ನೈಜ ದೃಶ್ಯಗಳನ್ನು ಕಟ್ಟಿ ಸಿನಿಮಾ ಮಾಡಿ...

ಬುಧವಾರ, ಜೂನ್ 19, 2019
31 °C

ನೈಜ ದೃಶ್ಯಗಳನ್ನು ಕಟ್ಟಿ ಸಿನಿಮಾ ಮಾಡಿ...

Published:
Updated:
ನೈಜ ದೃಶ್ಯಗಳನ್ನು ಕಟ್ಟಿ ಸಿನಿಮಾ ಮಾಡಿ...

ಸಿನಿಮಾ ಕುರಿತು ಜನರ ವಿಮರ್ಶೆಯನ್ನು ಹೇಗೆ ಸ್ವೀಕರಿಸುತ್ತೀರಿ.

ಸಿನಿಮಾ ನಿರ್ಮಾಣ ಮಾಡುವುದು ಒಂದು ಧ್ಯಾನ. ಅದೊಂದು ಕಲಾಕೃತಿಯೂ ಹೌದು. ಸಿನಿಮಾದ ಬಗ್ಗೆ ಜನರೊಂದಿಗೆ ಚರ್ಚೆ ಮಾಡುವುದು ನನಗೆ ಇಷ್ಟವಾದ ಕೆಲಸ. ಇದರಿಂದ ಜನ ನನ್ನ ಸಿನಿಮಾವನ್ನು ಹೇಗೆ ಗ್ರಹಿಸಿದ್ದಾರೆ, ಹಾಗೇ ಸಿನಿಮಾ ಬಗ್ಗೆ ಅವರ ದೃಷ್ಟಿಕೋನವೂ ತಿಳಿಯುತ್ತದೆ. ನನಗೆ ಸಂವಾದಗಳು ಇಷ್ಟ.

ನಗರ ಬದುಕಿನ ಚಿತ್ರಣವಿರುವ ಸಿನಿಮಾಗಳಲ್ಲಿ ಹೆಚ್ಚು ಕೆಲಸ ಮಾಡಿದ್ದೀರಿ. ಜನರ ಬದುಕು ಹಾಗೂ ನಗರ ಇವುಗಳ ನಡುವಿನ ಸಾಂಕೇತಿಕ ಸಂಬಂಧಗಳ ಚಿತ್ರೀಕರಣದ ಬಗ್ಗೆ ಹೇಳಿ?

ಜನರ ಬೆಳವಣಿಗೆ ಹಾಗೂ ನಗರದ ಬೆಳವಣಿಗೆಯಲ್ಲಿನ ವ್ಯತ್ಯಯವನ್ನು ಒಂದೇ ಚೌಕಟ್ಟಿನಲ್ಲಿ ಹಿಡಿದಿಡುತ್ತೇನೆ. ಒಂದರ ಬದುಕನ್ನು ಮತ್ತೊಂದು ಬಿಂಬಿಸುತ್ತದೆ. ಸಾಂಸ್ಕೃತಿಕ, ಸಾಮಾಜಿಕ ಪಲ್ಲಟಗಳು ಒಂದನ್ನು ಮತ್ತೊಂದು ಅವಲಂಬಿಸಿರುತ್ತದೆ.

ಚಿತ್ರೀಕರಣ ಸ್ಥಳ ನನಗೆ ತುಂಬಾ ಮುಖ್ಯವಾಗುತ್ತದೆ. ಚಿತ್ರೀಕರಣ ಮಾಡುವ ಹಲವು ದಿನ ಮೊದಲೇ ನಾನು ಆ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಆ ಸ್ಥಳದ ಬಗ್ಗೆ ನನಗಿರುವ ಅಪರಿಚಿತ ಭಾವವನ್ನು, ಕುತೂಹಲವಾಗಿ ಮಾರ್ಪಾಡು ಮಾಡಿಕೊಳ್ಳುತ್ತೇನೆ. ಅನುರಾಗ್ ಕಶ್ಯಪ್‌ ಅವರು ನಿರ್ದೇಶಿಸಿದ ‘ಡೇವ್–ಡಿ’, ‘ದಟ್‌ ಗರ್ಲ್‌ ಇನ್‌ ಯೆಲ್ಲೊ ಬೂಟ್ಸ್‌’ ಸಿನಿಮಾಗಾಗಿ ಬನಾಸರ್‌ನಲ್ಲಿ ಹಲವಾರು ದಿನ ತಂಗಿದ್ದೆ. ಕಥಾ ಲಹರಿ ಹರಿಯಲು ದೃಶ್ಯ ವೈಭವವೂ ಬೇಕು.

‘ಕಮ್ಮಟಿಪಾಡಂ’ ಸಿನಿಮಾ ನಿರ್ದೇಶನ ಮತ್ತು ಛಾಯಾಗ್ರಹಣದ ಅನುಭವ...

90ರ ದಶಕದಲ್ಲಿ ಕೊಚ್ಚಿ ಸಾಧಾರಣ ಪಟ್ಟಣವಾಗಿತ್ತು ಇಂದು ಮೆಟ್ರೊ ಸಂಪರ್ಕದೊಂದಿಗೆ ಬಹುದೊಡ್ಡ ನಗರವಾಗಿ ಬೆಳೆದಿದೆ. ಇಂಥ ಅತಿವೇಗದ ಬೆಳವಣಿಗೆಯಿಂದ ಜನಜೀವನ ಹೇಗಿರುತ್ತದೆ. ಬದುಕು ಹೇಗೆ ಬದಲಾಗುತ್ತದೆ ಎಂಬ ತಲ್ಲಣಗಳನ್ನು ಕಟ್ಟಿಕೊಡುವುದು ಸವಾಲಿನ ಕೆಲಸವೂ ಹೌದು. ಈ ಕೆಲಸವನ್ನು ‘ಕಮ್ಮಟಿಪಾಡಂ’ ಸಿನಿಮಾದಲ್ಲಿ ಮಾಡಿದ್ದೇವೆ.

ಕೊಳೆಗೇರಿ ಜನರ ಬದುಕಿನ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಅತಿಕ್ರಮಣ ನಡೆಯುತ್ತದೆ. ನಗರದ ಅಂಚಿನ ಕೃಷಿ ಭೂಮಿಯನ್ನು ಸರ್ಕಾರ ಆಕ್ರಮಿಸಿಕೊಳ್ಳುತ್ತದೆ. ಅದನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುತ್ತದೆ. ಇದು ಸರ್ಕಾರದ ಅಭಿವೃದ್ಧಿ ಕೆಲಸವಲ್ಲ; ರಿಯಲ್ಎಸ್ಟೇಟ್‌ ದಂಧೆ. ಇಂಥ ವಿಚಾರ ಪ್ರತಿ ನಗರ ಪ್ರದೇಶದಲ್ಲೂ ನಡೆಯುತ್ತಿರುತ್ತದೆ. ನಾನು ಸಣ್ಣ ಹುಡುಗನಾಗಿದ್ದಾಗ ಇಂಥ ಘಟನೆಗಳಿಗೆ ಸಾಕ್ಷಿಯಾಗಿದ್ದೆ. ಹಾಗಾಗಿ ಪ್ರತಿ ದೃಶ್ಯದಲ್ಲೂ ಜೀವಕಳೆ ಬಂದಿದೆ.

(ರಾಜೀವ್‌ ರವಿ)

ನಗರದಲ್ಲಿ ಆಗುವ ಬದಲಾವಣೆ ಹೇಗೆ ಅಲ್ಲಿ ಜನರ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು, ಪಾತ್ರಗಳ ಮೂಲಕ; ವೈಯಕ್ತಿಕ ಬದುಕಿನ ಸೂಕ್ಷ್ಮ ವಿಚಾರಗಳನ್ನು ಸಿನಿಮಾದೊಂದಿಗೆ ಹೆಣೆಯುತ್ತಾ ತೋರಿಸಿದ್ದೇನೆ.

ಸಂದರ್ಶನವೊಂದರಲ್ಲಿ ಕಥೆಯನ್ನು ಬರೆದ ಮೇಲೆ ಸುಟ್ಟು, ಚಿತ್ರೀಕರಣ ಮಾಡಿ ಎಂದಿದ್ದೀರಿ...

ಕಥೆಯ ತಿರುಳು ನನ್ನ ತಲೆಯಲ್ಲಿ ಇರುತ್ತದೆ. ಪ್ರತಿ ದೃಶ್ಯವನ್ನೂ ಬರೆದುಕೊಂಡು ಪಠ್ಯದಲ್ಲಿ ಬರೆದಂತೆ ಮಾಡಬೇಕು ಎಂದುಕೊಳ್ಳುವುದಿಲ್ಲ. ಇದರಿಂದ ನೈಜತೆ ಇರುವುದಿಲ್ಲ. ಹಾಗೇ ಸ್ಥಳದ ವಾತಾವರಣವನ್ನು ಕಟ್ಟಿಕೊಡಲು ಸಾಧ್ಯವಾಗುವುದಿಲ್ಲ. ಆರು ವರ್ಷ ಬೇಕಾಯಿತು ‘ಕಮ್ಮಟಿಪಾಡಂ’ ಸಿನಿಮಾ ಕಥೆ ಬರೆಯಲು. ಕಥೆಯ ಎಷ್ಟೋ ಭಾಗ ಪೂರ್ಣವಾಗೇ ಇರಲಿಲ್ಲ. ಚಿತ್ರೀಕರಣದ ಸಂದರ್ಭದಲ್ಲಿ ಹೊಸ ಹೊಳಹುಗಳೊಂದಿಗೆ ಮುಗಿಸಿದೆ.

ನಿಮ್ಮ ಸಿನಿಮಾ ಪಾತ್ರ ಆಯ್ಕೆ ವಿಶೇಷವಾಗಿರುತ್ತದೆ, ಈ ಬಗ್ಗೆ ಹೇಳಿ...

ಚಿತ್ರೀಕರಣವಾಗುವ ಸ್ಥಳದಲ್ಲಿ ಸಿಗುವ ವ್ಯಕ್ತಿಗಳನ್ನೇ ಪಾತ್ರಗಳಾಗಿ ಬಳಸಿಕೊಳ್ಳುತ್ತೇವೆ. ‘ಕಮ್ಮಟಿಪಾಡಂ’ ಸಿನಿಮಾದಲ್ಲಿ ಅಭಿನಯಿಸಿರುವ ಹಲವರು ವೃತ್ತಿಪರ ಕಲಾವಿದರಲ್ಲ, ಜೋಸ, ಕೊಳೆಗೇರಿ ಮಕ್ಕಳು ಹೀಗೆ ಹಲವು ಪಾತ್ರಗಳು ನಮಗೆ ಕಮ್ಮಟಿಪಾಡಂ ಕೊಳೆಗೇರಿಯಲ್ಲೇ ಸಿಕ್ಕಿದವರು. ಆಯ್ಕೆ ಮಾಡಲು ಆರು ತಿಂಗಳು ಬೇಕಾಯಿತು. ಇವರಿಂದ ಕೆಲಸ ತೆಗೆಯುವುದು ಕಷ್ಟವಾಯಿತು. ಆದರೆ, ಸಿನಿಮಾದ ಕಥೆ ಅವರ ಬದುಕಿಗೆ ಹೆಚ್ಚು ಹತ್ತಿರವಾಗಿದ್ದರಿಂದ ಅವರು ಮಾಡುತ್ತಿರುವುದು ಅಭಿನಯ ಅನಿಸಲಿಲ್ಲ. ನನ್ನ ಬಹುತೇಕ ಸಿನಿಮಾಗಳಲ್ಲಿ ಕಥೆ ನಡೆಯುವ ಭೌಗೋಳಿಕ ಪರಿಸರದಲ್ಲಿ ಬೆಳೆದವರನ್ನೇ ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳುತ್ತೇನೆ.

ಎಂಥದ್ದೇ ಕಥೆಯಾದರೂ ಪುರುಷ ಪ್ರಧಾನ ನಿಮ್ಮ ಸಿನಿಮಾಗಳಲ್ಲಿ ಹೆಚ್ಚಿದೆ ಎನಿಸುವುದಿಲ್ಲವೆ...

ಹ್ಹಾ..ಹ್ಹಾ..ಹ್ಹಾ.. ಇರಬಹುದೇನೋ, ಇದೊಂದು ಸಮಸ್ಯೆಯೇ? ನಾನು ಉದ್ದೇಶಪೂರ್ವಕವಾಗಿ ಅಥವಾ ವಿಶೇಷವಾಗಿ ಏನು ಮಾಡುವುದಿಲ್ಲ. ಅಭ್ಯಾಸಬಲ ಇನ್ನು ಮುಂದೆ ಈ ಸೂಕ್ಷ್ಮಗಳನ್ನು ಗಮನಿಸುತ್ತೇನೆ.

ಸಿನಿಮಾ ಅಷ್ಟೆ ಅಲ್ಲದೆ ಸಾಹಿತ್ಯದಲ್ಲೂ ನಿಮಗೆ ಆಸಕ್ತಿ ಇದೆ. ಇದರಿಂದ ಸಿನಿಮಾ ನಿರ್ಮಾಣದಲ್ಲಿ ಇರುವ ಏಕತಾನತೆ ಒಡೆಯಲು ಸಾಧ್ಯವಾಯಿತೆ?

ಒಂದು ರೀತಿ ಹೌದು. ಒಂದಿಷ್ಟು ಸಿನಿಮಾಗಳ ನಿರ್ಮಾಣದ ನಂತರ ದೃಶ್ಯಗಳ ಜೋಡಣೆ, ಪಾತ್ರ ಚಿತ್ರಣ, ಕಥೆ ಬರೆಯುವುದು ಎಲ್ಲವನ್ನು ಯಾಂತ್ರಿಕವಾಗಿ ಮಾಡುತ್ತೇವೆ. ಈ ಅಭ್ಯಾಸವನ್ನು ಕಳೆದುಕೊಳ್ಳಲು ಹೊಸ ಪ್ರಯೋಗವನ್ನು ಮಾಡುತ್ತಿರಬೇಕು. ಇತರೆ ಕ್ರಿಯಾತ್ಮಕ ಮತ್ತು ಬೌದ್ಧಿಕ ಚಟುವಟಿಕೆಯಿಂದ ನಾವು ಮಾಡುವ ಕೆಲಸಗಳಿಗೆ ಹೊಸ ಆಯಾಮ ದೊರಕುತ್ತದೆ.‌

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry