ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಕರ್ಯಕ್ಕೆ ಕಾದಿರುವ ಟೊಣ್ಣೂರ

Last Updated 17 ಅಕ್ಟೋಬರ್ 2017, 9:35 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನ ಟೊಣ್ಣೂರ ಗ್ರಾಮದ ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರಹವಾಗಿ ಗ್ರಾಮಸ್ಥರು ಸಾಂಕ್ರಾಮಿಕ ರೋಗ ಭೀತಿಯನ್ನು ಎದುರಿಸುತ್ತಿದ್ದಾರೆ. ಕೊಳ್ಳೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮಕ್ಕೆ ಇಬ್ಬರು ಪಂಚಾಯಿತಿ ಚುನಾಯಿತ ಸದಸ್ಯರು ಇದ್ದಾರೆ. ತಾಲ್ಲೂಕಿನಿಂದ 27 ಕಿಲೊ ಮೀಟರ್‌ ದೂರವಿದೆ. ಸುಮಾರು ಒಂದು ಸಾವಿರ ಜನಸಂಖ್ಯೆಯನ್ನು ಹೊಂದಿದೆ.

‘ಗ್ರಾಮದಲ್ಲಿ ಚರಂಡಿ ವ್ಯವಸ್ಥೆ, ಸಿ.ಸಿ. ರಸ್ತೆ ನಿರ್ಮಾಣ ಇಲ್ಲ. ಚರಂಡಿ ನೀರು ರಸ್ತೆಯನ್ನು ಆಕ್ರಮಿಸಿಕೊಂಡರೆ, ತುಸು ಮಳೆಯಾದರೆ ಆ ನೀರೂ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತದೆ. ಸದಾ ನೀರು ಸಂಗ್ರಹದಿಂದ ಸೊಳ್ಳೆ ಉತ್ಪತ್ತಿಯಾಗಿ ಅಲ್ಲಿನ ನಿವಾಸಿಗರಿಗೆ ಡೆಂಗಿ, ಮಲೇರಿಯಾ ರೋಗದ ಭೀತಿ ಆವರಿಸಿದೆ. ರಾತ್ರಿ ಹೊತ್ತು ವಿದ್ಯುತ್ ಇಲ್ಲವಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕು. ವಿಷ ಜಂತುಗಳ ಹಾವಳಿಯಿಂದ ಪಾರಾಗಲು ಮಕ್ಕಳನ್ನು ಎದೆಯಲ್ಲಿ ಅವುಚಿಕೊಂಡು ಕಾಲ ಕಳೆಯುವ ದುಃಸ್ಥಿತಿ ಇದೆ’ ಎಂದು ಸಾಮಾಜಿಕ ಕಾರ್ಯಕರ್ತ ಹಣಮಂತ ಭಂಗಿ ತಿಳಿಸಿದರು.

‘ಇನ್ನೊಂದಡೆ ಕೃಷ್ಣಾ ನದಿ ತಟದಲ್ಲಿದೆ. ಆಂಧ್ರ ವಲಸಿಗರು ಇಲ್ಲಿನ ಜಮೀನುಗಳನ್ನು ಲೀಜ್ ಪಡೆದು ಭತ್ತ ನಾಟಿ ಮಾಡಿದ್ದಾರೆ. ಸದಾ ನೀರು ಸಂಗ್ರಹದಿಂದ ಸೊಳ್ಳೆಗಳ ಕಾಟ ಗ್ರಾಮಸ್ಥರು ಅನುಭವಿಸುವಂತಾಗಿದೆ. ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅರಿವಿನ ಕೊರತೆ ಇದೆ.

ಮಹಿಳೆಯರು ರಸ್ತೆ ಬದಿಯಲ್ಲಿಯೇ ತುರ್ತುಕ್ರಿಯೆಗಳನ್ನು ಪೂರೈಸಿಕೊಳ್ಳಬೇಕು. ಆಶ್ರಯ ಯೋಜನೆ ಅಡಿಯಲ್ಲಿ ಮಂಜೂರಾಗುವ ಮನೆಗಳು ಉಳ್ಳವರ ಪಾಲು ಆಗುತ್ತಿವೆ’ ಎಂಬುದು ಸೂರು ವಂಚಿತರ ಆರೋಪ.

‘1ರಿಂದ 7ನೇ ತರಗತಿ ಶಾಲೆ ಇದೆ. 200ಕ್ಕೂ ಹೆಚ್ಚು ಮಕ್ಕಳು ಶಾಲೆ ಕಲಿಯುತ್ತಿದ್ದಾರೆ. ಮೂವರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಶಾಲೆಯಲ್ಲಿ ಶೌಚಾಲಯವಿಲ್ಲ. ಆಟದ ಮೈದಾನ ಮತ್ತು ಹೆಚ್ಚಿನ ಶಾಲಾ ಕೋಣೆಗಳ ಅಗತ್ಯವಿದೆ’ ಎನ್ನುತ್ತಾರೆ ಮಕ್ಕಳ ಪಾಲಕರು.

‘ಗ್ರಾಮಕ್ಕೆ ಇಂದಿಗೂ ಬಸ್ಸಿನ ಸಂಚಾರದ ವ್ಯವಸ್ಥೆ ಇಲ್ಲ. ಪ್ರೌಢಶಾಲೆಗೆ ಹೋಗಲು 3 ಕಿಲೊ ಮೀಟರ್‌ ದೂರದ ಕೊಳ್ಳೂರ ಗ್ರಾಮಕ್ಕೆ ಹೋಗಬೇಕು. ಸಾಕಷ್ಟು ಬಾರಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ರಸ್ತೆ ಸರಿ ಇಲ್ಲ.

ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ ಎಂಬ ಸಬೂಬು ಹೇಳಿ ಸಾರಿಗೆ ವ್ಯವಸ್ಥೆಯಿಂದ ನಮ್ಮನ್ನು ವಂಚಿತರನ್ನಾಗಿ ಮಾಡಲಾಗಿದೆ. ಅಲ್ಲದೆ, ಹೆಣ್ಣುಮಕ್ಕಳು ಪ್ರಾಥಮಿಕ ಶಿಕ್ಷಣ ಮುಗಿಸಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ’ ಎನ್ನುತ್ತಾರೆ ಗ್ರಾಮದ ನಿವಾಸಿ ಮಲ್ಲಪ್ಪ ಬೋವಿ.

‘ಎಲ್ಲಿಗೆ ಹೋಗಬೇಕಾದರೂ ಖಾಸಗಿ ವಾಹನಗಳಲ್ಲೇ ಸಂಚರಿಸಬೇಕು. ದುಬಾರಿಯಾದರೂ ಅನಿವಾರ್ಯವಾಗಿದೆ. ಕೊಳ್ಳೂರ ಗ್ರಾಮಕ್ಕೆ ಬಂದು ಮೂರು ಕಿ.ಮೀ ದೂರ ನಡೆದು ಊರು ಸೇರಿಕೊಳ್ಳಬೇಕು. ಗ್ರಾಮಕ್ಕೆ ಕನಿಷ್ಠ ಸೌಲಭ್ಯಗಳಾದರೂ ಕಲ್ಲಿಸಿ’ ಎಂಬುದು ಗ್ರಾಮಸ್ಥರು ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT