ಇಂದು ಮಂಡಳಿ ಅಧ್ಯಕ್ಷರ ಇಲೆವನ್‌ ವಿರುದ್ಧ ಅಭ್ಯಾಸ ಪಂದ್ಯ: ಕಿವೀಸ್‌ಗೆ ಜಯದ ಕನಸು

ಗುರುವಾರ , ಜೂನ್ 27, 2019
23 °C

ಇಂದು ಮಂಡಳಿ ಅಧ್ಯಕ್ಷರ ಇಲೆವನ್‌ ವಿರುದ್ಧ ಅಭ್ಯಾಸ ಪಂದ್ಯ: ಕಿವೀಸ್‌ಗೆ ಜಯದ ಕನಸು

Published:
Updated:
ಇಂದು ಮಂಡಳಿ ಅಧ್ಯಕ್ಷರ ಇಲೆವನ್‌ ವಿರುದ್ಧ ಅಭ್ಯಾಸ ಪಂದ್ಯ: ಕಿವೀಸ್‌ಗೆ ಜಯದ ಕನಸು

ಮುಂಬೈ (ಪಿಟಿಐ): ಮೂರು ಪಂದ್ಯಗಳ ಏಕದಿನ ಸರಣಿ ಆಡಲು ಭಾರತಕ್ಕೆ ಬಂದಿರುವ ನ್ಯೂಜಿಲೆಂಡ್‌ ತಂಡದವರು ಈ ಹಾದಿಯಲ್ಲಿ ಮೊದಲ ಸವಾಲಿಗೆ ಎದೆಯೊಡ್ಡಲು ಸಜ್ಜಾಗಿದ್ದಾರೆ.

ಮಂಗಳವಾರ ನಡೆಯುವ ಮೊದಲ ಅಭ್ಯಾಸ ಪಂದ್ಯದಲ್ಲಿ ಕಿವೀಸ್‌ ನಾಡಿನ ತಂಡ ಬಿಸಿಸಿಐ ಮಂಡಳಿ ಅಧ್ಯಕ್ಷರ ಇಲೆವೆನ್‌ ವಿರುದ್ಧ ಸೆಣಸಲಿದ್ದು ಜಯದ ಮಂತ್ರ ಜಪಿಸುತ್ತಿದೆ.

ಕೇನ್‌ ವಿಲಿಯಮ್ಸನ್‌ ಸಾರಥ್ಯದ ನ್ಯೂಜಿಲೆಂಡ್‌ ತಂಡ ಕೆಲ ದಿನಗಳ ಹಿಂದೆಯೇ ಮುಂಬೈಗೆ ಬಂದಿದ್ದು ಬ್ರೆಬೊರ್ನ್‌ ಕ್ರೀಡಾಂಗಣದಲ್ಲಿ ಕಠಿಣ ತಾಲೀಮು ನಡೆಸಿದೆ. ಇದೇ ಅಂಗಣದಲ್ಲಿ ಅಭ್ಯಾಸ ಪಂದ್ಯ ನಡೆಯಲಿದೆ. ಇಲ್ಲಿನ ವಾತಾರಣಕ್ಕೆ ಹೊಂದಿಕೊಂಡಿರುವ ಪ್ರವಾಸಿ ಪಡೆ ಈ ಪಂದ್ಯದಲ್ಲಿ ಗೆದ್ದು ಏಕದಿನ ಸರಣಿಗೂ ಮುನ್ನ ಮನೋಬಲ ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ.

ತಂಡದ ಹಿರಿಯ ಆಟಗಾರರಾದ ವಿಲಿಯಮ್ಸನ್‌, ರಾಸ್ ಟೇಲರ್, ಮಾರ್ಟಿನ್ ಗಪ್ಟಿಲ್‌ ಮುಂತಾದವರು ಅಭ್ಯಾಸ ಪಂದ್ಯದಲ್ಲಿ ರನ್‌ ಕಲೆ ಹಾಕಿ ಭಾರತ ವಿರುದ್ಧದ ಸರಣಿಗೆ ಸಜ್ಜಾಗಲು ಶ್ರಮಿಸಲಿದ್ದಾರೆ. ಶ್ರೇಯಸ್ ಅಯ್ಯರ್ ನೇತೃತ್ವದ ಮಂಡಳಿ ಅಧ್ಯಕ್ಷರ ಇಲೆವನ್ ತಂಡದಲ್ಲಿ ಯುವ ಆಟಗಾರರು ಇದ್ದು ಬಲಿಷ್ಠ ನ್ಯೂಜಿಲೆಂಡ್‌ಗೆ ಸವಾಲೊಡ್ಡುವ ಭರವಸೆಯಲ್ಲಿದ್ದಾರೆ. ಕರುಣ್ ನಾಯರ್‌, ಪೃಥ್ವಿ ಶಾ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಮುಂತಾದವರು ಭಾರತ ತಂಡದ ಆಯ್ಕೆ ಸಮಿತಿಯ ಗಮನ ಸೆಳೆಯಬೇಕಾದರೆ ಇಲ್ಲಿ ಉತ್ತಮ ಆಟ ಆಡಬೇಕಾಗಿದೆ.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಟಾಮ್ ಲಥಾಮ್‌ ಮತ್ತು ಮಾರ್ಟಿನ್ ‌ಗಪ್ಟಿಲ್‌ ಅವರು ತಂಡಕ್ಕೆ ಉತ್ತಮ ಆರಂಭ ಒದಗಿಸಿದರೆ ಮುಂದಿನ ಹಾದಿ ಸುಗಮವಾಗಲಿದೆ. ಆದ್ದರಿಂದ ಮೊದಲ ವಿಕೆಟ್ ಜೊತೆಯಾಟದ ಕಡೆಗೆ ನ್ಯೂಜಿಲೆಂಡ್ ಕೋಚ್‌ ಮೈಕ್‌ ಹೇಸನ್‌ ಹೆಚ್ಚು ಗಮನಹರಿಸುವ ಸಾಧ್ಯತೆ ಇದೆ. ವೇಗಿಗಳಾದ ಧವಲ್ ಕುಲಕರ್ಣಿ ಮತ್ತು ಜಯದೇವ ಉನದ್ಕತ್ ಅವರ ದಾಳಿಯನ್ನು ಎದುರಿಸಿ ನಿಲ್ಲಲು ಸಾಧ್ಯವಾದರೆ ಕೋಚ್‌ ಆಸೆ ಈಡೇರಿಸುವಲ್ಲಿ ಲಥಾಮ್‌ ಮತ್ತು ಗಪ್ಟಿಲ್‌ ಯಶಸ್ವಿಯಾಗಲಿದ್ದಾರೆ. ಶಹಬಾಜ್ ನದೀಮ್ ಮತ್ತು ಕರಣ್ ಶರ್ಮಾ ಅವರ ಸ್ಪಿನ್‌ ದಾಳಿಗೂ ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳು ಎದೆಯೊಡ್ಡಿ ನಿಲ್ಲಬೇಕಾಗಿದೆ.

‘ಎರಡು ಅಭ್ಯಾಸ ಪಂದ್ಯಗಳನ್ನು ತಂಡ ಗಂಭೀರವಾಗಿ ಕಂಡಿದೆ. ಇಲ್ಲಿ ಸಿಗುವ ಫಲಿತಾಂಶ ತಂಡದ ಮುಂದಿನ ಹಾದಿಯಲ್ಲಿ ಪರಿಣಾಮ ಬೀರಲಿದೆ. ಆದ್ದರಿಂದ ಜಯವೊಂದೇ ನಮ್ಮ ಗುರಿ’ ಎಂದು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌ ಹೇಳಿದ್ದಾರೆ.

ರಾಹುಲ್‌, ಕರಣ್ ಶರ್ಮಾಗೆ ಸ್ಥಾನ:  ನ್ಜೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಪ್ರಕಟಿಸಿರುವ ಭಾರತ ತಂಡದಿಂದ ಕೈಬಿಟ್ಟಿರುವ ಕರ್ನಾಟಕದ ಕೆ.ಎಲ್.ರಾಹುಲ್ ಅವರನ್ನು ಅಭ್ಯಾಸ ಪಂದ್ಯದ ತಂಡದಲ್ಲಿ ಹೆಚ್ಚುವರಿ ಆಟಗಾರನಾಗಿ ಸೇರಿಸಲಾಗಿದೆ. ಲೆಗ್ ಸ್ಪಿನ್ನರ್‌ ಕರಣ್ ಶರ್ಮಾ ಅವರನ್ನು ಕೂಡ ಮಂಗಳವಾರ ತಂಡಕ್ಕೆ ಕರೆಸಿಕೊಳ್ಳಲಾಗಿದೆ. ರಾಜಸ್ತಾನದ ಯುವ ಆಟಗಾರ ರಾಹುಲ್ ಚಾಹರ್ ಅವರ ಬದಲಿಗೆ ಕರಣ್ ಅವರನ್ನು ಕರೆಸಿಕೊಳ್ಳಲಾಗಿದೆ.

ತಂಡ ಇಂತಿದೆ: ನ್ಯೂಜಿಲೆಂಡ್‌: ಕೇನ್‌ ವಿಲಿಯಮ್ಸನ್‌ (ನಾಯಕ), ಟಾಡ್‌ ಆ್ಯಷ್ಲೆ, ಟ್ರೆಂಟ್‌ ಬೌಲ್ಟ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಮಾರ್ಟಿನ್‌ ಗುಪ್ಟಿಲ್‌, ಮ್ಯಾಟ್‌ ಹೆನ್ರಿ, ಟಾಮ್‌ ಲಾಥಮ್‌, ಹೆನ್ರಿ ನಿಕೊಲಸ್‌, ಆ್ಯಡಮ್‌ ಮಿಲ್ನೆ, ಕಾಲಿನ್‌ ಮುನ್ರೊ, ಗ್ಲೆನ್‌ ಫಿಲಿಪ್ಸ್‌, ಮಿಷೆಲ್‌ ಸ್ಯಾಂಟನರ್‌, ಟಿಮ್‌ ಸೌಥಿ, ರಾಸ್‌ ಟೇಲರ್‌, ಜಾರ್ಜ್‌ ವರ್ಕರ್‌.

ಬಿಸಿಸಿಐ ಮಂಡಳಿ ಅಧ್ಯಕ್ಷರ ಇಲೆವನ್‌: ಶ್ರೇಯಸ್‌ ಅಯ್ಯರ್‌ (ನಾಯಕ), ಕೆ.ಎಲ್‌.ರಾಹುಲ್‌, ಪೃಥ್ವಿ ಶಾ, ಶಿವಂ ಚೌಧರಿ, ಕರುಣ್‌ ನಾಯರ್‌, ಗುರುಕೀರತ್‌ ಸಿಂಗ್ ಮಾನ್‌, ಮಿಲಿಂದ್‌ ಕುಮಾರ್‌, ರಿಷಭ್‌ ಪಂತ್‌ (ವಿಕೆಟ್ ಕೀಪರ್‌), ಶಹಬಾಜ್‌ ನದೀಮ್‌, ಕರಣ್ ಶರ್ಮಾ, ದೀಪಕ್‌ ಚಾಹರ್‌, ಧವಳ್‌ ಕುಲಕರ್ಣಿ, ಜಯದೇವ್‌ ಉನದ್ಕತ್‌, ಅವೇಶ್‌ ಖಾನ್‌.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry