ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಸರ್ಕಾರಕ್ಕೇ ಸರ್ಕಾರಿ ಜಮೀನು ಮಾರಾಟ’

Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯಕ್ಕಾಗಿ ಗದಗ ತಾಲ್ಲೂಕಿನಲ್ಲಿ ಭೂಸ್ವಾಧೀನ ಮಾಡಿಕೊಂಡಿದ್ದು, ಅದರಲ್ಲಿ ಭಾರಿ ಅಕ್ರಮ ನಡೆದಿದೆ. ಸರ್ಕಾರದ ಜಮೀನನ್ನು ಸರ್ಕಾರಕ್ಕೇ ಮಾರಾಟ ಮಾಡಿ ₹11 ಕೋಟಿ ವಂಚಿಸಲಾಗಿದೆ’ ಎಂದು ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ಅಧ್ಯಕ್ಷ ಸಯ್ಯದ್‌ ಖಾಲಿದ್‌ ಕೊಪ್ಪಳ ಶನಿವಾರ ಇಲ್ಲಿ ಆರೋಪಿಸಿದರು.

‘ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಕಳಸಾಪುರ ಮತ್ತು ನಾಗಾವಿ ಗ್ರಾಮಗಳಲ್ಲಿ ಒಟ್ಟು 353 ಎಕರೆ ಸ್ವಾಧೀನಪಡಿಸಿಕೊಂಡಿದ್ದು, ಇದರಲ್ಲಿ ಕಂದಾಯ ಇಲಾಖೆಗೆ ಸೇರಿದ 249 ಎಕರೆ ಇದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಂದಾಯ ಇಲಾಖೆಗೆ ಸೇರಿದ ಎರಡು ಸರ್ವೇ ನಂಬರ್‌ಗಳಲ್ಲಿ (179/ಬಿ/1ರಲ್ಲಿನ 125 ಎಕರೆ; 143/2ಬಿ/ಬಿ/1ಬಿ/2ರಲ್ಲಿ 124 ಎಕರೆ) ಇರುವ ಒಟ್ಟು 249 ಎಕರೆ ಜಮೀನನ್ನು 2002ರಲ್ಲಿ ಕೃಷ್ಣರಾವ್‌ ರಾಮರಾವ್‌ ಹುಯಿಲಗೋಳ ಮತ್ತು ಅವರ ಸಂಬಂಧಿಕರು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಅದನ್ನು ಪರಿಶೀಲಿಸದೆ ಸ್ವಾಧೀನ ಪ್ರಕ್ರಿಯೆ ನಡೆಸಿ, ಅವರಿಗೇ ಹಣ ನೀಡಲಾಗಿದೆ’ ಎಂದು ಅವರು ದೂರಿದರು.

‘ಒಟ್ಟು ಜಮೀನಿನಲ್ಲಿ 124 ಎಕರೆ ಜಮೀನು ಗುಡ್ಡಗಾಡು ರೀತಿ ಇದೆ ಎಂದು ಹೇಳಿ ಅದಕ್ಕೆ ಶೂನ್ಯ ಬೆಲೆ ನಿಗದಿಪಡಿಸಲಾಗಿದೆ. ಉಳಿದ 125 ಎಕರೆ ಸ್ವಾಧೀನಕ್ಕೆ ₹ 11 ಕೋಟಿ ನೀಡಲಾಗಿದೆ’ ಎಂದು ಅವರು ದೂರಿದರು.

‘ಸ್ವಾತಂತ್ರ ಹೋರಾಟಗಾರರ (ರಾಜಕೀಯ ಸಂತ್ರಸ್ತರು) ಸಲುವಾಗಿ ಸರ್ಕಾರ ಮೀಸಲಿಟ್ಟಿದ್ದ ಈ ಜಮೀನನ್ನು ಕೆಲವರು ರಾಜಕೀಯ ಪ್ರಭಾವ ಬಳಸಿ ಹುಯಿಲಗೋಳ ಅವರ ಹೆಸರಿಗೆ ಅಕ್ರಮವಾಗಿ ಮಾಡಿಸಿದ್ದಾರೆ’ ಎಂದು ಅವರು ಆರೋಪಿಸಿದರು.

‘ವಿವಾದಕ್ಕೆ ಒಳಗಾಗಿರುವ ಈ ಭೂಮಿಯ ಮೂಲ ಹಕ್ಕು ಪತ್ರಗಳೇ ಗದಗ ಜಿಲ್ಲಾಡಳಿತದಲ್ಲಿ ಇಲ್ಲ. ಈ ಬಗ್ಗೆ ಎಸಿಬಿಗೆ ದೂರು ನೀಡಲಾ
ಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT