ಮೊಳಕೆಯೊಡೆದದ್ದು ಇತ್ತೀಚೆಗೆ ಏನಲ್ಲ. ಸ್ಪೇನ್‌ನಲ್ಲಿ ನಡೆದ ನಾಗರಿಕ ಯುದ್ಧದ ನಂತರ ಕ್ಯಾಟಲೋನಿಯಾಗೆ ಸಾಕಷ್ಟು ಸ್ವಾಯತ್ತತೆ ನೀಡಲಾಗಿತ್ತು. ಆದರೆ, ಸರ್ವಾಧಿಕಾರಿ ಜನರಲ್‌ ಫ್ರಾನ್ಸಿಸ್ಕೊ ಫ್ರಾಂಕೊ ಆಡಳಿತದಲ್ಲಿ (1939-75) ಕ್ಯಾಟಲೋನಿಯನ್ನರು ಬಹಳಷ್ಟು ಕಷ್ಟಕ್ಕೆ ಒಳಗಾದರು. ಆ ಪ್ರಾಂತ್ಯಕ್ಕೆ ಇದ್ದ ವಿಶೇಷಾಧಿಕಾರಗಳನ್ನು ಫ್ರಾಂಕೊ ಆಡಳಿತ ಕಿತ್ತುಕೊಂಡಿತ್ತು.

ಫ್ರಾಂಕೊ ನಿಧನದ ನಂತರ, 1978ರಲ್ಲಿ ಅಂಗೀಕರಿಸಲಾದ ಸಂವಿಧಾನದ ಅಡಿಯಲ್ಲಿ ಕ್ಯಾಟಲೋನಿಯಾಕ್ಕೆ ಹೆಚ್ಚು ಸ್ವಾಯತ್ತತೆ ನೀಡಲಾಯಿತು. 2006ರಲ್ಲಿ ಸ್ಥಳೀಯ ಸರ್ಕಾರಕ್ಕೆ ಇನ್ನಷ್ಟು ವಿಶೇಷ ಅಧಿಕಾರಗಳು ದೊರೆತವು. ಸ್ಪೇನ್‌ನ ಒಳಗಡೆ ಕ್ಯಾಟಲೋನಿಯಾ ಪ್ರತ್ಯೇಕ ರಾಷ್ಟ್ರ ಎಂದು ಪರಿಗಣಿಸಲಾಯಿತು.

ಆದರೆ, ಸ್ಥಳೀಯ ಸರ್ಕಾರಕ್ಕೆ ನೀಡಲಾಗಿದ್ದ ಕೆಲವು ವಿಶೇಷ ಅಧಿಕಾರಗಳನ್ನು ಸ್ಪೇನ್‌ನ ಉನ್ನತ ನ್ಯಾಯಾಲಯವು 2010ರಲ್ಲಿ ವಾಪಸ್‌ ಪಡೆದಿದ್ದು ಜನರಲ್ಲಿ ಅಸಮಾಧಾನ ಉಂಟು ಮಾಡಿತ್ತು. ನಂತರದ ವರ್ಷಗಳಲ್ಲಿ ಕಂಡು ಬಂದ ಆರ್ಥಿಕ ಹಿಂಜರಿತ ಮತ್ತು ಸಾರ್ವಜನಿಕ ವೆಚ್ಚದಲ್ಲಿ ಮಾಡಲಾದ ಕಡಿತ ಜನರ ಅತೃಪ್ತಿಯನ್ನು ಇನ್ನಷ್ಟು ಹೆಚ್ಚಿಸಿತು. 2014ರಲ್ಲಿ ಮೊದಲ ಬಾರಿಗೆ ಅನಧಿಕೃತವಾಗಿ ಸ್ವಾತಂತ್ರ್ಯಕ್ಕಾಗಿ ಮತದಾನ ಮಾಡಲಾಗಿತ್ತು. ಆಗ ಶೇ 80ರಷ್ಟು ಮಂದಿ ಸ್ವತಂತ್ರ ರಾಷ್ಟ್ರದ ಪರವಾಗಿ ಮತ ಹಾಕಿದ್ದರು.

2015ರ ಚುನಾವಣೆಯಲ್ಲಿ ಪ್ರತ್ಯೇಕತಾವಾದಿಗಳಿಗೆ ಜಯ ದೊರಕಿದ್ದು, ಪ್ರತ್ಯೇಕ ರಾಷ್ಟ್ರದ ಕನಸಿಗೆ ಮತ್ತಷ್ಟು ಬಲ ಸಿಕ್ಕಿತ್ತು. ಕಳೆದ ತಿಂಗಳ 6ರಂದು ಕ್ಯಾಟಲೋನಿಯಾ ಸಂಸತ್ತು, ಸ್ಪೇನ್‌ ಸಂವಿಧಾನವನ್ನು ಲೆಕ್ಕಿಸದೆ ಜನಮತ ಸಂಗ್ರಹಕ್ಕೆ ಅವಕಾಶ ನೀಡುವ ವಿವಾದಾತ್ಮಕ ಕಾನೂನನ್ನು ಅಂಗೀಕರಿಸಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry