ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಟೆಕ್‌ ನಕಲು: ಆರೋಪಿಗಳ ಪತ್ತೆಗೆ 2 ತಂಡ ರಚನೆ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಎಸ್‌.ಗುಳೇದ ಮಾಹಿತಿ
Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದಾವಣಗೆರೆ: ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿಗಳ ಪತ್ತೆಗೆ 2 ತಂಡಗಳನ್ನು ರಚಿಸಲಾಗಿದೆ. ಪರೀಕ್ಷಾ ಅಕ್ರಮ ಹಲವು ಜಿಲ್ಲೆಗಳಿಗೂ ವ್ಯಾಪಿಸಿರುವ ಸಂಶಯ ವ್ಯಕ್ತವಾಗಿವೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಎಸ್‌.ಗುಳೇದ, ಆರೋಪಿಗಳ ಪತ್ತೆಗೆ ನಗರ ಡಿವೈಎಸ್‌ಪಿ ಎಂ.ಬಾಬು ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದ್ದು, ಎಲ್ಲ ಆಯಾಮಗಳಿಂದ ತನಿಖೆ ನಡೆಯುತ್ತಿದೆ ಎಂದರು.

ರಾಜ್ಯದಾದ್ಯಂತ ಜಾಲ?
ಕೆಪಿಎಸ್‌ಸಿ ರಾಜ್ಯದಾದ್ಯಂತ ಏಕಕಾಲಕ್ಕೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ನಡೆಸಿದೆ. ಅ.13ರಿಂದ 16ರವರೆಗೆ ಪರೀಕ್ಷೆಗಳು ನಡೆದಿವೆ. ದಾವಣಗೆರೆಯಲ್ಲಿ ಅಕ್ರಮ ನಡೆದಂತೆ ಇತರ ಜಿಲ್ಲೆಗಳಲ್ಲೂ ನಡೆದಿರುವ ಸಾಧ್ಯತೆಗಳಿವೆ. ಬ್ಲೂಟೂತ್ ಮೂಲಕವೇ ಕೀ ಉತ್ತರಗಳು ಪರೀಕ್ಷಾರ್ಥಿಗಳಿಗೆ ತಲುಪಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ ಎನ್ನುತ್ತಾರೆ ಪೊಲೀಸರು.

ನಗರದ ದರ್ಶನ್‌ ಲಾಡ್ಜ್‌ನಿಂದ ಸೋಮವಾರ ಪೊಲೀಸರಿಂದ ತಪ್ಪಿಸಿಕೊಂಡಿರುವ ಆರೋಪಿ ಪ್ರದೀಪ್‌, ಬೇರೆ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳ ಸಂಪರ್ಕ ಸಾಧಿಸಿ ಅಕ್ರಮ ನಡೆಸಿರುವ ಸಾಧ್ಯತೆಗಳಿವೆ. ಪ್ರದೀಪ್‌ ಜತೆ ಕೈಜೋಡಿಸಿರುವ ವ್ಯಕ್ತಿಗಳು ಯಾರು ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸದ್ಯ ಚನ್ನಗಿರಿ ತಾಲ್ಲೂಕಿನ ಬೆಳಲಗೆರೆಯ ಡಿ.ಶ್ರೀನಿವಾಸ್‌, ಮಿಯಾಪುರದ ಆರ್.ತಿಪ್ಪೇಶ್‌ ನಾಯ್ಕ, ದಾವಣಗೆರೆ ತಾಲ್ಲೂಕಿನ ಓಬಜ್ಜಿಹಳ್ಳಿಯ ಸುಭಾಷ್‌ ಮಾತ್ರ ಸಿಕ್ಕಿಬಿದ್ದಿದ್ದಾರೆ. ಜಿಲ್ಲೆಯಲ್ಲಿ ಮತ್ತಷ್ಟು ಅಭ್ಯರ್ಥಿಗಳು ಅಕ್ರಮವಾಗಿ ಪರೀಕ್ಷೆ ಬರೆದಿರುವ ಅನುಮಾನವಿದ್ದು, ಪ್ರದೀಪ್‌ನ ಬಂಧನವಾದರೆ ಪ್ರಕರಣ ಬಯಲಿಗೆ ಬರಲಿದೆ.

ಪ್ರಶ್ನೆಪತ್ರಿಕೆ ಸಿಕ್ಕಿದ್ದು ಹೇಗೆ?
ಪರೀಕ್ಷೆ ಆರಂಭವಾಗುವ ಮುನ್ನವೇ ಲಾಡ್ಜ್‌ನಲ್ಲಿ ಕುಳಿತಿದ್ದ ಪ್ರದೀಪ್‌ಗೆ ಎಲ್ಲ ಸರಣಿಯ ಪ್ರಶ್ನೆಪತ್ರಿಕೆಗಳು ಸಿಕ್ಕಿದ್ದು ಹೇಗೆ ಎಂಬ ಅನುಮಾನ ಕಾಡುತ್ತಿದೆ. ಪ್ರಶ್ನೆಪತ್ರಿಕೆಗಳು ಮೊದಲೇ ಬಹಿರಂಗಗೊಂಡಿದ್ದವೆಯೊ ? ಬಹಿರಂಗಗೊಂಡಿದ್ದರೆ ಅಧಿಕಾರಿಗಳ ಭಾಗಿಯಾಗುವ ಸಾಧ್ಯತೆಗಳು ಇವೆಯಾ? ಪರೀಕ್ಷೆ ಆರಂಭವಾದ ಬಳಿಕ ವಾಟ್ಸ್‌ಆ್ಯಪ್‌ನಲ್ಲಿ ಪ್ರಶ್ನೆಪತ್ರಿಕೆಗಳು ಆರೋಪಿಗೆ ತಲುಪಿವೆಯಾ? ೆಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎನ್ನುತ್ತಾರೆ ಪೊಲೀಸರು.

₹ 11.5 ಲಕ್ಷಕ್ಕೆ ಡೀಲ್‌?
ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪಿಗಳು ವಿಚಾರಣೆ ವೇಳೆ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಹುದ್ದೆ ಸಿಕ್ಕರೆ ಪ್ರತಿಯೊಬ್ಬರೂ ಪ್ರದೀಪ್‌ಗೆ ₹ 11.5 ಲಕ್ಷ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಮುಂಗಡವಾಗಿ ಹಣವನ್ನೂ ನೀಡಿದ್ದಾರೆ. ಪರೀಕ್ಷೆ ಮುಗಿದು ಕೆಲದಿನಗಳ ಬಳಿಕ ಇಲಾಖೆಯ ವೆಬ್‌ಸೈಟ್‌ನಲ್ಲಿ ಕೀ ಉತ್ತರ ಪ್ರಕಟಗೊಂಡ ಬಳಿಕ ಒಪ್ಪಂದದ ಶೇ 40ರಷ್ಟು ಹಣ, ಹುದ್ದೆ ದೊರೆತ ಬಳಿಕ ಸಂಪೂರ್ಣ ಹಣ ನೀಡುವ ಒಪ್ಪಂದವಾಗಿದೆ ಎಂದು ಸಿಕ್ಕಿಬಿದ್ದ ಉದ್ಯೋಗಾಕಾಂಕ್ಷಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

***

39 ಪರೀಕ್ಷಾ ಕೇಂದ್ರಗಳು
ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಗಳಲ್ಲಿ ಖಾಲಿ ಇರುವ ಗ್ರೂಪ್‌ ‘ಸಿ’ ವೃಂದದ ಹುದ್ದೆಗಳಿಗೆ ಜಿಲ್ಲೆಯ 39 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಒಟ್ಟು 14,796 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT