ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಂಧ ಉಳಿಸಲು ದೂರ ಪಯಣ!

Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕಡಿಮೆ ಸಮಯ, ಪದ, ದೃಶ್ಯಗಳಲ್ಲಿ ವಿಷಯವನ್ನು ಸ್ಪಷ್ಟವಾಗಿ ನೋಡುಗರಿಗೆ ತಲುಪಿಸುವುದು ಜಾಹೀರಾತಿನ ಉದ್ದೇಶ. ಈ ಎಲ್ಲಾ ಮಿತಿಗಳ ನಡುವೆಯೂ ಕೆಲ ಸೃಜನಾತ್ಮಕ ಜಾಹೀರಾತುಗಳು ಮನಸ್ಸಿಗೆ ಹತ್ತಿರವಾಗಿಬಿಡುತ್ತವೆ. ಸ್ಯಾಮ್‌ಸಂಗ್ ಕಂಪೆನಿಯು ತನ್ನ ಗ್ರಾಹಕ ಸೇವೆಯ ಗುಣಮಟ್ಟದ ಬಗ್ಗೆ ಸಿದ್ಧಪಡಿಸಿರುವ ಜಾಹೀರಾತು ಈ ಸಾಲಿಗೆ ಸೇರುತ್ತದೆ.

ಆನ್‌ಲೈನ್‌ನಲ್ಲಿ ದೂರು ನೀಡಿದ ಗ್ರಾಹಕರೊಬ್ಬರಿಗೆ ಗ್ರಾಹಕ ಸೇವಾ ನೌಕರ ಅಮಿತ್ ಕರೆ ಮಾಡುತ್ತಾನೆ.

'ಟಿ.ವಿ ಕೆಟ್ಟಿದೆ ಸಂಜೆ 7 ರೊಳಗೆ ಬಂದು ರಿಪೇರಿ ಮಾಡಿಕೊಡಲು ಸಾಧ್ಯವೇ?’ ಎನ್ನುತ್ತದೆ ಅತ್ತಲಿನ ಧ್ವನಿ. ಸರಿ ಎಂದು ಕಂಪೆನಿಯ ಕಾರು ಹತ್ತುವ ಅಮಿತ್ ಗುಡ್ಡಬೆಟ್ಟ, ಕಾಡು, ಝರಿಗಳನ್ನು ದಾಟಿ ಗ್ರಾಹಕ ಹೇಳಿದ ಗಮ್ಯದ ಕಡೆಗೆ ಸಾಗುತ್ತಾನೆ. ಕಾರು ಸವೆಸುವ ದುರ್ಗಮ ಹಾದಿಯ ದೃಶ್ಯಗಳು ಮೋಹಕ.

ಕಷ್ಟಗಳನ್ನು ಮೀರಿ ಗಮ್ಯ ತಲುಪುವ ಗ್ರಾಹಕ ಸೇವಾ ಪ್ರತಿನಿಧಿ ಕರೆ ಮಾಡಿದ್ದ ಗ್ರಾಹಕನ ಮನೆಯ ಕರೆಗಂಟೆ ಬಾರಿಸಿದಾಗ ಬಾಗಿಲು ತೆಗೆಯುವುದು ಅಂಧ ಯುವತಿ! ಅಮಿತ್ ಏನೂ ಕೇಳದೆ ಒಳಗೆ ಹೋಗಿ ಟಿವಿ ರಿಪೇರಿ ಮಾಡುತ್ತಾನೆ. ರಿಪೇರಿ ಮುಗಿಯುತ್ತಲೇ ಯುವತಿ, ಮನೆಯಲ್ಲಿ ತೂಗಿಹಾಕಿದ್ದ ಗಂಟೆ ಬಾರಿಸಿ 'ರಿಪೇರಿ ಮುಗಿದಿದೆ ಎಲ್ಲರೂ ಬೇಗ ಬನ್ನಿ’ ಎನ್ನುತ್ತಾಳೆ. ಅಂಧ ಮಕ್ಕಳು ಸರ-ಸರನೆ ಬಂದು ಟಿವಿ ಮುಂದೆ ಜಮಾಯಿಸುತ್ತಾರೆ.

ಅಮಿತ್‍ನಿಂದ ರಿಮೋಟ್ ಪಡೆಯುವ ಆ ಯುವತಿ ಚಾನೆಲ್ ಬದಲಾಯಿಸಿದರೆ ಅಂದ ಬಾಲಕಿಯೊಬ್ಬಳು ರಿಯಾಲಿಟಿ ಷೋನಲ್ಲಿ ಹಾಡುತ್ತಿರುವ ದೃಶ್ಯ ಪ್ರಸಾರವಾಗುತ್ತದೆ.

‘ಆಕೆ ಈ ಹಾಸ್ಟೆಲಿನ ಹುಡುಗಿ, ನನ್ನ ಗೆಳತಿ ಕೂಡ’ ಎಂದು ಟೀವಿ ರಿಪೇರಿ ಮಾಡಿಕೊಟ್ಟಾತನಿಗೆ ಅಂಧ ಯುವತಿ ತಿಳಿಸುತ್ತಾಳೆ. ಅವನ ಕಣ್ಣು ಒದ್ದೆಯಾಗುತ್ತದೆ. ನೋಡುಗನ ಕಣ್ಣಲ್ಲೂ ಹನಿ ಜಿನುಗುತ್ತದೆ. ಉತ್ತಮ ಕಾರ್ಯ ಮಾಡಿದ ತೃಪ್ತಿಯನ್ನು ಮುಖದಲ್ಲಿ ಹೊತ್ತು ಅಮಿತ್ ಹೊರ ನಡೆಯುತ್ತಾನೆ. ಹಿನ್ನೆಲೆಯಲ್ಲಿ ‘ಸಂಬಂಧಗಳನ್ನು ಉಳಿಸಿಕೊಳ್ಳಲು ಕೆಲವು ಬಾರಿ ದೂರ ಹೋಗಬೇಕಾಗುತ್ತದೆ’ ಸಂದೇಶ ತೇಲಿ ಬರುತ್ತದೆ.

ಸ್ಯಾಮ್ ಸಂಗ್ ಇಂಡಿಯಾ ಸರ್ವೀಸ್ (ಎಸ್.ವಿ.ಸಿ) ಹೆಸರಿನಲ್ಲಿ ಈ ವಿಡಿಯೊ ಯೂಟ್ಯೂಬ್‌ಗೆ ಅಪ್‌ಲೋಡ್ ಆಗಿದೆ.

ಈವರೆಗೆ ಸುಮಾರು 13 ಕೋಟಿ ಮಂದಿ ವಿಡಿಯೊ ನೋಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT